ಸತಿ-ಸಹಗಮನ ಪದ್ಧತಿಯ ಉಗಮ ಮತ್ತು ಬೆಳವಣಿಗೆ
Main Article Content
Abstract
ದೇವರ ಹೆಸರಿನಲ್ಲಿ ಪ್ರಾಣೋತ್ಕ್ರಮಣ ಮಾಡಿಕೊಳ್ಳುವ ಧಾರ್ಮಿಕ ಬಲಿದಾನ ಕಾಲಾಂತರದಲ್ಲಿ ಪ್ರಿಯವ್ಯಕ್ತಿಯ ಹೆಸರಿನಲ್ಲಿ ಪ್ರಾಣೋತ್ಕ್ರಮಣ ಮಾಡಿಕೊಳ್ಳುವ ಲೌಕಿಕ ಬಲಿದಾನಕ್ಕೆ ದಾರಿಮಾಡಿಕೊಟ್ಟಂತೆ ತೋರುತ್ತದೆ. ಈ ಲೌಕಿಕ ಬಲಿದಾದಲ್ಲಿ ಪತಿಗಾಗಿ ಪ್ರಿಯಸತಿಯ ಪ್ರಾಣೋತ್ಕ್ರಮಣ ಮತ್ತು ಒಡೆಯನಿಗಾಗಿ ಪ್ರಿಯವ್ಯಕ್ತಿಯ (ಸೇವಕನ) ಪ್ರಾಣೋತ್ಕ್ರಮಣ ಎಂದು ಎರಡು ವಿಧಗಳಿದ್ದು, ಅವುಗಳಿಗೆ ಕ್ರಮವಾಗಿ ಸಹಗಮನ (ಮಹಾಸತಿ), ವೇಳವಾಳಿ (ಲೆಂಕವಾಳಿ) ಎಂದು ಹೆಸರು. ಧಾರ್ಮಿಕ ಬಲಿದಾನ ಪುರೋಹಿತ ವರ್ಗ ಯೋಚಿಸಿದ ಶೋಷಣೆಯಾದರೆ, ವೇಳವಾಳಿಯು ಪ್ರಭುವರ್ಗ ಯೋಚಿಸಿದ ಶೋಷಣೆ. ಹಾಗೆಯೇ ಇಲ್ಲಿ ಹೇಳಿದ ಸಹಗಮನವು ಪುರುಷವರ್ಗ ಯೋಚಿಸಿದ ಶೋಷಣೆ ಎಂದು ಹೇಳಬಹುದು. ಸತ್ತ ವ್ಯಕ್ತಿಯೊಂದಿಗೆ ಅವನ ಪ್ರಿಯವಸ್ತುಗಳನ್ನು ಹೂಳಬೇಕು. ಇಲ್ಲವೆ ಸುಡಬೇಕು ಎಂಬ ಭಾವನೆ ಈ ಸಂಪ್ರದಾಯಕ್ಕೆ ದಾರಿಮಾಡಿಕೊಟ್ಟಿರಬಹುದು. ಕರ್ನಾಟಕದಲ್ಲಿ ಈ ಪರಂಪರೆಯನ್ನು ಅರಿಯಲು ನಮಗೆ ಶಾಸನಸಾಹಿತ್ಯ, ಗ್ರಂಥಸಾಹಿತ್ಯ, ದಿನಚರಿ ಸಾಹಿತ್ಯ, ಜನಪದ ಸಾಹಿತ್ಯ, ಶಿಲಾಸಾಮಗ್ರಿಗಳು, ಅವಶೇಷಗಳು ಮತ್ತು ವದಂತಿಗಳು ನೆರವಾಗುತ್ತವೆ. ಇವುಗಳಲ್ಲಿ ಸತಿಘಟನೆಯನ್ನು ತಿಳಿದುಕೊಳ್ಳಲು ತುಂಬ ವಿಶ್ವಾಸನೀಯ ಆಧಾರಗಳೆಂದರೆ ಮಹಾಸತಿ ಕಲ್ಲುಗಳು.
‘ಸತಿ’ ಶಬ್ದ ಪರಿಮಿತ ಅರ್ಥದಲ್ಲಿ ಗಂಡನ ಮರಣದ ನಂತರ ಪತ್ನಿಯು ಸ್ವ-ಇಚ್ಛೆಯಿಂದ ಮರಣ ಹೊಂದುವುದನ್ನು ಸೂಚಿಸುತ್ತದೆ. ಅತ್ಯಂತ ಕ್ರೂರವೆನಿಸುವುದರ ಜೊತೆಗೆ ಸೋಜಿಗವೂ, ಪೂಜ್ಯನೀಯವೂ, ವೈಭವಪೂರ್ಣವೂ ಎನಿಸಿರುವ ಇದು ಒಂದು ಪದ್ಧತಿಯಾಗಿ ರೂಪುಗೊಂಡು ಇತಿಹಾಸದ ಬಹುಮುಖ್ಯ ಭಾಗವಾಗಿ ಪರಿಣಮಿಸಿದೆ. ಶಾಸನಗಳಲ್ಲಿ ಸಾಮಾನ್ಯವಾಗಿ ಈ ಪದ್ಧತಿಯನ್ನು ತಿಳಿಸುವ ಅಂಶಗಳಿದ್ದರೆ ಅವುಗಳನ್ನು ‘ಮಾಸ್ತಿಕಲ್ಲು’ಗಳು ಎಂದು ಕರೆಯಲಾಗಿದೆ. ಕೆಲವು ಶಾಸನಗಳು ಮಾಸ್ತಿಕಲ್ಲನ್ನು ‘ಮದವಳಿಗೆ ಕಲ್ಲು’, ‘ಶಿಲಾಶಾಸನ’, ‘ಮಾಸ್ತಿಕಳು’, ‘ಶಿಲಾಸ್ತಂಭಶಾಸನ’, ‘ಕಂಬ’ ಎಂದು ಉಲ್ಲೇಖಿಸಿವೆ.
‘ಮಾಸ್ತಿ’ ಎಂಬುದು ಸಂಸ್ಕೃತದ ‘ಮಹಾಸತಿ’ ಎಂಬುದರ ಸಂಕ್ಷಿಪ್ತ ರೂಪ. ಗಂಡ ಸತ್ತ ಮೇಲೆ ಅವನ ಜೊತೆ ಪ್ರಾಣತ್ಯಾಗ ಮಾಡುವ ಸ್ತ್ರೀಯನ್ನು ಮಹಾಸತಿ ಅಥವಾ ಮಾಸ್ತಿ ಎಂದು ಕರೆಯುತ್ತಿದ್ದರು. ದೇವರಿಗಾಗಿ ಕೈಕೊಳ್ಳುವ ಆತ್ಮಬಲಿದಾನ, ಪ್ರಿಯವ್ಯಕ್ತಿಗಳಿಗೆ ಸಂಬಂಧಪಟ್ಟಂತೆ ಪತಿಯ ಸಲುವಾಗಿ ಸತಿ ಕೈಕೊಂಡರೆ ‘ಸಹಗಮನ ಮರಣ’. ಪತಿಯ ಯಾವುದೇ ರೀತಿಯ ಮರಣಾನಂತರ ಮಡದಿ ಪ್ರಮುಖವಾಗಿ ಅಗ್ನಿಪ್ರವೇಶದ ಮೂಲಕ, ಗೌಣವಾಗಿ ಇತರ ವಿಧಾನಗಳ ಮೂಲಕ ತನ್ನ ಪ್ರಾಣವನ್ನು ಬಲಿ ಕೊಡುತ್ತಿದ್ದಳು. ಹೀಗೆ ಪ್ರಾಣವನ್ನು ಅರ್ಪಿಸುವವಳೇ ಮಹಾಸತಿ. ಮಾಸ್ತಿ ಎಂಬುದು ಇದರ ತದ್ಭವ ರೂಪ. ಪ್ರಾಚೀನ ಕಾಲದಲ್ಲಿ ಗಂಡ ಸತ್ತ ನಂತರ ಅನೇಕ ಸ್ತ್ರೀಯರು ಪತಿಯ ಚಿತೆಯಲ್ಲಿ ಹಾರಿ ಅಥವಾ ಆತನ ಸಮಾಧಿಯಲ್ಲಿ ತಮ್ಮನ್ನು ಜೀವಂತವಾಗಿ ಹುಗಿಸಿಕೊಳ್ಳುವ ಮೂಲಕ ಪ್ರಾಣಾರ್ಪಣೆ ಗೈಯುವುದನ್ನು ಒಂದು ‘ಮೌಲ್ಯ’ ಎಂದು ಭಾವಿಸಿದ್ದರು. ಇಂಥ ಮೌಲ್ಯ ಮೆರೆದ ಸ್ತ್ರೀಯರನ್ನು ಮಹಾಸತಿಯರೆಂದು ಕರೆದು, ಅವರ ಸ್ಮರಣಾರ್ಥವಾಗಿ ಸ್ಥಾಪಿಸಿದ ಸ್ಮಾರಕಗಳನ್ನು ‘ಮಾಸ್ತಿಕಲ್ಲು’ ಎಂದು ಕರೆಯುತ್ತಾರೆ.
ನಮ್ಮ ಪುರಾಣಗಳಲ್ಲಿ, ದಂತಕಥೆಗಳಲ್ಲಿ ಅತಿಯಾಗಿ ವೈಭವೀಕರಿಸಲಾಗಿರುವ ಪಾತಿವ್ರತ್ಯದ ವೈಭವೀಕರಣದ ಪರ್ಯಾಯ ರಕ್ಷಣೆಯೇ ಈ ಸತಿಪದ್ಧತಿ, ಸತಿ-ಪತಿಯರ ಸಂಬಂಧವನ್ನು ಭಾವನಾತ್ಮಕವಾಗಿ ಹೆಣೆದು ಪ್ರತ್ಯಕ್ಷವಾಗಿ ಅವರಿಬ್ಬರಲ್ಲಿ ಯಾವುದೇ ಅಂತರವಿಲ್ಲವೆಂಬುದನ್ನು ಸಾಕ್ಷೀಕರಿಸಲು ತಂದಂತಹ ಮಾರ್ಗವನ್ನು ಸತಿಪದ್ಧತಿ ಎಂದು ಕರೆದಿದ್ದಾರೆ. ಇದನ್ನು ನಿರಂತರವಾಗಿ ಗಂಡನ ಸೇವೆ ಮಾಡುವ ಇನ್ನೊಂದು ಮಾರ್ಗ ಎಂದಿದ್ದಾರೆ. ಮಧ್ಯಯುಗದಲ್ಲಿ ಉಂಟಾದ ರಾಜಕೀಯ ವೈರುಧ್ಯಗಳು ಮತ್ತು ಸಾಮಾಜಿಕ ಕಟ್ಟುಪಾಡುಗಳಲ್ಲಿ ಆದ ಬದಲಾವಣೆಗಳಿಂದಾಗಿ ಈ ಪದ್ಧತಿ ತನ್ನ ಅರ್ಥ ಮತ್ತು ಹೊಸ ಜೀವಂತಿಕೆಯನ್ನು ಪಡೆದುಕೊಂಡಿತು. ಮುಸ್ಲಿಂ ಆಕ್ರಮಣಕಾರರಿಂದ ಹಿಂದೂ ಸ್ತ್ರೀಯರು ತಮ್ಮ ಶೀಲವನ್ನು ಕಾಪಾಡಿಕೊಳ್ಳಲು ತಮಗೆ ತಾವೇ ರೂಪಿಸಿಕೊಂಡ ಒಂದು ಪದ್ಧತಿ ಅಥವಾ ಮುಸ್ಲಿಂ ಆಕ್ರಮಣಕಾರರಿಗೆ ಸೋತು ಶರಣಾಗಿ ಲೈಂಗಿಕ ಅತ್ಯಾಚಾರಕ್ಕೆ ಒಳಗಾಗುವ ಮುಂಚೆಯೇ ಪತಿವ್ರತೆಯರಾಗಿ ಸಾಯುವುದು ಮೇಲೆಂದು ದೊಡ್ಡ ಚಿತೆಯನ್ನು ನಿರ್ಮಿಸಿ ಸಾಮೂಹಿಕವಾಗಿ ಚಿತೆಯೇರುವ ಮೂಲಕ ತಮ್ಮನ್ನು ತಾವು ಬಲಿದಾನ ಮಾಡಿಕೊಳ್ಳುವ ಪದ್ಧತಿಯೇ ಈ ಸತಿಪದ್ಧತಿಯಾಗಿದೆ. ಇದಕ್ಕೆ ಇನ್ನೊಂದು ಮಾದರಿ ಎಂದರೆ ‘ಜೋಹಾರ್,’ ಇದು ಕೂಡಾ ಅಂದು ಉತ್ತರ ಭಾರತದಲ್ಲಿ ಜಾರಿಯಲ್ಲಿತ್ತು ಎಂದು ಹೇಳಲಾಗುತ್ತದೆ.
ಶಾಸನಗಳಲ್ಲಿ ಈ ಬಗೆಯ ಬಲಿದಾನಕ್ಕೆ ಸತಿ, ಮಹಾಸತಿ, ಮಾಸ್ತಿ, ಸಹಗಮನ, ಅನುಗಮನ, ಸಹಮರಣ, ಅನುಮರಣ, ತೋಳುಗೆಯ್ ಕೊಡು, ಪುರುಷವ್ರತ, ಸಹಾನುಭೂತಿ ಹೊಂದು, ಸಹಸಂಗತಿ ಬಿಡು, ಅಗ್ನಿಪ್ರವೇಶ ಮಾಡು ಮತ್ತು ಮದುವಳಿಗೆ ಕಲ್ಲು ಎಂಬ ಪದಗಳನ್ನು ಬಳಸಲಾಗಿದೆ. ಶಾಸನವೊಂದು ಇದನ್ನು ಮಾಸ್ತಿಕಲ್ಲು ಎಂಬುದಕ್ಕೆ ಬದಲಾಗಿ ವೀರಗಲ್ಲು ಎಂದು ಕರೆದಿದೆ. ಅಲ್ಲದೆ ‘ವೀರಮಾಸ್ತಿ’ ಎಂದು ಉಲ್ಲೇಖಿಸುವ ಒಂದು ಶಾಸನವನ್ನೂ ಕಾಣಬಹುದು. ಶಾಸನಗಳಲ್ಲಿ ಕಂಡುಬರುವ ‘ಕೈಕೊಟ್ಟಳ್’ ಮತ್ತು ‘ತೋಳು ಕೈಕೊಟ್ಟಳ್’ ಎಂಬ ಉಲ್ಲೇಖಗಳು ಮಾಸ್ತಿ ಆಚರಣೆಯ ಹಿಂದಿರುವ ಮನೋಭಾವವನ್ನು ಸೂಕ್ಷ್ಮವಾಗಿ ತಿಳಿಸುವಂತಿವೆ. ಇವುಗಳಲ್ಲದೆ ಮಸತಿ, ಸತಿಗಮನವಂ ಮಾಡಿದ, ತೋಳು ಕಯೆಗೊಟ್ಟು ಎಂಬ ಶಬ್ದಗಳೂ ಸಹ ಕ್ವಚಿತ್ತಾಗಿ ಶಾಸನಗಳಲ್ಲಿ ಬಳಕೆಯಾಗಿದ್ದು, ಅವುಗಳೆಲ್ಲ ಪತಿಯ ಮರಣಾನಂತರ ಪತ್ನಿಯು ಪ್ರಾಣತ್ಯಾಗ ಮಾಡಿದ್ದನ್ನು ಬೇರೆಬೇರೆ ಶಬ್ದಗಳಿಂದ ಹೇಳುತ್ತವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎಂ.ಎಂ., (2011), ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಚಿದಾನಂದಮೂರ್ತಿ ಎಂ., (2006), ಬೃಹತ್ ಕರ್ನಾಟಕ: ಭಾಷಿಕ ಸಾಂಸ್ಕೃತಿಕ, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಚನ್ನಕ್ಕ ಎಲಿಗಾರ, (1990), ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ಶಂಕರರಾವ್ ಚ.ನ., (2002), ಭಾರತೀಯ ಸಮಾಜ, ಮಂಗಳೂರು: ಜೈಭಾರತ್ ಪ್ರಕಾಶನ.
ಕಲಬುರ್ಗಿ ಎಂ.ಎಂ., (2011), ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಭಟ್ಸೂರಿ ಕೆ.ಜಿ. (ಸಂ.), ಶಾಸನ ಅಧ್ಯಯನ ಸಂಪುಟ-8/2, ಮೈಸೂರು: ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆ.
ಮಂಜುನಾಥ ಸಿ.ಯು., (2012), ಶಾಸನಗಳು ಮತ್ತು ಕರ್ನಾಟಕ ಸಂಸ್ಕೃತಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ರೋಹಿಣಿ ಬಿ.ಎಂ. ಮತ್ತು ಶಶಿಲೇಖಾ ಬಿ., (2010), ತುಳುನಾಡಿನ ಮಾಸ್ತಿ ಕಲ್ಲುಗಳು-ವೀರಗಲ್ಲುಗಳು, ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ.
ಶೇಠೆ ಬಿ.ಎಸ್., (1991), ಕರ್ನಾಟಕದಲ್ಲಿ ಸತಿ ಪದ್ಧತಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಬಸವರಾಜ ಕಲ್ಗುಡಿ, (1985), ಮಹಾಸತಿ ಆಚರಣೆ ಒಂದು ಅಧ್ಯಯನ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
Altekar A.S., (1962), The Position of Women in Hindu Civilization, Delhi: Motilal Banarsidass.
ಚನ್ನಕ್ಕ ಎಲಿಗಾರ, (1990), ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಎಪಿಗ್ರಾಫಿಯಾ ಕರ್ನಾಟಕ - ಸಂಪುಟ 8 (ಶಾ.ಸಂ.-523, ಕವಡಿ, ಸೊರಬ ತಾಲ್ಲೂಕು), ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್ (S.I.I) - ಸಂಪುಟ 9, ಭಾಗ-1 ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಎಪಿಗ್ರಾಫಿಯಾ ಕರ್ನಾಟಕ - ಸಂಪುಟ 8, ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ.
ಚಿದಾನಂದಮೂರ್ತಿ ಎಂ., (2011), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು: ಸಪ್ನ ಬುಕ್ ಹೌಸ್.
ನಾಗೇಗೌಡ ಹೆಚ್.ಎಲ್., (2006), ಪ್ರವಾಸಿ ಕಂಡ ಇಂಡಿಯಾ ಸಂಪುಟ-2, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಪರಮಶಿವಯ್ಯ ಜಿ.ಶಂ. (ಸಂ.), (1979), ಜನಪದ ಖಂಡಕಾವ್ಯಗಳು, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ಶ್ರೀನಿವಾಸ, (1953), ಮಾಸ್ತಿ, ಬೆಂಗಳೂರು: ಜೀವನ ಕಾರ್ಯಾಲಯ.
ಕಲಬುರ್ಗಿ ಎಂ.ಎಂ., (2006), ಸಂಸ್ಕೃತಿ-ವಿಕೃತಿ, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, (ವರ್ಷ ಲಭ್ಯವಿಲ್ಲ), ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್ (S.I.I) - ಸಂಪುಟ 18, ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಎಪಿಗ್ರಾಫಿಯಾ ಕರ್ನಾಟಕ - ಸಂಪುಟ 7, ಭಾಗ-1, ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ.