ಪರಂಪರೆ ಮತ್ತು ನವೋದಯ ಸಾಹಿತ್ಯ
Main Article Content
Abstract
ಮಾನವನ ಸಂಸ್ಕೃತಿ ಮತ್ತು ನಾಗರಿಕತೆಗೆ ಸುದೀರ್ಘವಾದ ಪರಂಪರೆ ಇದೆ. ಪ್ರಾಣಿಯಂತಿದ್ದ ಅಂದಿನ ಮಾನವ ಜೀವನಕ್ಕೂ, ವೈವಿಧ್ಯಮಯವಾಗಿ ಜೀವನ ಕ್ರಮವನ್ನು ಕಂಡುಕೊಂಡ ಇಂದಿನ ಮಾನವನ ಜೀವನ ಕ್ರಮಕ್ಕೂ ಅಜಗಜಾಂತರದ ವ್ಯತ್ಯಾಸವನ್ನು ಕಾಣುತ್ತೇವೆ. ಈ ವೈಪರೀತ್ಯವನ್ನು ಗಮನಿಸಿದಾಗ, ಮಾನವನು ಅನೇಕ ಮಜಲುಗಳನ್ನು ದಾಟಿಕೊಂಡು ಬಂದಿದ್ದಾನೆ ಎಂಬುದು ಸರಿ. ಮಾನವನ ಈ ವಿಕಾಸದ ಚರಿತ್ರೆಯನ್ನು, ಬೌದ್ಧಿಕ ಮಜಲುಗಳನ್ನು ಸಾಹಿತ್ಯ ಪರಂಪರೆ ನಮಗೆ ತಿಳಿಸಿಕೊಡುತ್ತದೆ.
ಸಾಹಿತ್ಯ ರಚನೆ ಮಾನವನು ಸಾಧಿಸಿದ ಅದ್ಭುತಗಳಲ್ಲಿ ಒಂದು. ಮಾನವನ ಜೀವನ ಮತ್ತು ಸಾಹಿತ್ಯಗಳೆರಡೂ ಪರಸ್ಪರ ಪೂರಕ ಮತ್ತು ಪೋಷಕವಾದವುಗಳು. ಒಂದರಿಂದ ಒಂದು ಪ್ರಭಾವಿತವಾಗಿ ಬೆಳೆಯುತ್ತಾ ಹೋಗುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಸಾಹಿತ್ಯ ರಚನೆ ಮಾನವನು ವಿಚಾರಶೀಲನಾದಾಗಿನಿಂದ ಒಂದಲ್ಲ ಒಂದು ವಿಧದಲ್ಲಿ, ಒಂದಲ್ಲ ಒಂದು ರೂಪದಲ್ಲಿ ರಚಿಸುತ್ತಾ, ರಕ್ಷಿಸುತ್ತಾ ಬಂದಿದ್ದಾನೆ. ಸಾಹಿತ್ಯವೆಂಬುದು ಮನುಷ್ಯನ ಸಮಸ್ತ ಅನುಭವಗಳ ಅಭಿವ್ಯಕ್ತಿಯಾಗಿರುವುದರಿಂದ ಸಹಜವಾಗಿ ಅದರಲ್ಲಿ ವೈವಿಧ್ಯತೆ ಮತ್ತು ಸಂಕೀರ್ಣತೆಗಳು ಉಂಟಾಗುತ್ತವೆ. ಸೃಜನಶೀಲ ಲೇಖಕರು ಸಾಹಿತ್ಯವನ್ನು ವಿವಿಧ ರೂಪಗಳಲ್ಲಿ ಸೃಷ್ಟಿಸುತ್ತಾ ಹೋಗುತ್ತಾರೆ. ಇದರ ಪರಿಣಾಮವಾಗಿಯೇ ಸಾಹಿತ್ಯ ಪರಂಪರೆಗಳು ವೈವಿಧ್ಯಮಯವಾಗಿ ಬೆಳೆದಿವೆ. ಇದಕ್ಕೆ ಕನ್ನಡವೂ ಹೊರತಲ್ಲ. ಪರಂಪರೆಯುದ್ದಕ್ಕೂ ಅನೇಕ ಪ್ರಕಾರಗಳಲ್ಲಿ, ಅಭಿವ್ಯಕ್ತಿ ಮತ್ತು ಆಶಯಗಳಿಗನುಗುಣವಾಗಿ ಬಹುಮುಖಿಯಾಗಿ ಸಾಗಿಬಂದಿದೆ. ಮೌಖಿಕ ಪರಂಪರೆಯಲ್ಲಿ ಕಂಠಸ್ಥವಾಗಿ, ಲಿಖಿತ ಪರಂಪರೆಯಲ್ಲಿ ಅಕ್ಷರ ರೂಪದಲ್ಲಿ - ಹಳಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯ ಪರಂಪರೆಯ ಆವಸ್ಥೆಗಳಾಗಿ ಬೆಳೆದುಬಂದರೆ, ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಿಂದ ಪ್ರಾರಂಭಗೊಂಡು ವೈವಿಧ್ಯಮಯವಾಗಿ ಮುನ್ನಡೆಯುತ್ತಿರುವ ಸಾಹಿತ್ಯವೇ ‘ಆಧುನಿಕ’ ಅಥವಾ ‘ಹೊಸಗನ್ನಡ ಸಾಹಿತ್ಯ’ ಎಂದು ಪ್ರಚಲಿತವಾಗಿದೆ. ಈ ಕಾಲಘಟ್ಟದ ಸಾಹಿತ್ಯ ಪರಂಪರೆಯು ಕಾವ್ಯ, ಮಹಾಕಾವ್ಯ, ಕಥೆ, ಕಾದಂಬರಿ, ನಾಟಕ ಮುಂತಾದ ಹಲವಾರು ರೂಪಗಳಲ್ಲಿ ಸಮಕಾಲೀನ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಟ್ಟಿದೆ. ದೃಷ್ಟಿ ಧೋರಣೆಗಳಿಗೆ ಅನುಗುಣವಾಗಿ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಎಂದು ನಾಲ್ಕು ಘಟ್ಟಗಳಾಗಿ ವರ್ಗೀಕರಿಸಲಾಗಿದೆ. ಕಾಲಮಾನಕ್ಕೆ ಅನುಗುಣವಾಗಿ ಸಾಹಿತ್ಯ ರಚನೆಯ ಮನೋಧರ್ಮದಲ್ಲಿ ಆಗಿರುವ ಬದಲಾವಣೆಗಳನ್ನು ಈ ನಾಲ್ಕು ಘಟ್ಟಗಳ ಮೂಲಕ ಗುರುತಿಸಲಾಗಿದೆ. ಈ ಮುಖೇನ ಮೂಡಿಬಂದ ಸಾಹಿತ್ಯ ರೂಪಗಳು, ಸಮಕಾಲೀನ ಸ್ಥಿತಿಗತಿಗಳು, ಸಾಮಾಜಿಕ ಮೌಲ್ಯಗಳು ಸಾಹಿತ್ಯ ಪರಂಪರೆಯಲ್ಲಿ ಹೇಗೆ ಮೂಡಿಬಂದಿವೆ ಎನ್ನುವ ವಿಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, “ಪರಂಪರೆ ಮತ್ತು ನವೋದಯ ಸಾಹಿತ್ಯ” ವಿಷಯವನ್ನು ಆಯ್ಕೆ ಮಾಡಿಕೊಂಡು ಪ್ರಮುಖ ವಿಚಾರ ಪರಂಪರೆಗಳನ್ನು ಈ ಸಂಶೋಧನಾ ಲೇಖನದಲ್ಲಿ ಮಂಡಿಸಲಾಗಿದೆ. ಪ್ರಸ್ತುತ ಈ ಲೇಖನದ ಸಂಕ್ಷಿಪ್ತ ಸಾರಲೇಖ ಇದಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಶ್ರೀಕಂಠಯ್ಯ ಬಿ.ಎಂ., (1985), ಕನ್ನಡ ಮಾತು ತಲೆಯತ್ತುವ ಬಗೆ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.
ಶಿವರುದ್ರಪ್ಪ ಜಿ.ಎಸ್., (2019), ಸಮಗ್ರ ಗದ್ಯ ಸಂಪುಟಗಳು, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
ಶ್ರೀನಿವಾಸ ಹಾವನೂರು, (2011), ಹೊಸಗನ್ನಡ ಅರುಣೋದಯ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ಶೇಷಗಿರಿರಾವ್ ಎಲ್.ಎಸ್., (2008), ಹೊಸಗನ್ನಡ ಸಾಹಿತ್ಯ ಚರಿತ್ರೆ, ಅಂಕಿತ ಪುಸ್ತಕ, ಬೆಂಗಳೂರು.
ಅಮೂರ ಜಿ.ಎಸ್., (2013), ಕನ್ನಡ ಕಥನ ಸಾಹಿತ್ಯ: ಕಾದಂಬರಿ, ಸಪ್ನ ಬುಕ್ ಹೌಸ್, ಬೆಂಗಳೂರು.
ನಾಯಕ ಹಾ.ಮಾ. (ಪ್ರ.ಸಂ.), (1984), ವಿಮರ್ಶೆಯ ಮಾರ್ಗ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸುರು.
ಶ್ರೀಕಂಠಯ್ಯ ತೀ.ನಂ., (2005), ಭಾರತೀಯ ಕಾವ್ಯಮೀಮಾಂಸೆ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ಶಿವಾರೆಡ್ಡಿ ಕೆ. (ಸಂ, (2021), ಕುವೆಂಪು ಸಮಗ್ರ ಗದ್ಯ: ಸಂಪುಟ-8, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಲಕ್ಷ್ಮೀಕಾಂತ ಪಂಚಾಳ (ಸಂ), (2022), ನವೋದಯ ಸಾಹಿತ್ಯ ರೂಪಗಳು, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ
ತಿಪ್ಪೇರುದ್ರ ಸಂಡೂರು (ಸಂ), (2022), ನವೋದಯ ಸಾಹಿತ್ಯ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ.