ಕನ್ನಡದಲ್ಲಿ ಗಜಲ್ ಸಾಹಿತ್ಯ
Main Article Content
Abstract
ಗಜಲ್ ಎಂಬುದು ಅರಬ್ಬಿ ಶಬ್ದ. ಹೆಣ್ಣುಮಕ್ಕಳ ಜೊತೆ ಮಾತನಾಡುವುದು, ಪ್ರೇಮಮೋಹ ಅನುರಾಗಗಳನ್ನು ವ್ಯಕ್ತಪಡಿಸುವುದು ಎಂದು ಈ ಪದದ ಅರ್ಥ. ಗಜಲ್ ಅರಬ್ಬೀ ಶಬ್ದವಾದರೂ ಅದು ಅರಬ್ಬಿ ಭಾಷೆಯಲ್ಲಿ ಒಂದು ಕಾವ್ಯಪ್ರಕಾರವಾಗಿ ಬೆಳೆಯಲಿಲ್ಲ. ಬದಲಿಗೆ ಈ ಶಬ್ದ ಇರಾನ್ ದೇಶಕ್ಕೆ ಹೋಗಿ ಅಲ್ಲಿನ ಪಾರ್ಸಿ ಭಾಷೆಯಲ್ಲಿ ಒಂದು ಕಾವ್ಯಪ್ರಕಾರವಾಗಿ ಬೆಳೆಯಿತು. ಪಾರ್ಸಿ ಭಾಷೆಯಲ್ಲಿ ಗಜಲ್ ಎಂಬ ಪದಕ್ಕೆ ಭಾವಗೀತೆ/ಪ್ರೇಮಗೀತೆ/ಹಾಡು/ಪ್ರಗಾಥ ಎಂಬರ್ಥಗಳಿವೆ. ಗಜಲ್ ಎಂಬ ಪದ ಅರಬ್ಬಿಯಾದರೂ ಈ ಕಾವ್ಯಪ್ರಕಾರದ ಮೂಲ ಮಾತ್ರ ಪಾರ್ಸಿ ಭಾಷೆಯೇ. ಅಲ್ಲಿಂದ ಇದು ಭಾರತದ ಉರ್ದುವಿಗೆ ಬಂತು. ಹಾಗೆ ಉರ್ದುವಿಗೆ ಬಂದು ಪಾರ್ಸಿಯ ಅನುಕರಣೆ ಮಾತ್ರವಾಗಿ ಉಳಿಯದೆ, ಭಾರತೀಯತೆಯನ್ನು ಮೈಗೂಡಿಸಿಕೊಂಡು ರಸಿಕರ ಮನ ಗೆದ್ದು ಉರ್ದು ಸಾಹಿತ್ಯದಲ್ಲೇ ಪ್ರಖ್ಯಾತಿ ಪಡೆದ ಪ್ರಕಾರವಾಗಿ ಬೆಳೆಯಿತು.
ಕನ್ನಡ ಸಾಹಿತ್ಯ ವಿಕಾಸದ ಉತ್ತುಂಗದಲ್ಲಿರುವಾಗ ಉರ್ದುವಿನ ಮೂಲಕ ಸಾಹಿತ್ಯದ ಅಂತರಂಗವನ್ನು ಪ್ರವೇಶಿಸಿದ ಗಜಲ್‌ಗಳು ಜನಸಾಮಾನ್ಯರಿಗೂ ಮೋಡಿ ಮಾಡಿದವು. ಗಜಲ್‌ಗಳ ಮೂಲಕ ಎರಡು ಮನಸ್ಸುಗಳು ನಿಷ್ಕಲ್ಮಶವಾಗಿ ಒಂದಾಗುವ ರೀತಿಯನ್ನು ವಿವರಿಸುವಲ್ಲಿ ಯಶಸ್ಸನ್ನು ಸಾಧಿಸಿವೆ. ನಾಡಿನ ನುಡಿಯ ಮಿಡಿತಗಳಿಗೆ ಹೆಚ್ಚಾಗಿ ಸ್ಪಂದಿಸದೆ ಇದ್ದರೂ, ಅಂತರಂಗದಿಂದ ಉದಯಿಸಿದ ಭಾವಗೀತೆಗಳಂತಿವೆ. ಗಜಲ್ ಸಾಹಿತ್ಯಕ್ಕೆ ಮುನ್ನಡೆಯನ್ನು ಬರೆದ ಶಾಂತರಸರ ಪ್ರಕಾರ “ಜಗತ್ತಿನ ಕಾವ್ಯದಲ್ಲಿ ಗಜಲಿಗೆ ವಿಶಿಷ್ಟ ಸ್ಥಾನವಿದೆ. ಗಜಲ್ ಉರ್ದು ಕಾವ್ಯದ ಕೆನೆ; ಘನತೆ, ಗೌರವ, ಪ್ರತಿಷ್ಠೆಗಳ ಪ್ರತೀಕ. ಗಜಲ್ ಪ್ರೇಮ ಸಾಮ್ರಾಜ್ಞಿ, ರಸನಿಧಿ, ಬದುಕಿನ ರುಚಿ ಮತ್ತು ಬಟ್ಟೆ; ಆತ್ಮಾನಂದದ ತಂಬೆಳಕು.” ಗಜಲ್‌ಗಳು ಸಹೃದಯಿಗಳನ್ನು ಹೆಚ್ಚಾಗಿ ಆಕರ್ಷಿಸಲು ಮುಖ್ಯಕಾರಣವೇ ವಿರಹದ ನೋವಿನಲ್ಲಿರುವ ಪುರುಷನ ಚಮತ್ಕಾರದ ಮಾತುಗಳಿಂದಾಗಿಯೇ. ಅಲ್ಲದೆ ಹೆಣ್ಣಿನ ಸೆಳೆತದ ಕುರಿತು ಗಜಲ್ಕಾರರು ವ್ಯಕ್ತಪಡಿಸಿರುವ ಸಂಗತಿಗಳು ಎಂತವರನ್ನು ಓದಲು ಪ್ರೇರಣೆಯನ್ನು ನೀಡುತ್ತವೆ. ಪದ್ಯ ಮತ್ತು ಗದ್ಯ ರೂಪಗಳಲ್ಲಿ ಗಜಲ್‌ಗಳು ದೊರೆತರೂ ಹೆಚ್ಚಾಗಿ ಪದ್ಯ ಬಂಧದಲ್ಲಿಯೇ ಪ್ರಕಟಗೊಂಡಿವೆ. ಪ್ರೇಮ ಒಂದೇ ಗಜಲ್ ಸಾಹಿತ್ಯಕ್ಕೆ ವಸ್ತುವಾಗಿರುವುದಿಲ್ಲ. ಸಾಮಾಜಿಕ ಆಡಂಬರಗಳ ಕುರಿತು ಮಾರ್ಮಿಕವಾಗಿ ಗಜಲ್‌ಗಳು ಮೂಡಿಬಂದಿವೆ. ಸಮಾಜ ತಿದ್ದುವಲ್ಲಿ ಗಜಲ್‌ಗಳ ಕೊಡುಗೆ ವಿಶಿಷ್ಟವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಶಾಂತರಸ, (2006), ಗಝಲ್ ಮತ್ತು ಬಿಡಿ ದ್ವಿಪದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಚಿದಾನಂದ ಸಾಲಿ, (2007), ಮೌನ, ಅಭಿನವ ಪ್ರಕಾಶನ, ಬೆಂಗಳೂರು.
ಅಲ್ಲಾಗಿರಿರಾಜ ಕನಕಗಿರಿ, (2013), ನೂರು ಗಝಲ್, ಸಮೀರ ಪ್ರಕಾಶನ, ಕನಕಗಿರಿ.
ದಸ್ತಗಿರಿಸಾಬ್ ದಿನ್ನಿ, (2018), ಬಿಸಿಲು ಹೂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು.
ಚಿದಾನಂದ ಸಾಲಿ, (2021), ಗಾಳಿಗೆ ಬಳುಕಿದ ಬೆಳಕು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಮುಕ್ತಾಯಕ್ಕ ಎಚ್.ಎಸ್., (2022), ಮೈ ಔರ್ ಮೇರೆ ಲಮ್ಹೆ, ಸಂಗಾತ ಪುಸ್ತಕ, ರಾಜೂರ (ಗದಗ).