ಕಂಪ್ಲಿಯ 'ಕುಮಾರ ರಾಮ: ಒಂದು ಚಾರಿತ್ರಿಕ ನೋಟ

Main Article Content

ನಾಯಕರ ಹುಲುಗಪ್ಪ

Abstract

ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ಕುಮಾರ ರಾಮನ ಇತಿಹಾಸ ಭವ್ಯವಾದುದು ಮತ್ತು ಅಮೋಘವಾದುದು. ತಾನು ಬದುಕಿ ಬಾಳಿದ ಕಡಿಮೆ ಅವಧಿಯಲ್ಲಿ ಚರಿತ್ರೆಯನ್ನು ಸೃಷ್ಟಿಸಿದ ತಳಸಮುದಾಯದ ವ್ಯಕ್ತಿ ಎಂದರೆ ಕುಮಾರರಾಮ. ಇವರ ಕುಮ್ಮಟದುರ್ಗದ ಮನೆತನದ ಇತಿಹಾಸ ಕೇವಲ ಐವತ್ತು ವರ್ಷ. ಆ ಸಂದರ್ಭದಲ್ಲಿ ಉತ್ತರ ಭಾರತದ ಬಲಾಡ್ಯ ಮುಸ್ಲಿಂ ಸೈನ್ಯವನ್ನು ದಕ್ಷಿಣದ ಕಡೆಗೆ ಬಾರದಂತೆ ತಡೆದಿದ್ದ ವ್ಯಕ್ತಿ ಕುಮಾರರಾಮ. ಅಂತಹ ವ್ಯಕ್ತಿಯ ಐತಿಹಾಸಿಕ ನೋಟವನ್ನು ಈ ಲೇಖನದ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ವಿಜಯನಗರ ಪೂರ್ವದ ಇತಿಹಾಸದಲ್ಲಿ ಕುಮ್ಮಟದ ನಾಯಕರ ಮನೆತನದಲ್ಲಿ ಮೂರನೇಯ ಹಾಗೂ ಕೊನೆಯ ಅರಸನಾಗಿ ಕುಮಾರ ರಾಮ ಉಲ್ಲೇಖಿತನಾಗಿದ್ದ. ಐತಿಹಾಸಿಕ ಆಕರಗಳಲ್ಲಿ ಈತನ ಬಗೆಗೆ ಹೆಚ್ಚಿನ ವಿವರಗಳು ಲಭಿಸದೆ ಹೋದರೂ ಮೌಖಿಕ ಸಾಹಿತ್ಯ ಪರಂಪರೆಯಲ್ಲಿ, ಆಧುನಿಕ ಪೂರ್ವ ಸಾಹಿತ್ಯ ಕೃತಿಗಳಲ್ಲೂ ಈತನ ಬಗೆಗೆ ಸಾಕಷ್ಟು ವಿವರಗಳು ಲಭ್ಯವಾಗುತ್ತವೆ. ಪರನಾರಿ ಸಹೋದರನಾಗಿ, ಶತ್ರು ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದ ಪರಾಕ್ರಮಿ ಎಲ್ಲಕ್ಕೂ ಮುಖ್ಯವಾಗಿ ಜನಪದರ ಆರಾಧ್ಯ ದೈವವಾಗಿ, ಸ್ಥಳೀಯ ಜನಮಾಸದಲ್ಲಿ ನೆಲೆ ನಿಂತಿರುವ ಕುಮಾರ ರಾಮ ಕನ್ನಡ ನಾಡಿನ ಓರ್ವ ಸಾಂಸ್ಕೃತಿಕ ನಾಯಕನನ್ನಾಗಿ ಕಾವ್ಯಗಳು ರಚನೆಗೊಂಡಿವೆ. ಅವುಗಳಲ್ಲಿ ಹದಿನಾರನೇ ಶತಮಾನದ ನಂಜುಂಡ ಕವಿಯ 'ರಾಮನಾಥ ಚರಿತೆ'ಯು ಕುಮಾರ ರಾಮನ ಸಾಂಗತ್ಯ ಎಂದೇ ಪ್ರಸಿದ್ಧವಾಗಿದೆ. ಐತಿಹಾಸಿಕ ಆಕರಗಳೊಂದಿಗೆ ಸಾಂಗತ್ಯ ಕೃತಿಯನ್ನು ಪ್ರಮುಖ ಆಧಾರವಾಗಿಸಿಕೊಂಡು ಹೊಸಗನ್ನಡ ಸಂದರ್ಭದಲ್ಲೂ ಕುಮಾರ ರಾಮನಿಗೆ ಸಂಬಂಧಿಸಿದ ವಿವಿಧ ಪ್ರಕಾರಗಳು ಹಲವಾರು ಕೃತಿಗಳು ರಚನೆಗೊಂಡಿವೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಐತಿಹಾಸಿಕ ವ್ಯಕ್ತಿ ಮತ್ತು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಸ್ಪೂರ್ತಿ ಎಂದು ಪೂಜಿಸಲ್ಪಟ್ಟಿದ್ದಾನೆ. ಕುಮಾರ ರಾಮ ಕಂಪ್ಲಿ ಕೋಟೆಯ, ಕಂಪಿಲಿ ರಾಯನ ಮಗ, ಕಂಪ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ ಮತ್ತು ಇದು ಕಂಪ್ಲಿ ತಾಲೂಕಿನ ಕೇಂದ್ರಸ್ಥಾನವಾಗಿದೆ. ಕುಮಾರ ರಾಮನು ವಾರಂಗಲ್‌ನ ಕಾಕತೀಯರು, ಹಳೇಬೀಡಿನ ಹೊಯ್ಸಳರು ಮತ್ತು ಉತ್ತರ ಭಾರತದ ಮುಸ್ಲಿಂ ಅರಸರ ನಡುವೆ ನಿರಂತರ ಯುದ್ಧಗಳನ್ನು ಮಾಡಿ ಜಯಶೀಲನಾಗಿದ್ದನು. ಉತ್ತಮ ಸದ್ಗುಣಗಳನ್ನು ಹೊಂದಿದ್ದ ಕುಮಾರ ರಾಮನು, ತನ್ನ ಚಿಕ್ಕ ವಯಸ್ಸಿನಲ್ಲಿಯೇ ಮುಸ್ಲಿಂ ಸೇನೆಯೊಂದಿಗೆ ಹೋರಾಡಿ ಮರಣಹೊಂದಿದನು.

Article Details

Section

Essay

Author Biography

ನಾಯಕರ ಹುಲುಗಪ್ಪ

ಸಹಾಯಕ ಸಂಶೋಧನಾಧಿಕಾರಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಶಿಗ್ಗಾವಿ, ಹಾವೇರಿ.  

References

ಶೇಷಶಾಸ್ತ್ರಿ ಆರ್. (2017), ಕರ್ನಾಟಕದ ವೀರಗಲ್ಲುಗಳು. ಕಾಮಧೇನು ಪುಸ್ತಕ ಭವನ. ಬೆಂಗಳೂರು.

ಚೆನ್ನಕ್ಕ ಎಲಿಗಾರ. (1990). ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ. ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿ, ಧಾರವಾಡ.

ಪುರುಷೋತ್ತಮ ಬಿಳಿಮಲೆ ಮತ್ತು ಚೆಲುವರಾಜ. (2004). ಹಂಪಿ ಜಾನಪದ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕೃಷ್ಣಕುಮಾರ ಸಿ. ಪಿ. (2016). ಶಾಸನಶಾಸ್ತ್ರ ಪೀಠಿಕೆ. ಮಾನಸ ಬುಕ್‌ಹೌಸ್ ಮೈಸೂರು.

ಮಂಜುನಾಥ ಸಿ. ಯು. (2018). ಶಾಸನಗಳು ಮತ್ತು ಕರ್ಣಾಟಕ ಸಂಸ್ಕೃತಿ (1150-1340). ಚಿತ್ಕಲಾ ಪ್ರಕಾಶನ. ಕುಪ್ಪಂ, ಆಂಧ್ರಪ್ರದೇಶ.

ಕಲಬುರ್ಗಿ ಎಂ. ಎಂ. & ವೀರಣ್ಣ ರಾಜೂರು (ಸಂ). (2000) ಹೊಸ ಕುಮಾರ ರಾಮನ ಸಾಂಗತ್ಯ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಷಣ್ಮುಖಪ್ಪ ಬೊದುರ. (2018). ಹೊಸಗನ್ನಡ ಸಾಹಿತ್ಯದಲ್ಲಿ ಕುಮಾರರಾಮ, ಗೀತಾಂಜಲಿ ಪ್ರಕಾಶನ. ಶಿವಮೊಗ್ಗ.

ಚಂದ್ರಕಾಂತ ಬಿಜ್ಜರಗಿ. (2017). ಕುರುಬರು ಆಳಿದ ವಿಜಯನಗರ ಸಾಮ್ರಾಜ್ಯ. ಶೈಲಚಂದ್ರ ಪ್ರಕಾಶನ. ವಿಜಯಪುರ.

ಪರಮಶಿವಮೂರ್ತಿ ಡಿ. ವಿ. (2009). ಕನ್ನಡ ಶಾಸನ ಶಿಲ್ಪ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.