ಹಿಂದುಳಿದ ವರ್ಗಗಳ ಚಳವಳಿ: ಚಾರಿತ್ರಿಕ ಹಿನ್ನೆಲೆ, ಸ್ವರೂಪ ಹಾಗೂ ಮಹತ್ವ

Authors

  • ಚಿಕ್ಕಮಗಳೂರು ಗಣೇಶ

Keywords:

ಸ್ವಯಂ ಮರ್ಯಾದೈ, ಜಸ್ಟಿಸ್ ಪಾರ್ಟಿ, ದ್ರಾವಿಡ ಕಳಗಂ, ನಾನ್-ಬ್ರಾಹ್ಮಿನ್, ದೇವದಾಸಿ ಪದ್ಧತಿ

Abstract

ಕನ್ನಡ ನೆಲದಲ್ಲಿ ಬಸವಣ್ಣನ ಸಾಂಸ್ಕೃತಿಕ ನಾಯಕತ್ವದಲ್ಲಿ ವಚನ ಸಾಹಿತ್ಯಾಭಿವ್ಯಕ್ತಿಯ ಮೂಲಕ ಜರುಗಿದ ಸಮಾನತೆಯ ಚಿಂತನೆಯ ಹೋರಾಟ ಚರಿತ್ರೆಯಲ್ಲಿ ಮಹತ್ವದ್ದಾಗಿದೆ. ಅದು ಸಂಭವಿಸಿದ ಕಾಲ 12ನೆಯ ಶತಮಾನ. ಅದರ ತರುವಾಯ 19ನೆಯ ಶತಮಾನದಲ್ಲಿ ‘ಬ್ರಾಹ್ಮಣ್ಯ ಆಡಳಿತಶಾಹಿ ಯಜಮಾನಿಕೆ’ ವಿರುದ್ಧ ಹಿಂದುಳಿದ ವರ್ಗಗಳನ್ನು ಜಾಗೃತಿಗೊಳಿಸಲು ಕೆಳಕಾಣಿಸಿದ ಹೋರಾಟಗಳು ಮಹತ್ವದ ಪಾತ್ರ ವಹಿಸಿದವು.

ಮಹಾರಾಷ್ಟ್ರದ ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ‘ಸತ್ಯಶೋಧಕ ಸಮಾಜ’ದ ಮುಖಾಂತರ, ಬ್ರಾಹ್ಮಣ್ಯ ಪ್ರಾಬಲ್ಯದ ವಿರೋಧ-ಶೂದ್ರ ದಲಿತರಿಗೆ ಸಮಾನತೆಯ ಹಕ್ಕು-ಮಹಿಳೆಯರ ಶಿಕ್ಷಣದ ಸಲುವಾಗಿ ಹಗಲಿರುಳು ಹೋರಾಡಿದರು. ಶಾಹು ಮಹಾರಾಜರು ತಮ್ಮ ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಬ್ರಾಹ್ಮಣೇತರರಿಗೆ ಅವಕಾಶ ನೀಡುವ ಉದ್ದೇಶದಿಂದ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದರು. ಆ ಮೂಲಕ, ಫುಲೆ ಅವರು ಆರಂಭಿಸಿದ್ದ ಹಿಂದುಳಿದ ವರ್ಗಗಳ ಅಭ್ಯುದಯದ ಹೋರಾಟಕ್ಕೆ ಶಾಹು ಮಹಾರಾಜರು ಶಾಸನಾತ್ಮಕ ಆದೇಶ ನೀಡಿದರು ಎನ್ನಬಹುದು.

ಇನ್ನು ನಾರಾಯಣ ಗುರುಗಳು ಕೇರಳದಲ್ಲಿ ‘ಧರ್ಮ ಪರಿಪಾಲನ ಯೋಗಂ’ ಸಂಸ್ಥೆಯನ್ನು ಆರಂಭಿಸಿ, ಉನ್ನತ ಜಾತಿಯವರ ಯಜಮಾನಿಕೆಯನ್ನು ವಿರೋಧಿಸುವ, ಹಿಂದುಳಿದ ವರ್ಗದವರಿಗೆ ಪ್ರತ್ಯೇಕವಾಗಿ ದೇಗುಲಗಳನ್ನು ನಿರ್ಮಿಸುವ, ಶಿಕ್ಷಣದಿಂದ ಮಾತ್ರ ಸುಧಾರಣೆ ಸಾಧ್ಯವೆಂಬ ಅರಿವು ಮೂಡಿಸುವ ಹಲವು ಸಮಾಜ ಪರಿವರ್ತನ ಕಾರ್ಯಗಳನ್ನು ಪ್ರಾರಂಭಿಸಿದರು. ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ಅವರಂತೂ, ಇಂಥವುಗಳನ್ನು ತುಂಬಾ ಕ್ರಾಂತಿಕಾರಕವಾಗಿ ಮುಖಾಮುಖಿಯಾದರು. ಮೊದಲಿಗೆ ಅವರು ಬ್ರಾಹ್ಮಣಶಾಹಿಯ ವಿರುದ್ಧ ಪ್ರಬಲ ಸೈದ್ಧಾಂತಿಕ ಹೋರಾಟವನ್ನು ಕಟ್ಟಿದರು. ಅದರ ಭಾಗವಾಗಿ ಪುರೋಹಿತಶಾಹಿ ಕುರುಹುಗಳಾದ ದೇವರು ಮತ್ತು ದೇವಾಲಯಗಳನ್ನು ತಿರಸ್ಕರಿಸಲು ಕರೆಕೊಟ್ಟರು. ಮನುಷ್ಯ ಆತ್ಮಘನತೆಗಾಗಿ ವೈಚಾರಿಕವಾಗಿ ಸದೃಢವಾಗುವ ಬಗ್ಗೆ ಅರಿವು ಮೂಡಿಸಿದರು. ಅದಕ್ಕಾಗಿ ‘ಸ್ವಯಂ ಮರ್ಯಾದೈ’ ಚಳವಳಿಯನ್ನು ಕಟ್ಟಿದರು.

ಇದೇ ವೇಳೆಗೆ ಮದ್ರಾಸಿನಲ್ಲಿ ‘ಜಸ್ಟಿಸ್ ಪಾರ್ಟಿ’ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷದ ಉದಯವಾಯಿತು. ಅದು ತನ್ನ ಪ್ರಣಾಳಿಕೆಯನ್ನು ‘ನಾನ್-ಬ್ರಾಹ್ಮಿನ್ ಮ್ಯಾನಿಫೆಸ್ಟೋ’ ಎಂದು ಘೋಷಿಸಿಕೊಂಡಿತು. ದಕ್ಷಿಣ ಭಾರತದಲ್ಲಿ ಬ್ರಾಹ್ಮಣೇತರ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ತನ್ನ ಪಕ್ಷದ ಧ್ಯೇಯವನ್ನಾಗಿ ಮಾಡಿಕೊಂಡಿತು. ಹೀಗೆ ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ ಭಾರತದ ತುಂಬ ಆರಂಭವಾದ ಬ್ರಾಹ್ಮಣೇತರ ವರ್ಗಗಳ ಹಕ್ಕೊತ್ತಾಯದ ಕಾರ್ಯಚಟುವಟಿಕೆಗಳು ಕನ್ನಡ ನೆಲದಲ್ಲಿ ಹಿಂದುಳಿದ ವರ್ಗಗಳ ಚಳವಳಿಯ ಹುಟ್ಟಿಗೆ ಪ್ರೇರಣೆಯನ್ನು ಒದಗಿಸಿದವು.

Downloads

Published

01.04.2024

How to Cite

GANESHA. (2024). ಹಿಂದುಳಿದ ವರ್ಗಗಳ ಚಳವಳಿ: ಚಾರಿತ್ರಿಕ ಹಿನ್ನೆಲೆ, ಸ್ವರೂಪ ಹಾಗೂ ಮಹತ್ವ. AKSHARASURYA, 3(04), 38 to 49. Retrieved from https://aksharasurya.com/index.php/latest/article/view/341