ಶರಪಂಜರ ಕಾದಂಬರಿಯಲ್ಲಿ ಸ್ತ್ರೀ ವಿರೋಧಿ ನೆಲೆಗಳು

Main Article Content

ಅಮೃತಿ ರಾಜೇಶ್

Abstract

ತ್ರಿವೇಣಿಯವರು ಒಬ್ಬ ಸಾಹಿತ್ಯದ ಲೇಖಕಿಯಾಗಿ ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ಪಾತ್ರ ಚಿತ್ರಣ ಮಾಡುವ ಮೂಲಕ ಅವರ ಕಾದಂಬರಿಗಳು ವಿಶಿಷ್ಟವೆನಿಸುತ್ತವೆ. ಮುಖ್ಯವಾಗಿ ಪುರುಷ ಪ್ರಧಾನವಾದ ಸಮಾಜದಲ್ಲಿ ಹೆಣ್ಣಿನ ಸ್ಥಾನ-ಮಾನಗಳ ವಿಚಾರವನ್ನು ತಮ್ಮ ಬರವಣಿಗೆಗಳಲ್ಲಿ ಚಿತ್ರಿಸುವ ಮೂಲಕ ಹೆಣ್ಣಿನ ಬಗೆಗೆ ಪುರುಷರ ಧೋರಣೆಗಳನ್ನು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ. ದಾಂಪತ್ಯದಲ್ಲಿ ಶೀಲ ಅಥವಾ ಪಾತಿವ್ರತ್ಯವೆಂಬುದು ಬಹು ಮುಖ್ಯವಾದ ವಿಚಾರ. ದಾಂಪತ್ಯದಲ್ಲಿ ಶೀಲದ ಮಡಿವಂತಿಕೆಯು ಗಂಡು-ಹೆಣ್ಣುಗಳಿಬ್ಬರಲ್ಲಿಯೂ ಕಾಪಾಡಿಕೊಂಡಿರಬೇಕೆಂಬ ವಿಚಾರ ಸಮಾಜ, ಕುಟುಂಬ ಹಾಗೂ ವ್ಯಕ್ತಿಗತವಾದ ಸಂಗತಿಯಾಗಿದೆ. ಅದನ್ನು ಈ ಸಮಾಜ ಅಪೇಕ್ಷಿಸುತ್ತದೆ. ಆದರೆ ಈ ಪುರುಷ ಪ್ರಧಾನವಾದ ಕೌಟುಂಬಿಕ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಾಗಿ ಅದು ಹೆಣ್ಣಿಗೆ ಮಾತ್ರ ವಿಧಿಸಲಾಗಿರುವ ವಿಚಾರ ಸಂಕೋಲೆಯಾದಂತಿದೆ, ಆದರೆ ಗಂಡಿನ ವಿಚಾರದಲ್ಲಿ ಈ ನಿಯಮಗಳು ಅಷ್ಟಾಗಿ ಜಾರಿಯಾಗದೆ ಉದಾರವಾಗಿರುವುದನ್ನು ಕಾಣಬಹುದಾಗಿದೆ. ದಾಂಪತ್ಯದಲ್ಲಿ ಅದು ಪ್ರಶ್ನಾರ್ಹವಾಗುವುದು ಹೆಣ್ಣಿನ ವಿಚಾರದಲ್ಲಿ ಮಾತ್ರ.
ಹೀಗೆ ತ್ರಿವೇಣಿಯವರು ಶರಪಂಜರ ಕಾದಂಬರಿಯನ್ನು ಮನೋವೈಜ್ಞಾನಿಕವಾದ ನೆಲೆಯಿಂದ ಕಾವೇರಿಯನ್ನು ನೋಡಿದರೂ ಸಹ ಕಾವೇರಿಯ ನೆಪವಾಗಿ ಇಡೀ ಸಮಾಜ ಅಥವಾ ಕೌಟುಂಬಿಕ ವ್ಯವಸ್ಥೆಯು ಹೆಣ್ಣನ್ನು ನಡೆಸಿಕೊಂಡ ಹಾಗೂ ನಡೆಸಿಕೊಳ್ಳುವ ರೀತಿಯನ್ನು ಶರಪಂಜರ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಹೆಣ್ಣಿನ ಬಗೆಗೆ ಋಣಾತ್ಮಕವಾಗಿ ಕಾಣುವ ಮೌಲ್ಯಗಳು ಜಗತ್ತಿನ ಬಹುತೇಕ ಸಮಾಜಗಳಲ್ಲಿ ವ್ಯಕ್ತವಾಗುತ್ತವೆ. ಗಂಡು ಧನಾತ್ಮಕವೆಂದೂ, ಹೆಣ್ಣು ಋಣಾತ್ಮಕವೆಂದೂ ಗ್ರಹಿಸುವ ರೀತಿಯು ಅನೇಕ ಸಾಹಿತ್ಯ ಕೃತಿಗಳಲ್ಲಿ ಅಭಿವ್ಯಕ್ತವಾಗುತ್ತಿರುತ್ತವೆ. ಸಾಂಪ್ರದಾಯಿಕ ಸಾಮಾಜಿಕ ಪರಿಸರದಲ್ಲಿ ಹುಟ್ಟಿದ ಗಂಡು ಅವನದೇ ಆದ ಆಲೋಚನಾ ಕ್ರಮವನ್ನು ರೂಢಿಸಿಕೊಂಡಿರುತ್ತಾನೆ. ಆತನ ಆಲೋಚನಾ ಕ್ರಮದಲ್ಲಿ ಸಹಜವಾಗಿಯೇ ಗಂಡಸುತನದ ಪೌರುಷ ಗೋಚರಿಸುತ್ತದೆ. ಅನೇಕ ಸೃಜನಶೀಲ ಕೃತಿಗಳಲ್ಲಿ ಹೆಣ್ಣನ್ನು ಗಂಡಸರು ಭೋಗಿಸುವ ವಸ್ತುವಾಗಿ ಚಿತ್ರಣಗಳು ರೂಪಿತವಾಗಿವೆ. ಪುರುಷ ಪ್ರಧಾನ ವ್ಯವಸ್ಥೆಯೊಳಗೆ ಕಾವೇರಿಯಂಥ ಇಕ್ಕಟ್ಟಿಗೆ ಸಿಲುಕಿದ ಹೆಣ್ಣುಗಳಿಗೆ ಕುಟುಂಬ ಹಾಗೂ ಸಾಮಾಜಿಕ ನಿರಾಕರಣೆಯನ್ನು ವಿಧಿಸುವ ಬದಲಿಗೆ ಸ್ತ್ರೀ ವಿಮೋಚನೆಯ ಕಡೆಗೆ ಬರವಣಿಗೆ ತುಡಿಯಬೇಕಾದ ಅನಿವಾರ್ಯತೆಯಿದೆ.
ಆದರೆ ಶರಪಂಜರ ಕಾದಂಬರಿ ಕಾದಂಬರಿಯ ನಾಯಕಿ ಅಚಾತುರ್ಯವಾಗಿ ಘಟಿಸಿದ ಘಟನೆಯ ಪರಿಣಾಮವಾಗಿ ಆಕೆಯ ಜೀವನ ದುರಂತಕ್ಕೆ ಒಳಗಾಗುವುದನ್ನು ಲೇಖಕಿ ಚಿತ್ರಿಸಿದ್ದಾರೆ. ಹೆಣ್ಣಿನ ದೈಹಿಕ ಮಡಿವಂತಿಕೆಯನ್ನು ಪುರುಷ ಕಟ್ಟುನಿಟ್ಟಾಗಿ ಅಪೇಕ್ಷಿಸುವ ಮೂಲಕ ಕುಟುಂಬದಲ್ಲಿ ಯಾಜಮಾನಿಕೆಯ ದರ್ಪವನ್ನು ಕಾಪಾಡಿಕೊಳ್ಳುವ ಮೂಲಕ ಹೆಣ್ಣನ್ನು ಬದುಕಿನಿಂದ ದೂರವಿಡುವ ಕ್ರಮವನ್ನು ತ್ರಿವೇಣಿಯವರು ಈ ಕಾದಂಬರಿಯಲ್ಲಿ ಕಟ್ಟಿಕೊಡುತ್ತಾರೆ.

Article Details

Section

Research Articles

Author Biography

ಅಮೃತಿ ರಾಜೇಶ್

ವಿ.ವಿ ಪುರ ಕಲೆ ಮತ್ತು ವಾಣಿಜ್ಯ ಪದವಿ ಕಾಲೇಜು, ಕೃ.ರಾ ರಸ್ತೆ, ಬೆಂಗಳೂರು.

References

ತ್ರಿವೇಣಿ, ಶರಪಂಜರ, ಬೆಂಗಳೂರು: ಅಂಕಿತ ಪ್ರಕಾಶನ.

ಕೇಶವನ್ ಶರ್ಮ ಕೆ., (1992), ಕ್ರಿಯೆ ಪ್ರತಿಕ್ರಿಯೆ, ಬೆಂಗಳೂರು: ಅನ್ವೇಷಣಾ ಪ್ರಕಾಶನ.

ರಾಮಚಂದ್ರ ಸಿ.ಎನ್., (2002), ಪರಂಪರೆ ಮತ್ತು ಪ್ರತಿರೋಧ, ಮಲ್ಲಾಡಿಹಳ್ಳಿ: ಸಂವಾದ ಪ್ರಕಾಶನ.

ಕೇಶವನ್ ಶರ್ಮ ಕೆ., ಸ್ತ್ರೀವಾದಿ ವಿಮರ್ಶೆಯ ತಾತ್ವಿಕ ನಿಲುವುಗಳು, ಬೆಂಗಳೂರು: ಅನ್ವೇಷಣಾ ಪ್ರಕಾಶನ.