ತುಮಕೂರು ಪರಿಸರದ ತತ್ವಪದಕಾರರ ಪರಿಚಯ

Authors

  • Umesh Naik N. Huliyar

Abstract

ಕನ್ನಡ ನೆಲದಲ್ಲಿ ವಚನ ಸಾಹಿತ್ಯ ಚಳುವಳಿ ಮತ್ತು ದಾಸ ಸಾಹಿತ್ಯ ಚಳುವಳಿಯ ನಂತರ ೧೭ ರಿಂದ ೧೯ ನೇ ಶತಮಾನದ ಅವಧಿಯಲ್ಲಿ ತತ್ವಪದ ಸಾಹಿತ್ಯ ಚಳುವಳಿ ನಡೆಯಿತು. ತತ್ವಪದಕಾರರು ರಚಿಸಿದ ರಚನೆಗಳಿಗೆ ತತ್ವಪದ ಸಾಹಿತ್ಯ, ಅನುಭಾವ ಸಾಹಿತ್ಯ, ಕೈವಲ್ಯ ಸಾಹಿತ್ಯ ಎಂದು ಕರೆಯಲಾಗಿದೆ. ತತ್ವಪದವು ಅನುಭವದಿಂದ ಕೂಡಿದ್ದು, ಲೌಕಿಕ ಮತ್ತು ಅಲೌಕಿಕ ಬದುಕನ್ನು ಅರ್ಥೈಸುವಂತಹ ಅಭಿವ್ಯಕ್ತಿಯಾಗಿದೆ. ಗುರುಭಕ್ತಿ, ಸದಾಚಾರ, ನೈತಿಕತೆ, ಜಾತ್ಯಾತೀತತೆ, ಭಾವೈಕ್ಯತೆ, ವಸಾಹತುಶಾಹಿಯಂತಹ ವಿಚಾರಗಳನ್ನು ಕುರಿತು ಇವರು ವಿವೇಚಿಸಿದ್ದಾರೆ. ವಚನಕಾರರು ವ್ಯಕ್ತಿಯ ಅಸ್ತಿತ್ವವನ್ನು ಜ್ಞಾನದಲ್ಲಿ, ದಾಸರು ದೈವ ಭಕ್ತಿಯಲ್ಲಿ ಕಂಡರೆ ತತ್ವಪದಕಾರರು ವೈರಾಗ್ಯ ಮತ್ತು ಗುರು ಭಕ್ತಿಯಲ್ಲಿ ಕಂಡಿದ್ದಾರೆ.

ಒಂದು ಪ್ರದೇಶದ ವೈಶಿಷ್ಟತೆ ಆ ಪ್ರದೇಶದ ಸಾಂಸ್ಕೃತಿಕ ಮತ್ತು ಭೌಗೋಳಿಕ ಸಂಗತಿಗಳನ್ನು ಅವಲಂಬಿಸಿರುತ್ತದೆ ಎಂದರೆ ತಪ್ಪಾಗಲಾರದು. ೧೮-೧೯ನೇ ಶತಮಾನದ ಸಾಮಾಜಿಕ ಸಂದರ್ಭದಿಂದ, ಅಧಿಕಾರಶಾಹಿಯ ಆಳ್ವಿಕೆಯಿಂದ, ವಸಾಹತುಶಾಹಿಯ ಮೌಲ್ಯಗಳ ಸ್ವೀಕರಣ-ನಿರಾಕರಣದ ಪರಿಸ್ಥಿತಿಯಿಂದ ಹಾಗೂ ಮತೀಯ ಸಂಘರ್ಷದಿಂದ ಉಂಟಾದ ಪರಿಣಾಮಗಳನ್ನು ಕಣ್ಣಾರೆ ಕಂಡ ಅನುಭಾವಿಗಳು ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ತತ್ವಪದಕಾರರದ್ದು ಪ್ರಜಾಪ್ರಭುತ್ವದ ಪ್ರಮುಖ ಆಶಯವನ್ನು ಬದುಕಿಗೆ ಅಳವಡಿಸಿಕೊಂಡಿರುವ ಪರಂಪರೆ ಹಾಗೂ ಸಮಾನತೆ, ಬಹುತ್ವ, ಸಾಮರಸ್ಯಗಳನ್ನು ಬದುಕಿನ ಭಾಗವಾಗಿಸಿಕೊಂಡಿರುವ ಪರಂಪರೆಯಾಗಿದೆ. ಸರ್ವಸಮಾನತೆ ತತ್ವಪದಗಳ ಕೇಂದ್ರ ಆಶಯವಾಗಿದ್ದು, ಸಾಮಾನ್ಯವಾಗಿ ಅವೈದಿಕ ಚಿಂತನೆಗಳನ್ನು ಒಳಗೊಂಡಿವೆ.

ಕರ್ನಾಟಕದ ನೆಲದಲ್ಲಿ ೪೦೦ಕ್ಕೂ ಹೆಚ್ಚು ತತ್ವಪದಕಾರರನ್ನು ಗುರುತಿಸಬಹುದು. ತಾತ್ವಿಕತೆಯಾಗಿ, ಜೀವನ ವಿಧಾನವಾಗಿ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಅಭಿವ್ಯಕ್ತಿಯಾಗಿ ಅವು ನಮ್ಮ ನಡುವೆ ಇವೆ. ಈ ಲೇಖನದಲ್ಲಿ ತುಮಕೂರು ಪರಿಸರದ ವ್ಯಾಪ್ತಿಗೆ ಬರುವ ಕೆಲವು ತತ್ವಪದಕಾರರುಗಳಾದ ಕಲ್ಲೂರು ರುದ್ರಮುನಿದೇವ, ಮಲ್ಲೇನಹಳ್ಳಿ ಚನ್ನಬಸವಯ್ಯ, ಹಾಗಲ್ವಾಡಿಯ ಮುದ್ವೀರಸ್ವಾಮಿ, ಹೊನ್ನೇನಹಳ್ಳಿ ದಾಸಗಿರಿಯಪ್ಪ, ಹೊನ್ನಡಿಕೆಯ ಗಂಗಾಧರಸ್ವಾಮಿ, ಶಂಕರಾದೇವ, ಕೆಸ್ತೂರದೇವ, ವಿರಕ್ತ ತೋಂಟದಾರ್ಯ, ಚುಂಗನಹಳ್ಳಿ ಶಿವಪ್ಪ, ಕಲ್ಲೂರಿನ ಲಿಂಗಣ್ಣೊಡೆಯ, ನೊಣವಿನಕೆರೆ ಸೋಮೇಕಟ್ಟೆ ಕರಿವೃಷಬೇಂದ್ರಸ್ವಾಮಿ, ಸೋಮೇಕಟ್ಟೆ ಚೆನ್ನವೀರಸ್ವಾಮಿಗಳು, ಕಂದಿಕೆರೆ ಶಾಂತಪ್ಪ, ಮಲ್ಲಿಕಾರ್ಜುನ ಶಿವಾನಂದ ಹಾಗೂ ನಿಡಗಲ್ಲು ಚೆನ್ನಪ್ಪರ ಸ್ಥೂಲ ಪರಿಚಯವನ್ನು ಮಾಡಲಾಗಿರುತ್ತದೆ.

Downloads

Published

05.03.2023

How to Cite

Umesh Naik N. Huliyar. (2023). ತುಮಕೂರು ಪರಿಸರದ ತತ್ವಪದಕಾರರ ಪರಿಚಯ. AKSHARASURYA, 2(03), 54–58. Retrieved from https://aksharasurya.com/index.php/latest/article/view/79

Issue

Section

Article