ತತ್ವಪದಕಾರ್ತಿಯರ ಗುರು-ಶಿಷ್ಯ ಸಂಬಂಧ
Main Article Content
Abstract
ಕರ್ನಾಟಕದ ಮಹಿಳಾ ತತ್ವಪದಕಾರ್ತಿಯರ ಸಾಹಿತ್ಯ-ಸಾಧನೆಯಲ್ಲಿ ಗುರು-ಶಿಷ್ಯ ಸಂಬಂಧವು ಪ್ರಮುಖ ಆಧ್ಯಾತ್ಮಿಕ ಕೇಂದ್ರಬಿಂದು ಮತ್ತು ಅರಿವಿನ ಚೇತನ. ಇವರಿಗೆ ಗುರುವು ಕೇವಲ ಬೋಧಕನಲ್ಲ; ಬದಲಾಗಿ ಜ್ಞಾನ, ಮುಕ್ತಿ, ದೀಕ್ಷೆ, ಭಾವಪರಿವರ್ತನೆ ಮತ್ತು ಆತ್ಮಸ್ವರೂಪದ ಅರಿವನ್ನು ನೀಡುವ ಪರಮಚೇತನವಾಗಿ ಕಂಡುಬಂದಿದ್ದಾನೆ. ನಾಥಪಂಥ, ಸೂಫಿಪಂಥ, ಅವಧೂತ, ಶರಣಪಂಥ, ವೀರಶೈವ ತತ್ವಾನುಸಂಧಾನಗಳ ಪ್ರಭಾವದಲ್ಲಿ ಬೆಳೆದ ಇವರ ಕೃತಿಗಳು ಅನುಭಾವಾಶ್ರಯ ಮತ್ತು ಅನುಸಂಧಾನಾಶ್ರಯವಾದ ಆಧ್ಯಾತ್ಮಿಕ ಮಾರ್ಗವನ್ನು ಬಿಂಬಿಸುತ್ತವೆ.
ತುರುವಿಕೆರೆ ವೀರದಾಸಮ್ಮ, ಜತ್ತದ ಶಿವಲಿಂಗವ್ವ, ರಾಯಚೂರಿನ ಹನುಮಂತವ್ವ, ಹುಬ್ಬಳ್ಳಿಯ ವಂಗಿ ಚಂದ್ರಮ್ಮ, ಬಿದನೂರಿನ ಗಂಗಮ್ಮ, ಯನಗುಂಟಿ ವೀರಮ್ಮ, ಗೂಡೂರು ತುಳುಜಾಬಾಯಿ, ಮಥುರಾಬಾಯಿ ಮೊದಲಾದ ತತ್ವಪದಕಾರ್ತಿಯರಿಗೆ ಗುರುವು ಕೆಲವೊಮ್ಮೆ ತಂದೆ-ತಾಯಿ-ಗಂಡ-ಸ್ನೇಹಿತ-ತಂಗಿ ಎಂಬ ಲೌಕಿಕ ರೂಪಗಳಲ್ಲಿ ವ್ಯಕ್ತಗೊಂಡಿದ್ದರೂ, ಅಂತಿಮವಾಗಿ ‘ಅರಿವು’ ಎಂಬ ಅಲೌಕಿಕ ರೂಪಕ್ಕೆ ಏರಿದ್ದಾನೆ. ದೀಕ್ಷೆ, ಗುರುಬೋಧೆ, ಗುರೂಪದೇಶ ಮತ್ತು ಶರಣಾಗತಿಯ ಮೂಲಕ ಗುರುವು ಶಿಷ್ಯೆಯ ಬದುಕಿನ ಜಾತಿ, ಲಿಂಗ, ಸಂಪ್ರದಾಯ, ವಿಧವೆತನ ಮತ್ತು ಸಾಮಾಜಿಕ ನಿರ್ಬಂಧಗಳನ್ನು ಕರಗಿಸಿ, ಆಧ್ಯಾತ್ಮಿಕ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದ್ದಾನೆ.
ಇವರ ತತ್ವಪದಗಳು ಗುರುದರ್ಶನದಿಂದ ಪಡೆದ ಭಾವಾನುಭವವನ್ನು ಕಾವ್ಯ, ಭಜನೆ ಮತ್ತು ವಚನಶೈಲಿಯ ಮೂಲಕ ವ್ಯಕ್ತಪಡಿಸುತ್ತವೆ. ಬದುಕಿನ ನೋವು, ದುಃಖ, ದೇಹ-ಮನಸ್ಸಿನ ಬಯಕೆಗಳು, ಲೌಕಿಕ ಬಂಧನ ಮತ್ತು ಸಾಮಾಜಿಕ ಚಿತ್ರಣಗಳ ನಡುವೆ ಗುರುಸ್ವರೂಪವು ವಿಮೋಚನೆಯ ಬಿಂಬವಾಗಿ ಹೊಳೆಯುತ್ತದೆ. ಹೀಗಾಗಿ ಮಹಿಳಾ ತತ್ವಪದಕಾರ್ತಿಯರ ಪರಂಪರೆಯಲ್ಲಿ ಗುರು-ಶಿಷ್ಯ ಸಂಬಂಧವು ಆತ್ಮಾನ್ವೇಷಣೆ, ಆತ್ಮಜ್ಞಾನ ಮತ್ತು ಜೀವನ್ಮುಕ್ತಿಯ ಸಾಧ್ಯತೆಯನ್ನು ಬಲಪಡಿಸುವ ಆಧ್ಯಾತ್ಮಿಕ ಅಕ್ಷವಾಗಿ ಮೌಲ್ಯೀಕರಿಸಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಮೀನಾಕ್ಷಿ ಬಾಳಿ (ಸಂ), (2017), ಮಹಿಳಾ ತತ್ವಪದಗಳು (ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಸಂಪುಟ-27), ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ.
ನೀಲಾ ಕೆ. (ಸಂ), (2019), ಕನ್ನಡ ತತ್ವಪದಕಾರ್ತಿಯರ ವಾಚಿಕೆ, ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.
ಮೀನಾಕ್ಷಿ ಬಾಳಿ, (2019), ತತ್ವಪದ ಮತ್ತು ಮಹಿಳೆ: ಕನ್ನಡ ತತ್ವಪದಕಾರ್ತಿಯರು, ಗದಗ: ಲಡಾಯಿ ಪ್ರಕಾಶನ.
ರಾಜಶ್ರೀ ಕಿಶೋರ್, (2021), ಕನ್ನಡ ತತ್ವಪದಕಾರರ ಸಾಹಿತ್ಯಧಾರೆ, ಬೆಂಗಳೂರು: ವೇ. ಮೂ. ಶೇಖರಯ್ಯ ನಂದಿ ಮತ್ತು ಸಹೋದರರು.
ಅಮರೇಶ ನುಗುಡೋಣಿ, (2014), ತತ್ವಪದ ಸಾಹಿತ್ಯ ಅಧ್ಯಯನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ರಹಮತ್ ತರೀಕೆರೆ ಮತ್ತು ಅರುಣ್ ಜೋಳದಕೂಡ್ಲಿಗಿ (ಸಂ), (2017), ತತ್ವಪದ ಪ್ರವೇಶಿಕೆ (ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಸಂಪುಟ-1), ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ.
ವಿವಿಧ ಲೇಖಕರು, (1993), ಕನ್ನಡ ತತ್ವಪದಕಾರರು, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.