ಕಾರಂತರ ‘ಸರಸಮ್ಮನ ಸಮಾಧಿ’ ಕಾದಂಬರಿಯಲ್ಲಿ ದಾಂಪತ್ಯ ಬದುಕಿನ ಅನಾವರಣ
Main Article Content
Abstract
‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎಂದರೆ ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಮನುಸ್ಮೃತಿಯಲ್ಲಿ ತಿಳಿಸಲಾಗಿದೆ. ಆದರೆ ಅನಾದಿ ಕಾಲದಿಂದಲೂ ಸ್ತ್ರೀಯು ದ್ವಿತೀಯ ಪ್ರಜೆಯ ಸ್ಥಾನವನ್ನು ಪಡೆದಿದ್ದು, ಸಮಾಜದ ಮೂಲ ಘಟಕವಾದ ಕುಟುಂಬದಲ್ಲಿಯೇ ಹೆಣ್ಣು ಗೌರವಿಸಲ್ಪಡುತ್ತಿದ್ದಾಳೆಯೇ ಎಂದು ಪ್ರಶ್ನೆ ಹಾಕಿದರೆ ಅದಕ್ಕೆ ನಕಾರತ್ಮಕವಾದ ಉತ್ತರ ದೊರೆಯುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕಾರಂತರು 1937ರಲ್ಲಿ ದಾಂಪತ್ಯ ಜೀವನದಲ್ಲಿ ಸ್ತ್ರೀಯು ಹೇಗೆ ಶೋಷಿತಳಾಗುತ್ತಿದ್ದಾಳೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಸ್ತ್ರೀ ಪಾತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಇದಕ್ಕೆ ನಿದರ್ಶನವೆನ್ನುವಂತೆ 1994ರಲ್ಲಿ ಈ ಕೃತಿಯ ಮರು ಮುದ್ರಣದ ಮುನ್ನುಡಿಯಲ್ಲಿ ಒಂದು ಉದಾಹರಣೆಯನ್ನು ಕಾರಂತರು ನೀಡುತ್ತಾರೆ. ರಜಪೂತಾನದಲ್ಲಿ ರೂಪಕನ್ವಾರ್ ಎನ್ನುವ ಮಹಿಳೆಯ ಸತಿಧ್ವಂಸ ಪ್ರಕರಣ. ಇದೇ ಮುನ್ನುಡಿಯಲ್ಲಿ ಮುಂದುವರೆದು ಕಾರಂತರೇ ಈ ರೀತಿ ಹೇಳುತ್ತಾರೆ: ಪುರುಷ ಪ್ರಧಾನ ಸಮಾಜದಲ್ಲಿ “ಜೀವನದ ಅನೇಕ ಕ್ಷೇತ್ರಗಳಲ್ಲಿ ಸ್ತ್ರೀಯ ಮನಸ್ಸು ಮತ್ತು ಶರೀರಗಳೆರಡೂ ಅವನ ಸೊತ್ತು. ಅದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ”. ಸರಸಮ್ಮನ ಸಮಾಧಿ ಕಾದಂಬರಿಯಲ್ಲಿ ಬರುವ ಪ್ರಮುಖ ಸ್ತ್ರೀ ಪಾತ್ರಗಳೆಂದರೆ ಜಾನಕಿ, ಭಾಗೀರಥಿ, ಸುನಾಲಿನಿ, ಸರಸಮ್ಮ, ನಾಗವೇಣಿ. ಇವರಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ.
ತನ್ನ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಗಂಡನೊಂದಿಗೆ ಮಾತನಾಡಿ ವಿಫಲಳಾಗುವ ಜಾನಕಿ, ಗಂಡನ ಸಮಯವನ್ನು ತನಗಾಗಿ ಕೇಳುವ ಸುನಾಲಿನಿ ಗಂಡ ಮತ್ತು ಅತ್ತೆಯ ಶೋಷಣೆಗೆ ಒಳಗಾಗುತ್ತಾಳೆ. ಮದುವೆಯಾಗಿ ಮಾವನ ಮನೆಗೆ ಬರುವ ಭಾಗೀರಥಿ, ಅತ್ತೆ ಮಾವನಲ್ಲಿ ಸೊಸೆಯ ಬಗೆಗಿರುವ ಭಾವನೆ ತಿಳಿದು ತವರು ಮನೆಗೆ ತೆರಳಿ ಜನರ ಬಾಯಿಂದ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಜನರ ಬಾಯಿಯಲ್ಲಿ ಮಹಾಸತಿ, ದಾಂಪತ್ಯ ದೇವತೆ ಎಂದು ಪ್ರಸಿದ್ಧಿ ಪಡೆದಿರುವ ಸರಸಮ್ಮ ತನ್ನ ಪ್ರೀತಿಯನ್ನು ಪಡೆಯಲು, ಆತ್ಮಸಖನಿಗಾಗಿ ಅತೃಪ್ತ ಆತ್ಮವಾಗಿ ಅಲೆದಾಡುವುದನ್ನು ಕಾಣಬಹುದಾಗಿದೆ. ಹೀಗೆ ಹಲವು ಮಜಲುಗಳಲ್ಲಿ ದಾಂಪತ್ಯ ಸಂಬಂಧದಲ್ಲಿನ ಸ್ತ್ರೀ ಸಂವೇದನೆಯನ್ನು ಕಾರಂತರು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಶಿವರಾಮ ಕಾರಂತ, (2020), ಸರಸಮ್ಮನ ಸಮಾಧಿ, ಬೆಂಗಳೂರು: ಎಸ್.ಬಿ.ಎಸ್. ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್.
ಬೊಳುವಾರು ಮಹಮ್ಮದ್ ಕುಂಞಿ (ಸಂ), (2022), ಶತಮಾನದ ಸಣ್ಣಕಥೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ರೇಖಾ ವಸಂತ ಮತ್ತು ಲೋಲಾಕ್ಷಿ (ಸಂ), (2019), ಕನ್ನಡ ಸಾಹಿತ್ಯ ಸಮಾಗಮ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.