ವಚನ ಸಾಹಿತ್ಯದಲ್ಲಿ ಪರಂಪರೆ ಹಾಗೂ ಆಧುನಿಕ ಚಿಂತನೆಗಳು
Main Article Content
Abstract
ವಚನ ಸಾಹಿತ್ಯದಲ್ಲಿ ಪರಂಪರೆ ಹಾಗೂ ಆಧುನಿಕ ಚಿಂತನೆಗಳು ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ನಡುಗನ್ನಡ ಸಾಹಿತ್ಯದ ಮೂಲಕ ದೇಶೀ ಛಂದಸ್ಸಿನ ಕಡೆಗೆ ಗಮನ ಹರಿಸಿದ ಕಾಲಘಟ್ಟದಲ್ಲಿ ಹಲವಾರು ಕವಿಗಳು ದೇಶೀ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಳ್ಳುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಿ ಶ್ರೀಮಂತಗೊಳಿಸುತ್ತಾರೆ. ಇಂತಹ ಆಶಾದಾಯಕ ಪರಿವರ್ತನೆಯನ್ನು ಮಾಡಿದ ಘನತೆಯು ನಮ್ಮ ವಚನಕಾರರಿಗೆ ಸಲ್ಲುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಒಂದು ಹೊಸ ಕ್ರಾಂತಿಯನ್ನೇ ಉಂಟುಮಾಡಿದ ವಚನ ಸಾಹಿತ್ಯದ ಉಗಮವು ಭಾಗವತ ಪಂಥದ ಬುಡವನ್ನೇ ಅಲುಗಾಡಿಸುವ ಮೂಲಕ ಅದನ್ನು ಸಂಪೂರ್ಣವಾಗಿ ಮರೆಮಾಡುವ ಮುಖೇನ ವಚನ ಸಾಹಿತ್ಯವು ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ. ಇಲ್ಲಿ ಪ್ರಮುಖವಾಗಿ ಸಾಹಿತ್ಯವೆಂಬುದು ಒಂದು ನಿಂತ ನೀರಲ್ಲ; ಅದು ನಿರಂತರವಾಗಿ ಹರಿಯುವ ಮೂಲಕ ಹೊಸದಾಗಿ ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ. ಕಾಲಕಾಲಕ್ಕೆ ಮಾನವ ಸಮಾಜವು ಬದಲಾವಣೆಗಳನ್ನು ಹೊಂದುತ್ತಿರುವಂತೆಯೇ ಸಾಹಿತ್ಯವೂ ಕೂಡ ಬದಲಾವಣೆಗಳನ್ನು ಹೊಂದುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಇಂತಹ ಬದಲಾವಣೆಗಳು ಎಂಬುದು ಏಕಕಾಲಕ್ಕೆ ಆಗುವಂತಹುದು ಸಾಧ್ಯವಿಲ್ಲ, ಇದಕ್ಕೆ ಬಹುಕಾಲಗಳ ಅವಶ್ಯಕತೆ ಎಂಬುದು ಇರುತ್ತದೆ. ನಮ್ಮ ಕನ್ನಡ ಸಾಹಿತ್ಯದಲ್ಲಿಯೂ ಕೂಡ ಶತಮಾನದಲ್ಲಿ ಮಹತ್ತರವಾದ ಬದಲಾವಣೆಗಳ ಮೂಲಕ ಬಂದು ಬಹುದೊಡ್ಡ ವಚನಕಾರರ ಕ್ರಾಂತಿಯೇ ನಡೆದು ಹೋಗಿತ್ತು ಎಂಬುದನ್ನು ನಾವು ಗಮನಿಸಬಹುದಾಗಿದೆ.
ವಚನ ಸಾಹಿತ್ಯದಲ್ಲಿ ವಚನಕಾರರು ಸರಳವೂ ಸುಂದರವೂ ಆದ ಮತ್ತು ಜನಸಾಮಾನ್ಯರ ಮನಮುಟ್ಟುವಂತಹ ವಚನಗಳನ್ನು ರಚಿಸಿದರು. ಈ ವಚನಗಳೆಲ್ಲವೂ ಕನ್ನಡಿಗರ ಆಸ್ತಿ ಎಂದರೂ ತಪ್ಪಾಗಲಾರದು. ಪ್ರತಿಯೊಬ್ಬ ಶಿವಶರಣ ಹಾಗೂ ಶರಣೆಯರು ಹಾಡಿದಂತಹ ವಚನಗಳು ಎಲ್ಲವೂ ಗದ್ಯ ರೂಪದ ಮಾದರಿಯಲ್ಲಿಯೇ ಇದ್ದ ಕಾರಣ ಅವುಗಳಿಗೆ ವಚನಗಳೆಂಬ ಹೆಸರು ರೂಢಿಗೆ ಬಂದಿರಬಹುದು ಎಂಬುದಾಗಿ ತಿಳಿಯಬಹುದಾಗಿದೆ. ವಚನಗಳೆಲ್ಲವೂ ಆಧ್ಯಾತ್ಮಪರವಾದವುಗಳಾಗಿವೆ. ವಚನಕಾರರ ಮೂಲ ಉದ್ದೇಶ ಸಮಾಜದಲ್ಲಿ ಸಮಾನತೆ, ಪ್ರೀತಿ, ವಿಶ್ವಾಸ, ಭ್ರಾತೃತ್ವದ ಅಂಶಗಳನ್ನು ಮೂಡಿಸುವುದೇ ಆಗಿದೆ. ಅಂಧಕಾರ ಅಥವಾ ಅಜ್ಞಾನ ಹಾಗೂ ಮೂಢತನದಲ್ಲಿ ಮುಳುಗಿರುವ ಜನರನ್ನು ಬಡಿದೆಚ್ಚರಿಸುವ ಮೂಲಕ ಅವರಿಗೆ ಜ್ಞಾನೋದಯವನ್ನು ಮೂಡಿಸುವ ಕಾರ್ಯ ವೈಖರಿಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದು ಉತ್ತಮ ಮಾರ್ಗದಲ್ಲಿ ತನ್ನ ಬದುಕನ್ನು ಸಾಗಿಸುವ ಮೂಲಕ ತಮ್ಮ ಆತ್ಮೋದ್ಧಾರದ ಹೆದ್ದಾರಿಯಲ್ಲಿ ನಡೆಯಬೇಕು ಎಂಬುದೇ ಶರಣರ ಆಶಯ ಆಗಿರುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬ ಮಾನವನ ಬದುಕು ಕೂಡ ಸಾರ್ಥಕವಾಗಬೇಕು ಎಂಬುದಾಗಿ ಆಶಿಸುವವರು ನಮ್ಮ ವಚನಕಾರರು. ವಚನ ಸಾಹಿತ್ಯವು ನಮ್ಮ ಭಾರತೀಯ ಧಾರ್ಮಿಕತೆ ಮತ್ತು ತಾತ್ವಿಕತೆಗಳ ಪರಂಪರೆಯ ವಿಚಾರಗಳನ್ನು ಪರಿಚಯಿಸುತ್ತಲೇ, ಆಧುನಿಕ ಸಮಾಜಕ್ಕೆ ಬೇಕಾದ ಸಮಾನತೆ, ನ್ಯಾಯ, ಸ್ವಾತಂತ್ರ್ಯ, ಪ್ರೀತಿ, ಸೌಹಾರ್ದತೆ ಎಂಬ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಒಟ್ಟಾರೆ ವಚನ ಸಾಹಿತ್ಯವು ಪರಂಪರೆಯ ಮೂಲ ಅಡಿಪಾಯಗಳ ಮೇಲೆ ನಿಂತು ಸಮಾಜದಲ್ಲಿ ತನ್ನ ವಿಶಿಷ್ಟ ಚಿಂತನೆಗಳ ಮೂಲಕ ಹೊಸತನವನ್ನು ಮೂಡಿಸುವಲ್ಲಿ ತನ್ನದೇ ಆದ ಛಾಪನ್ನು ಹೊಂದಿದ್ದು ಮೌಲ್ಯಗಳ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ಮಾಡಿರುವುದನ್ನು ಕಾಣಬಹುದಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಮರಳಯ್ಯ ಸಾ.ಶಿ. (ಸಂ), (1993), ಅಕ್ಕನ ವಚನಗಳು, ರಾಗಿಣಿ ಶಿಕ್ಷಣ ಪ್ರತಿಷ್ಠಾನ, ಬೆಂಗಳೂರು.
ಹಿರೇಮಠ ಆರ್.ಸಿ. (ಸಂ.), (1968), ಅಮುಗೆ ರಾಯಮ್ಮನ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಹಿರೇಮಠ ಆರ್.ಸಿ. (ಸಂ.), (1968), ಅಕ್ಕಮ್ಮನ ವಚನಗಳುಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಗಿರಿರಾಜು ಪಿ.ಎಂ. (ಸಂ.), (1980), ಆಚರಣೆ ಸಂಬಂಧದ ವಚನಗಳು: ಸಂಪಾದನೆಯ ಸಿದ್ಧ ವೀರೇಶ್ವರ ದೇವರು, ಶರಣ ಸಂತಾನ ಪ್ರಕಾಶನ, ಮೈಸೂರು.
ವೀರಣ್ಣ ರಾಜೂರ, (1993), ಶಿವಶರಣೆಯರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.