ಯುದ್ಧ-ಶಾಂತಿ, ಬದುಕು-ಸಾವುಗಳ ನಡುವೆ ʼಯಾದ್ ವಶೇಮ್ʼ
Main Article Content
Abstract
“ದಯವಿಲ್ಲದ ಧರ್ಮವದೇವುದಯ್ಯ
ದಯವೇ ಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ”
ಎಂಬ ಬಸವಣ್ಣನವರ ಉಕ್ತಿಯಂತೆ ಸಕಲ ಧರ್ಮದ ಸಾರವೂ ಪ್ರೀತಿ, ಕರುಣೆ, ದಯೆಯೇ ಆಗಿದೆ. ಇದನ್ನು ಮತ್ತೊಮ್ಮೆ ನೆನಪಿಸುವಂತೆ 2007ರಲ್ಲಿ ನೇಮಿಚಂದ್ರರ ‘ಯಾದ್ ವಶೇಮ್’ ಪ್ರಕಟವಾಯಿತು. ಅದನ್ನೇ ಅವರು ‘ನೂರು ಸಾವಿರ ಸಾವಿನ ನೆನಪು’ ಎಂಬ ಹೆಸರಿನಲ್ಲಿ ಸುಧಾ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಗೋರಿಗಳು ಸಹ ಒಂದು ಉತ್ಕೃಷ್ಟ ಕೃತಿಗೆ ಕಥಾವಸ್ತುವಾಗಬಹುದು ಎಂದು ಇದರಿಂದ ತಿಳಿಯುತ್ತದೆ. ಇಲ್ಲಿ ಹಿಟ್ಲರ್‌ನ ನೆಲದಿಂದ ಗಾಂಧಿಯ ನೆಲವಾದ ಮುಕ್ಕೋಟಿ ದೇವರುಗಳಿಗೆ ಹೆಸರಾದ ಭಾರತಕ್ಕೆ ಬಂದ ಪುಟ್ಟ ಯಹೂದಿ ಬಾಲಕಿ ಹ್ಯಾನಾಳ ಕಥೆ. ಒಂದು ಕಾಲ್ಪನಿಕ ಕಥೆಯನ್ನು ಸೃಷ್ಟಿಸಿ ಆ ಮೂಲಕ ಧರ್ಮದ ಹೆಸರಿನಲ್ಲಿ ಹಿಟ್ಲರ್ ನಡೆಸಿದ ಕ್ರೌರ್ಯ, ಹಿಂಸೆ, ರಕ್ತಪಾತ, ಅತ್ಯಾಚಾರಗಳ ಒಂದು ದುರಂತ ಚಿತ್ರಣವನ್ನೇ ನೇಮಿಚಂದ್ರರು ನೀಡುತ್ತಾರೆ. ಹಿಟ್ಲರ್‌ನ ಭೀಕರ ಧರ್ಮಾಂಧತೆಯಿಂದ ಉರಿದ ಜರ್ಮನಿ ಜನ, ಅವರ ಬದುಕು ಸಾವುಗಳ ಚಿತ್ರಣವನ್ನು ಬಹಳ ಮನೋಜ್ಞವಾಗಿ ನಿರೂಪಿಸಿದ್ದಾರೆ. ಜೊತೆಗೆ ಭಾರತವು ಬಹುಧರ್ಮೀಯ ರಾಷ್ಟ್ರವಾಗಿದ್ದರೂ ಇಲ್ಲಿರುವ ಧರ್ಮ ಸಹಿಷ್ಣುತ ಮನೋಭಾವ, ಪ್ರೀತಿ, ಪರಸ್ಪರ ಸಹಕಾರ ಎಲ್ಲದರ ಬಗ್ಗೆ ಹ್ಯಾನಾಳ ಮೂಲಕ ನಿರೂಪಿಸಿ ಭಾರತದಲ್ಲಿ ಹ್ಯಾನಾಳಾಗಿ ಯೋಚಿಸುವ ನಾಯಕಿ, ಯಹೂದಿಗಳ ನೆಲೆಯಲ್ಲಿ ಅಪ್ಪಟ ಭಾರತೀಯ ಸ್ತ್ರೀ ಅನಿತಾಳಾಗಿ ವರ್ತಿಸುವ, ಚಿಂತಿಸುವ ಹಾಗೂ ಭಾರತಕ್ಕೆ ಮರಳಲು ತವಕಿಸುವ ಮೂಲಕ ಬೀಜವು ಯಾವ ಭೂಮಿಯ ಮೇಲೂ ಬಿದ್ದರೂ ಅದು ಚಿಗುರೊಡೆದು ಬೆಳೆದು ತನ್ನ ಕ್ಷೇತ್ರವನ್ನು ವಿಸ್ತರಿಸಿ ನೆಲೆನಿಲ್ಲುತ್ತದೆ ಎಂಬುದನ್ನು ಅನಿತಾಳ ಮೂಲಕ ನೇಮಿಚಂದ್ರರು ನಿರೂಪಿಸಿದ್ದಾರೆ.
ಸಕಲ ಧರ್ಮದ ಸಾರವು ದಯೆಯೆಂದು ಭಾವಿಸಿ ಸಹಿಷ್ಣುತ ದೃಷ್ಟಿಯಿಂದ ಜೀವಿಸಿದರೆ ಯುದ್ಧವೆಂಬುದೇ ಇಲ್ಲ. ಬದುಕನ್ನು ನೆಮ್ಮದಿಯಿಂದ ಸಾಗಿಸಬಹುದಾಗಿದೆ. ಆದರೆ ಪ್ರಸ್ತುತ ಜಗತ್ತಿನಲ್ಲಿ ಮಾನವ ಎಷ್ಟೋ ತಾಂತ್ರಿಕವಾಗಿ ಮುಂದುವರಿದಿದ್ದೇನೆ ಎಂದು ಹೇಳಿದರೂ ಸಹ ದಿನದಿಂದ ದಿನಕ್ಕೆ ಅವನ ಮನಸ್ಸು ಸಂಕುಚಿತಗೊಳ್ಳುತ್ತಿದೆ. ಮನುಷ್ಯನ ಬದುಕಿನಲ್ಲಿ ತಾಳ್ಮೆ, ಸಂಯಮ, ಪ್ರೀತಿ, ಕರುಣೆ, ದಯೆ ಎಂಬ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇದರಿಂದ ಬದುಕು ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಾ ಸಾಗಿ ಒತ್ತಡಗಳು ಹೆಚ್ಚುತ್ತಿವೆ. ದುಡ್ಡಿಗಾಗಿ ತಂದೆ ತಾಯಿಯನ್ನೇ ಕೊಲ್ಲುವ ಸ್ಥಿತಿ ಬಂದೊದಗಿದೆ, ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ, ವಯಸ್ಸಾದ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ಆಧುನಿಕತೆಯ ಹೆಸರಿನಲ್ಲಿ ವಿಭಕ್ತ ಕುಟುಂಬಗಳು ಕಂಡು ಬರುತ್ತಿವೆ. ಇನ್ನೂ ವಿವಾಹ ವಿಚ್ಛೇದನಗಳಂತೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಸಾಗಿದೆ. ಅಂದರೆ ಬದುಕಿನಲ್ಲಿ ನೈತಿಕ ಪ್ರಜ್ಞೆಯೂ ಕುಸಿಯುತ್ತಾ “ಹಿಟ್ಲರ್ ಎಲ್ಲಿ ಬೇಕಾದರೂ ಜನಿಸಬಹುದು” ಎಂಬ ನೇಮಿಚಂದ್ರರ ಮಾತನ್ನು ನಿಜವಾಗಿಸುವತ್ತ ಸಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ನೇಮಿಚಂದ್ರ, (2007), ಯಾದ್ ವಶೇಮ್, ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು.
ಡಿ.ವಿ.ಜಿ. (1999), ಮಂಕು ತಿಮ್ಮನ ಕಗ್ಗ, ಶ್ರೀರಂಗ ಪ್ರಿಂಟರ್ಸ್, ಬೆಂಗಳೂರು.
ಮುತ್ತೇಗೌಡ ಟಿ.ಎನ್., (2012), ನವೋದಯ ಕಾದಂಬರಿಗಳಲ್ಲಿ ಧರ್ಮ ಜಿಜ್ಞಾಸೆ, ಯುವಸಾಧನೆ, ಬೆಂಗಳೂರು.
ಮರುಳಸಿದ್ದಪ್ಪ ಕೆ. (ಸಂ.), (2003) ಶತಮಾನದ ನಾಟಕ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.