ತುಳು ಯಕ್ಷಗಾನ ರಂಗಪಠ್ಯಗಳು: ಅವಲೋಕನ

Main Article Content

ಡಾ. ಯೋಗೀಶ ಕೈರೋಡಿ

Abstract

ಯಕ್ಷಗಾನ ಪ್ರದರ್ಶನಕ್ಕೆ ಆಧಾರವಾಗಿರುವ ಪಠ್ಯವನ್ನು ‘ಪ್ರಸಂಗ’ ಎಂಬುದಾಗಿ ಕರೆಯುತ್ತೇವೆ. ಕತೆಯ ಆರಂಭದಿಂದ ಮುಕ್ತಾಯದ ವರೆಗಿನ ಸನ್ನಿವೇಶಗಳು ಪ್ರಸಂಗದಲ್ಲಿ ಅಡಕವಾಗಿವೆ. ಯಕ್ಷಗಾನಕ್ಕೆ ಸಂಬಂಧಿಸಿದ ತಾಳಲಯಗಳಲ್ಲಿ ಛಂದೋಬಂಧಗಳನ್ನು ಆಧರಿಸಿ ‘ಪ್ರಸಂಗ’ ರಚನೆಯಾಗುತ್ತದೆ. ಪದ್ಯವನ್ನು ಭಾಗವತರು ಯಕ್ಷಗಾನದ್ದೇ ಆದ ಶೈಲಿಯಲ್ಲಿ ಹಾಡುತ್ತಾರೆ. ಭಾಗವತಿಕೆಯೊಂದಿಗೆ ಹಿಮ್ಮೇಳದ ಮದ್ದಳೆ, ಚಂಡೆವಾದನವಿರುತ್ತದೆ. ಮುಮ್ಮೇಳದ ಪಾತ್ರವು ನೃತ್ಯ ಮತ್ತು ಅಭಿನಯದ ಮೂಲಕ ಪ್ರಸ್ತುತಪಡಿಸುತ್ತದೆ. ಯಕ್ಷಗಾನದ ಮಾತುಗಾರಿಕೆ ನಿರ್ದಿಷ್ಟ ಪಠ್ಯದ ಕಂಠಪಾಠವಲ್ಲ. ಪಾತ್ರಧಾರಿ ತನ್ನ ಪ್ರತಿಭಾಶಕ್ತಿ ಹಾಗೂ ಜ್ಞಾನದ ಮೂಲಕ ತನ್ನದೇ ನೆಲೆಯ ಮಾತುಗಾರಿಕೆಯ ಮೂಲಕ ಪಾತ್ರ-ಪ್ರಸಂಗಕ್ಕೆ ನ್ಯಾಯಕೊಡುತ್ತಾನೆ. ಯಕ್ಷಗಾನದ ಮಾತುಗಾರಿಕೆ ಸ್ವತಂತ್ರವಾದರೂ ಅದಕ್ಕಿರುವ ಬುನಾದಿ ‘ಪ್ರಸಂಗ ಸಾಹಿತ್ಯ’. ಹಾಗೆಂದ ಮಾತ್ರಕ್ಕೆ ಪ್ರಸಂಗವೇ ಯಕ್ಷಗಾನದ ಪೂರ್ಣಪಠ್ಯವಲ್ಲ. ಕಲಾವಿದನ ವಾಚಿಕಾಭಿನಯ, ಪ್ರತ್ಯುತ್ಪನ್ನಮತಿತ್ವ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.
ಪ್ರೇಕ್ಷಕವರ್ಗ ಹಾಗೂ ಪಾತ್ರದ ಗುಣವರಿತು ಪ್ರಸಂಗ ರಚನೆಯಾಗುತ್ತದೆ. ವಿವಿಧ ರಸಭಾವಗಳು ಬರುವಂತೆ ಪ್ರಸಂಗಕರ್ತ ಪ್ರಸಂಗ ರಚನೆ ಮಾಡುತ್ತಾನೆ. ಸಾತ್ವಿಕ ಪಾತ್ರದ ಪ್ರವೇಶ ಮತ್ತು ಪೀಠಿಕೆಯಿಂದ ಕತೆ ಆರಂಭವಾಗುತ್ತದೆ. ಆರಂಭದಲ್ಲಿ ಸಂತೃಪ್ತವಾಗಿದ್ದ ಸಾತ್ವಿಕ ಪಾತ್ರವು ಬೆಳೆಯುತ್ತಾ ಹಲವು ಸಂಕಟಗಳಿಗೆ ಒಳಗಾಗುತ್ತದೆ. ಈ ಸಂಕಟಕ್ಕೆ ಇದಿರು ವೇಷದ (ಖಳ ಪಾತ್ರ) ಉಪಟಳವೇ ಕಾರಣ. ಇದಿರು ವೇಷವು ರಂಗದಲ್ಲಿ ಮೆರೆಯುವ ಪಾತ್ರ. ಅಂತಿಮವಾಗಿ ದುಷ್ಟಪಾತ್ರದ ಸೋಲು, ಶರಣಾಗತಿ ಅಥವಾ ಸಾವಿನ ಮೂಲಕ ಪ್ರಸಂಗ ಮುಕ್ತಾಯಗೊಳ್ಳುತ್ತದೆ. ಸಾತ್ವಿಕ ಪಾತ್ರವು ಅಂತಿಮವಾಗಿ ಜಯ ಪಡೆದು ಪ್ರಸಂಗ ಸುಖಾಂತ್ಯಗೊಳ್ಳುತ್ತದೆ. ಯಕ್ಷಗಾನ ಪ್ರಸಂಗವು ಒಳಿತು ಕೆಡುಕಿನ ಸಂಘರ್ಷದ ಕತೆಯಾಗಿದೆ. ಸಾಂಪ್ರದಾಯಿಕವಾಗಿ ಯಕ್ಷಗಾನ ಪ್ರಸಂಗಗಳು ರಾಮಾಯಣ, ಮಹಾಭಾರತ ಹಾಗೂ ಭಾಗವತ ಮೂಲದ ಪ್ರಸಂಗವನ್ನು ಹೊಂದಿವೆ.
ಪೌರಾಣಿಕ, ಜಾನಪದ ಹಾಗೂ ಕಾಲ್ಪನಿಕ ಪ್ರಸಂಗಗಳು ತನ್ನದೇ ಆದ ಮಹತ್ವವನ್ನು ಹೊಂದಿವೆ. ವಿವಿಧ ವರ್ಗದ ಪ್ರೇಕ್ಷಕ ವರ್ಗವನ್ನು ಮುಟ್ಟುವಲ್ಲಿ ಯಶಸ್ಸನ್ನು ಕಂಡಿವೆ. ತುಳು ಭಾಷೆ ಮತ್ತು ಸಂಸ್ಕೃತಿಯ ವಿಸ್ತರಣೆಗೆ ತುಳು ಪ್ರಸಂಗಗಳು ತನ್ನದೇ ಆದ ಕೊಡುಗೆಗಳನ್ನು ನೀಡಿವೆ. ಕೆಲವು ಕಲಾವಿದರು ತುಳು ಪ್ರಸಂಗಗಳ ಮೂಲಕವೇ ಬೆಳಕಿಗೆ ಬಂದಿರುವುದನ್ನು ಗಮನಿಸಬಹುದು. ಮಧ್ಯಮ ವರ್ಗದ ದೊಡ್ಡ ಸಂಖ್ಯೆಯ ಪ್ರೇಕ್ಷಕ ಸಮೂಹವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ಆದರೆ ತುಳು ಯಕ್ಷಗಾನ ಪ್ರಸಂಗಗಳು ಯಕ್ಷಗಾನದ ಮೂಲ ಸ್ವರೂಪಕ್ಕೆ ಒಗ್ಗಿಕೊಳ್ಳದ ಕಾರಣ ಕಾಲಗತಿಯಲ್ಲಿ ನೇಪಥ್ಯಕ್ಕೆ ಸರಿದಿವೆ.

Article Details

Section

Research Articles

Author Biography

ಡಾ. ಯೋಗೀಶ ಕೈರೋಡಿ

ಮುಖ್ಯಸ್ಥರು, ಕನ್ನಡ ವಿಭಾಗ, ಆಳ್ವಾಸ್ ಕಾಲೇಜು (ಸ್ವಾಯತ್ತ), ಮೂಡುಬಿದಿರೆ.

How to Cite

ಯೋಗೀಶ ಕೈರೋಡಿ. (2026). ತುಳು ಯಕ್ಷಗಾನ ರಂಗಪಠ್ಯಗಳು: ಅವಲೋಕನ. ಅಕ್ಷರಸೂರ್ಯ (AKSHARASURYA), 18(01), 164 to 171. https://aksharasurya.com/index.php/latest/article/view/2435

References

ಅಮೃತ ಸೋಮೇಶ್ವರ, ಯಕ್ಷಾಂದೋಳ, ಉಚ್ಚಿಲ (ದ. ಕ.): ಅಮೃತ ಸೋಮೇಶ್ವರ ಅಭಿನಂದನ ಸಮಿತಿ.

ಅಮೃತ ಸೋಮೇಶ್ವರ, (2007), ತುಳುವ ಜಾನಪದ ಕೆಲವು ನೋಟಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಕೇಶವ ಶರ್ಮ ಕೆ., ತೆಂಕುತಿಟ್ಟಿನ ಯಕ್ಷಗಾನ ಮುಖವರ್ಣಿಕೆ, ಶಿವಮೊಗ್ಗ: ಕನ್ನಡ ಭಾರತಿ, ಕುವೆಂಪು ವಿ.ವಿ.

ಭಾಸ್ಕರ ರೈ ಕುಕ್ಕುವಳ್ಳಿ (ಸಂ.), ಒಡ್ಡೋಲಗ, ಮಂಗಳೂರು: ಬಂಟರ ಯಕ್ಷಗಾನ ಕಲೋತ್ಸವ ಸಮಿತಿ.

ಯಕ್ಷ ಬಂಟರು ಸಂಸ್ಮರಣ ಸಂಚಿಕೆ - ಕಲಾವಿದರ ಕೈಪಿಡಿ, ಮಂಗಳೂರು: ಬಂಟರ ಯಕ್ಷಗಾನ ಕಲೋತ್ಸವ ಸಮಿತಿ.

ಪುರುಷೋತ್ತಮ ಬಿಳಿಮಲೆ, ಬಹುರೂಪ, ಹೊಸಪೇಟೆ: ಯಾಜಿ ಪ್ರಕಾಶನ.