ಪಾರಂಪರಿಕ ತತ್ವಪದಗಳ ಅನುಸರಣೆ ಮತ್ತು ಸಮಕಾಲೀನ ವಿಶ್ಲೇಷಣೆ
Main Article Content
Abstract
ತತ್ವಪದಕಾರರು ಅನುಭವದ ಚಳುವಳಿಯನ್ನು ಹುಟ್ಟುಹಾಕಿ ತಮ್ಮ ತತ್ವಪದಗಳ ರಚನೆಯ ಮೂಲಕ ಜೀವಂತವಾಗಿರಿಸಿದ್ದಾರೆ. ಅವರು ಸಂಚರಿಸಿದಲ್ಲೆಲ್ಲಾ ಅನುಭಾವದ ಹೊಳೆಯನ್ನೇ ಹರಿಸಿದ್ದಾರೆ. ತಮಗೆ ತಾವೇ ಗುರುವಾಗಿ, ಅರಿವಾಗಿ, ಗುರುವಿನ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ. ಆಧ್ಯಾತ್ಮದ ಸಾಮರ್ಥ್ಯವನ್ನು ಸಿದ್ಧಿಸಿಕೊಂಡು ಬಹುಮುಖಿ ಚಿಂತನೆಯ ಪ್ರತೀಕದಂತೆ ಗೋಚರಿಸುತ್ತಾರೆ. ತತ್ವಪದಕಾರರಿಗೆ ನಾಥ, ಸಿದ್ಧ, ಆರೂಢ, ಅವಧೂತ, ಸೂಫಿ ಮೊದಲಾದ ಧಾರೆಗಳ ಪ್ರಭಾವ ಆಗಿರುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ತತ್ವದ ಉದ್ದೇಶ ಅರಿವು ಅಥವಾ ವಿವೇಕವನ್ನು ನೀಡುವುದು. ಜಟಿಲವಾದ ಆಧ್ಯಾತ್ಮವನ್ನು ಸರಳೀಕರಣಗೊಳಿಸುವುದು ತತ್ವಪದಕಾರರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ದೇವರು ಅಥವಾ ಪರಮಾತ್ಮನಿಗೆ ಸಂಬಂಧಿಸಿದ ಹದಗೊಂಡ ಸಿದ್ಧಾಂತವನ್ನು ಸುಂದರವಾದ ಹಾಡಿನ ಮೂಲಕ ಅಭಿವ್ಯಕ್ತಿಸುವ ಕ್ರಿಯೆಗೆ ತತ್ವಪದ ಎಂದು ಕರೆಯಲಾಗುತ್ತದೆ. ಆಧುನಿಕ ಸಮಾಜದಲ್ಲಿ ತತ್ವಪದಗಳು ಕೇವಲ ಭಕ್ತಿ ಮತ್ತು ತಾತ್ತ್ವಿಕ ವಿಚಾರಗಳನ್ನು ಮಾತ್ರವಲ್ಲದೆ, ಮೌಲ್ಯಮಾಪನ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಪ್ರೇರಕಶಕ್ತಿಯಾಗಿ ಮುಂದುವರಿಯುತ್ತಿವೆ. ತತ್ತ್ವಪದಗಳ ಮೂಲಕ ಜೀವನದ ನೈತಿಕ ಮೌಲ್ಯಗಳನ್ನು, ಸಹಜ ಶ್ರೇಣಿಭೇದ ವಿರೋಧವನ್ನು, ಸಮಾನತೆ ಮತ್ತು ಸತ್ಯಾಸತ್ಯತೆಯ ಪ್ರಭಾವವನ್ನು ವಿಶ್ಲೇಷಿಸಲು ಸಾಧ್ಯವಾಗಿದೆ. ನಾವು ಬಸವಣ್ಣನವರ, ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ದಾಸಸಾಹಿತ್ಯದ ತತ್ವಪದಗಳನ್ನು ಆಧುನಿಕ ದೃಷ್ಟಿಕೋನದಿಂದ ನೋಡಿದರೆ, ಅವುಗಳು ತತ್ವಜ್ಞಾನ ಮತ್ತು ಸಾಮಾಜಿಕ ನಿಲುವುಗಳ ಹೊಸ ಅರ್ಥಗಳನ್ನು ನೀಡುತ್ತವೆ. ಉದಾಹರಣೆಗೆ, ಬಸವಣ್ಣನವರ “ಕಾಯಕವೇ ಕೈಲಾಸ” ಎಂಬ ತತ್ವಪದ ಇಂದು ಉದ್ಯೋಗನೀತಿ, ಶ್ರಮದ ಗೌರವ, ಮತ್ತು ಆರ್ಥಿಕ ಸ್ವಾವಲಂಬನೆಯ ತತ್ವವಾಗಿ ವ್ಯಾಖ್ಯಾನಿಸಲಾಗುತ್ತಿದೆ. ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ, ಮಾಧ್ಯಮ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಆದ ಬದಲಾವಣೆಗಳು ತತ್ವಪದಗಳ ಮೇಲೂ ಪರಿಣಾಮ ಬೀರಿವೆ. ಆದರೂ ಅವು ತಮ್ಮ ಮೂಲ ಸತ್ವವನ್ನು ಉಳಿಸಿಕೊಂಡು ಹೊಸ ಆಯಾಮಗಳನ್ನು ಪಡೆದುಕೊಂಡಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ರಹಮತ್ ತರೀಕೆರೆ, (2017), ತತ್ವಪದ ಪ್ರವೇಶಿಕೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.
ವಿಜಯಶ್ರೀ ಸಬರದ, (1997), ಗುರು ಶಿಷ್ಯರ ತತ್ವಪದಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.
ಆನಂದಮೂರ್ತಿ ಜಿ.ವಿ., (1998,) ತತ್ವಪದಕಾರರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಅಮರೇಶ ನುಗಡೋಣಿ, (2017), ತತ್ವಪದ ಸಾಹಿತ್ಯ ಅಧ್ಯಯನ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಬಸವರಾಜ ಸಬರದ (ಸಂ), (2000), ಹೈದ್ರಾಬಾದ್ ಕರ್ನಾಟಕದ ತತ್ವಪದಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಶಿವಾನಂದ ಗುಬ್ಬಣ್ಣವರ (ಸಂ), (2002), ಶಿಶುನಾಳ ಶರೀಫರ ಗೀತೆಗಳು, ಅಕ್ಷರ ಪ್ರಕಾಶನ, ಧಾರವಾಡ.
ಚಿಲ್ಕರಾಗಿ ಸಿ.ಬಿ., (2012), ನೂರೆಂಟು ನಾಯಿ ಬೊಗಳಿದರೇನು, ಅದಿತಿ ಪ್ರಕಾಶನ, ರಾಯಚೂರು.
ಅಮರೇಶ ನುಗಡೋಣಿ, (1999), ನುಡಿವ ಬೆಡಗು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಭಾಸ್ಕರ್ ಟಿ.ಎಂ. (ಸಂ), (2001), ಮಹಾಗಾಂವ ಮೀರಾಸಾಬ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.