ಬಿ.ಟಿ. ಲಲಿತಾ ನಾಯಕ್ ಮತ್ತು ಗೀತಾ ನಾಗಭೂಷಣರವರ ಕಥಾ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ
Main Article Content
Abstract
ಸಾಹಿತ್ಯ ಪ್ರಕಾರಗಳಲ್ಲಿ ಸಣ್ಣಕಥೆಗೆ ಒಂದು ಸೂಕ್ಷ್ಮತೆ ಇದೆ. ಕಥೆ ಹೇಳುವ, ಕೇಳುವ ಪ್ರಕ್ರಿಯೆ ಯಾವಾಗ ಪ್ರಾರಂಭವಾಯಿತು ಎಂಬುದನ್ನು ಖಚಿತವಾಗಿ ಹೇಳಲಾಗದು. ಸಾಹಿತ್ಯದ ಯಾವುದೇ ಪ್ರಕಾರವನ್ನು ತೆಗೆದುಕೊಂಡಾಗ, ಅದರ ಸಾರಾಂಶ ಏನು? ಕಥೆ ಏನು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಥೆಗೆ ತನ್ನದೇ ಆದ ಮಹತ್ವದ ಸ್ಥಾನವಿದೆ. ಆಧುನಿಕ ಸಣ್ಣ ಕಥೆಯ ಇತಿಹಾಸ ನೂರು ವರ್ಷದಷ್ಟಿದೆ. ದಲಿತ ಕಥಾಸಾಹಿತ್ಯದ ಹೆಗ್ಗಳಿಕೆ ಏನೆಂದರೆ ಅವರು ಬರವಣಿಗೆಗಳ ಮೂಲಕ ದಲಿತ ಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಹುಟ್ಟಿಸಿದರು. ದಲಿತರ ನೋವು-ನಲಿವನ್ನು ವಿವರಿಸಿದರು. ದಲಿತ ಕಥೆಗಾರರು ದಲಿತ ಸಂವೇದನೆಯ ಮೂಲಕ, ಬದುಕನ್ನು ನೋಡುತ್ತಾ ಒಂದು ಕಲಾ ಮಾಧ್ಯಮಕ್ಕೆ ಹೊಸ ಆಯಾಮವನ್ನು ನೀಡಿದರು.
ಗೀತಾ ನಾಗಭೂಷಣ ಮತ್ತು ಬಿ.ಟಿ. ಲಲಿತಾ ನಾಯಕ್‌ರವರ ಕಥಾ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ ಬಗ್ಗೆ ಒಂದು ಭಿನ್ನವಾದ ನೋಟವಿದೆ. ಅದು ಹೇಗೆ? ಯಾವ ಸ್ವರೂಪದ್ದು? ಎಂದು ತಿಳಿಯಬೇಕಾದದ್ದು ಮಹತ್ವದ ವಿಚಾರ. ನಮ್ಮ ಪುರುಷಪ್ರಧಾನ ಸಮಾಜದ ಚಿಂತನೆಗಳು ಹೆಣ್ಣಿನ ಅಸ್ಮಿತೆಯನ್ನು ದಾಖಲಿಸದೆ ಹೋಗಿವೆ. ಸಂಸ್ಕೃತಿಯ ಇತಿಹಾಸದಲ್ಲಿ ಹೆಣ್ಣಿನ ಈ ಗೈರುಹಾಜರಿ ಅತ್ಯಂತ ಮುಖ್ಯವಾದ ಪ್ರಶ್ನೆಗಳನ್ನು ಎತ್ತುತ್ತದೆ. ಸಮಾಜದಲ್ಲಿ ಆಕೆಯ ಸಂಬಂಧದ ಕುರಿತು ನೋಡಬೇಕಾಗಿದೆ. ಈ ಬದುಕಿನ ಕ್ರೌರ್ಯದ ಬಗ್ಗೆ, ಹಿಂಸೆಯ ಬಗ್ಗೆ, ತಳ ಸಮುದಾಯದ ಸಾಮಾಜಿಕ ಚಿತ್ರಣದ ಬಗ್ಗೆ, ಪುರುಷ ಪ್ರಧಾನ ವ್ಯವಸ್ಥೆ ಹುಟ್ಟು ಹಾಕಿರುವ ಹೆಂಗಸರ ಶೋಷಣೆಯ ಬಗ್ಗೆ, ರೀತಿ ರಿವಾಜುಗಳ ಬಗ್ಗೆ, ಪುರುಷ ಸಮುದಾಯದ ಹುನ್ನಾರಗಳ ಬಗ್ಗೆ, ಮತಾಂತರ ಮತ್ತು ಮತಾಂತರಗೊಂಡವರ ಮನಸ್ಸಿನ ಬೇಗುದಿಗಳನ್ನು ವಿವರಿಸುವ ಚಿತ್ರಣ ಹಾಗೂ ಧರ್ಮದ ಚಿತ್ರಣದ ಬಗ್ಗೆ ತಮ್ಮ ಕಥೆಗಳಲ್ಲಿ ವಿವರಿಸುತ್ತಾರೆ. 80ರ ದಶಕಗಳ ನಂತರದಿಂದ ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆ ಮತ್ತು ಸವಾಲುಗಳನ್ನು ವಿವರಿಸುತ್ತಾ, ಹೆಣ್ಣುಮಕ್ಕಳ ನೋವಿಗೆ ಧ್ವನಿಯಾಗುತ್ತಾ ಸಮಾಜದ ವ್ಯವಸ್ಥೆಗೆ, ಸನಾತನವಾದಿಗಳಿಗೆ ಸವಾಲನ್ನು ಹಾಕುತ್ತಾ ಗೀತಾ ನಾಗಭೂಷಣ ಮತ್ತು ಬಿ.ಟಿ. ಲಲಿತಾ ನಾಯಕ್‌ರವರು ಬರೆಯತೊಡಗಿದರು.
ಹೀಗಾಗಿ ಗೀತಾ ನಾಗಭೂಷಣ ಮತ್ತು ಬಿ.ಟಿ. ಲಲಿತಾ ನಾಯಕ್‌ರವರ ಕಥಾ ಸಾಹಿತ್ಯದಲ್ಲಿನ ಸಾಮಾಜಿಕ ಸಂಬಂಧದ ಸ್ವರೂಪದ ಅಧ್ಯಯನವನ್ನು ಮಾಡಬೇಕಾದ ಪ್ರಸ್ತುತತೆ ಇರುವುದರಿಂದ, ಅವರ ಕೆಲವು ಕಥೆಗಳನ್ನು ಗಮನಿಸಿ ಅವುಗಳನ್ನು ವಿಶ್ಲೇಷಣಾತ್ಮಕ ವಿಧಾನದಿಂದ ನೋಡುವುದೇ ಈ ಪ್ರಬಂಧದ ಮುಖ್ಯ ಗುರಿ ಹಾಗೂ ಉದ್ದೇಶವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಲಲಿತಾ ನಾಯಕ್ ಬಿ.ಟಿ., (1991), ಹಬ್ಬ ಮತ್ತು ಬಲಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಗಾಯತ್ರಿ ನಾವಡ, (2000), ಭಾರತೀಯ ಸ್ತ್ರೀವಾದ: ಒಂದು ಸಂಕಥನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಫಣಿರಾಜ್ ಕೆ., (2011), ಆಂಟೋನಿಯೋ ಗ್ರಾಮ್ಷಿ, ಬೆಂಗಳೂರು: ಅಭಿನವ ಪ್ರಕಾಶನ.
ಮೊಗಳ್ಳಿ ಗಣೇಶ್, (2006), ದಲಿತ ಕಥನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಸುಧಾ ಸೀತಾರಾಮನ್, (2010), ಮಹಿಳಾ ಅಧ್ಯಯನ: ಸಮಾಜ ಶಾಸ್ತ್ರೀಯ ದೃಷ್ಟಿಕೋನ, ಬೆಂಗಳೂರು: ಸ್ತ್ರೀಲೇಖ ಪ್ರಕಾಶನ.
ರವಿ ನಾಯಕ್ ಎಂ., (2009), ಬಿ.ಟಿ. ಲಲಿತಾ ನಾಯಕ್‌ರವರ ಕಾವ್ಯದ ವೈಶಿಷ್ಟ್ಯಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಅರವಿಂದ ಮಾಲಗತ್ತಿ (ಸಂ), (2002), ದಲಿತ ಮಾರ್ಗ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಮೊಗಳ್ಳಿ ಗಣೇಶ್, (2005), ಅವ್ಯಕ್ತ ಚರಿತ್ರೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಪ್ರಮೀಳಾ ಮಾಧವ್, (2016), ಗೀತಾ ನಾಗಭೂಷಣ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.