Table of Contents
Research Articles
ಸಂಗಂ ಸಾಹಿತ್ಯ-ನಟ್ರಿಣೈ ಕೃತಿಯ ವಾಸ್ತವತೆಯ ಪರಿ
01 to 11
ಸಂಗಂ ಸಾಹಿತ್ಯವು ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿ ಪ್ರಾಚೀನತೆಯ ದೃಷ್ಟಿಯಿಂದ ಪ್ರಮುಖ ಹಾಗೂ ಅದ್ವಿತೀಯವಾಗಿದೆ. (ಅಗಂ) ಆಂತರಿಕ (ಪುಱಂ) ಬಾಹ್ಯ ವಿಷಯಗಳಿಗೆ ಸಂಬಂಧಿಸಿದಂತೆ ರಚಿತವಾಗಿರುವ ಈ ಕಾವ್ಯ (ಹಾಡು)ಗಳನ್ನು ಆ ಕಾಲದಲ್ಲಿದ್ದ ವಿವಿಧ ಕವಿಗಳು ತೊಲ್ಕಾಪ್ಪಿಯಂ ಕೃತಿಯಲ್ಲಿ ಸೂಚಿಸಿದ ನಿಯಮಗಳಿಗನುಸಾರವಾಗಿ ರಚಿಸಿದ್ದಾರೆ. ಪ್ರೇಮ, ವಿರಹ, ಕಾತುರ, ರಸಿಕತೆ, ದಾನಧರ್ಮ, ವೀರ, ಶೌರ್ಯ, ಮುಂತಾದ ವಿಷಯಗಳನ್ನೊಳಗೊಂಡಿವೆ.
ಸಂಗಂ ಕಾವ್ಯಗಳೆಲ್ಲ ಮನುಷ್ಯನನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾಗಿವೆ. ಎರಡು ಸಾವಿರ ವರ್ಷಗಳ ಹಿಂದೆ ನಾಗರಿಕತೆಯ ಪ್ರಭಾವ ಅಷ್ಟಾಗಿ ಇಲ್ಲದ ಪ್ರಾರಂಭ ಕಾಲದಲ್ಲಿ ಹಸಿವು, ಕಾಮ, ವಿರಹ, ನಿಯಮ, ದಾನ, ಧರ್ಮ, ಮಾನವೀಯತೆ ಹಾಗೂ ಜೀವನವನ್ನು ಕಂಡ ಅನುಭವಿಸಿದ, ಅರಿತುಕೊಂಡ ವಿಚಾರಗಳೊಂದಿಗೆ ಆತನ ಕಲ್ಪನೆ, ಜೀವನ ಪ್ರೀತಿ, ಶ್ರದ್ಧೆ ಇರುವುದನ್ನು ಕಾಣಬಹುದು.
ನಟ್ರಿಣೈ-ಕಾವ್ಯ ಸಂಕಲನದಲ್ಲಿ ಹಲವು ನಾಟಕೀಯ ಸನ್ನಿವೇಶಗಳಿಂದ ಕೂಡಿ ಅಭಿನಯಾತ್ಮಕ ರೂಪದಲ್ಲಿ ಬಂದಿವೆ. ಇಲ್ಲಿನ ಹಾಡುಗಳನ್ನು ಅರ್ಥೈಸಿಕೊಳ್ಳಬೇಕಾದರೆ ಇಲ್ಲಿನ ದೃಶ್ಯ, ಸನ್ನಿವೇಶಗಳನ್ನು ಗ್ರಹಿಸಬೇಕಾದರೆ ಸಂಭಾಷಿಸುವವರನ್ನು ಕುರಿತು ಸಂಭಾಷಿಸುವ ಸಂದರ್ಭವನ್ನು ಕುರಿತು ಸಹೃದಯನಿಗೆ ಪೂರ್ವಭಾವಿ ಅನುಭವವಿದ್ದಾಗ ಮಾತ್ರ ಕಾವ್ಯಭಾಗವನ್ನು ಚೆನ್ನಾಗಿ ಗ್ರಹಿಸಬಹುದು.
ನಟ್ರಿಣೈ ಕೃತಿಯ ಕೆಲವು ಹಾಡುಗಳ ಸವಿಯನ್ನು ಆಸ್ವಾದಿಸುತ್ತಲೇ ಅನೇಕ ಸಾಮಾಜಿಕ ಹಾಗೂ ತಾತ್ವಿಕ ಸಂಗತಿಗಳನ್ನು ಅರಿತುಕೊಳ್ಳಲು ಎಡೆ ಮಾಡಿ ಕೊಡುತ್ತದೆ.
(ನವಣೆ ಕೊಯ್ಯಲಿಕ್ಕೆ ಮುಂಚೆ ನಲ್ಲೆ ಮತ್ತು ಗೆಳತಿ ಕಾವಲಿಗೆ ಬರುವ ವಾಡಿಕೆಯುಂಟು)
ಹಾಡು 90ರಲ್ಲಿ ಅನ್ನದ ಗಂಜಿಯಲ್ಲಿ ರಾತ್ರಿಯ ಹೊತ್ತು ಬಟ್ಟೆಗಳನ್ನು ನೆನೆಸಿಡುವ ಅಗಸಗಿತ್ತಿಯ ಪ್ರಸ್ತಾಪ ಬರುತ್ತದೆ. ಹಾಡು 99 ರಲ್ಲಿ ಅಕಾಲದಲ್ಲಿ ಮಳೆಬರುವ ಪ್ರಸಂಗದ ಅದ್ಭುತ ವರ್ಣನೆಗೆ ನಿದರ್ಶನ.
‘‘ಅರಿವಿಲ್ಲದುದರಿಂ ಅಲರ್ದವು ಪಲವುಂ’’
ಇಲ್ಲಿಯ ಹಾಡಿನ ಸೊಗಸು ಏನೆಂದರೆ ನಲ್ಲ ಅಥವಾ ನಾಯಕ ಧನಾರ್ಜನೆಗೆ ಹೋದವನುಕಾರ್ಗಾಲದಲ್ಲಿ ಬರುವೆನೆಂದು ತಿಳಿಸಿ ಹೋಗಿರುತ್ತಾನೆ. ಆದರೆ ಹೇಳಿದಂತಹ ಋತು ಆಗಮಿಸಿ ನಲ್ಲ ಇನ್ನೂ ಬಾರದಿದ್ದಾಗ ನಲ್ಲೆಗೆ ವಿರಹ ವೇದನೆ ಉಂಟಾಗಿ ಬೇಸರದಲ್ಲಿದ್ದಾಗ ಈ ಸುಮಗಳು ಅರಿವಿಲ್ಲದೆ ಅರಳಿ ನಿಂತಿವೆ. ಎಂದು ಗೆಳತಿ ನಲ್ಲೆಗೆ ಸಾಂತ್ವನವನ್ನು ತಿಳಿಸುತ್ತಾಳೆ.
ಹೀಗೆ ನಟ್ರಿಣೈ ಕೃತಿಯಲ್ಲಿ ಸಾಂಸ್ಕೃತಿಕ, ಸಾಮಾಜಿಕ ಸಂಗತಿಗಳು ಹೇರಳವಾಗಿ ದೊರಕುತ್ತವೆ. ಹೀಗೆ ಈ ಕಾವ್ಯಗಳ ಪರಿ ಅದ್ಭುತವಾಗಿ ಚಿತ್ರಿತವಾಗಿದೆ.
ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ
12 to 21
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ‘ಕಲಿಕೆ’ ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.
‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’ ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. ‘ದೇಶ ಸುತ್ತು ಇಲ್ಲವೇ ಕೋಶ ಓದು’ ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯಯನದ ಮೂಲಕ ಹಾಗೂ ಶಾಲಾ ಶಿಕ್ಷಕರು, ಗುರು-ಹಿರಿಯರಿಂದ, ಮಠಮಾನ್ಯಗಳಿಂದ, ಅನುಭಾವಿಗಳ ಸಂಪರ್ಕಗಳ ಮೂಲಕ ಕಲಿಕೆ ನಡೆಯುತ್ತದೆ. ಅಷ್ಟೇ ಏಕೇ ಪಶು-ಪ್ರಾಣಿ, ಜೀವ ಸಂಕುಲಗಳು, ನಿಸರ್ಗದ ಗಿಡ-ಮರ, ಬೆಟ್ಟ, ನದಿ, ಸರೋವರ, ಗಾಳಿ ಹೀಗೆ ಪ್ರಕೃತಿಯನ್ನು ನೋಡಿಯೂ ಮನುಷ್ಯ ಸಾಕಷ್ಟು ವಿಚಾರಗಳನ್ನು ಕಲಿತುಕೊಳ್ಳುತ್ತಾನೆ. ಹೀಗೆ ಸಾವಿರಾರು ದಾರಿಯಿಂದ ಜ್ಞಾನ ಹರಿದುಬರುತ್ತಲೇ ಇರುತ್ತದೆ. ಇವೆಲ್ಲವೂ ಮನುಷ್ಯನ ಜ್ಞಾನಶಾಖೆಗಳೆಂದು ಕರೆಯಲಾಗುತ್ತದೆ.
ಕೋಶ ಓದುವಿಕೆಯಿಂದ ಒಂದು ರೀತಿಯ ಜ್ಞಾನ ಲಭಿಸುತ್ತದೆ ಎಂಬುದು ನಿಜವೇ. ಆದರೆ ಪ್ರಕೃತಿಯಿಂದ, ಲೋಕಾನುಭವದಿಂದ ದೊರೆಯುವ ಜ್ಞಾನ ಮಹತ್ವದ್ದಾಗುತ್ತದೆ. ಕಾರಣ ಲೋಕಾನುಭವು ಮನುಷ್ಯನಲ್ಲಿ ಮಾನವೀಯತೆ, ಮಾನವೀಯ ಮೌಲ್ಯಗಳ ಮೂಲಕ ಹೃದಯ ಶ್ರೀಮಂತಿಕೆ, ಭಾವಶ್ರೀಮಂತಿಕೆಗೊಳಿಸಿ ಆತನಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬುತ್ತದೆ. ಭಕ್ತಿ, ಶ್ರದ್ದೇ, ಸತತ ಪ್ರಯತ್ನ, ಪ್ರಮಾಣಿಕತೆ, ನ್ಯಾಯ-ನೀತಿ, ಹಸಿವು, ನೋವು-ನಲಿವು ಮುಂತಾದವುಗಳ ಅನುಭವ ನೀಡುತ್ತದೆ. ಅಲ್ಪವಿರಾಮದಿಂದ ಪೂರ್ಣ ವಿರಾಮದೆಡೆಗೆ, ಸಂಶಯದಿಂದ ನಿಸ್ಸಂಶಯದೆಡೆಗೆ, ಪೂರ್ಣತೆಯಿಂದ ಪರಿಪೂರ್ಣತೆಯೆಡೆಗೆ, ದೃಢತೆಯಿಂದ ಸದೃಢತೆಯೆಡೆಗೆ ಕೊಂಡ್ಯೊಯುತ್ತದೆ.
ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ. ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ, ಮೌಲ್ಯ ಗೊತ್ತಾಗುವುದು ಕಷ್ಟಪಟ್ಟು ದುಡಿದು ಸಂಪಾದಿಸಿದವನಿಗೆ ಮಾತ್ರ. ಅಂದಾಗಲೇ ಆ ವಸ್ತುವಿನ ಸದ್ಬಳಕೆಯು ಸಾಧ್ಯವಾಗುತ್ತದೆ. ಆದ್ದರಿಂದ ಕೆಟ್ಟ ಪರಿಸ್ಥಿತಿಯಲ್ಲಿ ಬದುಕಿ, ನೂರಾರು ಅವಮಾನ, ಸಮಸ್ಯೆಗಳನ್ನು ಎದುರಿಸಿದ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ಅಪ್ಪಟ ದೇಶಾಭಿಮಾನಿಗಳು, ಸ್ವಾಭಿಮಾನಿಗಳು, ಹೋರಾಟಗಾರರು, ತತ್ವನಿಷ್ಠರು, ಜೀವಪರ ಚಿಂತಕರು, ಶಿಕ್ಷಣ ತಜ್ಞರು, ಅರ್ಥಶಾಸ್ತ್ರಜ್ಞರು, ಸಮಾಜಸುಧಾಕರು, ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಗಳು ಆಗಿದ್ದಾರೆ.
2011ರಲ್ಲಿ ಇಂಗ್ಲೆಂಡ್‌ನ ಕೆಂಬ್ರಿಡ್ಜ ವಿಶ್ವವಿದ್ಯಾಲಯವು ಜಗತ್ತಿನ ಅತ್ಯಂತ ಶ್ರೇಷ್ಠ ವಿದ್ವಾಂಸರ ಸರ್ವೇ ನಡೆಸಿ, ಅದರಲ್ಲಿ ನೂರು ಜನ ಶ್ರೇಷ್ಠ ವಿದ್ವಾಂಸರ ಪಟ್ಟಿ ತಯ್ಯಾರಿಸಿತ್ತು. ಆ ನೂರು ಜನ ಘನ ವಿದ್ವಾಂಸರ ಪಟ್ಟಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರೇ ಮೊಟ್ಟ ಮೊದಲಿಗರಾಗಿದ್ದಾರೆ. ಜಗತ್ತಿನ ಹತ್ತಾರು ಸಂವಿಧಾನಗಳನ್ನು ಅಧ್ಯಯನ, ಅನುಶೀಲನಗೈದು, ಈ ನಮ್ಮ ಭಾರತ ದೇಶಕ್ಕೆ ಅಗತ್ಯವೆನಿಸುವ ಸರ್ವ ಜನಾಂಗದ ಶಾಂತಿಯ ತೋಟವಾಗಿ ನಿರ್ಮಿಸಲು, ಸಕಲ ಜೀವರಾಶಿಗಳ ಏಳಿಗೆಯನ್ನು ಗಮನದಲ್ಲಿರಿಸಿಕೊಂಡು ಜಗತ್ ಪ್ರಸಿದ್ದವಾದ ಸಂವಿಧಾನ ರಚಿಸಿ, ಸಂವಿಧಾನ ಶಿಲ್ಪಿಯಾಗಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ ಅವರು ಆರಂಭಿಕ ಜೀವನ, ಶೈಕ್ಷಣಿಕ ಸಾಧನೆ, ಧಾರ್ಮಿಕ, ಸಾಮಾಜಿಕ, ರಾಜಕೀಯ ಹೋರಾಟ ಮಾಡಿ ಗಗನದೆತ್ತರಕ್ಕೆ ಬೆಳದುನಿಂತ ಅವರ ಪರಿಯು ಜಗತ್ತನ್ನೇ ಬೆರಗುಗೊಳಿಸುತ್ತದೆ. ಅವರ ಜೀವನದ ಪ್ರತಿಯೊಂದು ಹೆಜ್ಜೆಗಳು, ಪ್ರತಿ ಉಸಿರು ಜಗತ್ತಿಗೆ ಮಾದರಿಯಾಗಿವೆ. ಅವರು ನಡೆದು ಬಂದ ದಾರಿಯನ್ನು ಅವಲೋಕಿಸುತ್ತ, ಅನುಸರಿಸುತ್ತ, ಮುನ್ನಡೆದು ಬದುಕು ಹಸನುಗೊಳಿಸಿಕೊಳ್ಳಬೇಕಾಗಿದೆ. ಅಂತಹ ಮೇರು ಸಾಧಕರ ಸಾಧನೆ ಕುರಿತು ಅರಿತುಕೊಳ್ಳುವ ಸಣ್ಣದಾದ ಪ್ರಯತ್ನ ಇಲ್ಲಿ ಮಾಡಲಾಗಿದೆ.
ದಿವಾಕರ ಬಲ್ಲಾಳರ ‘ಸವೆದ ಹಾದಿಯ ಪಯಣ’: ಗಡಿನಾಡ ಪ್ರತಿಭೆಯ ಕನ್ನಡ ಪ್ರಜ್ಞೆಯ ದ್ಯೋತಕ.
22 to 29
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಬಹುಭಾಷಾ ಸಂಗಮ ಭೂಮಿ. ತುಳು, ಕನ್ನಡ, ಕೊಂಕಣಿ, ಮರಾಠಿ, ಮಲೆಯಾಳ, ಬ್ಯಾರಿ, ಮಾವಿಲತುಳು, ಹವ್ಯಕ, ಕರಾಡ ಮುಂತಾದ ಅನೇಕ ಭಾಷೆಗಳನ್ನಾಡುವ ಜನರಿದ್ದಾರೆ. ಆದರೆ ಇವರ ಓದಿನ ಭಾಷೆ ಕನ್ನಡ. ಆದ್ದರಿಂದ ಇವರು ಕನ್ನಡ ತಾಯಿಯ ಮಕ್ಕಳು. ಕನ್ನಡ ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳಿಗೆ ಹೊಂದಿಕೊಂಡು ಕಾಸರಗೋಡಿನಲ್ಲಿ ತಲೆತಲಾಂತರದಿಂದ ಬಾಳಿ ಬದುಕುತ್ತಾ ಬಂದಿದ್ದಾರೆ. ಇಲ್ಲಿ ಕನ್ನಡ ಮತ್ತು ತುಳು ಭಾಷೆಗಳು ಒಂದೇ ನಾಣ್ಯದ ಎರಡು ಮುಖಗಳಂತಿವೆ.
ದಿವಾಕರ ಬಲ್ಲಾಳ್ ಎ. ಬಿ. ಗಡಿನಾಡ ಕನ್ನಡಿಗ. ಕೇರಳ ರಾಜ್ಯದ ಮಂಜೇಶ್ವರ ತಾಲೂಕು ಕುಂಜತ್ತೂರಿನ ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕ. ವಿದ್ಯಾರ್ಥಿ ಜೀವನದಿಂದಲೇ ನಾಟ್ಯ, ನಾಟಕ, ಗಮಕ, ಗಾಯನ, ಯಕ್ಷಗಾನಗಳಲ್ಲಿ ತೊಡಗಿಸಿಕೊಂಡ ಬಹುಮುಖ ಪ್ರತಿಭೆ. ಇದರ ಜೊತೆಗೆ ಕವನ ಬರೆದು ಒಡಲಿನ ಸಾಹಿತ್ಯದ ಹಸಿವನ್ನು ನೀಗಿಸಿಕೊಂಡು ತೃಪ್ತಿ ಪಡೆಯುವ ಭಾವಜೀವಿ, ಯುವಕವಿ.
ಇದು ಹೊಗಳಿಕೆಯ ಮಾತಲ್ಲ. ತನ್ನೊಳಗಿನ ಭಾವ ತೀವ್ರತೆಯನ್ನು ಪ್ರಕಟಪಡಿಸಿದ ‘ಸವೆದ ಹಾದಿಯ ಪಯಣ’ ಕವನ ಸಂಕಲನ ಇದಕ್ಕೆ ಸಾಕ್ಷಿ.
‘ಆನೇಕಲ್ ಕರಗದ’ ಸಾಂಸ್ಕೃತಿಕ ವೈಶಿಷ್ಟ್ಯತೆಗಳು
30 to 37
ಗಜಶಿಲಾಪುರಿ ರಾಗಿಯ ಕಣಜ ಎಂದೇ ಪ್ರಸಿದ್ಧವಾಗಿರುವ ಆನೇಕಲ್ ತಾಲ್ಲೂಕು ಸಾಂಸ್ಕೃತಿಕವಾಗಿ ಶೀಮಂತವಾದ ತಾಲ್ಲೂಕಾಗಿದೆ. ಆನೇಕಲ್ ತಾಲ್ಲೂಕಿನಲ್ಲಿ ಆಚರಿಸುವ ಕರಗವು ರಾಜ್ಯದಲ್ಲಿಯೇ ಪ್ರಖ್ಯಾತಿ ಹೊಂದಿದೆ. ಕರಗದ ಆಚರಣೆಯ ಹಿನ್ನೆಲೆಗಳು ಹಾಗೂ ಐತಿಹ್ಯಗಳು ತುಂಬಾ ಕುತೂಹಲಕಾರಿಯಾಗಿವೆ. ಶಕ್ತಿ ದೇವತೆಯಾದ ದ್ರೌಪದಿಯ ಕರಗವು ಮಾತೃದೇವತೆಯ ಆಚರಣೆಗೆ ಉದಾಹರಣೆಯಾಗಿದೆ. ಕರಗದ ಆಚರಣೆಯಲ್ಲಿ ಕರಗದ ಪೂಜಾರಿ, ಗಂಟೆ ಪೂಜಾರಿ, ಗಣಾಚಾರಿ, ಗೌಡ, ವೀರಕುಮಾರರ ಪಾತ್ರಗಳು ಮಹತ್ವವಾಗಿವೆ. ಅಂಕುರಾರ್ಪಣೆ, ಹಸಿಕರಗ, ಒಣಕರಗ, ಕೋಟೆಜಗಳಗಳ ಆಚರಣೆಗಳು ಸಾಂಸ್ಕೃತಿಕವಾಗಿ ವಿಶಿಷ್ಟವಾಗಿದ್ದು ಅವುಗಳ ಮಹತ್ವವನ್ನು ತಿಳಿಸುವ ಪ್ರಯತ್ನವೇ ಈ ಲೇಖನ.
ಜಿ.ಎಸ್. ಶಿವರುದ್ರಪ್ಪನವರ ಕಾವ್ಯಮೀಮಾಂಸೆಯ ತಾತ್ವಿಕ ಚಿಂತನೆಗಳು
38 to 43
ಮೀಮಾಂಸೆ ಎಂದರೆ ಚಿಂತನೆ, ಚರ್ಚೆ ಎಂದರ್ಥ. ಕಾವ್ಯವನ್ನು ಕುರಿತ ಚರ್ಚೆಯನ್ನು ಕಾವ್ಯಮೀಮಾಂಸೆ ಎಂದು ಕರೆಯಲಾಗಿದೆ. ಅಂದರೆ ಕವಿ-ಕಾವ್ಯ-ಸಹೃದಯ ವಿಚಾರಗಳನ್ನು ಕುರಿತ ಚರ್ಚೆ ಕಾವ್ಯದ ಆಸ್ವಾದನೆಯಿಂದ ಉಂಟಾಗುವ ಅನುಭವ ಅದಕ್ಕೆ ಕಾರಣವಾದ ತೃತೀಯ ರೂಪ ಮತ್ತು ಸ್ವರೂಪ ಇವುಗಳನ್ನು ವಿವರಿಸುವ ಶಾಸ್ತ್ರವೇ ಕಾವ್ಯಮೀಮಾಂಸೆ. ಪಾಶ್ಚತ್ಯರಲ್ಲಿ ಮಾತಿನ ವಿವಿಧ ರೀತಿಗಳನ್ನು ಹೇಳುವ ಭಾಷಣ ಮತ್ತು ಲೇಖನಶಾಸ್ತ್ರ ಎಂಬ ಒಂದು ಶಾಸ್ತ್ರವಿದೆ. ಹೀಗೆ ಉಕ್ತಿ ಚಮತ್ಕಾರವನ್ನು ತಿಳಿಸುವ ಶಾಸ್ತ್ರವೇ ‘ಅಲಂಕಾರಶಾಸ್ತ್ರ’ ಕಾವ್ಯದ ತಿರುಳನ್ನು ಅದರ ನಿರ್ಮಾಣ ಕ್ರಮವನ್ನು ನಿರೂಪಿಸುವದಕ್ಕೆ ಕಾವ್ಯಮೀಮಾಂಸೆ ಮತ್ತೊಂದು ಶಾಸ್ತ್ರ. ಸೌಂದರ್ಯ ಸ್ವರೂಪವನ್ನು ವಿಚಾರಮಾಡುವ ಸೌಂದರ್ಯಮೀಮಾಂಸೆ ಇದು ಮತ್ತೊಂದು ಶಾಸ್ತ್ರ. ಈ ಮೂರು ಶಾಸ್ತ್ರಗಳು ಪಾಶ್ಚಾತ್ಯರಲ್ಲಿ ಪ್ರತ್ಯೇಕವಾಗಿ ಬೆಳೆದಿವೆ ಆದರೆ ಭಾರತೀಯ ಕಾವ್ಯಮೀಮಾಂಸೆಯು ಈ ಮೂರನ್ನು ಒಳಗೊಂಡಿದೆ.
ಈ ಚರ್ಚೆಯು ಚರಿತ್ರೆಯಲ್ಲಿ ಬಳಕೆಗೆ ಬಂದದ್ದು ಒಂಬತ್ತನೆಯ ಶತಮಾನದ ವೇಳೆಗೆ. ಕಾವ್ಯ ವಿಚಾರವನ್ನು ಕುರಿತ ಚರ್ಚೆಗೆ ‘ಕಾವ್ಯ ಮೀಮಾಂಸೆ’ ಎಂಬ ಹೆಸರು ಮೊಟ್ಟಮೊದಲಿಗೆ ಕಾಣಿಸಿಕೊಳ್ಳುವುದು ರಾಜಶೇಖರನಲ್ಲಿಯೆ. ಅವನ ಕೃತಿಯ ಹೆಸರು ‘ಕಾವ್ಯ ಮೀಮಾಂಸಾ’. ಆದರೆ ಇದಕ್ಕೆ ಮೊದಲು ಕಾವ್ಯ ಶಾಸ್ತ್ರವನ್ನು ಕುರಿತ ಗ್ರಂಥಗಳಿಗೆ ‘ಅಲಂಕಾರಶಾಸ್ತ್ರ’ ಎಂದೇ ಹೆಸರು. ಅತ್ಯಂತ ಪ್ರಾಚೀನ ಆಲಂಕಾರಿಕನಾದ ಭಾಮಹನ ಕೃತಿಯ ಹೆಸರು ‘ಕಾವ್ಯಾಲಂಕಾರ’ ವಾಮನನದು ‘ಕಾವ್ಯಲಂಕಾರಸೂತ್ರ’. ರುದ್ರಟನದು ಕಾವ್ಯಾಲಂಕಾರ’. ಎಂದರೆ ‘ಅಲಂಕಾರ ಶಾಸ್ತ್ರ’ ಎನ್ನುವುದು ಕಾವ್ಯ ಮೀಮಾಂಸೆಗೆ ಇದ್ದ ಹಳೆಯ ಹೆಸರು ಇದಕ್ಕೆ ಹಿಂದಿನ ಶಾಸ್ತ್ರಕಾರರಿಗೆ ಕಾವ್ಯದ ಬಗ್ಗೆ ಇದ್ದ ಕಲ್ಪನೆಯೇ ಕಾರಣ ಎನ್ನಬಹುದು. ಕಾವ್ಯವೆಂದರೆ ಒಂದು ಬಗೆಯ ಅಲಂಕಾರ ಅಥವಾ ಉಕ್ತಿ ವೈಚಿತ್ರ್ಯಗಳಿಂದ ಕೂಡಿರುವಂಥದ್ದು ಎಂದು ಭಾವಿಸಿದ್ದರಿಂದ, ಮತ್ತು ಕಾವ್ಯವು ಅಲಂಕಾರಗಳಿಂದಲೇ ಗ್ರಾಹ್ಯವಾಗುತ್ತದೆ ಎಂದು ತಿಳಿದಿದ್ದರಿಂದ ಕಾವ್ಯವನ್ನು ಕುರಿತ ಚರ್ಚೆಯನ್ನು ಒಳಗೊಳ್ಳುವ ಗ್ರಂಥಕ್ಕೆ ‘ಅಲಂಕಾರಶಾಸ್ತ್ರ’ ಎಂದು ಕರೆದಂತೆ ತೋರುತ್ತದೆ. ಆದರೆ ಈ ಚರ್ಚೆಯ ಚರಿತ್ರೆಯಲ್ಲಿ ಕ್ರಮೇಣ ಕಾವ್ಯದ ಸ್ವಾರಸ್ಯವನ್ನು, ಕಾವ್ಯದ ಇತರ ಅಂಗಗಳಲ್ಲಿ ಅನ್ವೇಷಿಸುತ್ತ ಮುಂದುವರಿದ ಹಾಗೆ, ಕಾವ್ಯವನ್ನು ಕುರಿತ ಚರ್ಚೆಗೆ ಅಲಂಕಾರಶಾಸ್ತ್ರ ಎಂದು ಕರೆಯುವುದು ಪರಿಮಿತವೆಂದು ಕಂಡದ್ದರಿಂದ, ಈ ಶಾಸ್ತ್ರಕ್ಕೆ ಕಾವ್ಯ ಮೀಮಾಂಸೆ ಎಂದು ಕರೆಯಲು ಮೊದಲು ಮಾಡಿದರೆಂದು ತೋರುತ್ತದೆ. ವಾಸ್ತವವಾಗಿ ಕಾವ್ಯಮೀಮಾಂಸೆ’ ಎನ್ನುವುದೇ ‘ಅಲಂಕಾರಶಾಸ್ತ್ರ’ ಎನ್ನುವದಕ್ಕಿಂತ ಹೆಚ್ಚು ಉಚಿತವೂ ಹಾಗೂ ವ್ಯಾಪಕಾರ್ಥವನ್ನುಳ್ಳದ್ದೂ ಆಗಿದೆ.
ವಿಮರ್ಶೆ ಎಂಬುದು ಪಾಶ್ಚಾತ್ಯರಲ್ಲಿ 17ನೇ ಮತ್ತು 18ನೇ ಶತಮಾನದಲ್ಲಿ ಕಂಡು ಬಂದಂತಹ ಒಂದು ಸಾಹಿತ್ಯಕ ಶಿಸ್ತು. ಈ ವಿಮರ್ಶೆ ಎಂಬ ಪರಿಕಲ್ಪನೆಯು ಭಾರತೀಯರಿಗೆ ತೀರ ಹೊಸದೆಂಬಂತೆ ಕಾಣಿಸುತ್ತದೆ. ಇದು ಭಾರತಕ್ಕೆ ಬ್ರಿಟೀಷರ ಆಗಮನದೊಂದಿಗೆ 19ನೇ ಶತಮಾನದಲ್ಲಿ ಗೋಚರಿಸಿತು ಎಂಬುದು ನಿಜ. ಈ ಮೀಮಾಂಸೆ ಮತ್ತು ವಿಮರ್ಶೆಯನ್ನು ತೌಲನಿಕವಾಗಿ ನೋಡಿದಾಗ ಮೀಮಾಂಸೆ ಸಾರ್ವತ್ರಿಕವಾಗಿ ಇಡೀ ಸಾಹಿತ್ಯಕ್ಕೆ ಅನ್ವಯವಾಗುವ ಸಿದ್ದಾಂತವಾದರೆ, ವಿಮರ್ಶೆಯು ಅವುಗಳನ್ನು ನಿರ್ದಿಷ್ಟವಾಗಿ ಒಂದು ಕೃತಿಗೆ ಅನ್ವಯಿಸಿ ಅದರ ಬೆಲೆ ಕಟ್ಟುವುದೇ ಆಗಿದೆ. ಮೀಮಾಂಸೆ ಎಂದರೆ ಚರ್ಚೆ, ವಿಮರ್ಶೆ ಎಂದರೆ ಮೌಲ್ಯನಿರ್ಣಯ.
ವಿಮರ್ಶೆ ಒಂದು ಕೃತಿಯನ್ನು ಓದುಗನ ಅಂತರಾಳಕ್ಕೆ ಕೊಂಡೊಯ್ಯಬಲ್ಲದು ಎಂಬುದು ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿದೆ. ಭಾರತೀಯ ಸಾಹಿತ್ಯದಲ್ಲಿ ಕಾವ್ಯಮೀಮಾಂಸೆ ಬೆಳೆದು ಬಂದಂತೆ ವಿಮರ್ಶೆ ಬೆಳೆದು ಬಂದಿರಲಿಲ್ಲ. ಆಧುನಿಕ ಸಾಹಿತ್ಯದ ರಚನೆಯ ನಂತರವೇ ಕಾವ್ಯಮೀಮಾಂಸೆ ಹಿಂದೆ ಸರಿದು ವಿಮರ್ಶೆ ಪ್ರಮುಖ ಸ್ಥಾನವನ್ನು ಗಿಟ್ಟಿಸಿಕೊಂಡಿತು. ಭಾರತೀಯ ಸಾಹಿತ್ಯದಲ್ಲಿ ಭರತನಿಂದ ಹಿಡಿದು 15ನೇ ಶತಮಾನದವರೆಗೆ ಸಾಹಿತ್ಯ ಚಿಂತಕರು, ಲಾಕ್ಷಣಿಕರು ಕಾಣಿಸುತ್ತಾರೆಯೇ ಹೊರತು ವಿಮರ್ಶಕರು ಕಾಣಸಿಗುವುದಿಲ್ಲ. ಹೀಗಾಗಿ ಕನ್ನಡ ಸಾಹಿತ್ಯದಲ್ಲಿ ಅನೇಕ ವಿಮರ್ಶಕರು ಹುಟ್ಟಿ ಬಂದಿದ್ದಾರೆ. ವಿಮರ್ಶಾ ಸಿದ್ದಾಂತಗಳನ್ನು ಅಳವಡಿಸಿಕೊಂಡು ಕೃತಿಗಳಿಗೆ ಮೌಲ್ಯವನ್ನು ಕಟ್ಟಿ ಓದುಗರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ. ಹೀಗೆ ಯೋಗ್ಯ ಕೃತಿಯನ್ನು ಸರ್ವಕಾಲಕ್ಕೂ ಉಳಿಯುವಂತೆ ಮಾಡುವ ಕೀರ್ತಿ ವಿಮರ್ಶಕರದ್ದಾಗಿದೆ. ಇಂತಹ ವಿಮರ್ಶಕರ ಸಾಲಿನಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪನವರೂ ಕಂಡು ಬರುತ್ತಾರೆ. ಇವರು ಮೀಮಾಂಸೆಯನ್ನು ವಿಮರ್ಶಿಸಿ ನೋಡುವ ದೃಷ್ಠಿಕೋನ ವಿಶೇಷವಾದದ್ದು. ಹಾಗಾಗಿ ಅವರ ಮೀಮಾಂಸೆಯ ವಿಚಾರಗಳನ್ನು ತಿಳಿದುಕೊಳ್ಳುವ ಸಣ್ಣ ಪ್ರಯತ್ನ ಈ ಲೇಖನದ್ದು.
ಸಾಂಸ್ಕೃತಿಕ ಹಿನ್ನಲೆಯಲ್ಲಿ ದೇವಿ ಶಿಲ್ಪಗಳ ಪರಿಕಲ್ಪನೆ
44 to 55
ಮಂಡ್ಯ ಜಿಲ್ಲೆಯ ಎಂಬುದು ಕರ್ನಾಟಕ ರಾಜ್ಯದಲ್ಲಿ ಕಂಡುಬರುವ ಒಂದು ಪ್ರಸಿದ್ಧ ಜಿಲ್ಲೆ ಹಾಗೂ ಪ್ರವಾಸಿ ತಾಣ ಕೇಂದ್ರವಾಗಿದ್ದು, ಇದು ಮೈಸೂರಿನಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿ ಕಂಡುಬರುತ್ತದೆ. ಈ ಜಿಲ್ಲೆಯನ್ನು ಪ್ರಮುಖವಾಗಿ 7 ತಾಲೂಕುಗಳನ್ನು 11 ಪಟ್ಟಣ 31 ಹೋಬಳಿ 232 ಮಂಡಲ ಪಂಚಾಯಿತಿ ಹಾಗೂ 1370 ಗ್ರಾಮಗಳನ್ನು ಒಳಗೊಂಡಿದೆ. ಈ ಜಿಲ್ಲೆಯು 01-07-1939ರಲ್ಲಿ ಮೈಸೂರು ಪ್ರಾಂತ್ಯದಿಂದ ಬೇರ್ಪಟ್ಟು ಒಂದು ಸ್ವತಂತ್ರ ಜಿಲ್ಲೆಯಾಗಿ ರಚನೆಗೊಂಡಿತು. ಸಮುದ್ರ ಮಟ್ಟದಿಂದ ಸುಮಾರು 760 ರಿಂದ 920 ಮೀಟರ್ ಅಂತರದಲ್ಲಿ ಕೇಂದ್ರೀಕೃತಗೊಂಡಿದೆ.
ದ್ವಾಪರಯುಗದಲ್ಲಿ ಮಂಡಮೇಮು ಎಂಬ ಋಷಿಯು ಇಲ್ಲಿ ವಾಸಿಸುತ್ತಿದ್ದ ಹಿನ್ನೆಲೆ ಮತ್ತು ಮಾಂಡವ್ಯ ಎಂಬ ಋಷಿಯು ಇಲ್ಲಿನ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದು ಇಲ್ಲಿ ಅರಣ್ಯ ಪ್ರಾಣಿಗಳಿಗೆ ವೇದವನ್ನು ಉಪದೇಶಿಸಿದ ಕಾರಣ ಇದಕ್ಕೆ ವೇದಾರಣ್ಯ ಅಥವಾ ವೇದಾಪುರ ಎಂತಲೂ, ಮತ್ತೊಂದು ಐತಿಹ್ಯದ ಪ್ರಕಾರ ಸಕಲೇಶ್ವರ ಸ್ವಾಮಿಯ ಈ ಪ್ರದೇಶದಲ್ಲಿ ವಿಷ್ಣು ದೇವಾಲಯವನ್ನು ನಿರ್ಮಿಸಿದ ಕಾರಣ ಸ್ಥಳಕ್ಕೆ ವಿಷ್ಣುಪುರ ಎಂತಲೂ ಸಹ ಕರೆಯಲಾಗಿದೆ. ಇಲ್ಲಿ 20ನೇ ಶತಮಾನದವರೆಗೂ ಒಣ ಭೂಮಿಯಾಗಿದ್ದು ಕೆ.ಆರ್.ಎಸ್. ಅಣೆಕಟ್ಟೆಯ ನಿರ್ಮಾಣದಿಂದಾಗಿ ಈ ಜಿಲ್ಲೆಗೆ ಸುಮಾರು ಒಂದುವರೆ ಲಕ್ಷ ಎಕ್ಟೇರ್ ಭೂಮಿಯು ನೀರಾವರಿ ಸೌಲಭ್ಯವನ್ನು ಪಡೆದು ಆರ್ಥಿಕ ಪ್ರಗತಿಯತ್ತ ಸಾಗಿದೆ. ಇಲ್ಲಿ ಪ್ರಮುಖವಾಗಿ ಕಬ್ಬು ಮತ್ತು ಭತ್ತವನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಜಿಲ್ಲೆಗೆ ‘ಸಕ್ಕರೆ ನಗರ’ ಹಾಗೂ ‘ಭತ್ತದ ಕಣಜ’ ಎಂದು ಕರೆಯಲಾಗಿದೆ.
ಇಲ್ಲಿ ಪ್ರಧಾನವಾಗಿ 1902ರಲ್ಲಿ ಶಿವನಸಮುದ್ರದಲ್ಲಿ ಆರಂಭವಾದ ಜಲವಿದ್ಯುತ್ ಯೋಜನೆ ಏಷ್ಯಾದಲ್ಲಿ ಅತಿ ದೊಡ್ಡ ವಿದ್ಯುತ್ ಶಕ್ತಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಒಟ್ಟು ವಿಸ್ತೀರ್ಣ 4961 ಚದರ ಕಿಲೋಮೀಟರ್ ಇದ್ದು 760-19 ಪೂರ್ವ ರೇಖಾಂಶದಿಂದ 770-07 ಪಶ್ಚಿಮ ರೇಖಾಂಶದವರೆಗೂ ಹಾಗೂ 120-11 ರಿಂದ 130-00 ಉತ್ತರ ಅಕ್ಷಾಂಶಗಳ ನಡುವೆ ವಿಸ್ತರಿಸಿದೆ. ಇಲ್ಲಿ ಪ್ರಮುಖವಾಗಿ ನಾಲ್ಕು ತಾಲೂಕುಗಳು ಮಾತ್ರ ರೈಲ್ವೆ ಮಾರ್ಗದಿಂದ ಸಂಪರ್ಕಿಸಲ್ಪಟ್ಟಿವೆ. (ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಪಾಂಡವಪುರ) ಇಲ್ಲಿ ವಿಶ್ವೇಶ್ವರಯ್ಯ ನಾಲೆ ಹಾಗೂ ಹೇಮಾವತಿ ಜಲಾಶಯದಿಂದ ಸದಾ ನೀರಿನ ಸೌಲಭ್ಯದಿಂದಾಗಿ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ಇಂದಿಗೂ ಈ ಜಿಲ್ಲೆಯು ಲೋಕಸಭಾ ಚುನಾವಣೆಯಲ್ಲಿ ಇಡೀ ಭಾರತವೇ ಆಕರ್ಷಿಸುವಂತಹ ಫಲಿತಾಂಶವನ್ನು ನೀಡುತ್ತಲೇ ಬಂದಿದೆ.
ವರ್ಗ ಸಂಘರ್ಷದ ನೆಲೆಯಲ್ಲಿ ಚಂದ್ರಶೇಖರ ಕಂಬಾರರ ನಾಯೀಕತೆ
56 to 63
ಚಂದ್ರಶೇಖರ ಕಂಬಾರ ಅವರ ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ಜಮೀನ್ದಾರಿ ವ್ಯವಸ್ಥೆಯಲ್ಲಿನ ಕ್ರೌರ್ಯ, ಪೊಳ್ಳುವ್ಯಕ್ತಿತ್ವ, ಗೌಡನ ನೀರ್ವಿರ್ಯತನವನ್ನು ಹೆಚ್ಚು ಅನಾವರಣಗೊಳ್ಳಿಸುತ್ತವೆ. ಶ್ರೀಮಂತಿಕೆಯ ಸೊಕ್ಕಿನಲ್ಲಿರುವ ಗೌಡ ಊರಿನಲ್ಲಿನ ಹೆಣ್ಣುಮಕ್ಕಳನ್ನು ಅನುಭವಿಸುವೆ ಎಂಬ ಭ್ರಮಾ ಲೋಕದಲ್ಲಿ ಬದುಕು ಸಾಗಿಸುವಂತವನು. ಅಂತಹ ಗೌಡ ಶಾರಿಯಂತಹ ಹೆಣ್ಣನ್ನು ಭೋಗಿಸಬೇಕೆಂದು ಮನೆಗೆ ಕರೆ ತಂದು ಅವಳು ಆ ಮನೆಯ ಆಳು ಮಗನೊಟ್ಟಿಗೆ ಓಡಿ ಹೋಗುವ ವಿಷಯವನ್ನು ಕಂಬಾರರ ನಾಯಿಕತೆ ಚಿತ್ರಿಸುತ್ತದೆ. ಇಲ್ಲಿ ಸೋಮಣ್ಣನು ಕಾಲಿನಿಂದ ತೋರಿಸಿದ ಕೆಲಸವನ್ನು ತಲೆ ಮೇಲೆ ಹೊತ್ತು ಮಾಡುತ್ತಿದ್ದ ನಾಯಿಮಗ, ಶಾರಿಯ ಮಾತಿಗಳಿಂದ ಪ್ರೇರಣೆ ಪಡೆದು ಅವಳನ್ನು ಕಾಪಾಡುವ ನೆಪದಲ್ಲಿ ಸೋಮಣ್ಣನಿಂದ ಸ್ವಾತಂತ್ರ್ಯ ಪಡೆದುಕೊಳ್ಳುತ್ತಾನೆ. ಶಾರಿ ಇಲ್ಲಿ ಒಂದು ಸಮುದಾಯದ ಉದ್ಧಾರಕ್ಕಾಗಿ ಬಂದ ಶಕ್ತಿಯಾಗಿ ವ್ಯಕ್ತವಾಗುತ್ತಾಳೆ. ಬಡವರ ಮುಗ್ಧತೆಯನ್ನು ದುರಪಯೋಗ ಮಾಡಿಕೊಳ್ಳುವ ಆಳುವ ವರ್ಗದ ಗುಣವನ್ನು ವಿರೋಧಿಸುವ ನೆಲೆಯಲ್ಲಿ ಶಾರಿ ಪಾತ್ರ ಸೃಷ್ಟಿಯಾಗಿದೆ. ಈ ಲೇಖನ ಸಮಾಜವು ವರ್ಗದ ಹಿನ್ನಲೆಯಲ್ಲಿ ತಳಸಮುದಾಯವನ್ನು ಹೇಗೆಲ್ಲಾ ಬಳಸಿಕೊಳ್ಳುತ್ತದೆ ಎನ್ನುವುದನ್ನು ಬಿಚ್ಚಿಡುವ ಉದ್ದೇಶವನ್ನು ಹೊಂದಿದೆ.
Impacts of Social Worker and Social Change on Mental Health
64 to 73
This article discusses the effects of social change on mental health and social worker role. It seems likely that no society can be utterly stable, despite reports of primitive societies or peasant communities which convey the impression of an unchanged and unchanging cultural history. The most critical and widespread source of social change in the contemporary world lies in the complex of technological and industrial advances. The consequences of the Industrial Revolution can be traced further in its implications for education, social legislation and childbearing practices. Even more remote effects on public health practices, on disease and on mental health remain the subjects of continuing study.
Essay
ತಂತ್ರಜ್ಞಾನ ಮತ್ತು ಸಾಹಿತ್ಯದ ತರಗತಿಗಳು
74 to 80
ತರಗತಿಯಲ್ಲಿ ಬಳಸುವ ತಂತ್ರಜ್ಞಾನವು ಬೋಧನಾ ವಿಧಾನಗಳನ್ನು ಹೆಚ್ಚಿಸುವ ಮೂಲಕ, ವಿದ್ಯಾರ್ಥಿಗಳ ಮನಸ್ಸನ್ನು ಉತ್ತೇಜಿಸುವ ಮತ್ತು ವೈಯಕ್ತಿಕಗೊಳಿಸುವ ಮೂಲಕ ಸಾಂಪ್ರದಾಯಿಕ ಶಿಕ್ಷಣವನ್ನು ಪರಿವರ್ತಿಸುತ್ತಿದೆ. ಶೈಕ್ಷಣಿಕ ಅಪ್ಲಿಕೇಶನ್ ಗಳಂತಹ ಡಿಜಿಟಲ್ ಉಪಕರಣಗಳು ಶಿಕ್ಷಕರಿಗೆ ವಿಷಯವನ್ನು ಹೆಚ್ಚು ಕ್ರಿಯಾತ್ಮಕವಾದ ಹಾಗೂ ಸಂವಾದಾತ್ಮಕವಾದ ರೀತಿಯಲ್ಲಿ ಪ್ರಸ್ತುತಪಡಿಸಲು ಅನುವು ಮಾಡಿಕೊಟ್ಟಿದೆ. ಇದಲ್ಲದೆ, ವರ್ಚುವಲ್-ರಿಯಾಲಿಟಿ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳು ತಿಳುವಳಿಕೆ ಮತ್ತು ವಿಮರ್ಶಾತ್ಮಕವಾದ ಚಿಂತನೆಯನ್ನು ಆಳಗೊಳಿಸುವ, ತಲ್ಲೀನಗೊಳಿಸುವ ಪರಿಸರವನ್ನು ಸೃಷ್ಟಿಸುತ್ತಿವೆ. ಏನೇ ಆದರೂ, ಚಿಂತನಶೀಲವಾಗಿ ಬಳಸಿದಾಗ ಮಾತ್ರ ತಂತ್ರಜ್ಞಾನವು ಶಿಕ್ಷಣವನ್ನು ಕ್ರಾಂತಿಗೊಳಿಸಬಹುದು, ಕಲಿಕೆಯನ್ನು ಹೆಚ್ಚು ಸುಲಭವಾಗಿ ಮತ್ತು ವೈವಿಧ್ಯಮಯ ವಿದ್ಯಾರ್ಥಿ ಜನಸಂಖ್ಯೆಗೆ ಪರಿಣಾಮಕಾರಿಯಾಗಿಯೂ ತಲುಪಿಸಬಹುದು.