ವಿಕಸಿತ ಭಾರತಕ್ಕಾಗಿ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಪರಿಕಲ್ಪನೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್

Main Article Content

ಶಂಕರಪ್ಪ ಸತ್ಯಪ್ಪ ಲಗಳಿ

Abstract

ಭಾರತದ ಸಂವಿಧಾನದ ಶಿಲ್ಪಿ “ಬಾಬಾಸಾಹೇಬ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಭೀಮ್ ರಾವ್ ರಾಮ್‌ಜಿ ಅಂಬೇಡ್ಕರ್ ಅವರು ಶಿಕ್ಷಣತಜ್ಞ, ನ್ಯಾಯಶಾಸ್ತ್ರಜ್ಞ, ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ ಮತ್ತು ಭಾರತೀಯ ಸಾಮಾಜಿಕ ರಚನೆಯನ್ನು ಸುಧಾರಿಸಲು ಪಟ್ಟುಬಿಡದೆ ಹೋರಾಡಿದ ಭಾರತದ ಶ್ರೇಷ್ಠ ರಾಜಕೀಯ ನಾಯಕರು. ಅವರು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಿದ್ಧರಾಗಿರುವ ದೂರದೃಷ್ಟಿಯ ವ್ಯಕ್ತಿಯಾಗಿದ್ದರು. ತಮ್ಮ ರಾಜಕೀಯ ಜೀವನದುದ್ದಕ್ಕೂ, ಅವರು ಸಮಾಜದ ಕಲ್ಯಾಣಕ್ಕಾಗಿ ವಿಶೇಷವಾಗಿ ಮಹಿಳೆಯರು, ಮತ್ತು ದೀನದಲಿತ, ಕಾರ್ಮಿಕರ ವರ್ಗಕ್ಕಾಗಿ ಕೆಲಸ ಮಾಡಿದರು. ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ಮತ್ತು ದಲಿತರ ಶೋಷಣೆ ನಿವಾರಣೆಗಾಗಿ ಹೋರಾಡಿದ ಅಗ್ರಗಣ್ಯ ಮಹಾನ್ ಭಾರತೀಯ ನಾಯಕರು. ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಾವಾಡೆ ಗ್ರಾಮದಲ್ಲಿ ಜನಿಸಿದರು. ಅವರು ಮಹೋವ್‌ನಲ್ಲಿ ಮೇಜರ್ ಸುಬೇದಾರ್ ಶ್ರೇಣಿಯ ಮಿಲಿಟರಿ ಅಧಿಕಾರಿ ಶ್ರೀ ರಾಮ್‌ಜಿ ಮಾಲೋಜಿ ಸಕ್ಪಾಲ್ ಮತ್ತು ಭೀಮಾಬಾಯಿ ಸಕ್ಪಾಲ್ ಅವರ ಪುತ್ರರಾಗಿದ್ದರು. ಅಂಬೇಡ್ಕರ್ ಅವರು ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಮಹಾರ್ (ದಲಿತ) ಸಮುದಾಯದಲ್ಲಿ ಹುಟ್ಟಿ ಬೆಳೆದರು. ಸವರ್ಣೀಯರ ಶೋಷಣೆ ಮತ್ತು ಕೋಪ-ತಾಪಗಳ ಮಧ್ಯೆ ಬಾಲ್ಯ ಜೀವನ ಕಳೆದರು. 1897 ರಲ್ಲಿ ಅಂಬೇಡ್ಕರ್ ಅವರ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು. ನಂತರ ಸತಾರಾದಲ್ಲಿ ಹೈಸ್ಕೂಲ್ ಮುಗಿಸಿ 1908 ರಲ್ಲಿ ಮೆಟ್ರಿಕ್ಯುಲೇಷನ್ ಪಾಸ್ ಮಾಡಿದರು. ಬಾಂಬೆಯ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ 1912 ರಲ್ಲಿ ಬಿ. ಎ. ಪದವಿ ಪಡೆದರು. ‘ಪ್ರಾಚೀನ ಭಾರತದಲ್ಲಿ ವಾಣಿಜ್ಯ ವ್ಯವಹಾರ’ ಹಾಗೂ ‘ಬ್ರಿಟಿಷ್ ಆಡಳಿತದಲ್ಲಿ ಭಾರತದ ಹಣಕಾಸಿನ ವ್ಯವಸ್ಥೆಯ ವಿಕಾಸ’ ಎಂಬ ಪ್ರಬಂಧಗಳಿಗೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಎಂ. ಎ. ಮತ್ತು ಪಿಎಚ್. ಡಿ. ಪದವಿ ನೀಡಿತು.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡುವ ಮೂಲಕ ಲಂಡನ್ ವಿಶ್ವವಿದ್ಯಾಲಯದಿಂದ ಎಂ. ಎಸ್ಸಿ. ಮತ್ತು ಡಿ. ಎಸ್ಸಿ. ಪದವಿಗಳನ್ನು ಪಡೆದರು. ಲಂಡನ್ ಗ್ರೇಸ್ ಇನ್ ಲಾ ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿ ‘ಬಾರ್ ಅಟ್ ಲಾ’ ಪಡೆದರು. ಬಾಂಬೆಯ ಕಾಮರ್ಸ್ ಮತ್ತು ಕಾನೂನು ಕಾಲೇಜಿನಲ್ಲಿ ಅರ್ಥಶಾಸ್ತ್ರ, ಕಾನೂನು, ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು.

Article Details

Section

Research Articles

Author Biography

ಶಂಕರಪ್ಪ ಸತ್ಯಪ್ಪ ಲಗಳಿ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಶ್ರೀ ಸಿ. ಎಂ. ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯರಗಟ್ಟಿ, ಬೆಳಗಾವಿ.

 

How to Cite

ಶಂಕರಪ್ಪ ಸತ್ಯಪ್ಪ ಲಗಳಿ. (2025). ವಿಕಸಿತ ಭಾರತಕ್ಕಾಗಿ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಪರಿಕಲ್ಪನೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್. ಅಕ್ಷರಸೂರ್ಯ (AKSHARASURYA), 9(02), 18 to 22. https://aksharasurya.com/index.php/latest/article/view/1587

References

ಚಿನ್ನಸ್ವಾಮಿ ಎನ್. ಸೋಸಲೆ, ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು.

ಹರೀಶ್ ಜಿ. ಬಿ., ಎಲ್ಲರಿಗೂ ಬೇಕಾದ ಅಂಬೇಡ್ಕರ್.

ಕಾಟ್ಕರ್ ಸರಜೂ, ದಲಿತ ಸೂರ್ಯ ಡಾ. ಬಾಬಾಸಾಹೇಬ ಅಂಬೇಡ್ಕರ್.

ಮಹಾಬಲೇಶ್ವರ ರಾವ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹೋರಾಟದ ಬದುಕಿನ ನೋಟ.