ಧಾರ್ಮಿಕ ಸಾಹಿತ್ಯದ ಹಿನ್ನೆಲೆಯಲ್ಲಿ ಸಾಂಗತ್ಯ ಕಾವ್ಯ.

Authors

  • Ratnaprabha

Abstract

ಕನ್ನಡ ಸಾಹಿತ್ಯದ ಪ್ರಮುಖವಾದ ಸಾಹಿತ್ಯ ಪ್ರಕಾರಗಳಲ್ಲಿ ಸಾಂಗತ್ಯವೂ ಒಂದು. ಸಾಂಗತ್ಯ ಎನ್ನುವ ಪದಪ್ರಯೋಗ ಸುಮಾರು ಹದಿನೈದನೆಯ ಶತಮಾನದಿಂದಲೇ ಬಳಕೆಗೆ ಬಂದಿದೆ. ಇದು ಅಂಶಗಣ ಪ್ರಧಾನವಾದದ್ದು. ಅದರಲ್ಲೂ ವಿಷ್ಣುಗಣ ಪ್ರಧಾನವಾದುದು. ಇತರ ಸಾಹಿತ್ಯ ಪ್ರಕಾರಗಳಂತೆ ಸಾಂಗತ್ಯವೂ ಕೂಡ ಕನ್ನಡ ಸಾಹಿತ್ಯದಲ್ಲಿ ಸಮೃದ್ಧವಾಗಿ ಬೆಳೆದು ಹೆಮ್ಮರವಾಗಿದೆ.

ಸಾಂಗತ್ಯಕ್ಕೆ ಸಾಂಗತ್ಯ ಎನ್ನುವ ಹೆಸರಲ್ಲದೆ ಸಂಗತಿ (ನೇಮಿಜಿನೇಶಸಂಗತಿ), ಸಂಗೀತ (ರಾಮನ ಸಮಗೀತ), ಪಡುಗಬ್ಬ (ಹಡುಗಬ್ಬ), ಪದಕೃತಿ, ಪದಕವಿತೆ ಪದಸ್ತು ಎಂಬ ಹೆಸರುಗಳೂ ಇವೆ. ಸಾಂಗತ್ಯ ಎಂಬ ಅರ್ಥಪೂರ್ಣವಾದ ಅನ್ವರ್ಥನಾಮವನ್ನು ಕುರಿತು ವಿದ್ವಾಂಸರು ತಮ್ಮದೇ ಆದ ಅಭಿಪ್ರಾಯಗಳನ್ನು ನೀಡಿದ್ದಾರೆ.

ಸಾಂಗತ್ಯ ಕಾವ್ಯಗಳು ಸಾಂಗತ್ಯದ ಸರಳ ನಿಯಮಗಳಿಂದ ಎಲ್ಲಾ ಧರ್ಮದ ಕವಿಗಳು ಆಕರ್ಷಿತರಾದರು. ವರ್ಣಕ ಕಾವ್ಯಗಳಿಗೆ ಹೇಳಿ ಮಾಡಿಸಿದಂತಿದ್ದ ಸಾಂಗತ್ಯ ಪ್ರಕಾರ ಬಹಳ ನಿಧಾನವಾಗಿ ರೂಪುಗೊಂಡರೂ ಬಹುಬೇಗ ಜನಪ್ರಿಯವಾಯಿತು. ಸಾಂಗತ್ಯದ ಸರಳ ಶೈಲಿ ಮತ್ತು ಆಡುಭಾಷೆ ಹಾಗೂ ಹೊಸ ಛಂದೋರೂಪದಿಂದ ಆಕರ್ಷಿತರಾದ ಎಲ್ಲಾ ಧರ್ಮದ ಕವಿಗಳು ಸಾಂಗತ್ಯದಲ್ಲಿ ಹೇರಳವಾದ ಕೃತಿಗಳನ್ನು ರಚಿಸಿದರು. ಕೇವಲ 14 ಪದಗಳುಳ್ಳ `ಗಣ ಸಾಂಗತ್ಯ’ ದಿಂದ ಹಿಡಿದು 9969 ಪದ್ಯಗಳುಳ್ಳ ಭರತೇಶ ವೈಭವದಂತಹ ಮಹಾಕಾವ್ಯಗಳು ಸಾಂಗತ್ಯದಲ್ಲಿ ರಚನೆಯಾದವು.

ಸಾಂಗತ್ಯ ಕವಿಗಳಲ್ಲಿ ಕೆಲವರು ರಾಜಾಶ್ರಯ ಪಡೆದು ರಾಜರ ಅಜ್ಞಾನುಸಾರ ಕಾವ್ಯ ರಚಿಸಿದರೆ, ಕೆಲವರು ಸ್ವತಂತ್ರರಾಗಿದ್ದುಕೊಂಡು ಸ್ವಪ್ರೇರಣೆಯಿಂದ ಕಾವ್ಯ ರಚಿಸಿದ್ದಾರೆ. ಕೆಲವು ರಾಜರುಗಳು ಸ್ವತಃ ಕಾವ್ಯ ರಚಿಸಿ ಸ್ವಂತಿಕೆಯನ್ನು ಮೆರೆದಿದ್ದಾರೆ. ಕವಿಯ ಮತಧರ್ಮದ ತತ್ತ್ವವಿಚಾರಗಳಿಗೆ ಹಾಗೂ ಐತಿಹಾಸಿಕ, ಸಾಮಾಜಿಕ, ತಾತ್ವಿಕ, ತಾರ್ಕಿಕ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದ ಕಾವ್ಯಗಳು ಹೆಚ್ಚಾಗಿ ರಚನೆಯಾಗಿವೆ. ಜೈನ ಕಾವ್ಯಗಳು ಜೈನಧರ್ಮದ ತತ್ತ್ವವಿಚಾರಗಳನ್ನು ಹೇಳಿದರೆ, ವೀರಶೈವ ಕಾವ್ಯಗಳು ವೀರಶೈವ ಧರ್ಮದ ತತ್ತ್ವವಿಚಾರಗಳನ್ನು, ಬ್ರಾಹ್ಮಣ ಕಾವ್ಯಗಳು ವೈದಿಕ ಧರ್ಮದ ತತ್ತ್ವವಿಚಾರಗಳನ್ನು ಪ್ರತಿಪಾದಿಸುತ್ತವೆ. ಸಾಂಗತ್ಯಕ್ಕೆ ಜೈನಕವಿಗಳ ಕೊಡುಗೆ ಅಪಾರವಾದುದು.

Downloads

Published

05.02.2023

How to Cite

Ratnaprabha. (2023). ಧಾರ್ಮಿಕ ಸಾಹಿತ್ಯದ ಹಿನ್ನೆಲೆಯಲ್ಲಿ ಸಾಂಗತ್ಯ ಕಾವ್ಯ. AKSHARASURYA, 2(02), 73 to 74. Retrieved from http://aksharasurya.com/index.php/latest/article/view/60

Issue

Section

Article