ಹಿಜ್ರಾ ಸಮುದಾಯದ ರೇವತಿ ಆತ್ಮಕಥೆಯ ನೆರಳುಗಳ ಜಾಡು

Authors

  • CHANDRAKALA H. R.

Keywords:

ಹಿಜ್ರಾ, ಆತ್ಮಕಥೆ, ಬದುಕು ಬಯಲು, ಎ. ರೇವತಿ, ಅನುವಾದ, ದು. ಸರಸ್ವತಿ

Abstract

ಕನ್ನಡದಲ್ಲಿ ಈಗೀಗ ಅನುವಾದಿತ ಆತ್ಮಕಥನಗಳ ಸಂಖ್ಯೆ ಹೆಚ್ಚುತ್ತಿವೆ. ಕನ್ನಡದ ಆತ್ಮಕಥನಗಳ ಮಾದರಿಗೆ ಇದೊಂದು ವಿಶಿಷ್ಟ ಸೇರ್ಪಡೆ ಏಕೆಂದರೆ ಬಹುಪಾಲು ಆತ್ಮಕಥನಗಳಿಗೆ ಆತ್ಮವಿರದೆ, ಆತ್ಮವಂಚನೆಯಿಂದ ಕೂಡಿರುತ್ತವೆ. ರೇವತಿಯ ಆತ್ಮಕಥೆ ‘ಬದುಕು ಬಯಲು’ ಕೃತಿಯಲ್ಲಿ ಬಾಲ್ಯದ ಅನುಭವಗಳ ಗಟ್ಟಿತನ ಮತ್ತು ಪ್ರಾಮಾಣಿಕತೆ ಬೆಳೆಯುತ್ತಾ ಪಕ್ವವಾಗುತ್ತಾ ಸಾಗಿ ಈ ಲೋಕವನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ ರೇವತಿಯ ಆತ್ಮಘನತೆಯನ್ನು ಹೆಚ್ಚಿಸುತ್ತದೆ. ಪರಮಾತ್ಮನನ್ನು ದರ್ಶಿಸುತ್ತದೆ. ದೇಹದ ಅಂಗಾಂಗಗಳ ಮೂಲಕ ಗಂಡು, ಹೆಣ್ಣು ಎಂದು ಗುರುತಿಸಲಾಗುತ್ತದೆ. ಬದುಕು ಗಂಡು-ಹೆಣ್ಣೆಂಬ ದ್ವಿಲಿಂಗದ ಸುತ್ತವೇ ಹೆಣೆದುಕೊಂಡಿದೆ. ಆದರೆ ಗಂಡಿನೊಳಗಿರುವ ಹೆಣ್ಣಿನ ಭಾವನೆ, ನಡವಳಿಕೆಯನ್ನು ಗುರುತಿಸುವುದು ಹೇಗೆಂಬ ಪ್ರಶ್ನೆಗೆ ಈ ಕೃತಿ ಉತ್ತರದಾಯಿಯಾಗಿದೆ. ರೂಪಿನಿಂದ ಗಂಡಾಗಿ ಹೆಣ್ಣಿನ ಭಾವನೆಗಳನ್ನು ಹೊಂದಿರುವ ಮೂರನೆಯ ವರ್ಗವೊಂದು ಸಮಾಜದಿಂದ ನಂಬರ್ 9, ಖೋಜಾ, ಚಕ್ಕಾ, ಹೆಣ್ಣಿಗ, ಹೆಣ್ಣುಡುಗ, ಹಿಜ್ರಾ ಎಂದೇ ಕರೆಯಲ್ಪಡುವ, ಪರಿಪೂರ್ಣ ಗಂಡಾಗದ, ಪರಿಪೂರ್ಣ ಹೆಣ್ಣಾಗದ ತೃತೀಯ ಲಿಂಗಿ ಸಮುದಾಯದ ದೈಹಿಕ, ಮಾನಸಿಕ ತುಮುಲಗಳು, ಸಂವೇದನೆಗಳು, ಲಿಂಗಪರಿವರ್ತನೆಯ ತೊಳಲಾಟಗಳು, ಕುಟುಂಬ, ಸಮಾಜದ ಕಟ್ಟುಪಾಡುಗಳು, ಆ ಸಮುದಾಯದ ಕಟ್ಟಳೆಗಳು, ಆ ಸಮುದಾಯದ ಜೀವನಕ್ರಮ, ಅಭ್ಯಾಸಗಳು, ಉಳಿವಿಗಾಗಿ ನಡೆಸುವ ಹೋರಾಟಗಳು, ಕಾನೂನಿನ ಅಸಮಾನತೆ, ಆಸ್ತಿ ಅಸಮಾನತೆ, ಉದ್ಯೋಗ, ಶಿಕ್ಷಣ, ವಸತಿ ಸಮಸ್ಯೆಗಳು, ಲೈಂಗಿಕತೆಯ ಪ್ರಶ್ನೆ ಮತ್ತು ದುರ್ಬಳಕೆ, ಆ ಸಮುದಾಯದ ಪರಿಭಾಷೆಗಳು, ಗಂಡಿನ ದೇಹದೊಳಗೆ ನಲುಗುವ ಹೆಣ್ಣು ಮತ್ತು ಹೆಣ್ತನದ ಅನಾವರಣ ಸೃಷ್ಟಿಸುವ ಸಂದಿಗ್ಧತೆಗಳನ್ನು ಈ ಆತ್ಮಕಥನ ಬಿಚ್ಚಿಡುತ್ತದೆ. ದ್ವಿಲಿಂಗವಲಯ ಈ ಸಮುದಾಯವನ್ನು ಮತ್ತು ಅವರ ನೋವನ್ನು ಅಮುಖ್ಯವೆಂದು ಪರಿಗಣಿಸಿ ಕೀಳರಿಮೆಯಿಂದ ನೋಡುತ್ತಿರುವಾಗ ಹಿಜ್ರಾ ಸಮುದಾಯದ ಸಂಕಟಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಪ್ರತಿನಿಧಿಯಾಗಿ ರೇವತಿಯ ಆತ್ಮಕತೆಯಿದೆ. ಈ ಅತ್ಮಕಥೆಯ ಕುರಿತ ಲೇಖನ ಆ ಸಮುದಾಯದವರ ಮೇಲೆ ನಾಗರೀಕ ವಲಯಕ್ಕಿದ್ದ ಕೆಟ್ಟ ಕುತೂಹಲವನ್ನು ತಣಿಸುತ್ತದೆ ಮತ್ತು ಸಖೇದಾಶ್ಚರ್ಯವನ್ನು ಉಂಟುಮಾಡುವುದರೊಂದಿಗೆ ಪೂರ್ಣತ್ವದ ಪ್ರಶ್ನೆ ಮತ್ತು ಕೊರತೆಯನ್ನು ತುಂಬಿಸುವ ಪ್ರಯತ್ನವನ್ನು ಈ ಕೃತಿ ಮಾಡುವುದರಿಂದ ಇಂತಹ ಕೃತಿಯನ್ನು ಓದುವುದರ ಮೂಲಕ ತೃತೀಯ ಲಿಂಗಿಗಳ ಬದುಕಿನ ನಾನಾ ಮುಖಗಳನ್ನು ವಿಶ್ಲೇಷಿಸಬಹುದಾಗಿದೆ. ಕಾರಣ ಈ ಲೋಕದಲ್ಲಿ ಅಂಗವಿಕಲರಿಗೆ, ಬುದ್ದಿಮಾಂದ್ಯರಿಗೆ ಬದುಕುವ ಅವಕಾಶಗಳಿರುವಷ್ಟು ಈ ಸಮುದಾಯಕ್ಕಿಲ್ಲವೇನೊ ಎಂಬ ಕೊರಗಿನೊಂದಿಗೆ ತೀವ್ರಶೋಷಿತವಲಯ ಎಂಬ ತರ್ಕಕ್ಕೆ ಬರಬಹುದಾಗಿದೆ. ಆತ್ಮಕಥೆ ಬಿಚ್ಚಿಡುವ ಶೋಷಣೆ ಚಿಂತನಾರ್ಹವಾಗಿದೆ.

Downloads

Published

01.04.2024

How to Cite

CHANDRAKALA H. R. (2024). ಹಿಜ್ರಾ ಸಮುದಾಯದ ರೇವತಿ ಆತ್ಮಕಥೆಯ ನೆರಳುಗಳ ಜಾಡು. AKSHARASURYA, 3(04), 148 to 156. Retrieved from https://aksharasurya.com/index.php/latest/article/view/353