ಹೈದರಾಬಾದ್ ಕರ್ನಾಟಕದ ಕಥಾಸಾಹಿತ್ಯದ ಭಾಷೆ

Main Article Content

ನಾಗಪ್ಪ

Abstract

ಮನುಷ್ಯನು ತನ್ನ ನೆರೆಹೊರೆಯವರೊಂದಿಗೆ ಬೆರೆಯಲು ಭಾಷೆ ಒಂದು ಅತ್ಯಾವಶ್ಯಕವಾದ ಸಾಧನ. ಮಾನವನು ಕಂಡುಕೊಂಡ ಅಭಿವ್ಯಕ್ತಿ ಮಾಧ್ಯಮಗಳಲ್ಲೆಲ್ಲಾ ಭಾಷೆಯೇ ಅತ್ಯಂತ ಪ್ರಭಾವಶಾಲಿಯಾದ ಮಾಧ್ಯಮ. ಹಾಗೆಯೇ ಇತರ ಎಲ್ಲಾ ಪ್ರಾಣಿಗಳಿಂದ ಬೇರ್ಪಡಲು ಮೂಲ ಕಾರಣ. ಭಾಷೆ ಎನ್ನುವುದು ವ್ಯಕ್ತಿಯ ಅತ್ಯುತ್ತಮ ಅಭಿವ್ಯಕ್ತಿಯ ಮಾಧ್ಯಮ. ನಮ್ಮ ಮನಸ್ಸಿನ ಅಭಿಪ್ರಾಯ, ಅನಿಸಿಕೆ, ಭಾವನೆ, ಆಲೋಚನೆ, ಸುಖದುಃಖ, ನೋವುನಲಿವು, ಇತ್ಯಾದಿ ಸಂಗತಿಗಳನ್ನು ಇತರರ ಮುಂದೆ ವ್ಯಕ್ತಪಡಿಸಲು ಭಾಷೆಯಷ್ಟೆ ಸಹಕಾರಿಯಾದ ಮಾಧ್ಯಮ ಇನ್ನೊಂದಿಲ್ಲ. ಭಾಷೆ ಭಾವನೆಗಳ ಅಭಿವ್ಯಕ್ತಿ ಮಾಧ್ಯಮವೇ ಆದರೂ ಅಭಿವ್ಯಕ್ತಿಗೊಳಿಸುವ ಭಾಷೆಯಲ್ಲಿ ವೈವಿಧ್ಯತೆಯಿದೆ. ಅಂದರೆ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹ ಒಂದೇ ಭಾಷೆಯನ್ನು ಬಳಸಿದರೂ ಬಳಕೆಯ ಸಂದರ್ಭದಲ್ಲಿ ಹಲವು ವ್ಯತ್ಯಾಸಗಳು ಕಂಡು ಬರುತ್ತವೆ. ಹೀಗೆ ವ್ಯತ್ಯಾಸಗಳಿದ್ದಾಗ್ಯೂ ಆ ಭಾಷೆಯನ್ನು ಆಡುವವರು ಪರಸ್ಪರ ಅರ್ಥಮಾಡಿಕೊಳ್ಳಬಲ್ಲ ವಿಶಿಷ್ಟ ಪ್ರಾವೀಣ್ಯತೆಯೂ ಭಾಷೆಗಿದೆ. ವ್ಯಕ್ತಿಯೊಬ್ಬನು ಬಳಸುವ ಭಾಷೆಯು ಅವನ ಪ್ರದೇಶ, ಪರಿಸರ, ಸಮಾಜ, ಸಂಸ್ಕೃತಿ, ಅನ್ಯಭಾಷಾ ಪ್ರಭಾವ ಮುಂತಾದ ಅಂಶಗಳಿಗೆ ಅನುಗುಣವಾಗಿರುತ್ತದೆ. ಅಲ್ಲದೆ ಅಂತಹ ವ್ಯತ್ಯಾಸಗಳಿಗೆ ಭೌಗೋಳಿಕ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಕಾರಣವಾಗಿರಬಹುದು. ಸಾಮಾಜಿಕ ಭಾಷಾ ವಿಜ್ಞಾನಿಗಳು ಸಾಮಾಜಿಕ ಉಪಭಾಷೆಗಳು ಎರಡು ಕಾರಣಗಳಿಂದ ನಿರ್ಮಾಣವಾಗುತ್ತವೆ ಎಂದಿದ್ದಾರೆ. ಒಂದು ಸಾಮಾಜಿಕ ದೂರ, ಎರಡು ಸಾಮಾಜಿಕ ಪ್ರತಿಬಂಧಕಗಳು. ಒಂದು ಜಾತಿಯಿಂದ ಮತ್ತೊಂದು ಜಾತಿಗೆ ಇರುವ ದೂರ ಸಾಮಾಜಿಕ ಪ್ರಭೇದಕ್ಕೆ ಕಾರಣವಾದರೆ ಸಾಮಾಜಿಕ ಪ್ರತಿಬಂಧಕಗಳಾದ ವರ್ಗ, ಲಿಂಗ, ಅಧಿಕಾರ, ಶಿಕ್ಷಣ, ವಯಸ್ಸು ಮುಂತಾದ ಸಾಮಾಜಿಕ ಭಿನ್ನಾಂಶಗಳು ಸಾಮಾಜಿಕ ಪ್ರಭೇದದ ನಿರ್ಮಾಣಕ್ಕೆ ಕಾರಣವಾಗಿವೆ. ಹೀಗೆ ನಿರ್ಮಾಣಗೊಂಡ ಸಾಮಾಜಿಕ ಉಪಭಾಷೆಗಳನ್ನು ಸಾಮಾಜಿಕ ಭಿನ್ನಾಂಶಗಳಿಂದ ಅಧ್ಯಯನ ಮಾಡಬಹುದು.
ಹೀಗೆ ಪ್ರಾದೇಶಿಕ ಮತ್ತು ಸಾಮಾಜಿಕವಾಗಿ ಭಿನ್ನವಾಗಿರುವ ಭಾಷೆಗಳನ್ನು ಯಾರೇ ಬಳಸುತ್ತಿರಲಿ, ಅವರ ಭಾಷೆಯನ್ನು ಗಮನಿಸಿ ಕೆಲವು ಚಹರೆಗಳನ್ನು ಗುರುತಿಸಲು ಸಾಧ್ಯ. ವ್ಯಕ್ತಿಯು ಪುರುಷನೋ, ಸ್ತ್ರೀಯೋ ಯಾವ ಭೌಗೋಳಿಕ ಪ್ರದೇಶಕ್ಕೆ ಸೇರಿದವರು, ಸಾಮಾಜಿಕವಾಗಿ ಅವರ ಹಿನ್ನಲೆ ಏನು? ಈಗ ಮಾತನಾಡುತ್ತಿರುವ ಸಂದರ್ಭದ ಸ್ವರೂಪವೇನು? ಇದೇ ಮುಂತಾದ ಅಂಶಗಳು ನಮಗೆ ಅವರ ಮಾತನ್ನು ಕೇಳುವುದರಿಂದಲೇ ಬಹುಮಟ್ಟಿಗೆ ತಿಳಿಯುತ್ತವೆ. ಅಂದರೆ ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ವಿಶಿಷ್ಟವಾದ, ಅನ್ಯರಲ್ಲಿ ಇಲ್ಲದ ಕೆಲವು ಭಾಷಾ ಲಕ್ಷಣಗಳು ಅವರ ಭಾಷಾ ಬಳಕೆಯಲ್ಲಿ ಕಂಡು ಬರುತ್ತವೆ. ಆ ಲಕ್ಷಣಗಳನ್ನು ಗುರುತಿಸಿ ಮಾತನಾಡುವ ವ್ಯಕ್ತಿ ಇಂಥವರೇ ಎಂದು ಸಾಮಾನ್ಯವಾಗಿ ಗುರುತಿಸುತ್ತೇವೆ.

Article Details

Section

Research Articles

Author Biography

ನಾಗಪ್ಪ

ಕನ್ನಡ ಅಧ್ಯಾಪಕರು, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ.

References

ಅಂಗಡಿ ಎಸ್.ಎಸ್., (2017), ಕನ್ನಡ ಭಾಷಾಧ್ಯಯನ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಅಂಗಡಿ ಎಸ್.ಎಸ್., (2010), ಶಂಬಾ ಜೋಶಿ: ಭಾಷಿಕ ವಿವೇಚನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕರಿಗೌಡ ಬೀಚನಹಳ್ಳಿ, (2003), ಶತಮಾನದ ಸಣ್ಣಕತೆಗಳ ಸಮೀಕ್ಷೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಕೆಂಪೇಗೌಡ ಕೆ., (2000), ಭಾಷಾ ವಿಜ್ಞಾನ ಪರಿಚಯ, ಭಾರತಿ ಪ್ರಕಾಶನ, ಮೈಸೂರು.

ಕೆಂಪೇಗೌಡ ಕೆ., (2015), ಕನ್ನಡ ಭಾಷೆಯ ಚರಿತ್ರೆ, ಭಾರತಿ ಪ್ರಕಾಶನ, ಮೈಸೂರು.

ರಾಮನಾಥ ಎಚ್. ಕೆ., (2006), ಕನ್ನಡ ಭಾಷೆಯ ಬಳಕೆ, ಸಂಸ್ಕೃತಿ ಬುಕ್ ಏಜೆನ್ಸೀಸ್, ಮೈಸೂರು.

ಅಶೋಕ ಕುಮಾರ ರಂಜೇರೆ, (2006), ಗುಲಬರ್ಗಾ ಮತ್ತು ರಾಯಚೂರು ಪರಿಸರದ ದಲಿತ ಕನ್ನಡ ವೈಶಿಷ್ಟ್ಯಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.