ಜಿ.ಎಸ್. ಶಿವರುದ್ರಪ್ಪನವರ ಕಾವ್ಯಮೀಮಾಂಸೆಯ ತಾತ್ವಿಕ ಚಿಂತನೆಗಳು
ವಚನ ಸಾಹಿತ್ಯ
Keywords:
ಜಿ.ಎಸ್. ಶಿವರುದ್ರಪ್ಪ, ಮೀಮಾಂಸೆ, ಅಲಂಕಾರ, ಸೌಂದರ್ಯ, ತೌಲನಿಕAbstract
ಮೀಮಾಂಸೆ ಎಂದರೆ ಚಿಂತನೆ, ಚರ್ಚೆ ಎಂದರ್ಥ. ಕಾವ್ಯವನ್ನು ಕುರಿತ ಚರ್ಚೆಯನ್ನು ಕಾವ್ಯಮೀಮಾಂಸೆ ಎಂದು ಕರೆಯಲಾಗಿದೆ. ಅಂದರೆ ಕವಿ-ಕಾವ್ಯ-ಸಹೃದಯ ವಿಚಾರಗಳನ್ನು ಕುರಿತ ಚರ್ಚೆ ಕಾವ್ಯದ ಆಸ್ವಾದನೆಯಿಂದ ಉಂಟಾಗುವ ಅನುಭವ ಅದಕ್ಕೆ ಕಾರಣವಾದ ತೃತೀಯ ರೂಪ ಮತ್ತು ಸ್ವರೂಪ ಇವುಗಳನ್ನು ವಿವರಿಸುವ ಶಾಸ್ತ್ರವೇ ಕಾವ್ಯಮೀಮಾಂಸೆ. ಪಾಶ್ಚತ್ಯರಲ್ಲಿ ಮಾತಿನ ವಿವಿಧ ರೀತಿಗಳನ್ನು ಹೇಳುವ ಭಾಷಣ ಮತ್ತು ಲೇಖನಶಾಸ್ತ್ರ ಎಂಬ ಒಂದು ಶಾಸ್ತ್ರವಿದೆ. ಹೀಗೆ ಉಕ್ತಿ ಚಮತ್ಕಾರವನ್ನು ತಿಳಿಸುವ ಶಾಸ್ತ್ರವೇ ‘ಅಲಂಕಾರಶಾಸ್ತ್ರ’ ಕಾವ್ಯದ ತಿರುಳನ್ನು ಅದರ ನಿರ್ಮಾಣ ಕ್ರಮವನ್ನು ನಿರೂಪಿಸುವದಕ್ಕೆ ಕಾವ್ಯಮೀಮಾಂಸೆ ಮತ್ತೊಂದು ಶಾಸ್ತ್ರ. ಸೌಂದರ್ಯ ಸ್ವರೂಪವನ್ನು ವಿಚಾರಮಾಡುವ ಸೌಂದರ್ಯಮೀಮಾಂಸೆ ಇದು ಮತ್ತೊಂದು ಶಾಸ್ತ್ರ. ಈ ಮೂರು ಶಾಸ್ತ್ರಗಳು ಪಾಶ್ಚಾತ್ಯರಲ್ಲಿ ಪ್ರತ್ಯೇಕವಾಗಿ ಬೆಳೆದಿವೆ ಆದರೆ ಭಾರತೀಯ ಕಾವ್ಯಮೀಮಾಂಸೆಯು ಈ ಮೂರನ್ನು ಒಳಗೊಂಡಿದೆ.
ಈ ಚರ್ಚೆಯು ಚರಿತ್ರೆಯಲ್ಲಿ ಬಳಕೆಗೆ ಬಂದದ್ದು ಒಂಬತ್ತನೆಯ ಶತಮಾನದ ವೇಳೆಗೆ. ಕಾವ್ಯ ವಿಚಾರವನ್ನು ಕುರಿತ ಚರ್ಚೆಗೆ ‘ಕಾವ್ಯ ಮೀಮಾಂಸೆ’ ಎಂಬ ಹೆಸರು ಮೊಟ್ಟಮೊದಲಿಗೆ ಕಾಣಿಸಿಕೊಳ್ಳುವುದು ರಾಜಶೇಖರನಲ್ಲಿಯೆ. ಅವನ ಕೃತಿಯ ಹೆಸರು ‘ಕಾವ್ಯ ಮೀಮಾಂಸಾ’. ಆದರೆ ಇದಕ್ಕೆ ಮೊದಲು ಕಾವ್ಯ ಶಾಸ್ತ್ರವನ್ನು ಕುರಿತ ಗ್ರಂಥಗಳಿಗೆ ‘ಅಲಂಕಾರಶಾಸ್ತ್ರ’ ಎಂದೇ ಹೆಸರು. ಅತ್ಯಂತ ಪ್ರಾಚೀನ ಆಲಂಕಾರಿಕನಾದ ಭಾಮಹನ ಕೃತಿಯ ಹೆಸರು ‘ಕಾವ್ಯಾಲಂಕಾರ’ ವಾಮನನದು ‘ಕಾವ್ಯಲಂಕಾರಸೂತ್ರ’. ರುದ್ರಟನದು ಕಾವ್ಯಾಲಂಕಾರ’. ಎಂದರೆ ‘ಅಲಂಕಾರ ಶಾಸ್ತ್ರ’ ಎನ್ನುವುದು ಕಾವ್ಯ ಮೀಮಾಂಸೆಗೆ ಇದ್ದ ಹಳೆಯ ಹೆಸರು ಇದಕ್ಕೆ ಹಿಂದಿನ ಶಾಸ್ತ್ರಕಾರರಿಗೆ ಕಾವ್ಯದ ಬಗ್ಗೆ ಇದ್ದ ಕಲ್ಪನೆಯೇ ಕಾರಣ ಎನ್ನಬಹುದು. ಕಾವ್ಯವೆಂದರೆ ಒಂದು ಬಗೆಯ ಅಲಂಕಾರ ಅಥವಾ ಉಕ್ತಿ ವೈಚಿತ್ರ್ಯಗಳಿಂದ ಕೂಡಿರುವಂಥದ್ದು ಎಂದು ಭಾವಿಸಿದ್ದರಿಂದ, ಮತ್ತು ಕಾವ್ಯವು ಅಲಂಕಾರಗಳಿಂದಲೇ ಗ್ರಾಹ್ಯವಾಗುತ್ತದೆ ಎಂದು ತಿಳಿದಿದ್ದರಿಂದ ಕಾವ್ಯವನ್ನು ಕುರಿತ ಚರ್ಚೆಯನ್ನು ಒಳಗೊಳ್ಳುವ ಗ್ರಂಥಕ್ಕೆ ‘ಅಲಂಕಾರಶಾಸ್ತ್ರ’ ಎಂದು ಕರೆದಂತೆ ತೋರುತ್ತದೆ. ಆದರೆ ಈ ಚರ್ಚೆಯ ಚರಿತ್ರೆಯಲ್ಲಿ ಕ್ರಮೇಣ ಕಾವ್ಯದ ಸ್ವಾರಸ್ಯವನ್ನು, ಕಾವ್ಯದ ಇತರ ಅಂಗಗಳಲ್ಲಿ ಅನ್ವೇಷಿಸುತ್ತ ಮುಂದುವರಿದ ಹಾಗೆ, ಕಾವ್ಯವನ್ನು ಕುರಿತ ಚರ್ಚೆಗೆ ಅಲಂಕಾರಶಾಸ್ತ್ರ ಎಂದು ಕರೆಯುವುದು ಪರಿಮಿತವೆಂದು ಕಂಡದ್ದರಿಂದ, ಈ ಶಾಸ್ತ್ರಕ್ಕೆ ಕಾವ್ಯ ಮೀಮಾಂಸೆ ಎಂದು ಕರೆಯಲು ಮೊದಲು ಮಾಡಿದರೆಂದು ತೋರುತ್ತದೆ. ವಾಸ್ತವವಾಗಿ ಕಾವ್ಯಮೀಮಾಂಸೆ’ ಎನ್ನುವುದೇ ‘ಅಲಂಕಾರಶಾಸ್ತ್ರ’ ಎನ್ನುವದಕ್ಕಿಂತ ಹೆಚ್ಚು ಉಚಿತವೂ ಹಾಗೂ ವ್ಯಾಪಕಾರ್ಥವನ್ನುಳ್ಳದ್ದೂ ಆಗಿದೆ.
ವಿಮರ್ಶೆ ಎಂಬುದು ಪಾಶ್ಚಾತ್ಯರಲ್ಲಿ 17ನೇ ಮತ್ತು 18ನೇ ಶತಮಾನದಲ್ಲಿ ಕಂಡು ಬಂದಂತಹ ಒಂದು ಸಾಹಿತ್ಯಕ ಶಿಸ್ತು. ಈ ವಿಮರ್ಶೆ ಎಂಬ ಪರಿಕಲ್ಪನೆಯು ಭಾರತೀಯರಿಗೆ ತೀರ ಹೊಸದೆಂಬಂತೆ ಕಾಣಿಸುತ್ತದೆ. ಇದು ಭಾರತಕ್ಕೆ ಬ್ರಿಟೀಷರ ಆಗಮನದೊಂದಿಗೆ 19ನೇ ಶತಮಾನದಲ್ಲಿ ಗೋಚರಿಸಿತು ಎಂಬುದು ನಿಜ. ಈ ಮೀಮಾಂಸೆ ಮತ್ತು ವಿಮರ್ಶೆಯನ್ನು ತೌಲನಿಕವಾಗಿ ನೋಡಿದಾಗ ಮೀಮಾಂಸೆ ಸಾರ್ವತ್ರಿಕವಾಗಿ ಇಡೀ ಸಾಹಿತ್ಯಕ್ಕೆ ಅನ್ವಯವಾಗುವ ಸಿದ್ದಾಂತವಾದರೆ, ವಿಮರ್ಶೆಯು ಅವುಗಳನ್ನು ನಿರ್ದಿಷ್ಟವಾಗಿ ಒಂದು ಕೃತಿಗೆ ಅನ್ವಯಿಸಿ ಅದರ ಬೆಲೆ ಕಟ್ಟುವುದೇ ಆಗಿದೆ. ಮೀಮಾಂಸೆ ಎಂದರೆ ಚರ್ಚೆ, ವಿಮರ್ಶೆ ಎಂದರೆ ಮೌಲ್ಯನಿರ್ಣಯ.
ವಿಮರ್ಶೆ ಒಂದು ಕೃತಿಯನ್ನು ಓದುಗನ ಅಂತರಾಳಕ್ಕೆ ಕೊಂಡೊಯ್ಯಬಲ್ಲದು ಎಂಬುದು ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿದೆ. ಭಾರತೀಯ ಸಾಹಿತ್ಯದಲ್ಲಿ ಕಾವ್ಯಮೀಮಾಂಸೆ ಬೆಳೆದು ಬಂದಂತೆ ವಿಮರ್ಶೆ ಬೆಳೆದು ಬಂದಿರಲಿಲ್ಲ. ಆಧುನಿಕ ಸಾಹಿತ್ಯದ ರಚನೆಯ ನಂತರವೇ ಕಾವ್ಯಮೀಮಾಂಸೆ ಹಿಂದೆ ಸರಿದು ವಿಮರ್ಶೆ ಪ್ರಮುಖ ಸ್ಥಾನವನ್ನು ಗಿಟ್ಟಿಸಿಕೊಂಡಿತು. ಭಾರತೀಯ ಸಾಹಿತ್ಯದಲ್ಲಿ ಭರತನಿಂದ ಹಿಡಿದು 15ನೇ ಶತಮಾನದವರೆಗೆ ಸಾಹಿತ್ಯ ಚಿಂತಕರು, ಲಾಕ್ಷಣಿಕರು ಕಾಣಿಸುತ್ತಾರೆಯೇ ಹೊರತು ವಿಮರ್ಶಕರು ಕಾಣಸಿಗುವುದಿಲ್ಲ. ಹೀಗಾಗಿ ಕನ್ನಡ ಸಾಹಿತ್ಯದಲ್ಲಿ ಅನೇಕ ವಿಮರ್ಶಕರು ಹುಟ್ಟಿ ಬಂದಿದ್ದಾರೆ. ವಿಮರ್ಶಾ ಸಿದ್ದಾಂತಗಳನ್ನು ಅಳವಡಿಸಿಕೊಂಡು ಕೃತಿಗಳಿಗೆ ಮೌಲ್ಯವನ್ನು ಕಟ್ಟಿ ಓದುಗರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ. ಹೀಗೆ ಯೋಗ್ಯ ಕೃತಿಯನ್ನು ಸರ್ವಕಾಲಕ್ಕೂ ಉಳಿಯುವಂತೆ ಮಾಡುವ ಕೀರ್ತಿ ವಿಮರ್ಶಕರದ್ದಾಗಿದೆ. ಇಂತಹ ವಿಮರ್ಶಕರ ಸಾಲಿನಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪನವರೂ ಕಂಡು ಬರುತ್ತಾರೆ. ಇವರು ಮೀಮಾಂಸೆಯನ್ನು ವಿಮರ್ಶಿಸಿ ನೋಡುವ ದೃಷ್ಠಿಕೋನ ವಿಶೇಷವಾದದ್ದು. ಹಾಗಾಗಿ ಅವರ ಮೀಮಾಂಸೆಯ ವಿಚಾರಗಳನ್ನು ತಿಳಿದುಕೊಳ್ಳುವ ಸಣ್ಣ ಪ್ರಯತ್ನ ಈ ಲೇಖನದ್ದು.
References
ಶಿವರುದ್ರಪ್ಪ ಜಿ.ಎಸ್., (1965), ಸೌಂದರ್ಯ ಸಮೀಕ್ಷೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಕೃಷ್ಣಮೂರ್ತಿ ಕೆ., (1971), ಭಾರತೀಯ ಕಾವ್ಯಮೀಮಾಂಸೆ: ತತ್ವ ಮತ್ತು ಪ್ರಯೋಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಕೃಷ್ಣಮೂರ್ತಿ ಕೆ., (1985), ಕನ್ನಡದಲ್ಲಿ ಕಾವ್ಯ ತತ್ತ್ವ, ಡಾ.ಕೆ.ಕೃಷ್ಣಮೂರ್ತಿ ಸಂಸ್ಕೃತ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರು.
ಹೊನ್ನುಸಿದ್ದಾರ್ಥ ಸಿ.ಬಿ., (2013), ಜಿ.ಎಸ್.ಶಿವರುದ್ರಪ್ಪನವರ ಸಮಗ್ರ ಸಾಹಿತ್ಯ ಅವಲೋಕನ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಶಿವರುದ್ರಪ್ಪ ಜಿ.ಎಸ್., (2007), ಕಾವ್ಯತತ್ತ್ವ ಚಿಂತನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಶ್ರೀಕಂಠಯ್ಯ ತಿ.ನಂ., (1994), ಭಾರತೀಯ ಕಾವ್ಯಮೀಮಾಂಸೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಬಾಲಸುಬ್ರಹ್ಮಣ್ಯ ಎನ್., (1992), ಲಾಂಜೈನಸ್‌ನ `ಔನ್ನತ್ಯ ವಿಚಾರ ಚರ್ಚೆ’ ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು.
ಶ್ರೀನಿವಾಸ ಅಯ್ಯಂಗಾರ್ ಎಂ.ಎ., (1960), ಗ್ರೀಕರ ತತ್ವಶಾಸ್ತ್ರಸಾರ ಸಂಗ್ರಹ, ಕನ್ನಡ ಗ್ರಂಥ ಮಾಲೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
ತಿಪ್ಪೇರುದ್ರಸ್ವಾಮಿ ಹೆಚ್., (2010), ತೌಲನಿಕ ಕಾವ್ಯಮೀಮಾಂಸೆ, ಡಿ.ವಿ.ಕೆ ಮೂರ್ತಿ ಪ್ರಕಾಶನ, ಮೈಸೂರು.
ಶಿವರುದ್ರಪ್ಪ ಜಿ.ಎಸ್., (1998), ಕಾವ್ಯಾರ್ಥ ಚಿಂತನ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.