ದಾಸಸಾಹಿತ್ಯದಲ್ಲಿ ಒಗಟುಗಳು.
Abstract
ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ವಚನಸಾಹಿತ್ಯವು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಅದೇ ರೀತಿಯಲ್ಲಿ ವಚನಸಾಹಿತ್ಯದ ನಂತರದಲ್ಲಿ ಬಂದ ದಾಸಸಾಹಿತ್ಯವು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಸಾಹಿತ್ಯಿಕ ಸಂಪತ್ತನ್ನು ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ದಾಸಸಾಹಿತ್ಯದಲ್ಲಿ ಆದ್ಯರೆನಿಸಿಕೊಂಡ ನರಹರಿತೀರ್ಥರಾಗಲಿ, ಶ್ರೀಪಾದರಾಜರಾಗಲಿ ತಮ್ಮ ಹಿತನುಡಿಗಳಿಂದ ಅಂದಿನ ಸಮಾಜದ ಅಂಕುಡೊಂಕುಗಳನ್ನು ಕುರಿತು ಹಾಡುಕಟ್ಟಿ ಹಾಡಿ ಜನರಿಗೆ ತಿಳಿಹೇಳುವ ಕಾರ್ಯ ಮಾಡಿದರು. ಈ ರೀತಿಯಲ್ಲಿ ಬೆಳೆದುಬಂದ ದಾಸಸಾಹಿತ್ಯ ಅನೇಕ ಮಹಾ ದಾಸರನ್ನು ತನ್ನ ಪ್ರಭಾವಕ್ಕೆ ಒಳಗು ಮಾಡಿಕೊಂಡು ಸಾಹಿತ್ಯ ರಚಿಸುವಂತೆ ಮಾಡಿತು. ವಾದಿರಾಜ, ಪುರಂದರಾದಾಸ, ಕನಕದಾಸ, ಜಗನ್ನಾಥದಾಸ, ಗೋಪಾಲದಾಸರು ಮುಂತಾದವರು ದಾಸಸಾಹಿತ್ಯಕ್ಕೆ ಉಪಯುಕ್ತ ಕೊಡುಗೆಗಳನ್ನು ನೀಡಿದ್ದಾರೆ. ದಾಸಸಾಹಿತ್ಯವು ಕೀರ್ತನೆ, ಉಗಾಭೋಗ, ಸುಳಾದಿ, ಕಾವ್ಯ, ಮುಂಡಿಗೆ ಹೀಗೆ ವಿವಿಧ ಪ್ರಕಾರಗಳಲ್ಲಿ ಹಂಚಿಹೋಗಿದೆ. ಈ ಎಲ್ಲ ಪ್ರಕಾರಗಳಲ್ಲಿ ದಾಸರು ಸಾಹಿತ್ಯದ ದಾಸೋಹ ನಡೆಸಿದ್ದಾರೆ.
ದಾಸಸಾಹಿತ್ಯವೆಂದಕೂಡಲೇ ನಾವು ಸಾಮಾನ್ಯವಾಗಿ ಕೀರ್ತನೆ, ಉಗಾಭೋಗ, ಸುಳಾದಿ, ಮುಂಡಿಗೆಗಳು ಎಂದುಕೊಳ್ಳುತ್ತೇವೆ. ಇದನ್ನು ಮಿರಿ ನಮ್ಮ ದಾಸರ‍್ಯರು ತ್ರಿಪದಿಗಳ ರೂಪದಲ್ಲಿ, ಸಂವಾದದರೂಪದಲ್ಲಿ, ಕನ್ನಡ ಸಾಹಿತ್ಯದ ಒಗಟುಗಳನ್ನು ಹೋಲುವಂತಹ ಮುಂಡಿಗೆಗಳನ್ನು ರಚಿಸುವ ಮೂಲಕ ಸಾಹಿತ್ಯರಸವನ್ನು ಉಣಬಡಿಸಿದ್ದಾರೆ. ಅಂತಹ ಅಪರೂಪದ ಒಗಟುಗಳನ್ನು ಪರಿಚಯಿಸಿದವರಲ್ಲಿ ನಮ್ಮ ಕನಕದಾಸರು, ಪುರಂದರದಾಸರು ಅಗ್ರಸ್ಥಾನದಲ್ಲಿದ್ದಾರೆ. ಇಂತಹ ಒಗಟುಗಳನ್ನು ದಾಸಸಸಾಹಿತ್ಯದಲ್ಲಿ ಕನಕದಾಸರು ಮುಂಡಿಗೆ ಎಂಬ ಹೆಸರಿನಿಂದ ರಚಿಸಿದರೆ, ಪುರಂದರದಾಸರು ಸಂವಾದದ ರೀತಿಯಲ್ಲಿ ಒಗಟುಗಳನ್ನು ರಚಿಸಿದ್ದಾರೆ. ದಾಸಸಾಹಿತ್ಯದಲ್ಲಿ ಕಂಡುಬಂದಂತಹ ಇಂತಹ ಒಗಟುಗಳನ್ನು ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇನೆ.
References
ಸುನಂದಮ್ಮ ಆರ್., ದಾಸಸಾಹಿತ್ಯದಲ್ಲಿ ಜಾನಪದ ಅಂಶಗಳು ಒಂದು ಅಧ್ಯಯನ, ಮೈಸೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಮೈಸೂರು, 1994.
ಹರಿದಾಸರತ್ನಂ ಗೋಪಾಲದಾಸರು., ಶ್ರೀ ಹರಿದಾಸ ಭಾರತಿ ಮಾಸಪತ್ರಿಕೆ ಸಂಪುಟ-10, 1960.