Table of Contents
Research Articles
ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ
01 to 07
ಕವಿ ಸಿದ್ಧಲಿಂಗಯ್ಯನವರ ಮೊದಲ ʼಹೊಲೆಮಾದಿಗರ ಹಾಡುʼ ಕವನ ಸಂಕಲನದಿಂದ ಅವರ ಕಡೆಯ ʼಬೋಧಿವೃಕ್ಷದ ಕೆಳಗೆʼ ಸಮಗ್ರ ಕಾವ್ಯದ ಶೀರ್ಷಿಕೆಗಳನ್ನು ರೂಪಕದಂತೆ ಪರಿಭಾವಿಸುವುದಾದರೆ, ಸಮಾಜದಲ್ಲಿನ ಶೋಷಣೆ, ತಾರತಮ್ಯ, ಅಸಮಾನತೆಯಿಂದ ಕನಲಿ ಸಂಘರ್ಷದ ಪ್ರತಿಕ್ರಿಯೆ ಹಾಗೂ ಕೀಳರಿಮೆಯಿಂದ ನರಳುತ್ತಿದ್ದ ವಿಸರ್ಜಿತ ಲೋಕದಿಂದ ಹುಟ್ಟಿದ ಬಂಡಾಯದಂತೆ ಸ್ಫೋಟಿಸಿದ ಅವರ ಕವಿತೆಗಳು ಸಮ ಸಮಾಜದ ಹಂಬಲವಾದ ಸಾಮರಸ್ಯದ ಕಡೆಗೆ ಸಾಗಿರುವ ಸೃಜನಶೀಲ ಪಯಣದ ವಿಕಾಸ ಎಂದು ವ್ಯಾಖ್ಯಾನಿಸಬಹುದು. ಇಲ್ಲಿ ಆತ್ಯಂತಿಕ ತೀವ್ರತೆಯಿಂದ ಹುಟ್ಟಿದ ಬಂಡಾಯ ಸಮುದಾಯದಲ್ಲಿ ಸ್ವಾಭಿಮಾನ ಹಾಗೂ ಮಾನವ ಘನತೆಯನ್ನು ಮೂಡಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಸಮಷ್ಟಿ ಬದುಕನ್ನು ಕುರಿತ ಗಾಢ ವಿಷಾದ ಈ ಅನ್ಯಾಯದ ವ್ಯವಸ್ಥೆ ಬದಲಾಗಬೇಕೆಂಬ ಹಂಬಲ ಇಲ್ಲಿನ ಕವಿತೆಗಳು ಪ್ರತಿಪಾದಿಸುವ ನಿಲುವು.
ಸಿದ್ಧಲಿಂಗಯ್ಯನವರ ಕವಿತೆಗಳಿಗೆ ಮುಖಾಮುಖಿಯಾಗುವುದು ಎಂದರೆ, 1970 ರ ದಶಕದ ಜನಪರ ಚಳವಳಿಗಳು, ಹೋರಾಟಗಳೊಂದಿಗೆ ಮುಖಾಮುಖಿಯಾಗುವುದು ಎಂದರ್ಥ. ಈ ನೆಲದ ಅಸ್ಪೃಶ್ಯರ, ದಮನಿತರ, ಶ್ರಮಿಕರ, ನೊಂದವರ ನಿಟ್ಟುಸಿರು ಅಕ್ಷರದ ಮೂಲಕ ಜೀವತಳೆದಿರುವ ಆದಿಮ ಪರಂಪರೆಯೊಂದಿಗೆ ಅನುಸಂಧಾನ ಮಾಡುವುದು ಎಂದರ್ಥ. ಸಿದ್ಧಲಿಂಗಯ್ಯನವರು ಕನ್ನಡದ ಪ್ರಥಮ ದಲಿತ ಕವಿಯೇ ಅಲ್ಲವೇ ಎನ್ನುವುದು ಚರ್ಚಾಸ್ಪದವಾಗಿರಬಹುದು. ಆದರೆ ದಲಿತ-ಬಂಡಾಯ ಸಾಹಿತ್ಯ ಹಾಗೂ ಚಳವಳಿಗೆ ತಮ್ಮ ಹೋರಾಟದ ಹಾಡುಗಳ ಮೂಲಕ ಸ್ಥಾಪಿತ ಮೌಲ್ಯಗಳು ಹಾಗೂ ಯಾಜಮಾನ್ಯ ಸಂಸ್ಕೃತಿಗೆ ಪ್ರತಿರೋಧವಾಗಿ ಅಲಕ್ಷಿತರ ಸಮಷ್ಟಿ ಪ್ರಜ್ಞೆಯನ್ನು ಹಕ್ಕೊತ್ತಾಯದ ಧಾಟಿಯಲ್ಲಿ ಅಭಿವ್ಯಕ್ತಿಸಿದವರಲ್ಲೊಬ್ಬರು ಎಂಬುದು ನಿರ್ವಿವಾದ. ಪ್ರಸ್ತುತ ಲೇಖನದಲ್ಲಿ ʼಹೊಲೆಮಾದಿಗರ ಕೇರಿಯಿಂದ ಬುದ್ಧನೆಡೆಗೆʼ ಸಾಗಿರುವ ಕವಿ ಸಿದ್ಧಲಿಂಗಯ್ಯನವರ ಸೃಜನಶೀಲ ಕಾವ್ಯಯಾನವನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.
ಪರಿಪೂರ್ಣತೆಯ ಭ್ರಮೆ ಕಳಚುವ ಕಂಬಾರರ ಸಿರಿಸಂಪಿಗೆ
08 to 16
ಚಂದ್ರಶೇಖರ ಕಂಬಾರರ ʼಸಿರಿಸಂಪಿಗೆʼ ಹಾಗು ಗಿರೀಶ್ ಕಾರ್ನಾಡರ ʼನಾಗಮಂಡಲʼ-ಈ ಎರಡೂ ಕೃತಿಗಳಿಗೂ ಎ.ಕೆ. ರಾಮಾನುಜನ್ ಅವರು ಹೇಳಿದ ಒಂದು ಜಾನಪದ ಕತೆಯೇ ಆಧಾರ. ನಾಗಮಂಡಲ ಓದಿದ ನನಗೆ, ಇದೇ ಕತೆಯನ್ನು ಕಂಬಾರರು ಹೇಗೆ ಬಳಸಿಕೊಂಡಿದ್ದಾರೆ ಎಂದು ತಿಳಿಯುವ ಕುತೂಹಲವಿತ್ತು.ಕಂಬಾರರು ಈ ಕತೆಯನ್ನು ಕಟ್ಟಿಕೊಡುವ ಪರಿ ಸಂಪೂರ್ಣ ಭಿನ್ನ.
ಜಾನಪದವನ್ನು ಬಹಳ ಶಕ್ತಿಯುತವಾಗಿ ಬಳಸಿಕೊಳ್ಳುವ ಕಂಬಾರರು ಈ ನಾಟಕಕ್ಕೆ ಯಕ್ಷಗಾನ ರಂಗ ಪ್ರಕಾರವನ್ನು ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಈ ವಿಶೇಷತೆಯನ್ನು ಮತ್ತಷ್ಟು ವಿವರವಾಗಿ ಅರಿಯುವ ಉದ್ದೇಶವೂ ನನ್ನ ಲೇಖನ ರಚನೆಯ ಹಲವು ಕಾರಣಗಳಲ್ಲಿ ಒಂದು. ಇನ್ನು ನನ್ನ ಸಂಶೋಧನಾ ಲೇಖನದ ಮುಖ್ಯ ಉದ್ದೇಶ, ಇಂದಿಗೂ ಮನುಷ್ಯನನ್ನು ಕಾಡುವ ಹಲವು ಪ್ರಶ್ನೆಗಳಿಗೆ ಕಂಬಾರರ ʼಸಿರಿಸಂಪಿಗೆʼ ಉತ್ತರ ನೀಡುತ್ತದೆಯೇ ಎಂದು ಅರಿಯುವ ಅದಮ್ಯ ಆಸಕ್ತಿ. ದೇಹ-ಆತ್ಮ, ಕಾಮ-ಪ್ರೇಮ, ವಾಸ್ತವ-ಆದರ್ಶ ಈ ದ್ವಂದ್ವಗಳು ಮನುಷ್ಯನನ್ನು ತಲ್ಲಣಗಳಿಗೆ ನೂಕುತ್ತಲೇ ಇರುತ್ತವೆ. ಈ ದ್ವಂದ್ವಗಳನ್ನು ಸಿರಿಸಂಪಿಗೆ ಚರ್ಚಿಸಿರುವ ರೀತಿ ಬಹಳ ವಿಶಿಷ್ಟವಾಗಿದೆ. ದೇಹವಿಲ್ಲದೆ ಆತ್ಮವಿಲ್ಲ, ಕಾಮ-ಪ್ರೇಮ ಇವೆರಡೂ, ಒಂದು ಇನ್ನೊಂದಕ್ಕೆ ಪೂರಕವಾಗಬೇಕು ಎನ್ನುವ ಸತ್ಯ ಹಾಗೂ ವಾಸ್ತವ-ಆದರ್ಶಗಳ ನಡುವಿರುವ ಗೆರೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿರುವ ಅಗತ್ಯ, ಸದಾ ಪರಿಪೂರ್ಣತೆಯೆಡೆಗೆ ತುಡಿಯುವ ನಾವು, ಅದೊಂದು ಭ್ರಮೆಯೆಂಬುದನ್ನು ಮನಗಾಣಬೇಕಾಗಿರುವ ಅವಶ್ಯಕತೆ - ಇವೆಲ್ಲವುಗಳಿಗೆ ʼಸಿರಿಸಂಪಿಗೆʼ ಉತ್ತರವೆನಿಸುತ್ತದೆ. ಆ ಉತ್ತರವನ್ನು ಕಂಡುಕೊಳ್ಳುವ, ಕಾಣಿಸುವ ಪ್ರಯತ್ನವೇ ನನ್ನ ಲೇಖನ ʼಪರಿಪೂರ್ಣತೆಯ ಭ್ರಮೆ ಕಳಚುವ ಕಂಬಾರರ ಸಿರಿಸಂಪಿಗೆ.ʼ
ಆಫ್ರಿಕನ್ ಮತ್ತು ಕನ್ನಡ ಸಾಹಿತ್ಯದಲ್ಲಿ ವಸಾಹತುಶಾಹಿ ಸಂಘರ್ಷದ ನೆಲೆಗಳು
17 to 27
ಯಾವುದೇ ʼಅನ್ಯ ಆಡಳಿತ ಸಂಸ್ಥೆʼ ಅಥವಾ ʼಅನ್ಯ ಸಂಸ್ಕೃತಿʼ ಹಲವು ವರ್ಷಗಳ ಕಾಲ ದೇಸೀ ಸಮಾಜವನ್ನು ಪ್ರಭಾವಿಸಿ, ಹಲವು ಸುಧಾರಣೆಗಳಿಗೆ ಹಾಗೂ ವಿಘಟನೆಗಳಿಗೆ ಕಾರಣವಾಗಿ ತದನಂತರ ಆ ಸಮಾಜದಿಂದ ಹೊರಟಿದೆ ಎಂದ ಮಾತ್ರಕ್ಕೆ ಆ ದೇಶವು ಮೂಲಸಂಸ್ಕೃತಿಗೆ ಬಂದಿತೆಂದಾಗಲಿ, ಅನ್ಯತೆಯಿಂದ ಮುಕ್ತವಾಯಿತೆಂದಾಗಲಿ ಗೆರೆಯೆಳೆದು ಹೇಳಲು ಬರುವುದಿಲ್ಲ. ಏಕೆಂದರೆ ಇದುವರೆವಿಗೂ ಪಶ್ಚಿಮ ಕಟ್ಟಿಕೊಟ್ಟ ಆಡಳಿತ, ಶಿಕ್ಷಣ, ನ್ಯಾಯ, ಅಧಿಕಾರ ಮತ್ತು ಬೌದ್ಧಿಕ ಚಿಂತನ ಕ್ರಮಗಳು ಸ್ಥಳೀಯ ನಂಬಿಕೆ, ಆಡಳಿತ ವ್ಯವಸ್ಥೆ, ಬದುಕು, ಸಂಬಂಧ, ಕಸುಬುಗಳನ್ನು ಪ್ರಭಾವಿಸಿರುತ್ತವೆ. ಆ ಮೂಲಕ ದೇಸೀ ಸಮಾಜದ ಭೌತಿಕ ಹಾಗೂ ಬೌದ್ಧಿಕ ರಚನೆಯೊಳಗೆ ʼಸಾಂಸ್ಕೃತಿಕ ಅನನ್ಯತೆʼಯನ್ನು ಸ್ವೀಕರಿಸುವ, ನಿರಾಕರಿಸುವ ಮತ್ತು ಅನುಸಂಧಾನ ಮಾಡಿಕೊಳ್ಳುವ ಹಂತಗಳಲ್ಲಿ ಸಂಘರ್ಷವನ್ನ ಏರ್ಪಡಿಸುತ್ತಿರುತ್ತದೆ. ಬ್ರಿಟೀಷ್ ವಸಾಹತುಶಾಹಿಯ ರಾಜಕೀಯ ಆಡಳಿತದಿಂದ ಬಿಡುಗಡೆಗೊಂಡ ಭಾರತೀಯ ಸಮಾಜದ ಪರಿಸ್ಥಿತಿ ಕೂಡ ಇದೆ ಆಗಿದೆ.
ವಸಾಹತು ರಾಷ್ಟ್ರಗಳನ್ನು ಆಳುವ ಉದ್ದೇಶದಿಂದ ವಸಾಹತುಶಾಹಿ ರಾಷ್ಟ್ರ ಕಟ್ಟಿಕೊಂಡಿದ್ದ ಹಲಬಗೆಯ ಸಂಕಥನಗಳಿಗೆ ಪರ್ಯಾಯವನ್ನು ಹುಡುಕುವ ಸಂದರ್ಭದಲ್ಲಿ ಉತ್ತರವಾದಗಳು ಹೆಚ್ಚು ಪ್ರಚಾರಕ್ಕೆ ಬರುತ್ತವೆ. ತೃತೀಯ ರಾಷ್ಟ್ರಗಳನ್ನು ಆಳಲು ವಸಾಹತುಶಾಹಿ ನಿರ್ಮಿಸಿ ಅನುಸರಿಸಿದ ʼಜ್ಞಾನʼ ಮತ್ತು ʼಅಧಿಕಾರʼ ಎಂಬ ಪರಿಕಲ್ಪನೆಗಳನ್ನು ವಿಕೇಂದ್ರೀಕರಿಸುವುದೇ ಇವುಗಳ ಮೂಲ ಆಶಯ. ವಸಾಹತುಶಾಹಿಗೆ ಬದಲನ್ನು ಹುಡುಕಿದ ವಸಾಹತೋತ್ತರವಾಗಲಿ, ಆಧುನಿಕತೆಯನ್ನು ವಿರೋಧಿಸಿದ ಆಧುನಿಕೋತ್ತರವಾಗಲಿ, ಕೇಂದ್ರ ಕಟ್ಟಿದ ಚರಿತ್ರೆಯನ್ನು ಅನುಮಾನಿಸಿದ ಸಬಾಲ್ಟ್ರನ್ ಅಧ್ಯಯನವಾಗಲಿ ಸಾಂರಾಜ್ಯಶಾಹಿಗೆ ಪರ್ಯಾಯವಾಗಿ ಅಂಚಿನ ಸಮುದಾಯವನ್ನು ಪ್ರಧಾನವಾಗಿಸಿದವು. ಹಾಗಾಗಿ ಈ ಪರಿಕಲ್ಪನೆಗಳು ವಸಾಹತುಶಾಹಿಯು ಕಟ್ಟಿಕೊಟ್ಟ ಅಧಿಕಾರ ಮತ್ತು ಜ್ಞಾನಕ್ಕೆ ಉತ್ತರವೆಂಬಂತೆ ವಿಜ್ಞಾನವನ್ನು ಅನುಮಾನಿಸಿ, ಜನಪ್ರಿಯ ಹಾಗೂ ಗಂಭೀರ ಎಂಬ ವರ್ಗೀಕರಣವನ್ನು ವಿರೋಧಿಸುತ್ತವೆ.
ಮೇಹರ್‌ಜಾನ್‌ಳ ದುರಂತ ಪ್ರೇಮಕಥೆ
28 to 40
ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಮೆಚ್ಚಿನ ಪತ್ನಿ ʼಮಮ್ತಾಜ್ ಮಹಲ್ʼಳ ನೆನಪಿಗಾಗಿ ಕಟ್ಟಿಸಿದ ʼತಾಜ್ ಮಹಲ್ʼ ಪ್ರೇಮಸೌಧ, ಹಾಗೂ ಮುಹಮ್ಮದ್ ಆದಿಲ್‌ಷಾನು ತನ್ನ ʼರಂಭಾʼ ಎನ್ನುವ ದಾಸಿಯ ಮೇಲಿನ ಉತ್ಕಟ ಪ್ರೀತಿಯ ಕುರುಹಾಗಿ ʼಗೋಲ್ ಗುಂಬಜ್ʼ ಸ್ಮಾರಕ ಲೋಕವಿಖ್ಯಾತಿಯನ್ನು ಪಡೆದಿರುವಂತೆ; ʼಮೆಹರ್‌ಜಾನ್ʼಳ ದುರಂತ ಪ್ರೇಮಕತೆಯು ದಕ್ಷಿಣ ಭಾರತದ ಬಹುದೊಡ್ಡದೆನಿಸಿದ ವಿಜಯನಗರ ಸಾಮ್ರಾಜ್ಯದ ಅವನತಿಯ ಹಿನ್ನಲೆಯ ಮುಖ್ಯ ಕಾರ್ಯಕಾರಣ ಸಂಬಂಧವನ್ನು ತಿಳಿಯುವುದು.
ರಾಮರಾಯನ ಪ್ರೇಮ ನಿವೇದನೆಯನ್ನು ನಿಷ್ಕಲ್ಮಶ ಜೀವ-ಭಾವದಿ ಒಪ್ಪಿ-ಅಪ್ಪಿ, ಒಲಿದು ಬಂದ ಹೆಣ್ಣಿಗೆ ಪ್ರೀತಿಯ ರಸದೂಟವನ್ನುಣಬಡಿಸಿ ಒಡಲು ಮಡಿಲು ತುಂಬಿಸಿ, ಕೃಷ್ಣದೇವರಾಯನ ಮೆಚ್ಚುಗೆ, ರಾಣಿ ತಿರುಮಲಾಂಬಳೊಂದಿಗೆ ವಿವಾಹ, ಸಿಂಹಾಸನದ ಮೇಲಿನ ವ್ಯಾಮೋಹ ಇದೆಲ್ಲವನ್ನೂ ಮಹತ್ವಾಕಾಂಕ್ಷೆಯ ಸೋಗಿನಲ್ಲಿ ನಂಬಿ ಬಂದ ಹೆಣ್ಣಿನ ಪ್ರೀತಿಯನ್ನು ತುಚ್ಯವಾಗಿ ಕಂಡದ್ದರ ಫಲವಾಗಿ ಮುಂದೊಂದು ದಿನ ರಾಮರಾಯ ಬಹುದೊಡ್ಡ ಬೆಲೆಯನ್ನಲ್ಲದೆ ತನ್ನ ತಲೆಯನ್ನೇ ಕೊಡಬೇಕಾದ ಅನಿವಾರ್ಯತೆ ತಂದುಕೊಳ್ಳುತ್ತಾನೆ; ಇಲ್ಲಿ ವ್ಯಕ್ತಿ, ವ್ಯಕ್ತಿತ್ವ ಅಧಃಪತನವೂ ಒಂದು ಮಹೋನ್ನತ ಸಾಮ್ರಾಜ್ಯದ ಪತನಕ್ಕೆ ಕಾರಣವಾಗುವುದಲ್ಲದೆ, ಆತ್ಮಾಭಿಮಾನದ ಬಲದ ಗೆಲುವಾಗುತ್ತದೆ. ʼಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿʼ ಎನ್ನುವ ಅರ್ಥದಿ ʼಪುರುಷನ ಏಳ್ಗೆಗೂ ಬೀಳ್ಗೆಗೂ ಕಾರಣಳುʼ ಆಗಬಲ್ಲಳು ಎಂಬುದಕ್ಕೆ ಮೆಹರ್‌ಜಾನ್‌ಳ ದುರಂತ ಪ್ರೇಮಕತೆ ಸ್ಪಷ್ಟ ನಿದರ್ಶನವಾಗಿದೆ.
ಮಂಟೇಸ್ವಾಮಿ ಕಾವ್ಯದಲ್ಲಿ ಶಾಕ್ತ-ಶೈವಗಳ ಸಂಘರ್ಷ
41 to 52
ಶ್ರಮಣ ಧಾರೆಯು ಈ ನೆಲದ ಅತಿಪುರಾತನವಾದ ವಿಚಾರಧಾರೆ. ಸರ್ವ-ಸಾಮರಸ್ಯಮಯಿಯಾದ ಈ ಧಾರೆ ನಾಡಿನುದ್ದಗಲಕ್ಕೂ ವಿಸ್ತರಿಸಿತ್ತು. ಕಾಲ-ಪಲ್ಲಟದಿಂದಾಗಿ ಬಹುತ್ವವನ್ನು ಕೊಲ್ಲುವ ಏಕತ್ವದ ವಲಸೆ ಧಾರೆ ಇಲ್ಲಿನ ಸಮತೆಯೊಳಗೆ ಅಸಮತೆಯ ವಿಷಬೀಜ ಬಿತ್ತಿ ತನ್ನ ಕಾರ್ಯವನ್ನು ಸಾಧು ಮಾಡಿಕೊಂಡಿತು. ಈ ವಿಷಬೀಜ ಮುಂದೆ ಗಿಡವಾಗಿ, ಮರವಾಗಿ ಎಲ್ಲೆಡೆಯು ಹಬ್ಬಿ ವಿಷಲೀನವಾಗುವ ಹೊತ್ತಿನಲ್ಲಿ ವಿಷಕಂಠರಾಗಿ ಬುದ್ಧ, ನಾಗಾರ್ಜುನ, ಸರಹಪಾದ, ಚಾರ್ವಾಕ, ಮುಂದೆ ಕನ್ನಡ ನಾಡಿನಲ್ಲಿ ಇದಕ್ಕೆ ವಚನ ಚಳವಳಿ ಕೈಜೋಡಿಸಿ ಬುಡ ಸಮೇತ ಕಿತ್ತೊಗೆಯುವ ಕಾರ್ಯ ಕೈಗೊಂಡರು. ವಿಷಪ್ರೇರಿತ ವೈದಿಕ ಚಿಂತನೆಯನ್ನು ಬಗ್ಗುಬಡಿಯಲು ಮಧ್ಯಕಾಲೀನ ಸಂದರ್ಭದಲ್ಲಿ ಅನೇಕ ತಾಂತ್ರಿಕರು ಬೀದಿಗಿಳಿದರು. ಅಂತಹ ಮಹತ್ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದವನು ಮಂಟೇಸ್ವಾಮಿ. ಅವೈದಿಕದೊಳಗುದಿಸುತ್ತಿದ್ದ ವೈದಿಕವನ್ನು ಪ್ರಖರವಾಗಿ ಭಂಜಿಸಿದವನು. ಅವನ ಕ್ರಾಂತಿಗಳೆ ಜನಪದರ ಕೊರಳೊಳಗೆ ಹಾಡಾಗಿ, ಕತೆಯಾಗಿ ರೂಪಿತಗೊಂಡು ಇಂದು ಮಂಟೇಸ್ವಾಮಿಕಾವ್ಯವೆಂದು ಮಹಾಕಾವ್ಯದ ಸ್ಥಾನವನ್ನಲಂಕರಿಸಿವೆ. ತಾಂತ್ರಿಕ ಪಂಥದೊಳಗೆ ಇದ್ದ ಅನೇಕ ಸಂಘರ್ಷಗಳನ್ನು ಮಂಟೇಸ್ವಾಮಿಕಾವ್ಯ ತೆರೆದಿಟ್ಟಿದೆ. ಅಂತಹ ಬಹುಮುಖ್ಯ ಸಂಘರ್ಷಗಳಲ್ಲೊಂದು ಶಾಕ್ತ-ಶೈವದ ಸಂಘರ್ಷ.
ಮಾತೃ ಭಾಷಾ ಮಾಧ್ಯಮವೇ ಅರಿವಿನ ಮೂಲ ಬೇರು
53 to 67
ಇತ್ತೀಚೆಗೆ ಬಹು ಚರ್ಚೆಯಾಗುತ್ತಿರುವ ವಿಷಯವೆಂದರೆ ಭಾಷೆ ಮತ್ತು ಮಾಧ್ಯಮ ಕುರಿತದ್ದು. ಭಾಷೆ ಬೌದ್ಧಿಕ ಸಾಧನೆಗೆ ಒಂದು ಅಡಿಗಲ್ಲು. ಹಾಗೆಂದ ಮಾತ್ರಕ್ಕೆ ಇಂತದ್ದೇ ಭಾಷೆ ಅದಕ್ಕೆ ಸಾಧನವೆಂದನ್ನು ಒಪ್ಪಲಾಗದು. ಜಾಗತಿಕ ಭಾಷೆ ಎಂದು ಗುರುತಾಗಿರುವ ಇಂಗ್ಲಿಷ್ ಭಾಷೆ ಹುಟ್ಟುವ ಮೊದಲೇ ಜಗತ್ತನ್ನು ಬಹು ಭಾಷೆಗಳು ಆಳಿವೆ. ಸಾಂಸ್ಕೃತಿಕ ರಾಯಭಾರಿಗಳಾಗಿಯೂ ಮೆರೆದಿವೆ. ನಾಗರೀಕತೆಯ ಕಟ್ಟುವಿಕೆಯಲ್ಲಿ ಭಾಷೆಯ ಮಹತ್ತು ದೊಡ್ಡದು. ಅದನ್ನು ಗ್ರೀಕ್, ಲ್ಯಾಟಿನ್, ಹೀಬ್ರೂ, ಸಂಸ್ಕೃತ ಮೊದಲಾದ ಭಾಷೆಗಳು ಮಂಚೂಣಿಯಲ್ಲಿನಿಂತು ನಡೆಸಿವೆ. ಹಾಗಾಗಿ ಭಾಷೆ ಒಂದು ಅರಿವಿನ ಸಾದನವೇ ಹೊರತು ಇಂತದ್ದೇ ಭಾಷೆ ಅರಿವಿಗೆ ಮೂಲಾಧಾರ ಎಂದು ಹೇರುವುದು ತಪ್ಪಾಗುತ್ತದೆ. ಮಾಧ್ಯಮ ಆ ನಿಟ್ಟಿನಲ್ಲಿ ಒಂದು ಉಪಕ್ರಮವಷ್ಟೇ. ಸಮಕಾಲೀನ ಜಾಗತಿಕ ಶ್ರೇಷ್ಠ ಭಾಷಾ ವಿಜ್ಞಾನಿಯಾದ ನೋಮ್ ಚೋಮಸ್ಕಿ “ಭಾಷೆಯ ಕಲಿಕೆ ತಾಯಿಯ ಗರ್ಭದಿಂದಲೇ ಪ್ರಾರಂಭವಾಗುತ್ತದೆ” ಎನ್ನುತ್ತಾರೆ. ಅದು ಆಯಾ ಪರಿಸರಕ್ಕೆ ತಕ್ಕಂತೆ ತೆರೆದುಕೊಂಡು ಪ್ರೌಢಿಮೆ ಮೆರೆಯುತ್ತದೆ. ಆಮೂಲಕ ಬೌದ್ಧಿಕ ಶಕ್ತಿ ವೃದ್ಧಿಯಾಗುತ್ತದೆ. ಇದು ಪ್ರತಿಯೊಂದು ಭಾಷೆಗೂ ಅನ್ವಯವಾಗುವ ಸರ್ವತ್ರಿಕ ನಿಯಮ. ಆದ್ದರಿಂದ ಯಾವುದೇ ಭಾಷೆಯಲ್ಲಿ ಪರಿಣತಿ ಪಡೆದ ವ್ಯಕ್ತಿ ತನ್ನ ಜ್ಞಾನ ವಿಸ್ತಾರತೆಯನ್ನು ಹೆಚ್ಚಿಸಿಕೊಂಡು ವ್ಯವಹಾರಿಕವಾಗಿ ತತ್ಕಾಲೀನ ಭಾಷೆಯನ್ನು ಬಳಸತೊಡಗಿದಾಗ ಪ್ರಾದೇಶಿಕ ಮತ್ತು ದೇಶಿಯ ಹಾಗೂ ಜಾಗತಿಕ ಭಾಷೆಗಳೆಲ್ಲವನ್ನು ಸಮನಾಗಿ ನೋಡುವ ಭಾವನೆ ಮೂಡುವುದು. ಬದಲಾಗಿ ಈ ಭಾಷೆಯನ್ನೇ ಓದಬೇಕೆಂದು ಹೇರಿಕೆಗೆ ಹೊರಟರೆ ಭಾಷಾ ವೈಷ್ಯಮ್ಯ ಮೂಡುವುದು. ಇದು ಅಳಿಯಬೇಕೆಂದರೆ ಭಾಷೆಯನ್ನು ಸಹ-ಸಂಬಂಧದ ನೆಲೆಯಲ್ಲಿಯೇ ಮಾಧ್ಯಮವನ್ನಾಗಿ ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಶಿಕ್ಷಣದ ನೀತಿ ಜಾರಿಯಾದಾಗಲೂ ಸರ್ಕಾರವು ಭಾಷೆಯ ಕುರಿತ ಬಲವಂತ ಹೇರಿಕೆಗೆ ಮುಂದಾದಾಗಲೂ ಏಳುವ ಪ್ರಶ್ನೆ ಭಾಷೆ ಮತ್ತು ಮಾಧ್ಯಮದ ನಡುವಿನ ದ್ವಂದ್ವ ನಿಲುವು. ಇದು ಆಯಾ ಭಾಷಾ ಪ್ರೇಮಿಗಳ ನಡುವೆ ನಡೆಯುವ ಒಂದು ಚರ್ಚೆಯೆ ಹೊರತು ಸಮಸ್ಯೆಗೆ ಪರಿಹಾರವಲ್ಲ. ಅದ್ದರಿಂದ ಅರಿವಿಗೆ ಭಾಷೆ ಸಾಧನವೇ ಹೊರತು ಮಾಧ್ಯಮವಲ್ಲ ಹಾಗಾಗಿ ಜಗತ್ತಿನ ದರ್ಶನಿಕರಾದಿಯಾಗಿ ಈ ವರೆಗಿನ ಎಲ್ಲಾ ಶಿಕ್ಷಣ ಕುರಿತ ನೀತಿಗಳು ಕೂಡ ಆಯಾ ಪ್ರಾದೇಶಿಕ ಭಾಷೆಗೆ ಮನ್ನಣೆ ಕೊಟ್ಟಿವೆ ಎಂಬುದನ್ನು ಸಂಶೋಧನಾತ್ಮಕವಾಗಿ ನಿರೂಪಿಸುವುದು ಈ ಲೇಖನದ ಮುಖ್ಯ ಆಶಯ.
Tracing the Nāmadhāri Naiks: Roots and Role
68 to 76
This research article is about recently styled Nāmadhāri Naiks, originally belonging to a community of toddy tappers found predominantly in the Uttara Kannada district, who were transformed into Nāmadhāri Naiks in the early 20th century CE. This article aims to find out various aspects of the Nāmadhāri Naiks such as their other caste indicative words, origin, historical background and role by brief study. The primary and secondary sources that shed light on them have been examined for this. This study traces their deep root, assimilation, transformation, influence and role in the local history.
ममता कालिया के साहित्य में अभिव्यक्त स्त्री पुरूष संबंध
77 to 82
ममता कालिया का हिंदी साहित्य में अद्वितीय स्थान है। ये एक एसी कामकाजी स्त्री है, जो औरतों की समस्याओं को भली-भांती समझकर उससे संबंधित रचनाऐ निरूपित करती हैं। इनकी हर रचना में ज्यादातर सच्चाई को ध्यान में रखकर इसका निवारण भी करने की चेष्टा है। नए जमाने के करवट बदलते रिश्तों को केंद्र में रखकर लिखा गया है। पति-पत्नी का रिश्ता, माता-पिता और संतान का रिश्ता, प्रेमी-प्रेमिका का रिश्ता, हर रिश्ता नए समय के साथ बदल रहा है। सपनों की होम डिलिवरी, दौड, ममता इनकी बहुत मशहूर रचनाऐ हैं। इन सब में स्त्री और पुरूष मानसिकता को बहुत ही सुंदर ढंग से दर्शाया गया है। पुरूष के हर पहलू जैसे पिता, पुत्र और औरत के हर पहलू मां, बेटी, बहू, पत्नी को भी अत्यंत सहज ढंग से प्रस्तुत किया है। रूचि शर्मा, डाली, मिसेज सहाय , रेखा इसके उदाहरण है। जीवन में दो भिन्न मानसिकता रखने वाले पुरूषों को पाते है। हम पूरी तरह से यह नही कह सकते है कि हमेशा पुरूष दंभी होता है। एसे भी हमारे यहा पुरूष है जो औरतों को अत्यंत सम्मान देते है। सपनें की होम डिलिवरी नए जमाने के बदलते रिश्तों को ड्यान में लिखकर लिखा गया है। हर रिश्ता नए समय के साथ ताल बैठाने की कोशिश कर रहा है। हमारी भारतीय संस्कृति में पति-पत्नी का रिशता काफ़ी मायने रखता है। दोनो जीवन की गाडी का महत्वपृण पहिया है। सच्चे रिश्ते में एक भी अगर ढीला पड जाए तो दूसरा पूरी तरह से दुर्बल बन जाता है।
Book Review
ಕುವೆಂಪುರವರ ಜಲಗಾರ ನಾಟಕ
83 to 91
ರಾಷ್ಟ್ರಕವಿ ಕುವೆಂಪುರವರು ಕನ್ನಡದ ಮೇರು ಕವಿ, ಅಗ್ರಮಾನ್ಯ ಕವಿ, ಕಾದಂಬರಿಕಾರ, ವಿಮರ್ಶಕ, ಉತ್ತಮ ಚಿಂತಕರೂ ಆಗಿದ್ದರು. ಇವರು ಅನೇಕ ನಾಟಕಗಳನ್ನು ಬರೆದಿದ್ದಾರೆ. 20ನೇಯ ಶತಮಾನದ ಶ್ರೇಷ್ಠಕವಿ, ವರಕವಿ ಬೇಂದ್ರೆಯವರಿಂದ “ಯುಗದಕವಿ ಜಗದಕವಿ” ಎನಿಸಿಕೊಂಡವರು. ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದವರು ಕುವೆಂಪುರವರು.
ಜಲಗಾರ ನಾಟಕ ಆರಂಭಗೊಳ್ಳುವುದು ಆಗಷ್ಟೇ ಸೂರ್ಯ ಮೂಡುವ ಹೊತ್ತಿನಲ್ಲಿ ಇನ್ನೂ ರಂಗದ ಮೇಲೆಲ್ಲಾ ಮಬ್ಬು ಮಬ್ಬು ಕತ್ತಲು, “ಮೂಡಿ ಬಾ, ಮೂಡಿ ಬಾ, ಜಗದ ಕಣ್ಣೆ ಬಾ, ಬಾ” ಎಂದು ಬೆಳಗನ್ನು ಸ್ವಾಗತಿಸುವ ಹಾಡಿನ ಮೂಲಕ ನಾಟಕ ಆರಂಭಗೊಳ್ಳುತ್ತದೆ. ಜಲಗಾರ ನಾಟಕದಲ್ಲಿ ಇರುವುದು ಎರಡು ದೃಶ್ಯಗಳು. ಮೊದಲನೆಯದು “ದೇವಸ್ಥಾನಕ್ಕೆ ಜನರು ಹೋಗುತ್ತಿರುವುದು” ಎರಡನೆಯದು “ದೇವಸ್ಥಾನದಿಂದ ಹಿಂತಿರುಗುತ್ತಿರುವುದು”. ಜಲಗಾರ ಕಸಗುಡಿಸುವ ಕಾಯಕದಲ್ಲಿರುತ್ತಾನೆ. ಜನರು ಜಾತ್ರೆ, ಉತ್ಸವ ಎಂದೆಲ್ಲಾ ದೇವಸ್ಥಾನಕ್ಕೆ ಹೊರಟಿದ್ದಾರೆ. ಇಲ್ಲಿ ದೇವಸ್ಥಾನ ಉಳ್ಳವರ ಪಾಲಿಗೆ ಇರುವಂತದ್ದು, ಇಲ್ಲದವರ ಪಾಲಿಗೆ ದೇವರು ಅವರ ನಿತ್ಯದ ಕಾಯಕದಲ್ಲಿ ಕಾಣಬೇಕಾದ ಸತ್ಯ.
ಹೀಗೆ ಕುವೆಂಪುರವರು ಬರೆದ ಅನೇಕ ನಾಟಕಗಳಲ್ಲಿ “ಜಲಗಾರ” ನಾಟಕವು ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ. ಈ ನಾಟಕ ರಂಗಪ್ರದರ್ಶನವನ್ನು ಕಂಡಿದ್ದೇ ಅಲ್ಲದೆ ಅನೇಕ ಬಾರಿ ಚರ್ಚೆಗೆ, ಜಿಜ್ಞಾಸೆಗೆ ಒಳಗಾಗಿ ಓದುಗರಲ್ಲಿ ನಮ್ಮ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಕಾಯಕದ ಮಹತ್ವವನ್ನು ಸಾರಿದೆ.
ನಲ್ಲೂರರ ʼನೀನೆಂಬ ನಾನುʼ ಕವನ ಸಂಕಲನದ ವಿಭಿನ್ನ ನೆಲೆಗಳು
92 to 104
ಆಧುನಿಕ ಕನ್ನಡ ಸಾಹಿತಿಗಳಲ್ಲಿ ಆರ್.ಕೆ.ನಲ್ಲೂರು ಪ್ರಸಾದ್‌ರವರು ಒಬ್ಬರು. ಯಾವುದೇ ಒಂದು ಸಾಹಿತ್ಯಿಕ ಪಂಥಕ್ಕೆ ಸೀಮಿತರಾಗದ ಇವರು ಸಮನ್ವಯತೆಯಿಂದ ಕಾವ್ಯ ಕಟ್ಟುತ್ತಿರುವವರು. ಇವರು ಕವಿಯಾಗಿ, ಜಾನಪದ ವಿದ್ವಾಂಸರಾಗಿ, ಕಲಾವಿದರಾಗಿ, ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ, ವಿಚಾರವಾದಿಯಾಗಿ, ಸಂಸ್ಕೃತಿ ಚಿಂತಕರಾಗಿ, ಲೇಖಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಸಾಹಿತಿಯಾದವನಿಗೆ ತಾನು ಬದುಕುತ್ತಿರುವ ಸಮಾಜದ ಬಗ್ಗೆ ಸದಾಕಾಲ ಕೃತಜ್ಞತಾ ಭಾವವೇ ಇರುತ್ತದೆ. ಸಮಾಜದ ಪ್ರತಿಯೊಂದು ಆಗು-ಹೋಗುಗಳನ್ನು ಆತ ಸದಾ ತೆರೆದ ಹೃದಯದಿಂದ ಸ್ವೀಕರಿಸಿ, ಅನುಭವಿಸಿ ಅವುಗಳಿಗೆ ಅಭಿವ್ಯಕ್ತಿಸುತ್ತಾ ಬದುಕುತ್ತಾನೆ. ಅವನ ಅಭಿವ್ಯಕ್ತಿಯು ಮೌಖಿಕವಾಗಿ ಇಲ್ಲವೇ ಕಾರ್ಯರೂಪದಲ್ಲಿ ಅಭಿವ್ಯಕ್ತಿಸಲ್ಪಡುತ್ತದೆ. ಸಾಹಿತಿಯು ತಾನು ಕಂಡುಂಡ ಅನೇಕ ಘಟನೆಗಳಿಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾನಾದರೂ ಆತನ ಕಾವ್ಯ ರಚನೆಗೆೆ ಪ್ರೇರಣೆ, ಪ್ರಭಾವಗಳಿರುವುದನ್ನು ಅಲ್ಲಗಳೆಯಲಾಗದು. ಈ ನಿಟ್ಟಿನಲ್ಲಿ ನಲ್ಲೂರರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ʼದಗ್ಧ, ಸೋನೆ ಮುಗಿಲು, ನೀನೆಂಬ ನಾನು, ರೆಕ್ಕೆ ಬಡಿಯುವ ಮುನ್ನ ಹಾಗೂ ನಿವೃತ್ತೋಪನಿಷತ್ತುʼ ಎಂಬ ಕವನ ಸಂಕಲನಗಳು ಸಹ ಮುಖ್ಯವಾದವುಗಳಾಗಿವೆ. ಈ ಎಲ್ಲಾ ಕವನ ಸಂಕಲನಗಳಲ್ಲಿ ಕಾವ್ಯ, ಸಮಾಜ, ಸಂಬಂಧಗಳು, ಸಾಹಿತ್ಯ, ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ವಿಚಾರಗಳ ಒಳನೋಟಗಳನ್ನು ತೆರೆದಿಟ್ಟಿದ್ದಾರೆ. ಪ್ರಸ್ತುತ ಲೇಖನದಲ್ಲಿ ಇವರ ಪ್ರಥಮ ಕವನ ಸಂಕಲನವಾದ ʼನೀನೆಂಬ ನಾನುʼ ಕೃತಿಯಲ್ಲಿರುವ ಕವನಗಳಲ್ಲಿ ಅಭಿವ್ಯಕ್ತವಾಗಿರುವ ವಿಭಿನ್ನ ನೆಲೆಗಳನ್ನು ಅವಲೋಕಿಸಲಾಗಿದೆ.
ಜೋಕುಮಾರ ಸ್ವಾಮಿ: ಹೆಣ್ಣುತನದ ಸಾರ್ಥಕತೆಯ ನೀರಿಕ್ಷೆಯಲ್ಲಿ
105 to 109
ಚಂದ್ರಶೇಖರ ಕಂಬಾರರು ನವ್ಯ ಸಾಹಿತ್ಯ ಸಂದರ್ಭದಲ್ಲಿ ಒಬ್ಬ ಮುಖ್ಯ ಕವಿಯಾಗಿ, ನಾಟಕಕಾರರಾಗಿ ಒಟ್ಟಿನಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡವರು. ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಇವರದು. ಸಿರಿಸಂಪಿಗೆ ನಾಟಕಕ್ಕೆ 1990ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ಕರಿಮಾಯಿ, ಜಿಕೆ ಮಾಸ್ತರ್ ಅವರ ಪ್ರಣಯ ಪ್ರಸಂಗ, ಸಿಂಗಾರವ ಮತ್ತು ಅರಮನೆ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ಚಾಳೇಶ್, ನಾಯಿಕತೆ, ಕಾಡು ಕುದುರೆ ಇದು ಚಲನಚಿತ್ರವಾಗಿ ಪ್ರಸಿದ್ಧಿ ಪಡೆದಿದೆ. ಜೋಕುಮಾರಸ್ವಾಮಿ ಇದು ಕಂಬಾರರ ಸಾಂಸ್ಕೃತಿಕ ಮುಖಮುಖಿಯಾಗಿಸುವ ಈ ಮಣ್ಣಿನ ಸೊಗಡನ್ನು ಚರ್ಚಿಸುವ ಮಹತ್ವದ ಕೃತಿಯಾಗಿದೆ. ಹೆಣ್ಣಿನ ಸಾರ್ಥಕತೆ ಅವಳ ಲೈಂಗಿಕ ಆಸೆ ಆಕಾಂಕ್ಷೆಗಳು ಈಡೇರಿಸುವಲ್ಲಿ ಸಾಂಪ್ರದಾಯಿಕ ಚೌಕಟ್ಟಿನ ಬಂಧಿಯಾಗುವುದು. ಪ್ರಾಕೃತಿಕವಾಗಿ ಸಾಂಪ್ರದಾಯಿಕ ಚೌಕಟ್ಟನ್ನು ದಾಟುವ ಪ್ರಕ್ರಿಯೆಯಲ್ಲಿ ಸಾಂಸ್ಕೃತಿಕ ಸಂವರ್ಷವನ್ನು ಕಾಣಬಹುದಾಗಿದೆ. ಕಂಬಾರರು ಪೌರಾಣಿಕ ಹಿನ್ನೆಲುಳ್ಳ ಜೋಕಮುನಿಯ ಮಗನೇ ಜೋಕುಮಾರಸ್ವಾಮಿಯ ಕತೆಯ ಆಶಯ ಈ ನಾಟಕದಲ್ಲಿ ಎದ್ದು ಕಾಣುತ್ತದೆ. ಉತ್ತರ ಕರ್ನಾಟಕದಲ್ಲಿ ವಿಶಿಷ್ಟ ಆಚರಣೆಯಲ್ಲಿರುವ ಈ ಪೌರಾಣಿಕ ಕಥೆಯು ವಿಶಿಷ್ಟತೆದಿಂದ ಕೂಡಿದೆ. ಏಳು ದಿನಗಳಲ್ಲಿ ಅವನ ಜನನ ಬಾಲ್ಯ ಯೌವನ ಸಾವು ಎಲ್ಲವೂ ಮುಗಿಯುತ್ತದೆ ಎನ್ನುವುದು ನಂಬಿಕೆ. ಇದರ ಆಚರಣೆಯನ್ನು ಜೋಕುಮಾರನ ಹಬ್ಬದಲ್ಲಿ ಕಾಣಬಹುದು. ಜೋಕುಮಾರ ಒಬ್ಬ ದೇವತೆಯ ಮಗ ಮಾರಿಯ ಮಗ ಅವನು ಅಲ್ಪಾಯುಷ್ಯವಾಗಿ ಏಳು ದಿನಗಳಲ್ಲಿ ಮೆರೆದು ಪುಂಡಾಡಿಕೆ ಮಾಡಿ ತೀರಿಹೋದವನು ಎಂದು ಹೇಳುತ್ತಾರೆ. ಅವನ ತಾಯಿಯು ದೇವತಸ್ತ್ರೀ ಆಗಿದ್ದರೂ ಅವನನ್ನು ಕಾಪಾಡದೆ ಹೋದಳೆಂದು ಪ್ರತೀತಿ. ಕ್ಷುದ್ರ ದೇವತೆಗಳಲ್ಲಿ ಜೋಕುಮಾರಸ್ವಾಮಿ ಒಬ್ಬ. ಇಂತಹ ಕಥೆಯನ್ನು ಕಂಬಾರರು ಸಮಕಾಲಿನ ಜೀವನಕ್ಕೆ ಹೆಣ್ಣು ಮತ್ತು ಭೂಮಿ ಮುಖಮುಖಿಯಾಗಿಸುವ ಸಾಮಾಜಿಕ ನ್ಯಾಯ ಪಥದಲ್ಲಿ ಮುನ್ನಡಿಸುವ ಧೋರಣೆಯ ಮಹತ್ವದ ಸ೦ಗತಿಯಾಗಿದೆ. ಕಂಬಾರರ `ಜೋಕುಮಾರ ಸ್ವಾಮಿʼ ನಾಟಕವನ್ನು; ಸಮಕಾಲೀನ ವಸ್ತುವಾದ ಉಳುವವನೇ ನೆಲದ ಒಡೆಯ ಎಂಬ ವಸ್ತುವನ್ನು ತೆಗೆದುಕೊಂಡು ಅದನ್ನು ಲೈಂಗಿಕ ಫಲವಂತಿಕೆಯೊಂದಿಗೆ ಹೊಂದಿಸಿ ಕಟ್ಟಲಾಗಿದೆ.
Essay
ಅಂಬೇಡ್ಕರ್‌ರವರ ಸಾಮಾಜಿಕ ಚಿಂತನೆಗಳು
110 to 116
ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಸಿಕೊಂಡ ಮಹಾನ್ ವ್ಯಕ್ತಿ. ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಇವರು ದೇಶಕ್ಕಾಗಿ ಮಾಡಿದ ಹೋರಾಟಗಳು ಎಂತಹ ದುರ್ಬಲ ವ್ಯಕ್ತಿಗಳನ್ನೂ ಸಹ ಎಚ್ಚರಿಸುತ್ತದೆ. ಇವರ ಕೊಡುಗೆಯನ್ನು ಭಾರತೀಯ ಜನತೆ ಎಂದಿಗೂ ಮರೆಯುವುದಿಲ್ಲ. ಸಂವಿಧಾನ ರಚನೆಗೆ ಮಾತ್ರವಲ್ಲದೇ ಅವರ ಸೇವೆ ಜನತೆಯನ್ನು ಜಾಗೃತರಾಗಿ ಮಾಡುವ ಸಾಧನವಾಗಿದೆ ಎನ್ನಬಹುದು.
ಅಂಬೇಡ್ಕರ್ ಅವರು ವೈಚಾರಿಕತೆಯ ನೆಲೆಯಲ್ಲಿ ಈ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂಬ ಮಹದಾಶಯವನ್ನು ಹೊಂದಿರುವ ಅಪರೂಪ ವ್ಯಕ್ತಿ. ಈ ಹಿನ್ನಲೆಯಲ್ಲಿಯೇ ಅವರು “ಈ ದೇಶದಲ್ಲಿ ಗುಡಿ-ಗೋಪುರಗಳಿಗಿಂತ ಶಾಲೆಗಳು ತೆರೆದರೆ, ಆ ದೇಶ ಉದ್ದಾರವಾಗುತ್ತದೆ” ಎಂಬ ನಿಲುವನ್ನು ತಾಳಿದ್ದರು. ಅಂಬೇಡ್ಕರ್ ಅವರ ಆಲೋಚನೆಗಳು, ಜೀವನ ಮೌಲ್ಯಗಳು ಸಾಹಿತ್ಯ ಕ್ಷೇತ್ರದಲ್ಲೂ ವಸ್ತುವಾಗುತ್ತಿದೆ ಎಂದರೆ; ಆ ವ್ಯಕ್ತಿಯ ಅನನ್ಯತೆಯ ಬಗ್ಗೆ ಅವಲೋಕನ ಮಾಡಬೇಕಾದದ್ದೇ ಸರಿ. ಅವರ ನಡೆ, ನುಡಿಗಳ ಜಾಡನ್ನಿಡಿದರೆ ನಾವು ಎಂತಹ ಅಸಮಾನತೆಯನ್ನಾಗಲೀ, ಕಷ್ಟಕರವಾದ ಯಾವುದೇ ಕೆಲಸವಾಗಲೀ ಅಂತಹವುಗಳಿಂದ ನಾವು ಸುಲಭವಾಗಿ ತಪ್ಪಿಸಿಕೊಳ್ಳಬಹುದೆಂಬ ಅರಿವು ಮನದಟ್ಟಾಗುತ್ತದೆ.