ವಿಜಯನಗರದ ಅಪ್ರಕಟಿತ ಶಾಸನ ಹಾಗೂ ನೊಳಂಬರ ತುರುಗೊಳ್ ಗೋಗ್ರಹಣ ವೀರಗಲ್ಲು

Main Article Content

ವಿಜಯಕುಮಾರ ಎಸ್.

Abstract

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಾರಡಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯಾಧಿಪತಿಯಾದ ಶ್ರೀಕೃಷ್ಣದೇವರಾಯನ ಅಪ್ರಕಟಿತ ಶಾಸನ, ನೊಳಂಬ-ಗಂಗರ ಕಾಲಕ್ಕೆ ಸಂಬಂಧಿಸಿದ ತುರುಗೋಳ್ ವೀರಗಲ್ಲನ್ನು ಪತ್ತೆ ಹಚ್ಚಲಾಗಿದೆ. ಹಾರಡಿ ಎಂಬ ಗ್ರಾಮವು ಶಾಸನೋಕ್ತವಾಗಿ ‘ಹಾಲಡಿ/ಹಲಡಿ’ ಎಂದು ಉಲ್ಲೇಖಿಸಲ್ಪಟ್ಟಿದೆ. ಹಲ+ಇಡಿ ಅಥವಾ ಹಲ+ಅಡಿ ಎಂಬ ಪದಗಳಿಂದ ಹಾಲಡಿ ಅಥವಾ ಹಲಡಿ ಎಂಬ ಪದ ನಿಷ್ಪನ್ನವಾಗಿದೆ ಎಂದು ೂಹಿಸಬಹುದು. ‘ಹಲ’ ಎಂಬುದು ನಾಮಪದವಾಗಿರುವ ಸಾಧ್ಯತೆಗಳೂ ಇದೆ. ಹಾಗೆಯೇ ಹಲ ಎಂಬುದು ಕೃಷಿಯ ಉಪಕರಣವೂ ಹೌದು. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಈ ಕೃಷಿ ಬಳಕೆಯ ಉಪಕರಣವನ್ನು ತಯಾರಿಸುತ್ತಿರಬಹುದು ಅಥವಾ ‘ಹಲ’ನೆಂಬ ವ್ಯಕ್ತಿಯ ಅಡಿ(ಪಾದ)ಯಿಂದಾಗಿ ಈ ಗ್ರಾಮಕ್ಕೆ ಈ ಹೆಸರು ಬಂದಿರಲೂಬಹುದು ಎಂದು ಊಹಿಸಬಹುದಾಗಿದೆ.
ಶಾಸನವು ಮುಂಭಾಗ 10 ಸಾಲು ಹಿಂಭಾಗ 13 ಸಾಲು ಹೊಂದಿದೆ. ವಿಜಯನಗರದ ಕೃಷ್ಣರಾಯರ ಕಾಲಕ್ಕೆ ಸೇರಿದ್ದು “ನೆಲುವಾಗಿಲ ಸೀಮೆಯನ್ನು ನರಸನಾಯಕ ಅಯ್ಯನವರಿಗೆ ಗವುರೆನಾಯಕರು ಹಾಲಡಿಯ ಅಮರ ನಾಯಕತನವನು, ಸೀತಪ್ಪನ ಮಗ ಬಯಿರಪಗಳು ಬಸವಯ್ಯಗೆ ಗೊಡಗು ಮಾನ್ಯವಾಗಿ ವಿಶು ಸಂವತ್ಸರದಲ್ಲಿ” ದಾನ ನೀಡಿದ ಮಾಹಿತಿ ನೀಡುತ್ತದೆ. ಈ ಮಾನ್ಯಕ್ಕೆ ತಪ್ಪಿದವರು ವಾರಣಾಸಿಯಲ್ಲಿ ಹಸುವನ್ನು ಕೊಂದ ಪಾಪದಲ್ಲಿ ಹೋಗುವರು ಎಂಬ ಶಾಪಾಶಯವನ್ನು ಹೊಂದಿದೆ.
ನೊಳಂಬರ ಶಾಸನಗಳು ಅತಿಹೆಚ್ಚು ವೀರಗಲ್ಲುಗಳೇ ಇದ್ದು ಶಾಸನಗಳನ್ನು ಒಳಗೊಂಡ ಶಾಸನೋಕ್ತ ವೀರಗಲ್ಲುಗಳೇ ಆಗಿವೆ. ದೇವಾಲಯಗಳಿಗೆ ದಾನ ನೀಡಿದ ಶಾಸನಗಳನ್ನು ಸಹ ಗುರುತಿಸಬಹುದು. ಸುಮಾರು 1000 ವರ್ಷಗಳಿಗೂ ಮಿಗಿಲು ಕನ್ನಡ ನಾಡನ್ನು ಆಳಿದ ಕೀರ್ತಿ ಈ ವಂಶಕ್ಕೆ ಸಲ್ಲುತ್ತದೆ. ಸಾಮ್ರಾಟರಾಗಿ, ರಾಜರಾಗಿ, ಸಾಮಂತರಾಗಿ, ಮಾಂಡಲೀಕರಾಗಿ, ಸ್ವತಂತ್ರ ಪಾಳೇಗಾರರಾಗಿ ಕನ್ನಡ ನಾಡಿನಾದ್ಯಂತ ತಮ್ಮ ಚಹರೆಗಳನ್ನು ಉಳಿಸಿದ್ದಾರೆ. ಮೂಲ ಶೈವರಾದರೂ ಎಲ್ಲಾ ಧರ್ಮಗಳ ಸಮನ್ವಯಕಾರರಾಗಿರುವುದು ಕಾಣಬಹುದು. ಇವರ ರಾಜ ಲಾಂಛನ ನಂದಿ ಎನಿಸಿದರೂ ಇವರ ಎಲ್ಲಾ ವೀರಗಲ್ಲುಗಳಲ್ಲಿ ‘ಕುಂಭ ಮತ್ತು ಕಂಭ’ವನ್ನು ಕಾಣಬಹುದಾಗಿದೆ.

Article Details

Section

Research Articles

Author Biography

ವಿಜಯಕುಮಾರ ಎಸ್.

ಕನ್ನಡ ಉಪನ್ಯಾಸಕರು, ಶಾಸನ ಸಂಶೋಧಕರು, ಕುಂಬಳಹಳ್ಳಿ ಗ್ರಾಮ ಅಂಚೆ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. 

How to Cite

ವಿಜಯಕುಮಾರ ಎಸ್. (2025). ವಿಜಯನಗರದ ಅಪ್ರಕಟಿತ ಶಾಸನ ಹಾಗೂ ನೊಳಂಬರ ತುರುಗೊಳ್ ಗೋಗ್ರಹಣ ವೀರಗಲ್ಲು. ಅಕ್ಷರಸೂರ್ಯ (AKSHARASURYA), 7(05), 127 to 133. https://aksharasurya.com/index.php/latest/article/view/1327

References

ಲೂಯಿಸ್ ರೈಸ್ ಬಿ., (1905) ಸಂಪುಟ-09, ಬೆಂಗಳೂರು ಡಿಸ್ಟ್ರಿಕ್ಟಿನಲ್ಲಿರುವ ಶಾಸನಗಳು, ಮೈಸೂರು ಗೌರ್ಮೆಂಟ್ ಸೆಂಟ್ರಲ್ ಪ್ರೆಸ್.

ಲೂಯಿಸ್ ರೈಸ್ ಬಿ., (1905), ಸಂಪುಟ-10, ಕೋಲಾರ ಡಿಸ್ಟ್ರಿಕ್ಟಿನಲ್ಲಿರುವ ಶಾಸನಗಳು (2ನೇ ಸಂಚಿಕೆ), ಕನ್ನಡ ಮತ್ತು ಅರವನೆ ಪ್ರತಿ. ಮೈಸೂರು ಗೌರ್ಮೆಂಟ್ ಸೆಂಟ್ರಲ್ ಪ್ರೆಸ್.

ನೊಳಂಬ ಇತಿಹಾಸ ದರ್ಶನ, (1976), ನೊಳಂಬ ಪ್ರಿಂಟ್ಸ್, ತಿಪಟೂರು.

ಜಯಮ್ಮ ಕರಿಯಣ್ಣ ಎಚ್., (2008), ನೊಳಂಬ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಕರ್ನಾಟಕ ಇತಿಹಾಸ ಸಂಶೋಧನ ಮಂಡಳಿ, ಧಾರವಾಡ.