ತತ್ವಪದ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ
Main Article Content
Abstract
‘ತತ್ವ’ ಮತ್ತು ‘ಪದ’ಗಳಿಂದ ತತ್ವಪದದ ನಿಷ್ಪತ್ತಿಯನ್ನು ನಾವು ನೋಡುವುದಾದರೆ, ‘ತತ್ವ’ ಎಂದರೆ ‘ಯಥಾರ್ಥತೆ’, ನಿಜಸ್ಥಿತಿ, ಬ್ರಹ್ಮ, ಸಾರಸ್ವರೂಪ, ಸ್ವಭಾವ, ವಸ್ತು, ಪಂಚಭೂತ, ಮೂಲ ಪದಾರ್ಥ, ಸಿದ್ಧಾಂತ, ದರ್ಶನ ಎಂಬ ಅರ್ಥಗಳನ್ನು ಒಳಗೊಂಡಿದೆ. ‘ಪದ’ ಎಂದರೆ ‘ಹಾಡು’, ‘ಹದಗೊಂಡ ಶಬ್ದ’ ಎಂಬ ಅರ್ಥ ನಮಗೆ ತಿಳಿಯುತ್ತದೆ. ಒಟ್ಟಾರೆಯಾಗಿ ತತ್ವಪದ ಎಂದರೆ ಪರಮಾರ್ಥಕ್ಕೆ ಸಂಬಂಧಿಸಿದ ಸಿದ್ಧಾಂತವನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಕ್ರಿಯೆಗೆ ತತ್ವಪದ ಎನ್ನುತ್ತಾರೆ.
ಕರ್ನಾಟಕದಾದ್ಯಂತ ದೇಸಿ ಸಾಹಿತ್ಯ ಪರಂಪರೆಯ ಸಾಲಿನಲ್ಲಿ ಈ ತತ್ವಪದವನ್ನು ಅವಲೋಕಿಸಲು ಸಾಧ್ಯ. ತತ್ವಪದಗಳ ವಿಶೇಷತೆ ಎಂದರೆ ಈ ಸಾಹಿತ್ಯ ಪರಂಪರೆ ಹುಟ್ಟುವ ಸ್ಥಳ, ಕಾಲ ಹಾಗೂ ಅಲ್ಲಿನ ಜನರ ಮನಸ್ಥಿತಿಗಳನ್ನು ಒಳಗೊಂಡಿರುತ್ತದೆ. ಇಂತಹ ಅನುಭವ ಸಾಹಿತ್ಯದಲ್ಲಿ ಆ ಕಾಲದ ವೈರುಧ್ಯಗಳು ಎದ್ದು ಕಾಣುತ್ತವೆ. ಅಂತಹ ವೈರುಧ್ಯಗಳಲ್ಲಿ ಪರಂಪರೆ ಮತ್ತು ಆಧುನಿಕತೆ ಎಂಬ ಪರಿಕಲ್ಪನೆಗಳು ಮುಖ್ಯವಾಗಿವೆ.
ಆಧುನಿಕತೆ ಎಂದರೆ ಹೊಸತು, ವರ್ತಮಾನಕ್ಕೆ ಸಂಬಂಧಿಸಿದ್ದು, ಪರಂಪರೆಗೆ ವಿರುದ್ಧವಾದದ್ದು, ಬೇರೆ ಮೂಲದಿಂದ ಬಂದದ್ದು, ಹೀಗೆ ಬೇರೆ ಬೇರೆ ಅರ್ಥಗಳಲ್ಲಿ ಅರ್ಥೈಸಿಕೊಂಡಿದ್ದೇವೆ. ಆಧುನಿಕತೆ ಎಂಬುದು ಜೀವನಶೈಲಿಗೆ ಸಂಬಂಧಿಸಿದ್ದು. ಕೆಲವೊಂದು ಸಂದರ್ಭದಲ್ಲಿ ಒಂದೇ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ನಡೆಯುವ ಬದಲಾವಣೆಗಳನ್ನು ಸೂಚಿಸಲು ಕಾಲದ ದೃಷ್ಟಿಯಿಂದ ಆಧುನಿಕತೆ ಬಳಕೆಯಾಗುತ್ತದೆ. ಆದರೆ ನಮ್ಮಲ್ಲಿ ವಸಾಹತು ಆಡಳಿತದಿಂದಾಗಿ ಆಧುನಿಕತೆಗೆ ಬೇರೆ ಅರ್ಥವಿದೆ.
ಸಾಹಿತ್ಯ ಚರ್ಚೆಯಲ್ಲಿ ಮತ್ತೆ ಮತ್ತೆ ಔಪಚಾರಿಕವಾಗಿ ಮತ್ತು ಅರೆಔಪಚಾರಿಕವಾಗಿ ಈ ಪರಂಪರೆ ಎಂಬ ಪದವನ್ನು ಬಳಸಲಾಗುತ್ತಿದೆ. ಇದರ ಔಪಚಾರಿಕ ಬಳಕೆ ಸಂಸ್ಕೃತದಲ್ಲಿ ‘ಪರಂಪರಾ’ದಿಂದ ವ್ಯುತ್ಪತ್ತಿಯಾಗಿದ್ದು ಈಗ ದೇಶೀಯವಾಗಿ ಬಳಕೆಯಾಗುತ್ತಿದೆ. ಆಕ್ಸ್ ಫೋರ್ಡ್ ಡಿಕ್ಷನರಿ ಪ್ರಕಾರ ಪರಂಪರೆ ಎಂದರೆ “Handing down” ಮುಂದಿನ ಪೀಳಿಗೆಗೆ ಹಸ್ತಾಂತರಿಸು ಎಂದರ್ಥ. “ಯಾವುದಾದರೂ ಕ್ಷೇತ್ರ, ಕಲಾಶಾಲೆ ಅಥವಾ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪೂರ್ವಜರು ಕೊಡಮಾಡಿದ ಮತ್ತು ಸಾಮಾನ್ಯವಾಗಿ ಅನುಸರಿಸಿದ ಅನುಭವ ಸಂಗ್ರಹ ಮತ್ತು ಬಳಕೆಯೇ ಪರಂಪರೆ.” ಪರಂಪರೆ ಮತ್ತು ಆಧುನಿಕತೆ ಎಂಬ ಎರಡು ಪರಿಕಲ್ಪನೆಗಳು ತೀರಾ ಭಿನ್ನವಾದದ್ದು. ಪರಂಪರೆ ಮತ್ತು ಆಧುನಿಕತೆಯ ನಡುವೆ ಪರಸ್ಪರ ದೀರ್ಘ ಕಾಲೀನ ಸಂಘರ್ಷ ಮತ್ತು ಪರಸ್ಪರ ವಿನಿಮಯದ ಇತಿಹಾಸವಿದೆ.
ಈ ಲೇಖನದಲ್ಲಿ ಪರಂಪರೆ ಹಾಗೂ ಆಧುನಿಕತೆಯ ಅರ್ಥ ಸ್ವರೂಪ, ಅವುಗಳ ಅಸ್ತಿತ್ವ ಹಾಗೂ ತತ್ವಪದಕಾರರು ಅವುಗಳನ್ನು ಎದುರುಗೊಂಡಂತಹ ನೆಲೆಗಳನ್ನು ಚರ್ಚಿಸಲಾಗಿದೆ. ಪರಂಪರೆ ಮತ್ತು ಆಧುನಿಕತೆ ಏಕಕಾಲದಲ್ಲಿ ಸದಾ ಘರ್ಷಣೆ, ಜನಸಾಮಾನ್ಯರ ಬದುಕಿನಲ್ಲಿ ಒಳಗೊಂಡಿರುವಂತಹ ಪರಿ. ಅದನ್ನು ಎದುರಿಸಬೇಕಾದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಲಿಂಗರಾಜು, (2008), ಅನಾದಿಯ ಅನುಭವ ಸೆಲೆ, ಅಧ್ಯಾತ್ಮ ಭಂಡಾರ, ಕನ್ನೂರು.
ವಿನಯ್ ಲಾಲ್ & ಆಶಿಶ್ ನಂದಿ, (2010), ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು, ಅಕ್ಷರ ಪ್ರಕಾಶನ ಹೆಗ್ಗೋಡು, ಸಾಗರ.
ನಂಜುಂಡಶಾಸ್ತ್ರಿ ಎನ್., (1998), ಪರಮಹಂಸ ಆಂಜಿನಪ್ಪ ಸ್ವಾಮಿಗಳವರ ದಿವ್ಯ ಜೀವನ ಮತ್ತು ತತ್ವಚಿಂತನೆ, ಶ್ರೀ ಆಂಜನಪ್ಪ ಸ್ವಾಮಿ ಟ್ರಸ್ಟ್ ಗಟ್ಟಹಳ್ಳಿ, ಕೋಲಾರ.
ಮಹಾರಾಜ್ ಗಣಪತರಾವ್, (1996), ಕನ್ನಡ ನಾಡಿನ ಸತ್ಪುರುಷರ ಅನುಭಾವಪದಗಳು, ಅಧ್ಯಾತ್ಮ ಭಂಡಾರ, ಕನ್ನೂರು
ರಘುನಾಥ ಸ. (ಸಂ), (2010), ಕೈವಾರ ನಾರೇಯಣ: ಮುತ್ತಿನಹಾರ ಮಾಲಿಕೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.