ನಾಟಕ ಮತ್ತು ಜನಪ್ರಿಯ ಸಂಸ್ಕೃತಿ
Main Article Content
Abstract
ನಾಟಕವು ಮನುಷ್ಯನ ಜೀವನದ ಪ್ರಮುಖ ಘಟನೆಗಳು, ಮನೋಭಾವನೆಗಳು, ಸಂಘರ್ಷಗಳು ಮತ್ತು ಸಾಮಾಜಿಕ ವಾಸ್ತವ್ಯಗಳನ್ನು ಅಭಿನಯ, ಸಂಭಾಷಣೆ, ಚಲನೆ ಮತ್ತು ವೇದಿಕೆಯ ಪ್ರದರ್ಶನದ ಮೂಲಕ ಜೀವಂತವಾಗಿ ವ್ಯಕ್ತಪಡಿಸುವ ಒಂದು ಪ್ರಮುಖ ಸಾಹಿತ್ಯದ ಕಲಾರೂಪವಾಗಿದೆ. ಕೇವಲ ಓದಲು ಮಾತ್ರವಲ್ಲ, ಪ್ರೇಕ್ಷಕರ ಮುಂದೆ ಅಭಿನಯದ ಮೂಲಕ ರೂಪುಗೊಂಡ ಸಾಹಿತ್ಯವೇ ನಾಟಕ.
ಜನಪ್ರಿಯ ಸಂಸ್ಕೃತಿ (Popular Culture) ಎನ್ನುವುದು ಸಾಮಾನ್ಯ ಜನರು ದೈನಂದಿನ ಜೀವನದಲ್ಲಿ ಅನುಸರಿಸಲಾಗುವ ಜೀವನಶೈಲಿ, ಆಚಾರ–ವಿಚಾರಗಳು, ಭಾಷೆ, ಮನರಂಜನೆ, ಸಂಪ್ರದಾಯ, ನಂಬಿಕೆಗಳು ಹಾಗೂ ಸಾಮಾಜಿಕ ಅಭಿವ್ಯಕ್ತಿಗಳ ಒಟ್ಟುಗೂಡಿದ ರೂಪವಾಗಿದೆ. ಇದು ಜನಸಾಮಾನ್ಯರ ಬದುಕಿನಿಂದಲೇ ಹುಟ್ಟಿಕೊಂಡು, ಅವರ ಅನುಭವಗಳು, ಆಸಕ್ತಿಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ನಿರಂತರವಾಗಿ ರೂಪಾಂತರಗೊಳ್ಳುತ್ತದೆ.
ಜನಪ್ರಿಯ ಸಂಸ್ಕೃತಿಯಲ್ಲಿ ಜನಪದ ಹಾಡುಗಳು, ನಾಟಕಗಳು, ಜಾತ್ರೆಗಳು, ಹಬ್ಬಗಳು, ಸಿನೆಮಾ, ದೂರದರ್ಶನ ಧಾರಾವಾಹಿಗಳು, ಸಾಮಾಜಿಕ ಜಾಲತಾಣಗಳು, ಫ್ಯಾಷನ್, ಆಹಾರ ಪದ್ಧತಿ, ಮಾತಿನ ಶೈಲಿ, ಹಾಸ್ಯ ಅಂಶಗಳು ಸೇರಿವೆ. ಇವುಗಳಲ್ಲಿ ಉನ್ನತ ಸಂಸ್ಕೃತಿ (Elite Culture) ಯಂತೆ ಯಾವುದೇ ಕಠಿಣ ನಿಯಮಗಳು ಇರುವುದಿಲ್ಲ.
ನಾಟಕವು ಸಮಾಜದ ಸಾಂಸ್ಕೃತಿಕ ಸಂರಚನೆ ಮತ್ತು ಮಾನವ ಅನುಭವಗಳ ವಿಶ್ಲೇಷಣೆಗೆ ಅತ್ಯಂತ ಪ್ರಮುಖ ಕಲಾರೂಪವಾಗಿದ್ದು, ಜನಸಾಮಾನ್ಯರ ಜೀವನಶೈಲಿ, ಸಾಮಾಜಿಕ ಸಂಬಂಧಗಳು ಮತ್ತು ಇತಿಹಾಸಾತ್ಮಕ ಬದಲಾವಣೆಗಳನ್ನು ಕಲಾತ್ಮಕವಾಗಿ ಪ್ರತಿನಿಧಿಸುತ್ತದೆ. ಜನಪ್ರಿಯ ಸಂಸ್ಕೃತಿ ಎನ್ನುವುದು ಸಾಮಾನ್ಯ ಜನರ ದೈನಂದಿನ ಬದುಕಿನಲ್ಲಿ ರೂಪುಗೊಳ್ಳುವ ಭಾಷೆ, ಆಚರಣೆ, ನಂಬಿಕೆ, ಮನರಂಜನೆ, ಮಾಧ್ಯಮೀಯ ಅಭಿವ್ಯಕ್ತಿ ಮತ್ತು ಸಾಮಾಜಿಕ ಆಚರಣಾ ವಿಧಾನಗಳ ಸಮಗ್ರ ರೂಪವಾಗಿದೆ. ಈ ಸಂಶೋಧನಾ ಪತ್ರಿಕೆ ನಾಟಕ ಮತ್ತು ಜನಪ್ರಿಯ ಸಂಸ್ಕೃತಿಯ ನಡುವಿನ ಪರಸ್ಪರ ಸಂಬಂಧವನ್ನು ಸಾಂಸ್ಕೃತಿಕ ಅಧ್ಯಯನ ಹಾಗೂ ನಾಟಕ ಸಿದ್ಧಾಂತದ ಚೌಕಟ್ಟಿನಲ್ಲಿ ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ.
ಭಾರತೀಯ ಹಾಗೂ ಕನ್ನಡ ನಾಟಕ ಪರಂಪರೆಯಲ್ಲಿ ಯಕ್ಷಗಾನ, ಬಯಲಾಟ, ಸಣ್ಣಾಟ, ಜನಪದ ನಾಟಕಗಳಂತಹ ರೂಪಗಳು ಜನಪ್ರಿಯ ಸಂಸ್ಕೃತಿಯ ಜೀವಂತ ಸಾಕ್ಷಿಗಳಾಗಿವೆ. ಇವು ಜನಸಾಮಾನ್ಯರ ಭಾಷೆ, ಹಾಸ್ಯ, ಸಂಗೀತ, ವೇಷಭೂಷಣ ಮತ್ತು ಸ್ಥಳೀಯ ಅನುಭವಗಳನ್ನು ಸಾಮಾಜಿಕ ವೇದಿಕೆಗೆ ತಂದು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಶಕ್ತಿ ಸಂಬಂಧಗಳನ್ನು ಪ್ರತಿಬಿಂಬಿಸುತ್ತವೆ. ಸ್ವಾತಂತ್ರ್ಯೋತ್ತರ ಹಾಗೂ ಸಮಕಾಲೀನ ಕನ್ನಡ ನಾಟಕಗಳಲ್ಲಿ ಜನಪ್ರಿಯ ಸಂಸ್ಕೃತಿಯ ಅಂಶಗಳನ್ನು ವಿಮರ್ಶಾತ್ಮಕವಾಗಿ ಅಳವಡಿಸಿಕೊಂಡು ವರ್ಗಸಂಘರ್ಷ, ಲಿಂಗ ರಾಜಕೀಯ, ಶೋಷಣೆ, ಅಸ್ಮಿತೆ, ಸಂವೇದನೆ, ರಾಜಕೀಯ ಪ್ರಜ್ಞೆ ಮತ್ತು ಜಾಗತೀಕರಣದ ಪರಿಣಾಮಗಳಂತಹ ಸಂಕೀರ್ಣ ಸಾಮಾಜಿಕ ಪ್ರಶ್ನೆಗಳನ್ನು ಚರ್ಚಿಸಲಾಗಿದೆ.
ಆಧುನಿಕೋತ್ತರ ಕಾಲಘಟ್ಟದಲ್ಲಿ ಚಲನಚಿತ್ರ, ದೂರದರ್ಶನ, ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ವಿಸ್ತಾರದಿಂದ ಜನಪ್ರಿಯ ಸಂಸ್ಕೃತಿಯ ಸ್ವರೂಪದಲ್ಲಿ ಮಹತ್ವದ ಪರಿವರ್ತನೆಗಳು ಸಂಭವಿಸಿವೆ. ಈ ಮಾಧ್ಯಮಿಕ ಬದಲಾವಣೆಗಳು ನಾಟಕದ ರೂಪರಚನೆ, ಕಥನಶೈಲಿ ಮತ್ತು ಪ್ರದರ್ಶನ ತಂತ್ರಗಳ ಮೇಲೂ ಪರಿಣಾಮ ಬೀರಿವೆ. ನಾಟಕವು ಜನಪ್ರಿಯ ಸಂಸ್ಕೃತಿಯನ್ನು ಅಂಧವಾಗಿ ಅನುಕರಿಸದೆ, ವಿಮರ್ಶಾತ್ಮಕವಾಗಿ ಅಳವಡಿಸಿಕೊಂಡಾಗ ಮಾತ್ರ ಅದು ಸಾಮಾಜಿಕ ಜಾಗೃತಿ, ಬೌದ್ಧಿಕ ಸಂವಾದ ಮತ್ತು ಸಾಂಸ್ಕೃತಿಕ ವಿಮರ್ಶೆಯ ಪರಿಣಾಮಕಾರಿ ವೇದಿಕೆಯಾಗುತ್ತದೆ. ಆದ್ದರಿಂದ, ನಾಟಕ ಮತ್ತು ಜನಪ್ರಿಯ ಸಂಸ್ಕೃತಿ ನಡುವಿನ ಸಂಬಂಧ ಅತ್ಯಂತ ಮಹತ್ವಪೂರ್ಣ ವಿಷಯವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಭರತಮುನಿ, (2010), ನಾಟ್ಯಶಾಸ್ತ್ರ (ಅನುವಾದ: ಆದ್ಯ ರಂಗಾಚಾರ್ಯ), ಹೆಗ್ಗೋಡು: ಅಕ್ಷರ ಪ್ರಕಾಶನ.
ಕುವೆಂಪು, (1968), ಸಾಹಿತ್ಯ ಮತ್ತು ಜೀವನ, ಮೈಸೂರು: ಉದಯರವಿ ಪ್ರಕಾಶನ.
ಕಾರಂತ ಬಿ.ವಿ., (2013), ಇಲ್ಲಿರುವುದು ಸುಮ್ಮನೆ (ನಿರೂಪಣೆ: ವೈದೇಹಿ), ಹೆಗ್ಗೋಡು: ಅಕ್ಷರ ಪ್ರಕಾಶನ.
ನಾಯಕ್ ಜಿ.ಎಚ್., (1984), ನಿರಪೇಕ್ಷ, ಹೆಗ್ಗೋಡು: ಅಕ್ಷರ ಪ್ರಕಾಶನ.
ಚಿದಾನಂದಮೂರ್ತಿ ಎಂ., (1999), ವಚನ ಸಾಹಿತ್ಯ, ಬೆಂಗಳೂರು: ಪ್ರಿಯದರ್ಶಿನಿ ಪ್ರಕಾಶನ.
ಕೀರ್ತಿನಾಥ ಕುರ್ತಕೋಟಿ, (1962), ಯುಗಧರ್ಮ, ಧಾರವಾಡ: ಮನೋಹರ ಗ್ರಂಥಮಾಲಾ.
ಶಿವರಾಮ ಕಾರಂತ ಕೆ., (1957), ಯಕ್ಷಗಾನ ಬಯಲಾಟ, ಪುತ್ತೂರು: ಹರ್ಷ ಪ್ರಕಟಣಾಲಯ.
ಚಂದ್ರಶೇಖರ ಕಂಬಾರ, (2010), ಇದು ದೇಸಿ, ಹೆಗ್ಗೋಡು: ಅಕ್ಷರ ಪ್ರಕಾಶನ.