ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸಸ್ಯಸಂಕುಲ
Abstract
ಮಾನವನಲ್ಲಿ ಹುದುಗಿರುವ ಅಂತಃಸತ್ವವು ಸಾಹಿತ್ಯ ಮತ್ತು ಸಂಸ್ಕೃತಿಯ ಉಗಮಕ್ಕೆ ಪ್ರೇರಕವಾಗಿದೆ. ಸಹಸ್ರಾರು ವರ್ಷಗಳ ಅವಧಿಯಲ್ಲಿ ವಿಸ್ತಾರವಾಗುತ್ತ ಬಂದಿರುವ ಸಾಹಿತ್ಯ ಮತ್ತು ಸಂಸ್ಕೃತಿಗಳು ಪ್ರದೇಶದಿಂದ ಪ್ರದೇಶಕ್ಕೆ, ಜನಾಂಗದಿಂದ ಜನಾಂಗಕ್ಕೆ ವಿಭಿನ್ನ ಸ್ವರೂಪಗಳನ್ನು ತಾಳಿವೆ. ಮನುಷ್ಯನ ಚಿಕಿತ್ಸಕ ಬುದ್ಧಿಯಿಂದ ಸಾಂಸ್ಕೃತಿಕ ಸಂಗತಿಗಳು ಪರಿಷ್ಕರಣೆಗೊಳ್ಳುತ್ತ ಸಾಗುತ್ತಲೇ ಇವೆ. ಪ್ರಸ್ತುತದಲ್ಲಿ ಸಾಮಾಜಿಕ ವ್ಯವಸ್ಥೆ ನಾಗರಿಕ ಪ್ರಪಂಚದ ತುತ್ತತುದಿಯನ್ನು ತಲುಪಿದ್ದರೂ, ಸಾಂಸ್ಕೃತಿಕ ಚಿಂತನೆಗಳು ನಿಸರ್ಗದ ಮಡಿಲಿನಲ್ಲಿಯೇ ಮಥಿಸಲ್ಪಟ್ಟಿವೆ.
ಭಾರತದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ಜನರು ಇಂದಿಗೂ ಗಿಡ, ಮರ, ಗರಿಕೆ, ಬಳ್ಳಿಗಳಿಗೆ ಮಹತ್ತರ ಸ್ಥಾನ ಕೊಡುತ್ತಿದ್ದಾರೆ. ಸನಾತನ ಕಾಲದಿಂದಲೂ ಸಸ್ಯ ಸಂಪತ್ತಿನ ಹರವನ್ನು ಪಸರಿಸುತ್ತ, ಬೆಳೆಸುತ್ತ ಬಂದಿದ್ದಾರೆ. ಮೂಲಭೂತ ಅವಶ್ಯಕತೆಗಳ ಪೋಷಕಗಳಾಗಿರುವುದರಿಂದ ಸಸ್ಯಸಂಕುಲವನ್ನು ಪೂಜ್ಯ ಭಾವನೆಯಿಂದ ಕಾಣುತ್ತ ಸಾಧ್ಯವಾದಷ್ಟು ಸಂರಕ್ಷಿಸುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ.
ಪ್ರಕೃತಿ ಮತ್ತು ಬದುಕು ಎರಡರಲ್ಲೂ ಏಕತೆಯನ್ನು ಸಾಧಿಸಿಕೊಂಡು ಬರುತ್ತಿರುವುದು ಬುಡಕಟ್ಟು ಸಮಾಜ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪರಿಸರದ ಬಗೆಗಿನ ಒಲವು, ಕಾಳಜಿಗಳನ್ನು ಉದ್ದೀಪನಗೊಳಿಸುತ್ತಲೇ ಇವೆ. ಗಿರಿಜನರ ನಿಸರ್ಗದೊಂದಿಗಿನ ಬೆಸುಗೆ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಪ್ರಕಟಗೊಂಡಿದ್ದು, ಅವರ ಸಂಸ್ಕೃತಿಯನ್ನು ಅರಣ್ಯ ಸಂಸ್ಕೃತಿ ಎಂದು ಕರೆಯಬಹುದಾದಷ್ಟು ಗಾಢತೆ ಹಾಗೂ ಸಸ್ಯಸಂಕುಲದ ಚಿಂತನೆಗಳು ಕಾಣಸಿಗುತ್ತವೆ.
ಸಾಹಿತ್ಯ ಮತ್ತು ಸಂಸ್ಕೃತಿ
ಸದಾಕಾಲ ಅಡವಿಯಲ್ಲೆ ವಾಸಿಸುವ ಬುಡಕಟ್ಟು ಜನರು ಪ್ರಕೃತಿಯಲ್ಲಿ ಕಂಡುಂಡ ದುಃಖ ದುಮ್ಮಾನ, ಸುಖ ಸಂತೋಷ ಅದರಲ್ಲೂ ಸಸ್ಯದ ಬಗೆಗಿನ ಜ್ಞಾನ ಸಂಪತ್ತನ್ನು ಸಾಹಿತ್ಯದಲ್ಲಿ ಹೊರ ಚೆಲ್ಲಿದ್ದಾರೆ. ಕಾನನ ಬದುಕಿನ ಅನುಭವಗಳನ್ನು ಗೀತೆ, ಗಾದೆ, ಒಗಟು, ಬೈಗುಳಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ.