ಸರ್ವಕಾಲಕ್ಕೂ ಸಲ್ಲುವ ದಮನಿತರ ಮೂಕನಾಯಕ ‘ಏಕಲವ್ಯ’.
Abstract
ಕನ್ನಡ ಸಾಹಿತ್ಯ ಪ್ರಕಾರದಲ್ಲಿ ‘ದಲಿತ ಸಾಹಿತ್ಯ’ ಇವರನ್ನು ಅಪ್ಪಿದಷ್ಟು, ಮತ್ತೂ ಇವರು ಅಪ್ಪಿದಷ್ಟು ಮತ್ಯಾರು ಅಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತೆಯೇ ಡಾ. ಸಿದ್ಧಲಿಂಗಯ್ಯನವರನ್ನು‘ದಲಿತ ಕವಿ’ ಎಂದೇ ಬಿಂಬಿಸಲಾಯಿತು. ಇಂತಹ ಮಹಾನ್ ಪ್ರಭೆಯೊಂದು ಉದಯಿಸಿದ್ದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಎಂಬಲ್ಲಿ, ಅದು ದೇವಯ್ಯ ಮತ್ತು ವೆಂಕಟಮ್ಮರ ಮಗನಾಗಿ ಕ್ರಿ.ಶ. ೧೯೫೪ ಫೆಬ್ರವರಿ ೦೨ ರಂದು. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಸಿದ್ಧಲಿಂಗಯ್ಯನವರು ೧೯೭೪ರ ವರ್ಷದಲ್ಲಿ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಿಂದ ಬಿ.ಎ. ಆನರ್ಸ್ (ಐಚ್ಛಿಕ ಕನ್ನಡ) ಪದವಿಯನ್ನು ಪಡೆದರಲ್ಲದೆ. ೧೯೭೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರೊ. ಡಿ. ಎಲ್. ನರಸಿಂಹಾಚಾರ್ಯರ ಸ್ವರ್ಣಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿಯನ್ನೂ, ಪ್ರೊ. ಜಿ. ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ `ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ ೧೯೮೯ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಗಳಿಸಿದವರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಸಿದ್ಧಲಿಂಗಯ್ಯನವರು, ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವಿದ್ಯಾರ್ಥಿದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನೂ ವ್ಯಕ್ತಿಪಡಿಸಲು ಇವರು ಆಯ್ದುಕೊಂಡದ್ದು ಕಾವ್ಯ ಮಾಧ್ಯಮ. `ಹೊಲೆಮಾದಿಗರ ಹಾಡು’ ೧೯೭೫ರಲ್ಲಿ ಪ್ರಕಟಗೊಂಡ ಮೊದಲ ಕವನ ಸಂಕಲನ. ಮುಂದೆ ಅವರ `ಸಾವಿರಾರು ನದಿಗಳು', `ಕಪ್ಪುಕಾಡಿನ ಹಾಡು’, `ಮೆರವಣಿಗೆ’, `ನನ್ನ ಜನಗಳು ಮತ್ತು ಇತರ ಕವಿತೆಗಳು', `ಪಂಚಮ ಮತ್ತು ನೆಲಸಮ', `ಏಕಲವ್ಯ’ ಪ್ರಮುಖ ನಾಟಕಗಳಾದರೆ `ಅವತಾರಗಳು' ಪ್ರಬಂಧ ಕೃತಿ. ಇವಲ್ಲದೆ ರಸಗಳಿಗೆಗಳು, ಎಡಬಲ, ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ ಮುಂತಾದ ಲೇಖನ ಸಂಗ್ರಹಗಳು ರಚನೆಯಾಗಿವೆ. ಇದಲ್ಲದೇ ಮುಖ್ಯವಾಗಿ ಇವರ `ಊರು ಕೇರಿ’ ಆತ್ಮಕಥೆ ಇಂಗ್ಲಿಷ್ ಹಾಗೂ ತಮಿಳಿಗೂ ಅನುವಾದವಾಗುವ ಮೂಲಕ ಇವರ ವ್ಯಕ್ತಿ ಚರಿತ್ರೆಯ ಮುಖಪುಟಗಳು ವಿಶ್ವವ್ಯಾಪಿ ಅನಾವರಣಗೊಂಡವು. ಇವರ ಸಾಹಿತ್ಯ ಸಹೃದಯಿ ಓದುಗರನ್ನು ಕಾಡುವುದಲ್ಲದೇ ಅತಿಯಾಗಿ ಪ್ರೇಮಿಸುವಂತೆ ಪ್ರೇರೆಪಿಸುತ್ತದೆ. ಅದಕ್ಕೆ ನಿದರ್ಶನವೆಂದರೆ ‘ಏಕಲವ್ಯ’ ನಾಟಕ.