ಅನುವಾದ ಸಾಹಿತ್ಯ: ಒರಿಯಾದ ಮನೋಜ್ ದಾಸ್‌ರವರ ಸಣ್ಣಕತೆಗಳು

Main Article Content

ದೀಪಿಕಾ ಬಿ.

Abstract

ಕನ್ನಡ ಸಾಹಿತ್ಯದ ಹೊಸ ಪ್ರವೃತ್ತಿಯಾಗಿ ಅನುವಾದ ಸಾಹಿತ್ಯವನ್ನು ಪರಿಗಣಿಸುವುದು ವರ್ತಮಾನದ ಅಗತ್ಯವಾಗಿದೆ. ಒಂದು ಸಾಹಿತ್ಯವು ಕಾಲಾತೀತವಾಗಿ ಹಾಗೂ ಭಾಷಾತೀತವಾಗಿ ಚಲಿಸಬೇಕೆಂದಾಗ ಭಾಷಾಂತರದ ಪಾತ್ರ ಬಹಳ ಮುಖ್ಯವಾದುದು. ಒಂದು ಸಮುದಾಯದ ಸಾಂಸ್ಕೃತಿಕ ಮಜಲುಗಳು ಇತರ ದೇಶ, ಪರಿಸರ, ಸಮುದಾಯದ ಸಂಸ್ಕೃತಿಯೊಂದಿಗೆ ಸಾಮ್ಯತೆ ಹಾಗೂ ಭಿನ್ನತೆಗಳನ್ನು ಹೊಂದಿರುವುದು ಅರಿವಿಗೆ ಬರುವುದು ತೌಲನಿಕ ಅಧ್ಯಯನದಿಂದ ಎಂದರೆ ತಪ್ಪಾಗಲಾರದು. ಅನುವಾದ ಸಾಹಿತ್ಯದ ಭಾಗವಾಗಿ ತೌಲನಿಕ ಸಾಹಿತ್ಯವನ್ನು ಗುರುತಿಸಬಹುದಾಗಿದ್ದು, ಇದು ಭಾಷೆ, ಕುಲ, ಸಂಸ್ಕೃತಿ, ಧರ್ಮ ಇವುಗಳ ಆಚೆಗಿನ ಸಾಹಿತ್ಯದ ನೆಲೆಯನ್ನು ವಿಸ್ತರಿಸುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ನಂತರದ ಭಾರತದ ಸಾಮಾಜಿಕ ಹಾಗೂ ರಾಜಕೀಯ ರಂಗದ ಏಳು-ಬೀಳನ್ನು ವಿವರಿಸುವ ಸಂದರ್ಭದಲ್ಲಿ ಕನ್ನಡದ ಸಣ್ಣಕತೆಗಳ ಆಶಯಗಳನ್ನು ಮನೋಜ್ ದಾಸ್ ಅವರ ‘ಕಾಣೆಯಾದ ಟೋಪಿಯ ರಹಸ್ಯ ಮತ್ತಿತರ ಕತೆಗಳು’ ವ್ಯಕ್ತಪಡಿಸುವುದರಿಂದ ಪ್ರಸ್ತುತ ಅಧ್ಯಯನದಲ್ಲಿ ಕೆಲವು ಕತೆಗಳನ್ನು ತೌಲನಿಕವಾಗಿ ಗ್ರಹಿಸಲಾಗಿದೆ.
ಭಾರತೀಯ ಸಮಾಜವು ಬಹಳ ಹಿಂದಿನಿಂದಲೂ ಊಳಿಗಮಾನ್ಯ ಹಾಗೂ ಜಮೀನ್ದಾರಿಕೆಯ ಸಂಪ್ರದಾಯದಲ್ಲಿ ಬೆಳೆದು ಬಂದಿದ್ದು, ಸ್ವಾತಂತ್ರ್ಯದಿಂದ ಈ ವ್ಯವಸ್ಥೆಯ ಹಠಾತ್ ಅಂತ್ಯವು ಸಮಾಜವನ್ನು ಪಲ್ಲಟಕ್ಕೆ ಗುರಿ ಮಾಡಿತು. ಪಾಶ್ಚಿಮಾತ್ಯ ಮಾದರಿಯ ಪ್ರಜಾಪ್ರಭುತ್ವವು ಭಾರತೀಯರ ಜೀವನದಲ್ಲಿ ಊಳಿಗಮಾನ್ಯತೆಯನ್ನು ನಿರ್ಮೂಲನೆ ಮಾಡಿ ಪರಿವರ್ತನೆಯ ಪಥವನ್ನು ಪರಿಚಯಿಸಿತು. ಇದರಿಂದಾಗಿ ರಾಜರು, ಜಮೀನ್ದಾರರು, ಭೂಮಾಲೀಕರು ಹಾಗೂ ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಇದುವರೆವಿಗೂ ಅಳವಡಿಸಿಕೊಂಡಿದ್ದ ಅಭ್ಯಾಸಗಳಿಗೆ ಮತ್ತು ಮನಸ್ಥಿತಿಗೆ ಅನ್ಯವಾದ ವ್ಯವಸ್ಥೆಯನ್ನು ಮುಖಾಮುಖಿಯಾದರು. ಈ ಬಗೆಯ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಯನ್ನು ಮನೋಜ್ ದಾಸ್‌ರ ಮುಸ್ಸಂಜೆಯ ಹಕ್ಕಿಗಳು, ಮೊಲದ ಮನಸ್ಸು ಕತೆಗಳು ಕಟ್ಟಿಕೊಡುತ್ತವೆ.

Article Details

Section

Research Articles

Author Biography

ದೀಪಿಕಾ ಬಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ದಿ ರೂರಲ್ ಕಾಲೇಜು, ಕನಕಪುರ, ಬೆಂಗಳೂರು.

References

ಮನೋಜ್ ದಾಸ್ (ಮೂಲ) ಮತ್ತು ಎಂ.ಎಸ್.ಕೆ. ಪ್ರಭು (ಅನುವಾದ), (1993), ಕಾಣೆಯಾದ ಟೋಪಿಯ ರಹಸ್ಯ ಮತ್ತಿತರ ಕಥೆಗಳು, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ನಾಯಕ ಜಿ.ಎಚ್. (ಸಂ), (1983), ಕನ್ನಡ ಸಣ್ಣ ಕಥೆಗಳು, ಬೆಂಗಳೂರು: ನ್ಯಾಷನಲ್ ಬುಕ್ ಟ್ರಸ್ಟ್ (ಭಾರತ).

ಮಲ್ಲೇಪುರಂ ಜಿ. ವೆಂಕಟೇಶ, (2010), ತೌಲನಿಕ ಸಾಹಿತ್ಯ ಮೀಮಾಂಸೆ, ಬೆಂಗಳೂರು: ವಸಂತ ಪ್ರಕಾಶನ.

ಅಮೂರ ಜಿ.ಎಸ್., (1978), ಕನ್ನಡ ಕಥನ ಸಾಹಿತ್ಯ: ಸಣ್ಣಕತೆ, ಬೆಂಗಳೂರು: ಪ್ರಿಯದರ್ಶಿನಿ ಪ್ರಕಾಶನ.