ಭಟ್ಟನ ಕನಸು ಮತ್ತು ಇತರ ಕಥೆಗಳು ಎಂಬ ಕಥಾ ಸಂಕಲನದಲ್ಲಿ ಮೂಡಿಬಂದ ನೈತಿಕ ಮೌಲ್ಯಗಳು

Main Article Content

ಪೂರ್ಣಿಮಾ ನಾಗನಾಥರಾವ್

Abstract

‘ಭಟ್ಟನ ಕನಸು ಮತ್ತು ಇತರ ಕಥೆಗಳು’ ಎಂಬ ಬಿ. ಟಿ. ಲಲಿತಾ ನಾಯಕ ಅವರ ಕಥಾ ಸಂಕಲನವು ನೈತಿಕ ಮೌಲ್ಯಗಳು, ಮಾನವೀಯ ಬದ್ಧತೆ, ಸನ್ಮೂಲ್ಯಗಳ ಸಂರಕ್ಷಣೆ ಹಾಗೂ ಸಮಾಜಮುಖಿ ಜಾಗೃತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡಿದೆ. ಈ ಸಂಕಲನದಲ್ಲಿನ ಕಥೆಗಳು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಹತ್ತಿರವಾಗುವಂತೆ ಸರಳ ನಿರೂಪಣಾಶೈಲಿ, ಸ್ಪಷ್ಟ ಚಿತ್ರಣ, ಸಂವೇದನಾತ್ಮಕ ಅನುಭವ ಹಾಗೂ ಬಾಳಿನ ನೈಜ ಸಂದರ್ಭಗಳನ್ನು ಒಳಗೊಂಡಿವೆ. ವಿಶೇಷವಾಗಿ ಮಕ್ಕಳ ಕಥೆಗಳ ಮೂಲಕ ಲೇಖಕಿ ಸಮಾಜದಲ್ಲಿನ ಭೇದ–ಭಾವ, ಅಹಂಕಾರ, ಆಸೆ, ವಂಚನೆ, ಹೊಟ್ಟೆಕಿಚ್ಚು, ದುರಾಸೆ ಮುಂತಾದ ಮಾನವೀಯ ದುರ್ಗುಣಗಳನ್ನು ಪ್ರಾಣಿಗಳು, ಪಕ್ಷಿಗಳು, ರಾಜಕುಮಾರರು–ಕುಮಾರಿಯರು ಮತ್ತು ಸಾಮಾನ್ಯ ಜನರ ಜೀವನದ ಮೂಲಕ ಕಲಾತ್ಮಕವಾಗಿ ನಿರೂಪಿಸಿದ್ದಾರೆ.
‘ವಂಚನೆಯ ಫಲ’, ‘ಮಾತನಾಡುವ ಕೋಣ’, ‘ಭಟ್ಟನ ಕನಸು’, ‘ನರಿ ಮತ್ತು ಪಾರಿವಾಳ’, ‘ಕಟಪ ನರಿ’, ‘ಕಾಗೆಯ ಸಬೂಬ’, ‘ಉಪಕಾರದ ಫಲ’, ‘ರಂಗನ ಸುಳ್ಳು ಸಿಂಗನ ಸಮರ್ಥನೆ’, ‘ಹೋಳಿಗೆ ತುಪ್ಪ’ ಮುಂತಾದ ಕಥೆಗಳ ಮೂಲಕ ಮನುಷ್ಯನ ಅಹಂಕಾರ, ದುರಾಸೆ, ಜಿಪುಣತನ, ಸ್ವಾರ್ಥ, ಜಾತಿ–ಭೇದ, ದ್ರೋಹ ಮತ್ತಿತರ ದುರ್ಬಲತೆಗಳು ಅಂತಿಮವಾಗಿ ಅಪಮಾನ, ಅಪಾಯ ಅಥವಾ ನಾಶಕ್ಕೆ ಕಾರಣವಾಗುತ್ತವೆ ಎಂಬ ನೈತಿಕ ಪಾಠವನ್ನು ಲೇಖಕಿ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ. ಜೊತೆಗೆ ಕಾರ್ಮಿಕರು, ರೈತರು, ಸ್ತ್ರೀಯರು ಮತ್ತು ಸಾಮಾನ್ಯ ಜನರ ಬದುಕಿನ ನೋವು, ಹೋರಾಟ, ಕನಸು ಮತ್ತು ಬದ್ಧತೆಯನ್ನು ಆಳವಾಗಿ ವ್ಯಕ್ತಪಡಿಸಿದ್ದಾರೆ.
ಈ ಸಂಕಲನದ ಮೂಲಕ ಬೆಳೆಯುತ್ತಿರುವ ಮಕ್ಕಳಲ್ಲಿ ಸಹಾನುಭೂತಿ, ಮನುಷ್ಯಪ್ರೇಮ, ಕೃತಜ್ಞತೆ, ಪ್ರಾಮಾಣಿಕತೆ, ಜವಾಬ್ದಾರಿ ಹಾಗೂ ಸಮಾಜಮುಖಿ ಬದುಕೆಂಬ ಮೌಲ್ಯಗಳನ್ನು ಬೆಳೆಸುವ ಉದ್ದೇಶ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದಲೇ ಕಥೆಗಳು ಮನರಂಜನೆಯ ಮಾಧ್ಯಮವಾಗಿರುವುದರ ಜೊತೆಗೆ ಬಾಲಮನದಲ್ಲಿ ನೈತಿಕ ಸಿದ್ಧಾಂತ ಮತ್ತು ಶಿಸ್ತನ್ನು ಬಿತ್ತುವ ಪರಿಣಾಮಕಾರಿ ಶೈಕ್ಷಣಿಕ ಸಂಪನ್ಮೂಲವಾಗುತ್ತವೆ. ಆದ್ದರಿಂದ ಈ ಕಥಾ ಸಂಕಲನವು ಲಲಿತಾ ನಾಯಕರ ಸಮಾಜಪರ ದೃಷ್ಟಿಕೋನವನ್ನು ಪ್ರತಿಬಿಂಬಿಸುವುದರೊಂದಿಗೆ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆಯಾಗಿದೆ ಎಂದು ಹೇಳಬಹುದು.


 

Article Details

Section

Research Articles

Author Biography

ಪೂರ್ಣಿಮಾ ನಾಗನಾಥರಾವ್

ಉಪನ್ಯಾಸಕರು, ನೂತನ ಮಹಾವಿದ್ಯಾಲಯ, ಎಸ್.ಬಿ. ಟೆಂಪಲ್ ಹತ್ತಿರ, ಕೋರ್ಟ್ ರಸ್ತೆ, ಸಂಗಮೇಶ್ವರ ನಗರ, ಕಲಬುರಗಿ.

 

References

ನಾಯಕ ಜಿ.ಎಚ್. (ಸಂ), (2013), ಕನ್ನಡ ಸಣ್ಣ ಕಥೆಗಳು, ಹೊಸದೆಹಲಿ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ.

ಭಗವತಿ ಎಸ್.ಎಸ್. ಮತ್ತು ಮೇಲಿನಮನಿ ಎಚ್.ಎಸ್., (2011), ಆಧುನಿಕ ಕಾದಂಬರಿಕಾರರು ಕಥೆಗಾರರು, ಗದಗ: ವಿದ್ಯಾನಿಧಿ ಪ್ರಕಾಶನ.

ಲಲಿತಾ ನಾಯಕ್ ಬಿ.ಟಿ., (1979), ಭಟ್ಟನ ಕನಸು (ಮತ್ತು ಇತರ ಕಥೆಗಳು), ಬೆಂಗಳೂರು: ಲಲಿತಾ ಪ್ರಕಾಶನ.

ಲಲಿತಾ ನಾಯಕ್ ಬಿ.ಟಿ., (2009), ನನ್ನ ಸುತ್ತಲಿನ ಸತ್ಯಗಳು, ಬಳ್ಳಾರಿ: ಲೋಹಿಯಾ ಪ್ರಕಾಶನ.