ಮಲೆಮಹದೇಶ್ವರ ಕಾವ್ಯದ ಮಹಿಳಾ ಪಾತ್ರಗಳ ವಿಶ್ಲೇಷಣೆ

Authors

  • ಮುತ್ತುರಾಜು ಕೆ. ವಿ. ಸಂಶೋಧನಾರ್ಥಿ, ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.
  • ನಾಗಭೂಷಣ ಸಹ ಪ್ರಾಧ್ಯಾಪಕರು, ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

Keywords:

ಪಿತೃ ಮೂಲ ಸಂಸ್ಕೃತಿ, ಮಾತೃಮೂಲ ಸಂಸ್ಕೃತಿ, ಒಕ್ಕಲು, ಹೆಣ್ಣಿನ ಅಸ್ಮಿತೆ, ಮೊರೆ

Abstract

ಭಾರತ ಬಹು ಸಂಸ್ಕೃತಿಗಳಿಂದ ಕೂಡಿದೆ. ಭಾರತವನ್ನು ಸಂಸ್ಕೃತಿ ಮತ್ತು ಉಪಸಂಸ್ಕೃತಿಗಳ ನೆಲೆಗಟ್ಟಿನಲ್ಲಿ ಗ್ರಹಿಸುವುದಾದರೆ, ಜನಪದ ಕಥನಗಳು ಉಪಸಂಸ್ಕೃತಿಗಳ ಭಾಗಗಳಾಗಿವೆ. ಇದರ ಭಾಗವಾಗಿ ನಮಗೆ ಕನ್ನಡದಲ್ಲಿ ಮಲೆಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೖಲಾರಲಿಂಗ ಇವರೆಲ್ಲರೂ ಕೂಡ ಮುಖ್ಯವಾಗಿ ಕಾಣುತ್ತಾರೆ. ಮಾತೃಮೂಲ ಸಂಸ್ಕೃತಿಯ ಅನೇಕ ಪಳೆಯುಳಿಕೆಗಳು ಈ ಕಾವ್ಯಗಳಲ್ಲಿ ದಟ್ಟವಾಗಿ ಕಂಡುಬರುತ್ತವೆ. ನನ್ನ ಅಧ್ಯಯನಕ್ಕೆ ಮಲೆಮಹದೇಶ್ವರ ಕಾವ್ಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಲೆಮಹದೇಶ್ವರ ಕಾವ್ಯದಲ್ಲಿ ಸಂಕಮ್ಮನ ಸಾಲು ಬಹಳ ವಿಶಿಷ್ಟವಾಗಿದೆ. ನನ್ನ ಅನುಪಸ್ಥಿತಿಯಲ್ಲಿ ಪರ ಪುರುಷರಿಗೆ ಒಲಿಯುವುದಿಲ್ಲ ಎಂದು ಬಲಗೖ ಭಾಷೆಯನ್ನು ನೀಡಬೇಕು ಎಂದು ನೀಲಯ್ಯ ಕೇಳಿದಾಗ, ಭಾಷೆ ನೀಡಲು ಒಪ್ಪದ ಸಂಕಮ್ಮ ʼಕೊಟ್ಟಿದ ತೆರವನ್ನು ಹಿಂತೆಗೆದುಕೊಂಡು ನನ್ನನ್ನುಬಿಟ್ಟು ಬಿಡುʼ ಎಂದು ವಿರೋಧಿಸುತ್ತಾಳೆ. ಅವಳಿಗೆ ಘೋರತರವಾದ ಹಿಂಸೆಯನ್ನು ನೀಡಿ, ಹೆಜ್ಜೇನು ಮಲೆ ಭೇಟೆಗೆ ಹೊರಡುತ್ತಾರೆ. ಅವನು ಹೊರಟ ಮೇಲು ಅವನು ನೀಡಿದ ಹಿಂಸೆಯ ಪರಿಣಾಮವನ್ನು ಅನುಭವಿಸುತ್ತಿರುತ್ತಾಳೆ. ಹಿಂಸೆಯನ್ನು ತಾಳಲಾರದೆ, ಅದರಿಂದ ಪಾರು ಮಾಡುವಂತೆ ಮಹದೇಶ್ವರನಲ್ಲಿ ಮೊರೆ ಹಿಡುತ್ತಾಳೆ. ಮಹದೇಶ್ವರ ಸಂಕಮ್ಮನನ್ನು ಕಷ್ಟದಿಂದ ಪಾರು ಮಾಡಿ, ಅವಳಿಗೆ ಮಕ್ಕಳ ಫಲವನ್ನು ನೀಡುತ್ತಾರೆ. ಹೆಣ್ಣಾದವಳು ಮಕ್ಕಳನ್ನು ಪಡೆಯಲೇಬೇಕೆಂಬ ಒತ್ತಡದ ಪರಿಣಾಮವಾಗಿ ಸಂಕಮ್ಮನು ಮಹದೇಶ್ವರ ವರಪ್ರಸಾದದಿಂದ ಕಾರಯ್ಯ ಮತ್ತು ಬಿಲ್ಲಯ್ಯ ಎಂಬ ಇಬ್ಬರು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಆ ಇಬ್ಬರು ಮಕ್ಕಳನ್ನು ಮಹದೇಶ್ವರ ಶಿಶುಮಕ್ಕಳಾಗಿ ಸ್ವೀಕರಿಸಿ, ತನ್ನೊಡನೆ ಕರೆದುಕೊಂಡು ಹೋಗುವುದು ಪುರುಷ ಪ್ರಧಾನ ವ್ಯವಸ್ಥೆಯ ಕೈವಾಡವೆಂದು ಹೇಳಬಹುದು. ಏಕೆಂದರೆ ತಾಯಿ ಮತ್ತು ಮಕ್ಕಳ ನಡುವೆ ಇರಬೇಕಾದ ಕರುಳ ಬಳ್ಳಿಯ ಸಂಬಂಧವನ್ನು ಕತ್ತರಿಸಿ, ತನ್ನ ಕಾರ್ಯಸಾಧನೆ ಮಾಡಿಕೊಳ್ಳುವುದನ್ನು ಕಾಣಬಹುದು. ಮಲೆ ಮಹದೇಶ್ವರ ಕಾವ್ಯದ ಮತ್ತೊಂದು ಮಹಿಳಾ ಪಾತ್ರವಾದ ಬೇವಿನಹಟ್ಟಿ ಕಾಳಮ್ಮಳನ್ನು ಏನಾದರೂ ಮಾಡಿ ತನ್ನ ಒಕ್ಕಲಾಗಿಸಿಕೊಳ್ಳಬೇಕು, ಅವಳನ್ನು ಮಣಿಸಬೇಕು ಎಂಬ ಹಠ ಮಹದೇಶ್ವರನಲ್ಲಿದೆ. ನಾಸ್ತಿಕವಾದಿಯಾಗಿ ಕಾಳವ್ವೆ ರೂಪುಗೊಳ್ಳುತ್ತಿರಬೇಕಾದರೆ ಅವಳನ್ನು ಆಸ್ತಿಕರಾಗಿ ಇರಿಸುವ ಪ್ರಯತ್ನ ಮಹದೇಶ್ವರನಲ್ಲಿದೆ. ಬೇವಿನಹಟ್ಟಿ ಕಾಳಮ್ಮನನ್ನು ತನ್ನ ಪಂಥದ ಅನುಯಾಯಿಯಾಗಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಹದೇಶ್ವರ ಸೃಷ್ಟಿಸಿದ್ದಾನೆ. ಇಲ್ಲಿ ಮಾತೃಮೂಲ ಸಂಸ್ಕೃತಿ ದಮನ, ಪಿತೃಮೂಲ ಸಂಸ್ಕೃತಿಯ ಸ್ಥಾಪನೆಯನ್ನು ಕಾಣಬಹುದು. ಮೂಗಯ್ಯ-ರಾಮವ್ವೆ ದಂಪತಿಗಳನ್ನು ಮಹದೇಶ್ವರ ತನ್ನ ಒಕ್ಕಲಾಗಿಸಿಕೊಳ್ಳಲು ಪ್ರಯತ್ನಿಸಿದಾಗ ರಾಮವ್ವೆ ವಿರೋಧಿಸುತ್ತಾಳೆ. ಆದಿಶಕ್ತಿ ತನಗೆ ಸುಖಭೋಗವನ್ನು, ಯವ್ವನವನ್ನು ತೀರಿಸುವುದಕ್ಕೆ ಇಬ್ಬರು ಮಕ್ಕಳನ್ನು ಪಡೆದು, ನನಗೆ ನೀವು ಗಂಡನಾಗಬೇಕು ಎಂದಾಗ ಅವರು ಒಪ್ಪುವುದಿಲ್ಲ. ಮೂರನೇ ಮಗನಾಗಿ ಮಹದೇಶ್ವರನ್ನು ಪಡೆದು ನನಗೆ ಪತಿಯಾಗು ಎಂದಾಗ ಮಹದೇಶ್ವರ ಅದಕ್ಕೆ ಒಪ್ಪಿಕೊಂಡು, ಆದಿಶಕ್ತಿಯಲ್ಲಿ ವಿಶೇಷವಾದ ವಿದ್ಯೆಗಳನ್ನೆಲ್ಲ ಅವಳಿಂದಲೇ ವಶ ಮಾಡಿಕೊಳ್ಳುತ್ತಾನೆ. ಕೊನೆಗೆ ಅವಳನ್ನು ಸುಟ್ಟು ಭಸ್ಮ ಮಾಡುತ್ತಾನೆ. ಮಾತೃಪ್ರಧಾನ ನೆಲೆಯೊಂದನ್ನು ಪಿತೃಪ್ರಧಾನ ನೆಲೆಯನ್ನಾಗಿ ಪರಿವರ್ತಿಸಿದ ಕಾಲಘಟ್ಟದ ರೂಪಕವಾಗಿ ಮಲೆಮಹದೇಶ್ವರ ಕಾವ್ಯದ ಆದಿಶಕ್ತಿ ಪ್ರಸಂಗವನ್ನು ಗ್ರಹಿಸಬಹುದು. ಮೖಸೂರಿನಲ್ಲಿ ಮಹಿಷಾಸುರ, ಐಹಿಷಾಸುರ ಈ ಇಬ್ಬರೂ ರಾಕ್ಷಸರ ಹಾವಳಿ ಹೆಚ್ಚಿದಾಗ, ಪಾರ್ವತಿ ಶಿವನಿಗೆ ಈ ಇಬ್ಬರನ್ನು ಕೊಲ್ಲಲು ತಿಳಿಸಿದಾಗ, ಶಿವನು ಅದಕ್ಕೆ ಒಪ್ಪುವುದಿಲ್ಲ. ಶಿವನಿಂದ ವರವನ್ನು ಪಡೆದ,ಪಾರ್ವತಿ ರಾಕ್ಷಸ ರೂಪವನ್ನು ತಾಳಿ, ಆ ರಾಕ್ಷಸರನ್ನು ಸಂಹಾರ ಮಾಡುತ್ತಾಳೆ. ಹಿಡಿಂಬೆ ತನಗೆ ಸಂತಾನ ಭಾಗ್ಯ ಬೇಕೆಂದು ಶಿವನನ್ನು ಕುರಿತು ತಪಸ್ಸು ಮಾಡಿದಾಗ, ಮಹದೇಶ್ವರ ವಿಕಾರವಾದ ಮಗುವಾಗಿ ಹಿಡಿಂಬೆ ಹೊಟ್ಟೆಯಲ್ಲಿ ಜನಿಸಿದಾಗ, ವಿಕಾರವಾದ ಮಗುವನ್ನು ಹಿಡಿಂಬೆ ಒಪ್ಪದೆ, ಅದನ್ನು ಮೆಳೆಯಲ್ಲಿ ಬಿಸಾಡುತ್ತಾಳೆ. ಮಲೆ ಮಹದೇಶ್ವರ ಕಾವ್ಯದ ಈ ಎಲ್ಲಾ ಪಾತ್ರಗಳನ್ನು ಹೆಣ್ಣಿನ ಅಸ್ಮಿತೆಯ ಭಾಗವಾಗಿ ನೋಡಬಹುದು.

References

ಇಂದ್ವಾಡಿ ವೆಂಕಟೇಶ್ (ಸಂ.), (2008), ಮಲೆಯ ಮಾದಪ್ಪನ ಮಹಾಕಾವ್ಯ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಇಂದ್ವಾಡಿ ವೆಂಕಟೇಶ್ (ಸಂ.), (2010), ಸಿರಿ ಜನಪದ ಮಹಾಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಸುನಂದ ಎಂ. (ಸಂ.), (2011), ನಿಷೇಧಗಳು ಮತ್ತು ಲಿಂಗ ವ್ಯವಸ್ಥೆ, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು.

ಚೆಲುವರಾಜು (ಸಂ.), (1997), ಜುಂಜಪ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ನಾವಡ ಎ.ವಿ., ಸಿರಿ ಪಾಡ್ದನ, (2003), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಪ್ರಸಾದ್ ಕೇಶವನ್ (ಸಂ.), (1997), ಮಲೆಮಾದೇಶ್ವರ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಬೋರಲಿಂಗಯ್ಯ ಹಿ.ಚಿ, (1997), ಮಂಟೇಸ್ವಾಮಿ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ರಾಜಶೇಖರ ಪಿ.ಕೆ. (ಸಂ.), (2006), ಜನಪದ ಮಹಾಕಾವ್ಯ ಮಲೆಯ ಮಹದೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಶ್ರೀಮತಿ ಎಚ್.ಎಸ್. (ಸಂ.), (2003), ಸ್ತ್ರೀವಾದ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಸ್ವಾಮಿ ಬಿ.ಎಸ್., (1993), ಮಲೆಯ ಮಹದೇಶ್ವರ ಒಂದು ಅಧ್ಯಯನ, ನವೀನ ಪ್ರಕಾಶನ, ಬೆಂಗಳೂರು.

ಸ್ವಾಮಿ ಬಿ.ಎಸ್. (ಸಂ.), (2001), ಜಾನಪದ ಮಹಾಕಾವ್ಯ ಮಲೆಯ ಮಾದೇಶ್ವರ, ದಾಮಿನಿ ಸಾಹಿತ್ಯ ಪ್ರಕಾಶನ, ಬೆಂಗಳೂರು.

Downloads

Published

02.04.2025

How to Cite

ಮುತ್ತುರಾಜು ಕೆ. ವಿ., & ನಾಗಭೂಷಣ. (2025). ಮಲೆಮಹದೇಶ್ವರ ಕಾವ್ಯದ ಮಹಿಳಾ ಪಾತ್ರಗಳ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 6(02), 61 TO 74. Retrieved from https://aksharasurya.com/index.php/latest/article/view/610

Issue

Section

ಸಂಶೋಧನಾ ಲೇಖನಗಳು. | RESEARCH ARTICLE.