ಗಿರೀಶ್ ಕಾರ್ನಾಡರ ಹಯವದನ ನಾಟಕದಲ್ಲಿ ಪಾಶ್ಚಾತ್ಯ ಮತ್ತು ದೇಸಿ ರಂಗ ತಂತ್ರಗಳ ಒಂದು ವಿವೇಚನೆ.
Abstract
ಕನ್ನಡ ರಂಗಭೂಮಿಗೆ ಅಂತರ್‌ರಾಷ್ಟ್ರೀಯ ಮಾನ್ಯತೆ ಗಳಿಸಿಕೊಟ್ಟ ಪ್ರಮುಖ ನಾಟಕಕಾರರಲ್ಲಿ ಗಿರೀಶ ಕಾರ್ನಾಡರು ಒಬ್ಬರು. ಅವರ ಹತ್ತಾರು ನಾಟಕಗಳು ಕನ್ನಡದಲ್ಲಿ ರಚನೆಗೊಂಡು ಬೇರೆ ಭಾಷೆಯಲ್ಲಿ ಅನುವಾದಗೊಂಡು ರಂಗಪ್ರಯೋಗದಿಂದ ಪ್ರಸಿದ್ದಿ ಪಡೆದಿರುವುದು ವಿಶೇಷವಾಗಿದೆ. ಭಾರತದ ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಾರ್ನಾಡರು ತಮ್ಮ ನಾಟಕದಲ್ಲಿ ಬಳಸುವ ಕಥಾ ವಸ್ತು, ತಂತ್ರ, ಮತ್ತು ವಿಚಾರಗಳಿಂದ ಭಾರತೀಯ ನಾಟಕ ಕ್ಷೇತ್ರದಲ್ಲಿ ವಿಶಿಷ್ಠ ಛಾಪು ಮೂಡಿಸಿದ್ದಾರೆ. ಕಾರ್ನಾಡರ ‘ಹಯವದನ’ನಾಟಕ ಸಹ ಈ ಎಲ್ಲಾ ಅಂಶಗಳಿಂದ ರಾಷ್ಟ್ರೀಯ ಮಾನ್ಯತೆ ಗಳಿಸಿರುವ ನಾಟಕಗಳಲ್ಲಿ ಒಂದಾಗಿದೆ. ಹಿಂದಿ, ಇಂಗ್ಲಿಷ್, ಮರಾಠಿ ಮತ್ತಿತರೆ ಭಾಷೆಗಳಿಗೆ ಅದು ಅನುವಾದಗೊಂಡು ಪ್ರದರ್ಶನಗೊಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ‘ಹಯವದನ’ ನಾಟಕ ಧಾರವಾಡದಲ್ಲಿ ರಚನೆಗೊಂಡು ೧೯೭೧ ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. ಅಲ್ಲಿಂದೀಚೆಗೆ ಈ ನಾಟಕ ನೂರಾರು ಪ್ರದರ್ಶನ ಕಂಡಿದೆ. ‘ಐತಿಹಾಸಿಕವಾಗಿ ರಂಗಭೂಮಿಗೆ ಜನಪದಾಂಶಗಳನ್ನು ಅಳವಡಿಸಿಕೊಂಡ ಹೆಗ್ಗಳಿಕ್ಕೆ ಕಂಬಾರರ ‘ಋಷ್ಯಶೃಂಗ’ ನಾಟಕಕ್ಕೆ ಇದ್ದರೂ, ಜನಪದೀಯ ಅಂಶಗಳನ್ನು ಪ್ರದರ್ಶನಗೊಳಿಸಿದ ಹೆಗ್ಗಳಿಕೆ ‘ಹಯವದನ’ ನಾಟಕಕ್ಕೆ ಸಲ್ಲುತ್ತದೆ’ ಎಂದು ಡಾ.ಮರುಳಸಿದ್ದಪ್ಪನವರು ಈ ನಾಟಕದ ವೈಶಿಷ್ಠ್ಯವನ್ನು ಗುರುತಿಸಿದ್ದಾರೆ.