ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ದೇಸಿ ಸಂಸ್ಕೃತಿ

Authors

  • JYOTHI K. S.

Keywords:

ಜನಪದ, ದೇಸೀಯತೆ, ಗ್ರಾಮೀಣ ಸೊಗಡು, ಜೋಕುಮಾರಸ್ವಾಮಿ, ಮಹಾಮಾಯಿ, ಹುಲಿಯನೆರಳು

Abstract

ಕನ್ನಡದ ಪ್ರಸಿದ್ಧ ನಾಟಕಕಾರರಲ್ಲಿ ಚಂದ್ರಶೇಖರ ಕಂಬಾರರು ಪ್ರಮುಖರಾಗಿದ್ದಾರೆ. ಘೋಡಗೇರಿಯಲ್ಲಿ ಜನಿಸಿದ ಕಂಬಾರರು ಹಳ್ಳಿ ಬದುಕಿನ ವಿವಿಧ ಮಜಲುಗಳನ್ನು ನೋಡುತ್ತಾ ಅನುಭವಿಸುತ್ತಲೇ ಬಾಲ್ಯವನ್ನು ಕಳೆದವರು. ತಾಯಿ ಚೆನ್ನಮ್ಮ ಹಾಡುಗಾರ್ತಿಯೂ, ಕತೆಗಾರ್ತಿಯೂ ಆಗಿದ್ದರು. ಮಾವ ರಾಮಪ್ಪ ವಿಭಿನ್ನ ವ್ಯಕ್ತಿತ್ವದ ಕ್ರಿಯಾಶೀಲ ವ್ಯಕ್ತಿ. ಸುಲದಾಳದಲ್ಲಿದ್ದ ದೊಡ್ಡಮ್ಮನೂ ಅದ್ಭುತ ಕತೆಗಾರ್ತಿ. ವರ್ಷದಲ್ಲಿ ಕನಿಷ್ಠ ಮೂರು ತಿಂಗಳುಗಳ ಕಾಲ ದೊಡ್ಡಮ್ಮನೊಂದಿಗೆ ಕಳೆಯುವುದು ಕಂಬಾರರಿಗೆ ರೂಢಿಯಾಗಿತ್ತು. ಇವರೆಲ್ಲರ ಬಾಯಿಯಿಂದ ಹಾಡು ಕೇಳುವುದು, ಕತೆಕೇಳುವುದು ಕಂಬಾರರಿಗೆ ಬಹು ಮೆಚ್ಚಿನ ವಿಷಯವಾಗಿತ್ತು. ಹೀಗಾಗಿ ಬಾಲ್ಯದಲ್ಲಿಯೇ ಇವರಿಗೆ ಅಧೋಲೋಕದ ಮಾಟ, ಮಂತ್ರ, ತಂತ್ರ ವಿದ್ಯೆಗಳ ವಿಸ್ಮಯ ಪ್ರಪಂಚವೂ ಪರಿಚಯವಾಗಿತ್ತು. ಹೀಗಾಗಿಯೇ ಇವರ ನಾಟಕಗಳಲ್ಲಿ ಜನಪದ ಜಗತ್ತು ಹಾಸುಹೊಕ್ಕಾಗಿದೆ.

“ಒಬ್ಬ ಲೇಖಕ ಯಾವಾಗಲೂ ವರ್ತಮಾನದಲ್ಲೇ ನಿಂತು ಸ್ಪಂದಿಸುವುದು ಅನಿವಾರ್ಯ ಒಂದು ಕಾಲದ ಮಿತಿಯಲ್ಲಿ ಒಂದು ಪರಿಸರ, ಜನ ಹಾಗೂ ಅವರ ಮಿತಿಗಳ ನಡುವೆಯೇ ನಿಂತು ಸ್ಪಂದಿಸುತ್ತಲೇ ಆ ಕಾಲದ ಮಿತಿಯನ್ನು ಮೀರುವ ಮೌಲ್ಯಗಳನ್ನು ಹೇಳುವವ ದೊಡ್ಡ ಲೇಖಕ. ನಾನು ವರ್ತಮಾನದಲ್ಲೇ ನಿಂತು ಸ್ಪಂದಿಸುತ್ತಾ ಬಂದಿದ್ದೇನೆ. ಈ ಒಂದು ಪ್ರಕ್ರಿಯೆ ನನಗೆ ತುಂಬ ಇಷ್ಟವಾಗಿದೆ.”(ಶಿ.ಕ.ನ.ಪು. 105) ಎನ್ನುವ ಕಂಬಾರರು ತಾನೊಬ್ಬ ನಾಟಕಕಾರ ಎಂಬುದನ್ನು ಒಪ್ಪುವುದಿಲ್ಲ “ನಾನು ಮುಖ್ಯವಾಗಿ ಕವಿ. ಕವಿಯಾಗಿಯೇ ನಾಟಕ ಬರೆದೆ. ನನಗೆ ಇವತ್ತಿಗೂ ನನ್ನ ಕವಿತ್ವವೇ ಮುಖ್ಯ ಅನಿಸುತ್ತದೆ.” ಎನ್ನುತ್ತಾರೆ. ನಮ್ಮ ಸಾಹಿತ್ಯ ಲೋಕಕ್ಕೆ ನಿಲುಕದ ವಿಭಿನ್ನವಾದ ಜಗತ್ತು ಕಂಬಾರರದ್ದು. ಚರಿತ್ರೆಯಿಂದ ವಸ್ತುವನ್ನು ಆರಿಸಿಕೊಂಡು ವರ್ತಮಾನದ ಜೊತೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಅವರು ಮಾಡಲಿಲ್ಲ. ಸಮಕಾಲೀನ ಸಂದರ್ಭವನ್ನು ಜಾನಪದದ / ದೇಸೀಯತೆಯ ಕಣ್ಣುಗಳಿಂದ ನೋಡುವುದೇ ಕಂಬಾರರ ಸಾಹಿತ್ಯದ ಉದ್ದೇಶ. ಜಾನಪದ ಶೈಲಿಯನ್ನು ಸಾಹಿತ್ಯದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಹಿತ್ಯಕ್ಕೆ ಹೊಸ ಜೀವದ್ರವ್ಯವನ್ನು ತುಂಬಿದ್ದಾರೆ. ನಗರ ಪ್ರದೇಶದ ಬದುಕನ್ನು ಗ್ರಾಮೀಣ ಪ್ರದೇಶದ ಅನುಭವಗಳೊಂದಿಗೆ ಒರೆ ಹಚ್ಚುವ ಪ್ರಯತ್ನ ಕಂಬಾರರದು.

ಹಾಡು ಮತ್ತು ಕತೆಗಳು ಸೇರಿ ಕಂಬಾರರ ನಾಟಕಗಳು ಸೃಷ್ಠಿಯಾಗಿವೆ. ವಿಭಿನ್ನ ಪಾತ್ರ, ಸನ್ನಿವೇಶ, ನೆಲೆ, ಸಂಸ್ಕೃತಿಯ ಸೃಷ್ಟಿಯ ಮೂಲಕ ಕಂಬಾರರು ವಿಶ್ವದರ್ಜೆಯ ನಾಟಕಕಾರರಾಗಿದ್ದಾರೆ. ಇವರ ನಾಟಕಗಳು ಸಮುದಾಯದ ಹಿತವನ್ನು ಬಯಸುತ್ತವೆ. ಸಮಕಾಲೀನ ರಾಜಕೀಯದ ವಿಡಂಬನೆ, ಜಾತಿವಿನಾಶ, ಶ್ರಮಿಕ ವರ್ಗದ ಬಗೆಗೆ ಕಾಳಜಿ, ಮಾನವ ಪ್ರೀತಿ ಇವುಗಳ ಬಗೆಗೆ ಆಸಕ್ತಿ ವಹಿಸುತ್ತವೆ. ಹೀಗೆ ವಿವಿಧ ಮಜಲುಗಳಲ್ಲಿ ಮೂಡಿಬಂದಿರುವ ಕಂಬಾರರ ನಾಟಕಗಳಲ್ಲಿ ದೇಸೀಯತೆಗೆ ದೊರೆತಿರುವ ಪ್ರಾಮುಖ್ಯತೆಯನ್ನು ಕುರಿತು ಚರ್ಚಿಸುವುದು ಈ ಲೇಖನದ ಉದ್ದೇಶವಾಗಿದೆ.

Downloads

Published

01.04.2024

How to Cite

JYOTHI K. S. (2024). ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ದೇಸಿ ಸಂಸ್ಕೃತಿ. AKSHARASURYA, 3(04), 126 to 138. Retrieved from https://aksharasurya.com/index.php/latest/article/view/351