ಭಾರತದ ಇತಿಹಾಸ ರಚನೆಯಲ್ಲಿ ಚಾರಿತ್ರಿಕ ದಾಖಲೆಗಳಾಗಿ ಸ್ಥಳನಾಮಗಳ ಅಧ್ಯಯನ

Authors

  • DARSHAN KUMAR K. S.

Keywords:

ಸ್ಥಳನಾಮಗಳು, ಚಾರಿತ್ರಿಕ ದಾಖಲೆಗಳು, ಸ್ಕೀಟ್, ಶಂಭಾ ಜೋಶಿ, ಟಪೋಗ್ರಫಿ

Abstract

‘ಇತಿ’ ಎಂದರೆ ಇದು ಹೀಗೆ ಎಂದರ್ಥ. ಇದು ಹೀಗೆ ನಡೆದದ್ದು ಎಂದು ತಿಳಿಸಿಕೊಡುವುದು ಇತಿಹಾಸ. ಪ್ರತಿಯೊಂದಕ್ಕೂ ತನ್ನದೇ ಆದ ಇತಿಹಾಸ ಇರುತ್ತದೆ. ಇತಿಹಾಸ ಮರೆತವರು ಇತಿಹಾಸ (ದಾಖಲೆ) ಸೃಷ್ಟಿಸಲಾರರು ಎಂಬ ಮಾತು ಇತಿಹಾಸಕ್ಕಿರುವ ಅರ್ಥ, ವ್ಯಾಪ್ತಿಯನ್ನು ಸೂಚಿಸುತ್ತದೆ. ಹಾಗೆಯೇ ಸ್ಥಳನಾಮಗಳಿಗೂ ಅದರದೇ ಆದ ಅನನ್ಯವಾದ ಇತಿಹಾಸ ಕುತೂಹಲಕರವಾಗಿದೆ. ಇತಿಹಾಸವನ್ನು ಮುಖ್ಯವಾಗಿ ಆಧರಿಸಿಯೇ ಸ್ಥಳನಾಮಗಳ ಅಧ್ಯಯನ ಇತ್ತೀಚೆಗೆ ಹೆಚ್ಚಾಗಿ ಸಾಗುತ್ತಿದೆ. ‘Toponomy’ (ಸ್ಥಳನಾಮಗಳ ಅಧ್ಯಯನ) ಹಿನ್ನೆಲೆಯಲ್ಲಿ ಇದನ್ನು ನಾವು ಕಾಣಬಹುದಾಗಿದೆ. ಇಂಗ್ಲೀಷ್‌ನಲ್ಲಿ ಸ್ಥಳನಾಮಶಾಸ್ತ್ರವನ್ನು ‘Toponomy’ ಎಂದು ಕರೆಯುತ್ತಾರೆ. ಇದು ಮೂಲತಃ ಗ್ರೀಕ್‌ನ ‘Topos’ ಮತ್ತು ‘Namos’ ಎಂಬ ಎರಡು ಸಂಯುಕ್ತ ಪದಗಳಿಂದ ಬಂದುದಾಗಿದೆ. ಇತ್ತೀಚೆಗೆ ಇದೊಂದು ವಿಜ್ಞಾನದ ಶಾಖೆಯಾಗಿ ಸುವ್ಯವಸ್ಥಿತ ಶಾಸ್ತ್ರವಾಗಿ ಬೆಳೆದು ಬಂದಿದೆ. ಆದ್ದರಿಂದ ಇದನ್ನು “A Science of places, Place names” ಸ್ಥಳಗಳನ್ನು, ಸ್ಥಳನಾಮಗಳನ್ನು ಕುರಿತು ಅಧ್ಯಯನ ಮಾಡುವ ವಿಜ್ಞಾನ ಎಂದೇ ಹೇಳಬಹುದು. ಇಂದು ಶಾಸನತಜ್ಞರ, ಭಾಷಾಶಾಸ್ತ್ರಜ್ಞರ ಮತ್ತು ಮಾನವಶಾಸ್ತ್ರಜ್ಞರ ಗಮನ ಸೆಳೆದಿರುವ ಅನೇಕ ವಿಚಾರಗಳಲ್ಲಿ ಸ್ಥಳನಾಮಗಳ ಅಧ್ಯಯನವೂ ಒಂದು. ಈ ಅಧ್ಯಯನ ವ್ಯಾಪ್ತಿಯೊಳಗೆ ನಗರ, ಊರು, ಬೆಟ್ಟ-ಗುಡ್ಡ, ಹಳ್ಳ-ನದಿ, ಕಾಲುವೆ-ಸರೋವರ, ಬೀದಿ-ಓಣಿ, ಅಗ್ರಹಾರ-ದೇವಾಲಯ, ನಾಡು ಹೀಗೆ ಅನೇಕ ಸ್ಥಳಗಳ ವಿಚಾರಗಳು ಸೇರಿವೆ. ಈ ಸ್ಥಳಗಳಿಗೆ ಹೇಗೆ ಈ ಹೆಸರು ಬಂದಿತು, ಅದರ ಮೂಲವೇನು, ಯಾರು ಕೊಟ್ಟರು, ಏಕೆ ಕೊಟ್ಟರು, ಮೂಲ ಭಾಷೆ ಯಾವುದು, ಈ ಹೆಸರು ಕೊಟ್ಟ ಉದ್ದೇಶವೇನು, ಅರ್ಥವೇನು, ಸದ್ಯ ಇದಕ್ಕೆ ಮೂಲ ಹೆಸರು ಇದೆಯೇ ಮುಂತಾದವುಗಳ ಅಭ್ಯಾಸ ನಮ್ಮ ಚರಿತ್ರೆ, ಸಂಸ್ಕೃತಿ, ಪ್ರಭಾವ, ಅಭಿರುಚಿ ಮುಂತಾದವುಗಳನ್ನು ಅರ್ಥಮಾಡಿಕೊಳ್ಳಲು, ಅಭ್ಯಾಸ ಮಾಡಲು ನೆರವಾಗುತ್ತವೆ. ಇಂತಹ ಅಭ್ಯಾಸಕ್ಕೆ ಜಾನಪದ ಪ್ರಕಾರಗಳು, ಶಾಸನಗಳು, ಚರಿತ್ರೆ ಮತ್ತು ಸರ್ಕಾರಿ ಹಾಗೂ ಖಾಸಗೀ ದಾಖಲೆಗಳ ಸಹಾಯ ಅಗತ್ಯವಾಗಿ ಬೇಕಾಗುತ್ತದೆ. ಈ ಅಭ್ಯಾಸ ಬಹುವಿಶಾಲವಾದದ್ದು ಮತ್ತು ಮಹತ್ವದ್ದು. ಭಾರತದ ಸ್ಥಳನಾಮಗಳ ಅಭ್ಯಾಸದ ಚರಿತ್ರೆ ಸಾಕಷ್ಟು ಹಳೆಯದಾದರೂ ಪಾಶ್ಚಿಮಾತ್ಯ ದೇಶಗಳಂತೆ ನಡೆದಿಲ್ಲ. ಅಲ್ಲಿ ಪ್ರತಿ ನಗರ-ಹಳ್ಳಿ ಅಥವಾ ಪ್ರದೇಶದ ಹೆಸರಿನ ಬಗೆ ತಜ್ಞರು ಸಾಕಷ್ಟು ಸಂಶೋಧನೆ ಮಾಡಿ ಪ್ರಕಟಿಸಿರುವರು. ಇಂದು ಈ ದೇಶಗಳಲ್ಲಿಯ ಎಲ್ಲಾ ಸ್ಥಳಗಳ ಬಗೆ ವಿವರಗಳು ಪುಸ್ತಕ ಭಂಡಾರದಲ್ಲಿ ಲಭ್ಯವಿದೆ. ಇದೆ ಮಟ್ಟದ ಅಭ್ಯಾಸಗಳು ನಮ್ಮ ದೇಶದಲ್ಲಿ ನಡೆದರೆ ನಮ್ಮ ಸ್ಥಳಗಳ ಹಾಗೂ ದೇಶದ ಚರಿತ್ರೆಯನ್ನು ಅಧಿಕೃತವಾಗಿ ದಾಖಲಿಸಲು ಸಾಧ್ಯವಾಗುತ್ತದೆ.

Downloads

Published

01.04.2024

How to Cite

DARSHAN KUMAR K. S. (2024). ಭಾರತದ ಇತಿಹಾಸ ರಚನೆಯಲ್ಲಿ ಚಾರಿತ್ರಿಕ ದಾಖಲೆಗಳಾಗಿ ಸ್ಥಳನಾಮಗಳ ಅಧ್ಯಯನ. AKSHARASURYA, 3(04), 202 to 215. Retrieved from https://aksharasurya.com/index.php/latest/article/view/359