ಯು.ಆರ್. ಅನಂತಮೂರ್ತಿ ಅವರ ವ್ಯಕ್ತಿತ್ವದ ಆಂಶಿಕ ರೂಪ ʼಸೂರ್ಯನ ಕುದುರೆʼ
Main Article Content
Abstract
ಆಧುನಿಕ ಕನ್ನಡ ಸಾಹಿತ್ಯದಲ್ಲಿ 1950ರಿಂದ 1970ರ ವರೆಗೆ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡ ಪಂಥ ನವ್ಯ. ಈ ನವ್ಯ ಪಂಥದ ಪ್ರಮುಖ ಬರಹಗಾರರಲ್ಲಿ ಯು. ಆರ್. ಅನಂತಮೂರ್ತಿಯವರು ಒಬ್ಬರು. ತಮ್ಮದೇಯಾದ ತಾತ್ವಿಕ ವಿಚಾರಗಳ ಮೂಲಕ ಸೃಜನಶೀಲ ಹಾಗೂ ಸೃಜನೇತರ ಬರವಣಿಗೆಯಲ್ಲಿ ತಮ್ಮದೇಯಾದ ಸೈದ್ಧಾಂತಿಕತೆಯನ್ನು ಪ್ರತಿಪಾದಿಸಿದರು. ಕನ್ನಡ ಸಣ್ಣ ಕಥಾ ಪರಂಪರೆಗೆ ಪ್ರಮುಖವಾಗಿ ʼಎಂದೆಂದೂ ಮುಗಿಯದ ಕಥೆʼ ʼಪ್ರಶ್ನೆʼ, ʼಮೌನಿʼ, ʼಆಕಾಶ ಮತ್ತು ಬೆಕ್ಕುʼ, ʼಸೂರ್ಯನ ಕುದುರೆʼ, ʼಪಚ್ಚೆ ರೆಸಾರ್ಟ್ʼ ಕಥಾ ಸಂಕಲನವನ್ನು ನೀಡಿದ್ದಾರೆ.
1995ರಲ್ಲಿ ಪ್ರಥಮ ಬಾರಿಗೆ ಬಿಡುಗಡೆಗೊಂಡ ಇವರ ಕಥಾ ಸಂಕಲನ ʼಸೂರ್ಯನ ಕುದುರೆʼ. ʼಸೂರ್ಯನ ಕುದುರೆʼ ಎಂಬುದು ನಾಲ್ಕು ಕಥೆಗಳನ್ನು ಒಳಗೊಂಡ ಕಥಾ ಸಂಕಲನವಾಗಿದೆ. ಇದರಲ್ಲಿ ʼಸೂರ್ಯನ ಕುದುರೆʼ, ʼಅಕ್ಕಯ್ಯʼ, ʼಕಾಮರೂಪಿʼ, ಹಾಗೂ ʼಜರತ್ಕಾರುʼ ಎಂಬ ನಾಲ್ಕು ಕಥೆಗಳನ್ನು ಒಳಗೊಂಡಿದೆ.
ಜಿ. ಎಸ್ ಅಮೂರ ಅವರು ಕೃತಿಯ ಪ್ರಸ್ತಾವನೆಯಲ್ಲಿ “ಅನಂತ ಮೂರ್ತಿಯವರ ಸಾಹಿತ್ಯದಲ್ಲಿ ಚರಿತ್ರೆಯ ಶೋಧ ಅನುಭವದ ನೆಲೆಯಲ್ಲಿ ನಡೆಯುವುದರಿಂದ ಅದು ಆತ್ಮಚರಿತ್ರೆಯು ಆಗುವುದು ಅನಿವಾರ್ಯ. ʼಸೂರ್ಯನ ಕುದುರೆʼಯ ಎಲ್ಲಾ ಕಥೆಗಳ ನಾಯಕರು ಅನಂತಮೂರ್ತಿಯವರ ವ್ಯಕ್ತಿತ್ವದ ಆಂಶಿಕ ಬಿಂಬ ಪ್ರತಿಬಿಂಬಗಳೇ ಆಗಿವೆ” ಎಂದು ಅಭಿಪ್ರಾಯಿಸುತ್ತಾರೆ.
ಅನಂತಮೂರ್ತಿಯವರ ಕಥೆಗಳಲ್ಲಿ ಇತಿಹಾಸವನ್ನು ಸಂಶೋಧಿಸುವುದರೊಂದಿಗೆ ತಮ್ಮ ಆತ್ಮಚರಿತ್ರೆಯ ಎಳೆಗಳನ್ನು ದಾಖಲಿಸುವ, ಅವರ ವ್ಯಕ್ತಿತ್ವದ ಸಣ್ಣ ಸಣ್ಣ ಅಂಶಗಳು ಅವರ ಕಥೆಗಳಲ್ಲಿರುತ್ತವೆ ಎಂಬುದನ್ನು ಇವರ ಮಾತು ತಿಳಿಸುತ್ತದೆ.
ʼಸೂರ್ಯನ ಕುದುರೆʼ ಕಥೆಯಲ್ಲಿ ಅನಂತು ವಿದೇಶಗಳಲ್ಲಿ ಓದಿ ಬಂದವನು. ತನ್ನ ಊರಿಗೆ ಒಮ್ಮೆ ಹೀಗೆ ಭೇಟಿಕೊಟ್ಟಾಗ ಆತನ ಬಾಲ್ಯಕಾಲದ ಸ್ನೇಹಿತ ವೆಂಕಟನ ದರ್ಶನ ಸಂತೆಯಲ್ಲಿ ಆಗುತ್ತದೆ. ಇವರಿಬ್ಬರ ಸ್ನೇಹದ ಜೊತೆ ಜೊತೆಯಲ್ಲಿ ಅನಂತುವಿನ ಆಧುನಿಕತೆಯ ವ್ಯಕ್ತಿತ್ವ, ಆಲೋಚನ ಕ್ರಮಗಳನ್ನು ಕಾಣಬಹುದು. ಆದರೆ ವೆಂಕಟನದು ಭಾರತೀಯ ಮನಃಸ್ಥಿತಿ. ಅನಂತು ವ್ಯವಸ್ಥೆಯು ಹೀಗೆ ಇದ್ದರೆ ದೇಶ ಹೇಗೆ ಬದಲಾವಣೆಯಾಗುತ್ತದೆ ಎಂಬ ಹೇಳಿಕೆಗೆ ಭಾರತೀಯತೆಯ ಪ್ರತೀಕವಾದ ವೆಂಕಟನು ತಾನು ತಮ್ಮ ಹೆಂಡತಿಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲದಿದ್ದಾಗ ಇನ್ನು ಹೇಗೆ ಉಳಿದೆಲ್ಲವನ್ನು ಬದಲಾವಣೆಯನ್ನು ನೋಡಬಹುದೆಂಬ ವಾಸ್ತವ ದೃಷ್ಟಿ ವ್ಯಕ್ತವಾಗುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅನಂತಮೂರ್ತಿ ಯು.ಆರ್., (2012), ಸೂರ್ಯನ ಕುದುರೆ, ವಸಂತ ಪ್ರಕಾಶನ, ಬೆಂಗಳೂರು.
ರಹಮತ್ ತರಿಕೆರೆ, (2019), ಸಾಂಸ್ಕೃತಿಕ ಅಧ್ಯಯನ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಅಶೋಕ್ ಟಿ.ಪಿ., (2018), ಕಥನ ಭಾರತಿ, ಮಣಿಪಾಲ್ ಯುನಿವರ್ಸಲ್ ಪ್ರೆಸ್, ಮಣಿಪಾಲ್.