ಯಕ್ಷಗಾನ ಮತ್ತು ಕನ್ನಡ ರಂಗಭೂಮಿಯ ಸಂಬಂಧ
Main Article Content
Abstract
ಯಕ್ಷಗಾನ ಎಂಬ ಹೆಸರು ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಅನೇಕ ದೇಶೀಯ ಸಾಂಪ್ರದಾಯಿಕ ರಂಗಕಲೆಗಳನ್ನು ಸೂಚಿಸುವ ಪದವಾದರೂ ನಮ್ಮ ನಾಡಿನಲ್ಲಿ, ಈಚಿನ ದಶಕಗಳಲ್ಲಿ ಯಕ್ಷಗಾನ ಎಂದರೆ ಕರಾವಳಿ ಹಾಗೂ ಮಲೆನಾಡಿನ ಪ್ರಾಂತದಲ್ಲಿ ಬೇರೂರಿ ಜನಜೀವನದಲ್ಲಿ ಹಾಸು - ಹೊಕ್ಕಾದ ‘ಪಡುವಲಪಾಯ’ ಎಂದು ಹೆಸರಾದ ರಂಗಕಲೆಯ ಪ್ರಭೇದವೆಂದೇ ಭಾವಿಸಲಾಗಿದೆ. ಇನ್ನು ‘ಮೂಡಲಪಾಯ’ ಎಂದು ಕರೆಸಿಕೊಳ್ಳುವ ಪ್ರಭೇದದಲ್ಲಿಯೂ ಬೇರೆ ಬೇರೆ ರಂಗಪ್ರಯೋಗಗಳನ್ನು ಕಾಣಲು ಸಾಧ್ಯ. ‘ಪಡುವಲಪಾಯ’ ಯಕ್ಷಗಾನ ವಲಯದಲ್ಲಿ ಅದರ ಶಾಸ್ತ್ರೀಯತೆಯ ಬಗೆಗೆ ಜಾನಪದೀಯತೆಯ ಬಗೆಗೆ ಸಾಕಷ್ಟು ಚರ್ಚೆಗಳೂ ಆಗಿವೆ. ಇದು ಸರ್ವಾಂಗ ಸಂಪನ್ನ ಶಾಸ್ತ್ರೀಯ ನಾಟ್ಯ -ನೃತ್ಯ ವಿಧಾನಗಳೆರಡರ ಪ್ರತಿನಿಧಿಯಾಗಿ ನಿಲ್ಲಲು ಬೇಕಾದ ಆಂತರಿಕ ಸಂಪನ್ಮೂಲವನ್ನು ಹೊಂದಿದ್ದು ಎಲ್ಲಾ ಸಮಸ್ಯೆಗಳ ನಡುವೆಯೂ ಸಾಕಷ್ಟು ಸತ್ವಪೂರ್ಣವಾಗಿದೆ. ನಾಡಿನ ಪ್ರಾತಿನಿಧಿಕ ಕಲೆಯಾಗಿ ನಿಲ್ಲಬಲ್ಲ ಶಕ್ತಿ ಇದಕ್ಕಿದೆ. ಪ್ರಯೋಗ ಮತ್ತು ನಾವೀನ್ಯತೆಗಳು ಎಂಥದ್ದೇ ಕಲೆಯ ಉಳಿವು ಬೆಳವುಗಳಿಗೆ ಅನಿವಾರ್ಯ “ಯಾವುದೇ ಕಲೆಯಲ್ಲಿ ಕಾಲೋಚಿತವಾಗಿ ಬದಲಾವಣೆಗಳನ್ನಾಗಲಿ, ಸುಧಾರಣೆಗಳನ್ನಾಗಲಿ, ನವೀನ ಪ್ರಯೋಗಗಳನ್ನಾಗಲಿ ತರುವುದರ ಬಗೆಗಿನ ಯುಕ್ತಾಯುಕ್ತತೆಗಳು ಆಯಾ ಕಲೆಗಳ ಪ್ರಬುದ್ಧತೆಯನ್ನು ಅವಲಂಬಿಸಿರುತ್ತವೆ. ಅಲ್ಲದೆ ಎಲ್ಲಾ ಪ್ರಬುದ್ಧ ಕಲೆಗಳಲ್ಲಿಯೂ - ಅಷ್ಟೇಕೆ, ಯಾವುದೇ ಒಂದು ದಿಟವಾದ ಕಲಾಪ್ರಕಾರದಲ್ಲೂ ಕೂಡ - ರೂಪ ಸ್ವರೂಪಗಳ (ಆಕೃತಿ - ಆಶಯಗಳ) ಏಕಭಾವ ಅಥವಾ ಐಕಾತ್ಮ್ಯವು ತುಂಬ ಉನ್ನತ ಮಟ್ಟದಲ್ಲಿರುವ ಕಾರಣ ಯಾವುದೇ ಬಗೆಯ ದುಡುಕುತನದ ‘ಸುಧಾರಣಾವಾದ’ ಅಥವಾ ‘ಪ್ರಯೋಗಶೀಲವಾದ’ ವಾಗಲಿ ಆಯಾ ಕಲಾಹೃದಯಗಳಿಗೆ ಘಾತಕವನ್ನುಂಟುಮಾಡದಿರದು” ಎಂಬ ಸೇಡಿಯಾಪು ಕೃಷ್ಣಭಟ್ಟರ ಮಾತು ಮುಖ್ಯವಾಗಿದೆ. ಯಾವುದೇ ಪ್ರಬುದ್ಧ ಕಲೆಯಲ್ಲಿ ಸುಧಾರಣೆ, ನಾವೀನ್ಯ, ಪ್ರಯೋಗಾದಿಗಳನ್ನು ಕೈಗೊಳ್ಳಬೇಕೆಂದರೆ ಸಹೃದಯರೂ, ಕಲಾವಿದರೂ ಆಯಾ ಕಲೆಯ ಆಧ್ಯಾತ್ಮ ನಿಷ್ಠೆಯನ್ನು ಗಮನಿಸಿಕೊಳ್ಳಲೇಬೇಕು. ಜೀವ-ಜಗತ್ತುಗಳ ಆಧ್ಯಾತ್ಮ ನಿಷ್ಠೆಯು ಬ್ರಹ್ಮದಲ್ಲಾದರೆ ಕಲೆಯ ಆಧ್ಯಾತ್ಮ ನಿಷ್ಠೆಯು ರಸದಲ್ಲಿದೆ. ಆದುದರಿಂದ ರಸನಿಷ್ಠೆಯಲ್ಲದ ಎಂಥ ಮುನ್ನಡೆಯೂ – ಅದನ್ನ ಯಾರೇ ಮಾಡಲಿ, ಹೇಗೋ ಮಾಡಲಿ ಅದು - ವ್ಯರ್ಥವ್ಯವಸ್ಥೆ ಆಗದೆ, ಆಯಾ ಕಲೆ ನಾಶಕ್ಕೂ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ರಸವೆಂಬುದು ಬೋಧ-ಮೋದ ಅಖಂಡಾನುಭವ. ಏಕಕಾಲದಲ್ಲಿ ಭಾವ-ಬುದ್ಧಿಗಳ ಸಂಸ್ಕಾರ ಹಾಗೂ ಸತ್ವೋದ್ರೇಕಗಳಿಗೆ ಇಲ್ಲಿ ಪರಮಾವಕಾಶವಿದೆ. ಎನ್ನುವ ಆರ್. ಗಣೇಶ್ ಅವರ ಮಾತುಗಳು ಕೂಡ ಕಲೆ ಪರಿಷ್ಕರಣೆಗೆ ಒಳಗಾಗುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಇದು ಒಟ್ಟು ಕಲೆಯ ಪರಿಣಾಮಗಳನ್ನು ಶೋಧಿಸುವಂತಿದೆ. ಅಂತೆಯೇ ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ ಅದು ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಯುತ ಮಾಧ್ಯಮವಾಗಿದೆ. ನಾಟಕ, ಬೀದಿ ನಾಟಕ, ಯಕ್ಷಗಾನ ಮುಂತಾದ ರಂಗರೂಪಗಳ ಮೂಲಕ ಸಾಮಾಜಿಕ ನ್ಯೂನತೆ ಅಸಮಾನತೆಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶಿವರಾಮ ಕಾರಂತ, (1974), ಯಕ್ಷಗಾನ, ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.
ಹರಿದಾಸ ಭಟ್ಟ ಕು. ಶಿ., (1978), ಸಮಗ್ರ ಯಕ್ಷಗಾನ ಪರಂಪರೆ ಮತ್ತು ಪ್ರಯೋಗ, ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ.
ಬಸವರಾಜ ಜಗಜಂಪಿ ಮತ್ತು ಎಸ್. ಬಿ. ನಾಯಕ, (1986), ಕನ್ನಡ ಸಾಹಿತ್ಯ ಹಾಗೂ ಜೀವನ ಮೌಲ್ಯ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾನಿಲಯ.
ಶತಾವಧಾನಿ ಆರ್. ಗಣೇಶ್, (2008), ಯಕ್ಷರಾತ್ರಿ, ಉಡುಪಿ: ಯಕ್ಷಗಾನ ಕೇಂದ್ರ, ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್.
ಉಪೇಂದ್ರ ಸೋಮಯಾಜಿ ಸಿ., (2000), ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘ.
ವೆಂಕಟರಾಮ್ ಎನ್. ಎಸ್., (2001), ರಂಗಭೂಮಿ, ಬೆಂಗಳೂರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್.
ಭಟ್ ಜಿ. ಎಸ್., (1995), ಯಕ್ಷಗಾನ ಪರಿಶೀಲನ, ಬೆಂಗಳೂರು: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ.