ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಅಸ್ಪೃಶ್ಯತೆ
Main Article Content
Abstract
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಹಿಂದೂ ಸಮಾಜಕ್ಕೆ ಕಳಂಕವೆನಿಸಿರುವ ಅಸ್ಪೃಶ್ಯತೆಯ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಭಾರತದಲ್ಲಿ ಮಾತ್ರ ಇದರ ಆಚರಣೆ ಏಕೆ ಮುಂದುವರೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಹಿಂದೂ ಸಮಾಜವನ್ನು ಮಾನವೀಯ ಮೌಲ್ಯಗಳು ಸಮಾನತೆ ಸ್ವಾತಂತ್ರ್ಯ, ನ್ಯಾಯ, ವಿಶ್ವ ಭ್ರಾತೃತ್ವದ ಆಧಾರದ ಮೇಲೆ ಪುನರ್ಘಟಿಸುವ ಪ್ರಯತ್ನವನ್ನು ಅವರ ಸಾಮಾಜಿಕ ಚಿಂತನೆಯಲ್ಲಿ ಕಾಣಬಹುದು. ಸಾಮಾಜಿಕ ಸಂಶೋಧನೆಯ ನೆಲೆಗಟ್ಟಿನಲ್ಲಿ ಅಂಬೇಡ್ಕರ್ ಅವರ ಅಸ್ಪೃಶ್ಯತೆಯ ಕುರಿತ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳು ತುಂಬಾ ಮಹತ್ವವಾಗಿವೆ. ಯುರೋಪಿನ ಚರಿತ್ರೆಯಲ್ಲಿ ಕಂಡುಬರುವ ಅನೇಕ ಅನ್ಯಾಯಗಳನ್ನು ಮೂಢನಂಬಿಕೆಗಳನ್ನು ನಿವಾರಿಸಲಾಗಿದೆ. ಆದರೆ ಭಾರತದಲ್ಲಿ ಹಿಂದೂ ಬ್ರಾಹ್ಮಣರು ಅಸ್ಪಶ್ಯತೆಯ ನಂಬಿಕೆಯಿಂದ ಮುಕ್ತವಾಗಿರುವುದು ನಿರೀಕ್ಷಿತ ಪ್ರಮಾಣದಲ್ಲಿ ಕಂಡು ಬರುತ್ತಿಲ್ಲ. ಹಿಂದುಗಳು ಅಸ್ಪೃಶ್ಯತೆ ವಿಷಯದಲ್ಲಿ ಸ್ವಹಿತಾಸಕ್ತಿ ಹೊಂದಿರುವುದು ಮೇಲ್ನೋಟಕ್ಕೆ ಗೋಚರಿಸುವ ಸಂಗತಿಯಾಗಿದೆ. ಧರ್ಮದ ತಳಹದಿಯನ್ನು ಹೊಂದಿರುವ ಅಸ್ಪೃಶ್ಯತೆಯು ಹಿಂದುಗಳ ನಡುವೆ ನ್ಯಾಯ ಸ್ಥಾಪಿಸಲು ಅಸಮರ್ಥವಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಅಸ್ಪೃಶ್ಯರು ಜ್ಞಾನ ಮತ್ತು ಶಿಕ್ಷಣವನ್ನು ಪಡೆದುಕೊಳ್ಳುವುದರ ಮೂಲಕ ಅನ್ಯಾಯ ಅನರ್ಥ ಅಥವಾ ಅನಾಚಾರಗಳನ್ನು ವಿರೋಧಿಸಬಹುದು ಎಂಬುದು ಅಂಬೇಡ್ಕರ್ ಅವರ ಪ್ರಬಲವಾದ ನಂಬಿಕೆಯಾಗಿತ್ತು. ಜಗತ್ತಿನ ಇತರ ದೇಶಗಳಲ್ಲಿ ಅಸ್ತಿತ್ವದಲ್ಲಿದ್ದ ದಾಸ್ಯ ಪ್ರವೃತ್ತಿಗೂ ಅವುಗಳ ತಳಹದಿಗೂ ಭಾರತದಲ್ಲಿನ ಅಸ್ಪೃಶ್ಯತೆಯ ತಳಹದಿಗೂ ಇರುವ ಸ್ಪಷ್ಟ ವ್ಯತ್ಯಾಸವನ್ನು ಅಂಬೇಡ್ಕರ್ ಗುರುತಿಸಿದ್ದರು. ಮಾನವ ಇತಿಹಾಸದಲ್ಲಿ ಅತ್ಯಂತ ನಿಕೃಷ್ಟ ಆಚರಣೆ ಅಸ್ಪೃಶ್ಯತೆ ಎಂಬುದು ಅಂಬೇಡ್ಕರ್ ಅಭಿಪ್ರಾಯವಾಗಿತ್ತು. ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆಯ ನಿವಾರಣೆ ಕುರಿತು ಹಿಂದುಗಳ ಹಾಗೂ ಅಸ್ಪೃಶ್ಯರ ನಡುವೆ ಘರ್ಷಣೆ ಅನಿವಾರ್ಯ ಎಂಬುದನ್ನು ಮನಗಂಡಿದ್ದರು. ಸಂವಿಧಾನದ ಆರ್ಟಿಕಲ್ 17ರಲ್ಲಿ ಅಸ್ಪೃಶ್ಯತೆ ನಿವಾರಣೆಯ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಅಂಬೇಡ್ಕರ್‌ರ ಅಸ್ಪೃಶ್ಯತೆಯ ನಿವಾರಣೆಯ ಕನಸು ಇನ್ನು ಪೂರ್ಣವಾಗಿ ಸಾಕಾರಗೊಂಡಿಲ್ಲವೆಂದು ಹೇಳಬಹುದು. ಧರ್ಮದ ಬೆಂಬಲವಿರುವ ಒಂದು ಸಾಮಾಜಿಕ ಆಚರಣೆಯ ನಿವಾರಣೆ ಎಷ್ಟು ಕಷ್ಟ ಸಾಧ್ಯ ಎಂಬುದನ್ನು ಅಂಬೇಡ್ಕರ್ ಮನಗಂಡಿದ್ದರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಂಬೇಡ್ಕರ್ ಬಿ.ಆರ್ , (2015), ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು: ಸಂಪುಟ-1-21, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು.
ಅರವಿಂದ ಮಾಲಗತ್ತಿ, (2003), ಸಾಹಿತ್ಯ ಸಂಸ್ಕೃತಿ ಮತ್ತು ದಲಿತ ಪ್ರಜ್ಞೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಭುವನೇಶ್ವರ್ ಎಂ.ಪಿ., (2009), ದಲಿತ ಜ್ವಾಲೆ ಡಾ. ಅಂಬೇಡ್ಕರ್, ಶಬರಿಮಲಯನ್ ಬುಕ್ ಡಿಸ್ಟ್ರಿಬ್ಯೂಟರ್, ಬೆಂಗಳೂರು.