ಕಂಬಾರರ ‘ಸಿರಿಸಂಪಿಗೆ’ ನಾಟಕದಲ್ಲಿ ಸ್ತ್ರೀಸಂವೇದನೆ

Authors

  • ARTHI S.

Keywords:

ಶಿವನಾಗ, ನಾಗದಿವ್ಯ, ಕುಲದೈವ, ರಾಜಕುಮಾರ, ಏಕಪತಿ ಸಂಬಂಧ, ದೀಪದ ಮೊಲ್ಲೆ

Abstract

ಕನ್ನಡದ ನೆಲಕ್ಕೆ ಆಧುನಿಕ ಜನಪದ ನಾಟಕಗಳನ್ನು ಮೊದಲು ನೀಡಿದವರು ಚಂದ್ರಶೇಖರ ಕಂಬಾರರು. ಆಧುನಿಕ ಸಂವೇದನೆಯನ್ನು ಜನಪದದ ಮಾದರಿಯಲ್ಲಿ ಅಭಿವ್ಯಕ್ತಿಸುವ ಪ್ರಯತ್ನವನ್ನು ಮಾಡಿದರು. ಪದ್ಯಗಳಲ್ಲಿ ಗದ್ಯ, ಗದ್ಯದಲ್ಲಿ ಪದ್ಯ ಇದು ಕಂಬಾರರ ಶೈಲಿಯಾಗಿದೆ. ಜಾನಪದ ಅವರ ಸಾಹಿತ್ಯದ ಉಸಿರು ಹಾಗೂ ಮಿಡಿತವಾಗಿದೆ. ಹಾಗಾಗಿ ಕಂಬಾರರ ನಾಟಕಗಳು ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಹೊಸ ದೃಷ್ಟಿಕೋನಗಳನ್ನು, ಕಲ್ಪನೆಗಳನ್ನು ಮತ್ತು ವಿನ್ಯಾಸಗಳನ್ನು ನಿರ್ಮಿಸಿದೆ. ಇದಕ್ಕೆ ತಕ್ಕ ಉದಾಹರಣೆಯೆಂದರೆ ೧೯೮೯ರಲ್ಲಿ ಪ್ರಕಟವಾದ ‘ಸಿರಿಸಂಪಿಗೆ’ ನಾಟಕವಾಗಿದೆ.

‘ಸಿರಿಸಂಪಿಗೆ’ ನಾಟಕಕ್ಕೆ ಎ.ಕೆ.ರಾಮಾನುಜನ್‌ರವರು ಹೇಳಿದ ಒಂದು ಜಾನಪದ ಕಥೆ ಮೂಲ ಸಾಮಗ್ರಿಯನ್ನು ಒದಗಿಸಿದೆ. ಹಾಗೆಯೇ ಇದೆ ಕಥೆ ಗಿರೀಶ್ ಕಾರ್ನಾಡರ ‘ನಾಗಮಂಡಲ’ ನಾಟಕ ರಚನೆಗೂ ಕಾರಣವಾಗಿದೆ. ಆ ಕಥೆಯು ಹೀಗಿದೆ: “ಯಾವ ಹೆಣ್ಣನ್ನೂ ಸಂಶಯದಿಂದ ನೋಡುವ ಒಬ್ಬ ರಾಜಕುಮಾರ ತನ್ನ ದೇಹವನ್ನು ಎರಡಾಗಿ ಸೀಳಿಕೊಂಡು, ಒಂದು ಅರ್ಧವನ್ನು ಹೆಣ್ಣಾಗಿಸಿ, ಅವಳನ್ನು ಮದುವೆಯಾಗಿ ಒಂದು ನಿರ್ಜನವಾದ ಕಾಡಿನ ಅರಮನೆಯಲ್ಲಿ ಸೆರೆಯಿಟ್ಟಿರುತ್ತಾನೆ. ಅಲ್ಲಿ ಅಕಸ್ಮಾತ್ತಾಗಿ ಬಂದ ಒಬ್ಬ ಮಾಟಗಾರ ಅವಳನ್ನು ಕಂಡು ಮೋಹಿಸಿ, ರಾಜಕುಮಾರನಿಗೆ ಗೊತ್ತಿಲ್ಲದಂತೆ ಅವಳನ್ನು ಕೂಡುತ್ತಾನೆ. ರಾಜಕುಮಾರನಿಗೆ ಗೊತ್ತಾದಾಗ ಮಾಟಗಾರ ಹಾವಾಗಿ ಬಚ್ಚಲ ಹರಿಯ ಮೂಲಕ ಪಾರಾಗುತ್ತಾನೆ. ಹಾಗೆ ಪಾರಾಗುವಾಗ ಹಾವಿನ ಅರ್ಧ ದೇಹ ರಾಜಕುಮಾರನ ಕತ್ತಿಯಿಂದ ತುಂಡಾಗುತ್ತದೆ. ಹಾವಿನ ಪ್ರೇಯಸಿ ಆ ಅರ್ಧವನ್ನೇ ಸುಟ್ಟು ಬೂದಿಯನ್ನು ತಾಯಿತದಲ್ಲಿ ತುಂಬಿ ತೋಳಿಗೆ ಕಟ್ಟಿಕೊಳ್ಳುತ್ತಾಳೆ.” ಗಂಡು ಹೆಣ್ಣುಗಳ ಪರಸ್ಪರ ಸಂಬಂಧ, ಜೀವ ಆತ್ಮಗಳ ಸಮಸ್ಯೆ, ಸಮಸ್ಯೆಗಳಿಂದ ಅತೀತವಾದ ದೈವ, ಸಮಸ್ಯೆಯಲ್ಲಿ ಸಿಲುಕಿರುವ ಮಾನವ, ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳು ಇಲ್ಲಿ ನಾಟಕೀಯ ಜಿಜ್ಞಾಸೆಗೆ ಗುರಿಯಾಗುತ್ತವೆ. ಜೀವ ಮತ್ತು ಆತ್ಮಗಳ ನಡುವಿನ ಘರ್ಷಣೆಯು ಕಂಬಾರರ ಕವಿತೆಗಳಲ್ಲಿ ಮುಖ್ಯ ಆಶಯವಾಗಿದೆ. ಇಂತಹ ಆಶಯಕ್ಕೆ ಗಟ್ಟಿನೆಲೆಯನ್ನು ‘ಸಿರಿಸಂಪಿಗೆ’ ನಾಟಕ ನಿರ್ಮಿಸಿದೆ. ಶಿವನಾಗದೇವ ಈ ನಾಟಕದ ನಾಯಕ. ನಾಟಕದ ಶುರುವಿನಲ್ಲಿ ಇವನಿಗೆ ಮದುವೆಯಾಗಲು ಮನಸ್ಸಿರುವುದಿಲ್ಲ ಆದರೆ ಚಿಕ್ಕ ವಯಸ್ಸಿಗೆ ಪತಿಯನ್ನು ಕಳೆದುಕೊಂಡು ಮಗನನ್ನು ಮತ್ತು ರಾಜ್ಯಭಾರವನ್ನು ಅನೇಕ ಕಷ್ಟಗಳ ನಡುವೆ ಸಂಬಾಳಿಸಿದ ತಾಯಿಯ ಮಾತಿಗೆ ಕಟ್ಟುಬಿದ್ದು ಮದುವೆಯಾಗಲು ಸಿದ್ಧನಾಗುತ್ತಾನೆ. ಇದಕ್ಕೂ ಮೊದಲು ಕೊರತೆಯಿಲ್ಲದ ಹೆಣ್ಣನ್ನು ಹುಡುಕುವ ಹುಚ್ಚು ಸಾಹಸದಲ್ಲಿರುತ್ತಾನೆ. ಒಂದು ದಿನ ನಿದ್ರಾಪರವಶ ಅವಸ್ಥೆಯಲ್ಲಿ ದೀಪದ ಮೊಲ್ಲೆ ರೂಪದ ಹೆಣ್ಣನ್ನು ನೋಡಿ ಮನಸೋತು ಆಕೆಯನ್ನು ಪಡೆಯಬೇಕೆಂಬ ಹಂಬಲ ಉಂಟಾಗುತ್ತದೆ. ತಾಯಿ ಎಷ್ಟೇ ಹೆಣ್ಣುಗಳನ್ನು ತೋರಿಸಿದರೂ ಒಂದಿಲ್ಲೊಂದು ಕಾರಣ ಹೇಳಿ ನಿರಾಕರಿಸುತ್ತಿದ್ದ ಶಿವನಾಗದೇವನಿಗೆ ನಿದ್ರಾವಸ್ಥೆಯಲ್ಲಿ ತನ್ನೊಳಗೆ ಐಕ್ಯಳಾದ ದೀಪದ ಮೊಲ್ಲೆ ಕೊರತೆಯಿಲ್ಲದ ಪರಿಪೂರ್ಣ ಹೆಣ್ಣಾಗಿ ಕಾಣುತ್ತಾಳೆ. ಅವಳನ್ನು ತನ್ನ ದೇಹದಿಂದ ಹೊರತೆಗೆದು ವಿವಾಹವಾಗುವ ನಿಟ್ಟಿನಲ್ಲಿ ತಾಯಿಯನ್ನು ಕುಲದ ಹಿರಿಯರನ್ನು ದೈವದ ಕಾರಣ ಮಾಡಿ ಒಪ್ಪಿಸುತ್ತಾನೆ. ತನ್ನ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ ಎರಡು ಮಡಕೆಗಳಲ್ಲಿ ತುಂಬಿಸಿ, ಹೂವಿನಲ್ಲಿ ಹೂಳಿಸಿ, ಹುಣ್ಣಿಮೆಯ ದಿನ ತೆರೆದರೆ ಒಂದರಿಂದ ತಾನು, ಮತ್ತೊಂದರಿಂದ ದೀಪದ ಮೊಲ್ಲೆ ಬರುತ್ತಾಳೆ ಎಂದು ಹೇಳುತ್ತಾನೆ. ಇವನ ಹುಚ್ಚಾಟಕ್ಕೆ ಹೆದರಿದರು ದೈವ ಸಾಕ್ಷಿಯ ಆಣೆಯ ಕಾರಣದಿಂದ ಎಲ್ಲರೂ ಒಪ್ಪುತ್ತಾರೆ. ಆದರೆ ಒಂದು ಮಡಕೆಯಿಂದ ಶಿವನಾಗದೇವ ಬಂದರೆ ಮತ್ತೊಂದರಿಂದ ಕಾಳಿಂಗ ಸರ್ಪ ಬರುತ್ತದೆ. ಇಲ್ಲಿ ಒಂದೇ ದೇಹದ ಎರಡು ನೆಲೆಗಳನ್ನು ಈ ಪ್ರತೀಕ ಪ್ರತಿನಿಧಿಸುತ್ತದೆ. ನಾಯಕ ಭ್ರಾಮಕ ದೀಪದ ಮೊಲ್ಲೆಯನ್ನು ಕನಸುತ್ತಾ ರಾಜಕುಮಾರಿ ಸಿರಿಸಂಪಿಗೆಯನ್ನು ಮದುವೆಯಾಗುತ್ತಾನೆ. ಚಂದ್ರಶೇಖರ ಕಂಬಾರ ಅವರ ಸಮಾನತೆಯ ಪರಿಕಲ್ಪನೆಯನ್ನು ತಮ್ಮ ಕೆಲವು ನಾಟಕಗಳಲ್ಲಿ ವ್ಯಕ್ತ ಪಡಿಸಿರುವ ಅಂಶಗಳನ್ನು ಅನಾವರಣಗೊಳಿಸುವ ಉದ್ದೇಶ ಈ ಲೇಖನದ್ದಾಗಿದೆ.

Downloads

Published

05.02.2024

How to Cite

ARTHI S. (2024). ಕಂಬಾರರ ‘ಸಿರಿಸಂಪಿಗೆ’ ನಾಟಕದಲ್ಲಿ ಸ್ತ್ರೀಸಂವೇದನೆ. AKSHARASURYA, 3(02), 100 to 107. Retrieved from https://aksharasurya.com/index.php/latest/article/view/317

Issue

Section

ಪುಸ್ತಕ ವಿಮರ್ಶೆ. | BOOK REVIEW.