ಭಾಷೆಯ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ

Main Article Content

ಗುರುಸ್ವಾಮಿ ಹಿರೇಮಠ

Abstract

ಭಾಷೆ ಜೀವ ಸಂಕುಲಗಳ ಸಂಪರ್ಕ ಜಾಲವಾಗಿದೆ. ಪ್ರತಿಯೊಂದು ಜೀವಿಯೂ ತನ್ನ ಭಾವನೆಗಳನ್ನು, ಸುಖ-ದುಃಖಗಳನ್ನು ಹಂಚಿಕೊಳ್ಳುವ ಮತ್ತು ಬಾಂಧವ್ಯವನ್ನು ಕಟ್ಟಿಕೊಳ್ಳುವ, ಮುಂದುವರೆಸುವ ಪ್ರತಿ ಹಂತದಲ್ಲೂ ಭಾಷೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮನುಷ್ಯ ಸಂಬಂಧಗಳು, ಸಾಮಾಜಿಕ ಬಂಧಗಳು, ಸಂಘಟನಾತ್ಮಕ ಮತ್ತು ವಿಘಟನಾತ್ಮಕ ಸಂಗತಿಗಳು ನಿರ್ಧಾರವಾಗುವುದೇ ಈ ಭಾಷೆಯಿಂದ. ಹಾಗಾಗಿ ಈ ಭಾಷಾ ವ್ಯವಸ್ಥೆ ಮನುಷ್ಯ ಬದುಕಿನ ವ್ಯಷ್ಟಿ ಮತ್ತು ಸಮಷ್ಟಿ ಸ್ಥಿತಿಯನ್ನು ರೂಪಿಸುವಲ್ಲಿ ಮಹತ್ವದ ಪ್ರಭಾವವನ್ನು ಬೀರಿದರೂ, ಈ ಭಾಷೆಯ ಮೇಲೂ ಇದನ್ನು ಪ್ರಭಾವಿಸುವ ಸಂಗತಿಗಳೂ ಮಹತ್ತರ ಪಾತ್ರವನ್ನು ವಹಿಸುತ್ತವೆ.
ಅದು ಕಲಿಕಾ ವಾತಾವರಣವನ್ನು ಮೊದಲ್ಗೊಂಡು ವ್ಯಾವಹಾರಿಕ ಸಂಬಂಧಗಳಲ್ಲಿ, ರಾಜತಾಂತ್ರಿಕ ಒಪ್ಪಂದಗಳಲ್ಲಿ, ವೈಯಕ್ತಿಕ ಹಾಗೂ ಸಾಮುದಾಯಿಕ ಸಂಬಂಧಗಳ ಸೌಹಾರ್ದತೆ ಮತ್ತು ಸಂಘರ್ಷಾತ್ಮಕ ಸ್ಥಿತಿಗತಿಗೆ ಇದೊಂದು ಪ್ರಭಾವಿ ವೇದಿಕೆಯಾಗಿ ಪರಿಗಣಿಸಲ್ಪಡುತ್ತದೆ. ಜೊತೆಗೆ ಸಂವಹನವನ್ನು ಸಕಾರಾತ್ಮಕ ಹಾಗೂ ಋಣಾತ್ಮಕವಾಗಿಯೂ ವಿಸ್ತರಿಸುವ ಮತ್ತು ಪ್ರಸ್ತುತೀಕರಣಗೊಳಿಸುವಲ್ಲಿ ಸಾಮಾಜಿಕ ಮಾಧ್ಯಮಗಳು ಉಪಯುಕ್ತವೆನಿಸುತ್ತವೆ. ಅದರಲ್ಲೂ ಮಾಹಿತಿ ತಂತ್ರಜ್ಞಾನದಲ್ಲಿ ಆಗುತ್ತಿರುವ ಅಭಿವೃದ್ಧಿಯ ಪರಿಣಾಮವಾಗಿ ಕ್ರಾಂತಿಕಾರಕವಾದ ಬದಲಾವಣೆ ಬದುಕಿನಲ್ಲಿ ಘಟಿಸುತ್ತಿವೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳ ಕೊಡುಗೆ ಮತ್ತು ಹೊಣೆಗಾರಿಕೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಬಾಲ-ವೃದ್ಧರಾದಿಯಾಗಿ ಹದಿಹರೆಯದವರು, ಶಿಕ್ಷಣ, ಉದ್ಯಮ-ಉದ್ಯೋಗ, ಕ್ರೀಡಾ, ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಮತ್ತು ಆಡಳಿತಾತ್ಮಕ ವರ್ಗದ ನೀತಿ-ನಿರೂಪಕರು ಸಾಮಾಜಿಕ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗುತ್ತಿರುವ ಕಾರಣ ನಮ್ಮ ಚಿಂತನೆ ಮತ್ತು ಭಾಷಾ ರಚನೆಯಲ್ಲೂ ಮಹತ್ತರವಾದ ಪಲ್ಲಟಗಳು ಘಟಿಸುತ್ತಿವೆ.
ಹಾಗಾಗಿ ಇಂತಹ ವಾತಾವರಣದಿಂದಾಗಿ ಭಾಷಾ ವಲಯಕ್ಕೆ ಇನ್ನಿಲ್ಲದ ಅವಕಾಶಗಳ ಲಭ್ಯತೆ ಮತ್ತು ವಂಚನೆಗಳೂ ಹೆಚ್ಚುತ್ತಿವೆ. ಅದರಲ್ಲೂ ಅನೇಕ ಭಾಷಾ ಪ್ರಭೇದಗಳು ಅತ್ಯಂತ ಸ್ಪರ್ಧಾತ್ಮಕ, ಸವಾಲಿನ ಸಂದರ್ಭಗಳನ್ನು ಎದುರಿಸುತ್ತಿದ್ದರೆ; ಇನ್ನು ಕೆಲವು ಪ್ರಭೇದಗಳು ಸಕಾರಾತ್ಮಕ ಬೆಳವಣಿಗೆಯನ್ನು ಕಂಡುಕೊಳ್ಳುತ್ತಿವೆ. ಸಾಂಪ್ರದಾಯಿಕ ಭಾಷಾ ಪ್ರಯೋಗಗಳು, ವ್ಯಾಕರಣ, ಛಂದಸ್ಸು, ಅಲಂಕಾರಗಳಲ್ಲಿ ಪಲ್ಲಟವಾಗುತ್ತಿದೆ. ಇದರ ಪರಿಣಾಮವಾಗಿ ಸಾಮಾಜಿಕ ಜನ-ಜೀವನದ ವಿಧಾನದ ಮೇಲೂ ತೀವ್ರತರನಾದ ತಿರುವುಗಳಾಗುತ್ತಿವೆ. ಇದರಿಂದಾಗಿ ಬಲಿಷ್ಠ ಭಾಷೆಗಳು, ಸಾಂಸ್ಕೃತಿಕ ಸಂಪ್ರದಾಯಗಳು ಸಹ ವೈರುಧ್ಯತೆಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವೆಂಬಂತಾಗಿದೆ. ಇದು ಜಾಗತಿಕ ವಲಯದ ಆಗು-ಹೋಗುಗಳು ತೀವ್ರತರನಾದ ಪ್ರತಿರೋಧವನ್ನು ಎದುರಿಸುತ್ತಿವೆ. ಈ ಎಲ್ಲ ಸಂಗತಿಗಳನ್ನು ಅನುಲಕ್ಷಿಸಿ ವಿಶ್ಲೇಷಿಸುವ ಹಾಗೂ ಪ್ರಕಟಿತ ಮತ್ತು ಜನಮಾನಸದ ಆಲೋಚನಾಕ್ರಮಗಳನ್ನು ಗ್ರಹಿಸುವ ಉದ್ದೇಶವನ್ನು ಈ ಲೇಖನ ಹೊಂದಿದೆ.

Article Details

Section

Research Articles

Author Biography

ಗುರುಸ್ವಾಮಿ ಹಿರೇಮಠ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ನವನಗರ ಬಾಗಲಕೋಟೆ.

References

ಪ್ರಜಾವಾಣಿ ದಿನ ಪತ್ರಿಕೆಯ ವಾರ್ತಾ ಭಾಗದಲ್ಲಿ 6 ಮೇ 2017ರಲ್ಲಿ ಪ್ರಕಟವಾದ ಮಾಹಿತಿ.

ಫ್ರಾನ್ಸಿಸ್ ಪಿ. ಬಾರ್ಕ್ಲೇ ಮತ್ತು ಎನ್. ಬೂಬಾಲಕೃಷ್ಣನ್ (ಸಂ), (2024), ಸೋಷಿಯಲ್ ಮೀಡಿಯಾ ಇನ್ ಇಂಡಿಯಾ: ರೆಗ್ಯುಲೇಟರಿ ನೀಡ್ಸ್, ಇಶ್ಯೂಸ್ ಅಂಡ್ ಚಾಲೆಂಜಸ್, ನವದೆಹಲಿ: ಅಟ್ಲಾಂಟಿಕ್ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್.

ಸಂದೇಶ್ ಶ್ರೀವಾಸ್ತವ, (2015), ಸೋಷಿಯಲ್ ಮೀಡಿಯಾ: ಗ್ರೋಥ್ ಆ್ಯಂಡ್ ಡೆವೆಲಪ್‌ಮೆಂಟ್, ನವದೆಹಲಿ: ಆಸ್ಥಾ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್.

ಸಾರಾ ಮೆಕ್ಕೋರ್ಕೋಡೇಲ್, (2020), ಇನ್‌ಫ್ಲುಯೆನ್ಸ್: ಹೌ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಆರ್ ಶೇಪಿಂಗ್ ಅವರ್ ಡಿಜಿಟಲ್ ಫ್ಯೂಚರ್, ಲಂಡನ್: ಬ್ಲೂಮ್ಸ್‌ಬರಿ ಬ್ಯುಜಿನೆಸ್.

ಮಾಧುರಿ ಮಾಧೋಕ್, (2013), ನ್ಯೂಸ್ ಮೀಡಿಯಾ ಇನ್ ಇಂಡಿಯಾ: ದಿ ಇಂಪ್ಯಾಕ್ಟ್ ಆಫ್ ಗ್ಲೋಬಲೈಸೇಷನ್, ನವದೆಹಲಿ: ನ್ಯೂ ಸೆಂಚುರಿ ಪಬ್ಲಿಕೇಷನ್ಸ್.