ಕುವೆಂಪು ಅವರ ಕಥೆಗಳ ವೈಶಿಷ್ಟ್ಯತೆ

Main Article Content

ಶ್ವೇತಾರಾಣಿ ಹೆಚ್.

Abstract

ರಾಷ್ಟ್ರಕವಿ ಕುವೆಂಪು ಅವರು ನಾಲ್ಕು ಸಣ್ಣಕಥಾ ಸಂಕಲನಗಳನ್ನು ರಚಿಸಿದ್ದಾರೆ. ನನ್ನ ದೇವರು ಮತ್ತು ಇತರ ಕಥೆಗಳು, ಕಥೆಗಳೊಡನೆ ಆರಂಭದಲ್ಲಿ, ನರಿಗಳಿಗೇಕೆ ಕೋಡಿಲ್ಲ, ಸಂನ್ಯಾಸಿ ಮತ್ತು ಇತರ ಕಥೆಗಳು. ಇವರ ಕಾವ್ಯ, ಕಾದಂಬರಿ, ವೈಚಾರಿಕ ಲೇಖನಗಳು, ನಾಟಕಗಳು ಸಾಕಷ್ಟು ವಿಮರ್ಶೆಗೆ ಒಳಪಟ್ಟಿವೆ. ಕುವೆಂಪು ಅವರ ಸಣ್ಣಕಥೆಗಳು ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಕಥೆಗಳಾಗಿವೆ. ಯಾರೂ ಅರಿಯದ ವೀರನಂತಹ ಕಥೆಯ ಪಾತ್ರಗಳು ಓದುಗರ ಮನದಲ್ಲಿ ಉಳಿದುಬಿಡುತ್ತವೆ. ಪ್ರಸ್ತುತ ನನ್ನ ಈ ಲೇಖನದಲ್ಲಿ ಕುವೆಂಪು ಅವರ ಸಣ್ಣಕಥೆಗಳಲ್ಲಿರುವ ವೈಶಿಷ್ಠ್ಯತೆಯನ್ನು ಪಾತ್ರಗಳ ಮೂಲಕ ಚರ್ಚಿಸಲಾಗಿದೆ.
“ನನ್ನ ದೇವರು” ಎನ್ನುವ ಕಥೆಯಲ್ಲಿ ಮದುವೆಯಾಗಿ ಒಂದೇ ವರುಷದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಬಾಲಕಿ ಯೌವ್ವನಕ್ಕೆ ಕಾಲಿರಿಸಿದಾಗ ಆ ಯುವತಿಯ ಮನದಲ್ಲಿ ಉಂಟಾಗುವ ತುಮುಲಗಳ ಚಿತ್ರಣವಿದು. ತಾಕಲಾಟಗಳನ್ನು ಸಮರ್ಥವಾಗಿ ಚಿತ್ರಿಸಿರುವ ಕತೆ ಇದು. ಅವಳ ಸಂಕಟಕ್ಕೆ ಹತ್ತಿರವಿರುವ ಬಾವನ ಬಗೆಗೆ ಅವಳಿಗೆ ಆರಾಧನಾ ಭಾವವಿದೆ. ಅವಳ ಸುಪ್ತಮನಸ್ಸಿನಲ್ಲಿ ವಯೋಸಹಜ ಬಯಕೆಗಳು ಬುಗಿಲೇಳುವವು, ಆಕೆ ಅದನ್ನು ಶಮನಗೊಳಿಸಲೆಳಸುವ ಮನೋವ್ಯಾಘ್ರಾಟ ಈ ಕಥೆಯಲ್ಲಿ ಕಾಣಬಹುದು. ಅವಳ ಜೀವನದಲ್ಲಿ ಹತ್ತಿರವಿರುವ ಗಂಡು ಎಂದರೆ ಅದು ಭಾವ ಮಾತ್ರ. ತಂದೆ ಮನೆಯಿಂದ ಬಂದಮೇಲೆ ಪತಿಯ ನಿಧನದ ಬಳಿಕ ಅವಳು ಯೌವ್ವನಕ್ಕೆ ಕಾಲಿರಿಸುವ ಸಮಯದಲ್ಲಿ ಬೇರೆ ಪುರುಷರು ಅವಳಿಗೆ ಆತ್ಮೀಯರು ಆಗಿಲ್ಲ. ಸದಾ ಗಂಭೀರವಾಗಿರುವ, ತಿಳುವಳಿಕೆ ಇರುವ ಭಾವನ ಮೇಲೆ ಅವಳಿಗಿರುವ ಗೌರವವೂ ಕೂಡ ಅವಳ ತಾಕಲಾಟಗಳಿಗೆ ಕಾರಣವಾಗಿರಬಹುದು.
“ಸಾಲದ ಮಗು” ಕಥೆಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿರುವ ಅನಾಥ ಮಗು ತಂದೆ ಮಾಡಿದ ಸಾಲಕ್ಕೆ ಜೀತ ಮಾಡಬೇಕಾಗಿರುವ ಪರಿಸ್ಥಿತಿಯಲ್ಲಿ ಕರುಣೆ ಇಲ್ಲದೆ ನಡೆಸಿಕೊಳ್ಳುವುದು, ಜ್ವರದ ತಾಪದಲ್ಲಿ ನರಳುವ ಎಂಟು ವರ್ಷದ ಬಾಲಕ ಮಳೆಯಲ್ಲಿ ಮೀನು ಕುಕ್ಕೆಯನ್ನು ಗೌಡನ ಆದೇಶದ ಮೇಲೆ ತರಲು ಹೋಗಿ ಹಾವು ಕಚ್ಚಿ ಸಾಯುವುದು, ಆ ಸಾವಿಗೂ ಮರುಗದ ಗೌಡನ ದುರ್ಗುಣ, ದುರಾಸೆ ಇವುಗಳ ಅನಾವರಣವಿಲ್ಲಿದೆ.

Article Details

Section

Research Articles

Author Biography

ಶ್ವೇತಾರಾಣಿ ಹೆಚ್.

ಸಹ ಪ್ರಾಧ್ಯಾಪಕಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ.

How to Cite

ಶ್ವೇತಾರಾಣಿ ಹೆಚ್. (2025). ಕುವೆಂಪು ಅವರ ಕಥೆಗಳ ವೈಶಿಷ್ಟ್ಯತೆ. ಅಕ್ಷರಸೂರ್ಯ (AKSHARASURYA), 7(05), 90 to 98. https://aksharasurya.com/index.php/latest/article/view/1323

References

ಶಿವಾರೆಡ್ಡಿ ಕೆ.ಸಿ. (ಸಂ), (2017), ಕುವೆಂಪು ಸಮಗ್ರ ಗದ್ಯ: ಸಂಪುಟ-6, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

Most read articles by the same author(s)