ಬಾಣಭಟ್ಟನ ಕಾದಂಬರಿ: ಕನ್ನಡಕ್ಕೆ ಅನುವಾದಗೊಂಡ ಬಗೆ
Main Article Content
Abstract
ಭಾಷೆಭಾಷೆಗಳ ನಡುವಿನ ತಾರತಮ್ಯವನ್ನು, ಘರ್ಷಣೆಯನ್ನು ತೊಡೆದು ಹಾಕಿ, ಪರಸ್ಪರ ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಮಾಡುವ ಪ್ರಯತ್ನದಲ್ಲಿ ʼಅನುವಾದವುʼ ಅತೀ ಪ್ರಮುಖ ಪಾತ್ರವಹಿಸುವುದು. ಜಾಗತಿಕ ಮಟ್ಟದಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪರಿಣಾಮಕಾರಿಯಾದ ಅನುವಾದವು ಭಾಷೆಯನ್ನು ಸಾಂಸ್ಕೃತಿಕವಾಗಿ, ಶಾಬ್ದಿಕವಾಗಿ ಶ್ರೀಮಂತಗೊಳಿಸುವುದು. ಒಂದು ಭಾಷೆಯ ಅನುವಾದವಾಗುವ ಕೃತಿಯೊಂದಿಗೆ ಅದರಲ್ಲಿ ಅಡಕವಾಗಿರುವ ಮೌಲ್ಯಗಳೂ ಸಹ ಇಂದಿನ ಜನಾಂಗಕ್ಕೆ ಮುಟ್ಟಬೇಕು. ಆಗ ಮಾತ್ರ ಅನುವಾದಕ್ಕೂ ಮತ್ತು ಓದುಗರಿಗೂ ಪೂರ್ಣಫಲ ಲಭಿಸುವುದು. ಸಂಸ್ಕೃತದ ಅನೇಕ ಕೃತಿಗಳು ಕನ್ನಡವೇ ಮೊದಲಾದ ಭಾಷೆಗಳಿಗೆ ಅನುವಾದಗೊಂಡಿವೆ. ಪ್ರಸ್ತುತ ಇಂತಹ ಕೃತಿಗಳಲ್ಲಿ ʼಬಾಣಭಟ್ಟನ ಕಾದಂಬರಿʼ ಎಂಬ ಗದ್ಯಕಾವ್ಯವು ಕನ್ನಡಕ್ಕೆ ಅನುವಾದಗೊಂಡ ಬಗೆಯ ಪಕ್ಷಿ ನೋಟ ಇಲ್ಲಿದೆ.
ಕಾದಂಬರಿ ಛಂದೋಂಬುಧಿಯನ್ನು ಬರೆದ ನಾಗವರ್ಮನು ಒಬ್ಬನೇ. ಕಾವ್ಯಾವಲೋಕನ, ಭಾಷಾಭೂಷಣ, ವಸ್ತುಕೋಶಗಳನ್ನು ರಚಿಸಿದವರು ಮಾತ್ರ ಮತ್ತೊಬ್ಬನು ಎಂದು ನರಸಿಂಹಚಾರ್ಯರು ಅಭಿಪ್ರಾಯಪಡುತ್ತಾರೆ. ಇವೆಲ್ಲವುಗಳನ್ನು ರಚಿಸಿದವನು ಒಬ್ಬನೇ ಎಂದು ಡಾ. ವೆಂಕಟಸುಬ್ಬಯ್ಯನವರ ಅಭಿಪ್ರಾಯ. ಒಂದು ಭಾಷೆಯಲ್ಲಿಯ ಕಾವ್ಯದ ಅರ್ಥವನ್ನು ಅದರ ಪದರಚನಾ ಮಹತ್ವದೊಡನೆ ಮತ್ತೊಂದು ಭಾಷೆಯಲ್ಲಿ ತರುವುದು ಸಾಮಾನ್ಯದ ಕೆಲಸವಲ್ಲ. ಪರಿವರ್ತನಾಕಾರನು ದ್ವಿಭಾಷಾ ಪಂಡಿತನಾಗಿರುವುದು ಅವಶ್ಯ. ನಾಗವರ್ಮನು ಅನುವಾದ ಮಾಡಿದ್ದರೂ, ಅವನ ಕೃತಿ ಪ್ರಥಮ ವರ್ಗ ಪರಿವರ್ತನವಾಗಿದೆ. ನಾಗವರ್ಮನು ಬಾಣನ ಕೃತಿಯನ್ನೇ ಅನುಸರಿಸಿದ್ದರೂ ಹೆಜ್ಜೆ ಹೆಜ್ಜೆಗೆ ಅನುಸರಿಸಿಲ್ಲ. ಎಲ್ಲಿ ವರ್ಣನೆ ಅನವಶ್ಯಕವೋ ಅಲ್ಲಿ ನಾಗವರ್ಮನು ವರ್ಣನೆಯಲ್ಲಿ ಬಹುಭಾಗವನ್ನು ಬಿಟ್ಟುಬಿಟ್ಟಿದ್ದಾನೆ. ಉದಾಹರಣೆಗೆ ಶೂದ್ರಕ ರಾಜನ ವರ್ಣನೆಯನ್ನೇ ನೋಡಬಹುದು. ಬಾಣನಷ್ಟು ದೀರ್ಘವಾಗಿ ಬೆಳೆಸದೆ, ಸ್ವಲ್ಪದರಲ್ಲಿಯೇ ಮುಗಿಸಿ ಕಥೆಯನ್ನು ಮುಂದೋಡಿಸುತ್ತಾನೆ. ಬಹು ದೀರ್ಘವಾದ ವಾಕ್ಯಗಳನ್ನು ನಾಗವರ್ಮನು ಹೆಚ್ಚಾಗಿ ಉಪಯೋಗಿಸಿಲ್ಲ; ಸಮಾಸಗಳನ್ನಾದರೂ ಹಾಗೇ; ಗದ್ಯಪದ್ಯ ಎರಡನ್ನೂ ಸೇರಿಸಿದ್ದರಿಂದ ಶೈಲಿಯಲ್ಲಿ ವೈವಿಧ್ಯವುಂಟಾಗಿದೆ. ಶೈಲಿಯಲ್ಲಿಯ ಮಾರ್ಪಾಟಿನಿಂದ, ಕಥೆಯ ಕುತೂಹಲವನ್ನು ಕಾಯ್ದಿಡುವುದರಿಂದ ನಾಗವರ್ಮನ ಕೃತಿ ಕನ್ನಡದ ಅನುವಾದ ಕೃತಿಗಳಲ್ಲಿ ಗಣ್ಯವಾಗಿದೆ. ಬಾಣಕವಿಯ ಕೃತಿಯ ಆಧಾರದಿಂದಲೇ ಕನ್ನಡದಲ್ಲಿ ಕೃಷ್ಣಾಚಾರ್ಯರ ಕಾದಂಬರಿಯೂ ಗದ್ಯದಲ್ಲಿ ಬಂದಿದೆ. ಹಾಗೆಯೇ ಶ್ರೀ ಗಂಗಾಧರ ಮಡಿವಾಳೇಶ್ವರ ತುರಮರಿಯವರು ಹೊಸಗನ್ನಡದಲ್ಲಿ ಬಾಣನ ಕಾದಂಬರಿಯನ್ನು ಅನುವಾದಿಸಿದ್ದಾರೆ. ಬಾಣನಲ್ಲಿ ಅಪರಿಮಿತವಾಗಿ ಬರುವ ಶ್ಲೇಷೆಯನ್ನು ಕನ್ನಡದಲ್ಲಿ ತರುವುದು ಸುಲಭ ಸಾಧ್ಯವಿಲ್ಲ. ಆದರೂ ಬಾಣ ಕಾದಂಬರಿಯನ್ನು ಕನ್ನಡೀಕರಿಸಿರುವವರೆಲ್ಲಾ ಅವರದ್ದೇ ಶೈಲಿಯಲ್ಲಿ ಅವರವರ ಕಾಲ ಘಟ್ಟದ ಸಹೃದಯರ ಅಭಿರುಚಿಗೆ ತಕ್ಕಂತೆ ಒಪ್ಪ ಓರಣಗೊಳಿಸಿ ಅಲಂಕರಿಸಿರುವುದಂತೂ ಸತ್ಯ. ಸಂಸ್ಕೃತದ ಮಹತ್ಕೃತಿಯ ಸಾರವನ್ನು ಕನ್ನಡದಲ್ಲಿ ತಿಳಿಯಾಗಿ ಸ್ವಾರಸ್ಯವಾಗಿ ಹೇಳಬಹುದೆಂಬುದನ್ನು ಸಾಧಿಸಿದ್ದಾರೆ ಕೂಡ. ಮೂಲ ಸಂಸ್ಕೃತದ ಕೃತಿಗಳನ್ನು ಓದಲಾಗದ, ಅರ್ಥೈಸಿಕೊಳ್ಳಲಾಗದ ಅನೇಕರಿಗೆ ಕನ್ನಡದಲ್ಲಿ ಅನುವಾದಗೊಂಡ ಕೃತಿಗಳು ವರದಾನವೇ ಸರಿ. ಹೀಗೆ ಅಪರಿಚಿತ ಭಾಷೆ, ಸಾಹಿತ್ಯವನ್ನು ತಿಳಿಯುವಲ್ಲಿ ಭಾಷಾಂತರ ಪ್ರಮುಖ ಪಾತ್ರವಹಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಆಚಾರ್ಯ ಬಲದೇವ ಉಪಾಧ್ಯಾಯ, (1980), ಸಂಸ್ಕೃತ ಸಾಹಿತ್ಯದ ಇತಿಹಾಸ, ರಾಮಚಂದ್ರ ಶಾಸ್ತ್ರಿ ಎಸ್. (ಅನು), ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಬನ್ನಂಜೆ ಗೋವಿಂದಾಚಾರ್ಯ, (2017), ಬಾಣಭಟ್ಟನ ಕಾದಂಬರಿ, ಈಶಾವಾಸ್ಯ ಪ್ರತಿಷ್ಠಾನ (ರಿ), ಉಡುಪಿ.
ತುರಮರಿ ಗಂ.ಮ., (1995), ಬಾಣ ಕಾದಂಬರಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.
ಬಾಣಭಟ್ಟ, (1900), ಬಾಣಭಟ್ಟ ವಿರಚಿತ ಕಾದಂಬರಿ (ಸಂಸ್ಕೃತ), ಚೌಖಾಂಬಾ ಪ್ರಕಾಶನ, ವಾರಣಾಸಿ.