ಸಾಮಾನ್ಯರ ಬದುಕಿನಲ್ಲಿ ಎಮ್ಮೆ
Abstract
ಮನುಷ್ಯ ಅನಾಗರೀಕನಾಗಿ ಕಾಡಿನಲ್ಲಿ ಬೆತ್ತಲೆಯಾಗಿ ವಾಸಿಸುತ್ತಾ, ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದ ಕಾಲವೊಂದಿತ್ತು. ಅದು ಮನುಷ್ಯನೂ ಒಂದು ಪ್ರಾಣಿಯಾಗಿದ್ದ ಕಾಲ. ಆಗ ಇತರ ದೈತ್ಯ ಪ್ರಾಣಿಗಳನ್ನು ಕಂಡರೆ ಅವನಿಗೆ ಭಯವೂ ಇತ್ತು. ಹೀಗೆ ಜೀವಿಸುತ್ತಿದ್ದ ಸಂದರ್ಭದಲ್ಲಿ ತನ್ನ ಸುತ್ತಮುತ್ತ ಇರುತ್ತಿದ್ದ ಪ್ರಾಣಿಗಳ ಚಲನವಲನಗಳನ್ನು ಗಮನಿಸುತ್ತಿದ್ದ. ಆಗ ದಿನಗಳೆದಂತೆ ಅವುಗಳ ಬಗ್ಗೆ ಅವನಿಗೊಂದು ಚಿತ್ರಣ ಮೂಡತೊಡಗಿತು. ಅಲ್ಲಿಂದ ಆತ ಹುಲ್ಲು, ಸೊಪ್ಪು ತಿಂದು ಬದುಕುವ ಜೀವಿಗಳನ್ನು ಹಾಗೂ ಇತರ ಪ್ರಾಣಿಗಳನ್ನು ಬೇಟೆಯಾಡಿ ಮಾಂಸವನ್ನು ತಿನ್ನುತ್ತಿದ್ದ ಪ್ರಾಣಿಗಳನ್ನು ಗುರುತಿಸತೊಡಗಿದ. ಕ್ರಮೇಣ ತನಗೆ ಹಾನಿ ಮಾಡದ ಪ್ರಾಣಿಗಳೊಂದಿಗೆ ತನ್ನ ಸಾಹಚರ್ಯವನ್ನು ಬೆಳೆಸಿಕೊಳ್ಳತೊಡಗಿದ. ಮುಂದೆ ಒಂದೆಡೆ ನೆಲೆ ನಿಂತು ಬದುಕಲು ಪ್ರಯತ್ನಿಸಿದ ಮೇಲೆ ಈ ಸನಿಹದ ಪ್ರಾಣಿಗಳನ್ನು ತನ್ನೊಂದಿಗಿರುವ ಹಾಗೆ ನೋಡಿಕೊಳ್ಳಲೆತ್ನಿಸಿದ.