ಮುಸ್ಲಿಂ ಸ್ತ್ರೀ ಸಂವೇದನೆ (ಸಾರಾ ಅಬೂಬಕರ್ ಮತ್ತು ಬಾನು ಮುಷ್ತಾಕರ ಕತೆಗಳನ್ನು ಅನುಲಕ್ಷಿಸಿ)
Abstract
ದಲಿತ ಸಂವೇದನೆ ಭಿನ್ನವಾದಂತೆ ಮುಸ್ಲಿಂ ಸಂವೇದನೆಯು ತನ್ನ ಭಿನ್ನ ಅಭಿವ್ಯಕ್ತಿ ದಾಖಲಿಸಿತು. ಮುಸ್ಲಿಂ ಸಂವೇದನೆಯನ್ನು ದಲಿತ ಬಂಡಾಯ ಸಾಹಿತ್ಯದ ಇನ್ನೊಂದು ಆಯಾಮವಾಗಿ ಗುರುತಿಸಬಹುದು. ಇಲ್ಲಿ ಮುಸ್ಲಿಂ ಲೋಕದ ಮೌನ ಕರಗಿ ಮಾತಾಗಿ ಹೊರಹೊಮ್ಮಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ ಇಲ್ಲಿ ಅನಾವರಣಗೊಳ್ಳುತ್ತದೆ. ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಧಾರ್ಮಿಕ ಹಿನ್ನಲೆಯಲ್ಲಿ ಧಾರ್ಮಿಕ ಅನುಭವಗಳ ಜೊತೆಯಲ್ಲಿ ತಮಗಾಗುತ್ತಿರುವ ಸಂಕಟ, ಪರಿಪಾಟಲನ್ನು ಮುಕ್ತವಾಗಿ ಬರೆಯಲು ಶುರು ಮಾಡಿದರು. ವಿಶ್ವಾತ್ಮಕವಾಗಿ ಹೆಣ್ಣನ್ನು ಪರಿಭಾವಿಸಿದಾಗ ಧರ್ಮ, ಜಾತಿ, ಜನಾಂಗ ಎಲ್ಲ ಮೇರೆಯನ್ನು ಮೀರಿ ಜಗತ್ತಿನ ಎಲ್ಲ ಹೆಣ್ಣಿನ ಅನುಭವಗಳು ಒಂದೇ ಎಂದು ಗುರುತಿಸುವುದು ಒಂದು ನೆಲೆ. ಹೆಣ್ತನ ಒಂದೇ ಇದ್ದರೂ ಧಾರ್ಮಿಕ, ಜನಾಂಗಿಕ, ಪ್ರಾದೇಶಿಕವಾಗಿ ಬೇರೆ ಇದ್ದಾಗ ವಿಭಜಿತ ಸವಾಲು ಬೇರೆಯಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದಾಗ ಬಾಹ್ಯವನ್ನು ನಿಯಂತ್ರಿಸುವ ಸಾಮಾಜಿಕ, ಸಾಂಸ್ಕೃತಿಕ ಅಂಶಗಳಿಂದ ಮುಕ್ತವಾಗಿ ಹೆಣ್ಣನ್ನು ನೋಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹೆಣ್ಣಿನ ಧಾರ್ಮಿಕ ಸಂವೇದನೆಯನ್ನು ವಿಂಗಡಿಸಿ ನೋಡುವುದು ಕನ್ನಡ ಸಾಹಿತ್ಯಕ್ಕೆ ಅನಿವಾರ್ಯವಾಗುತ್ತದೆ. ಮುಸ್ಲಿಂ ಧರ್ಮ ಭಿನ್ನವಾಗಿರುವುದರಿಂದ ಗುರುತಿಸುವುದು ಮುಖ್ಯವೆನಿಸುತ್ತದೆ.