ಗಾದೆ

Authors

  • ರಾಗೌ (ರಾಮೇಗೌಡ)
  • ಎಂ. ಭೈರಪ್ಪ ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಮಾಜ ವಿಜ್ಞಾನ ಮತ್ತು ಭಾಷೆಗಳ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ), ಕೆ.ನಾರಾಯಣಪುರ, ಕೊತ್ತನೂರು ಅಂಚೆ, ಬೆಂಗಳೂರು.

Keywords:

ಗಾದೆ, ಜನಪದ ಸಾಹಿತ್ಯ, ನಾಣ್ಣುಡಿ, ಗಾಥಾ, ಲೋಕೋಕ್ತಿ

Abstract

ಸಮಚಿತ್ತತೆಯ ಶೋಧಕ-ಸಾಧಕರಾಗಿ ಡಾ.ರಾಗೌ (ರಾಮೇಗೌಡ)
ಡಾ.ರಾಗೌ(ರಾಮೇಗೌಡ) ಅವರು ಕನ್ನಡ ನವೋತ್ತರ ಯುಗದ ಪ್ರಮುಖ ಕವಿಯಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಶಾಸ್ತ್ರೀಯ ಮತ್ತು ಜಾನಪದ ವಿದ್ವಾಂಸರಾಗಿ ಹೊಮ್ಮಿದ ವಿಶಿಷ್ಟ ಲೇಖಕರು. ಕಾವ್ಯ, ವಿಮರ್ಶೆ, ಜಾನಪದ ಅಧ್ಯಯನ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ರಾಗೌ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯಕಯಾನವನ್ನು ವಿಕಾಸಪಡಿಸಿಕೊಂಡವರು. ಸದಾ ಸಂಕ್ರಮಣಶೀಲವಾದ ಆಧುನಿಕ ಕನ್ನಡ ಸಾಹಿತ್ಯದ ಬಾನಂಗಳವನ್ನು ತನ್ನದೇ ನೆಲೆಯಲ್ಲಿ ನಿಂತು ನಿಟ್ಟಿಸುತ್ತಾ ತಮ್ಮ ಸಾಧನೆಯ ಸಾಮರ್ಥ್ಯವನ್ನು ತೋಡಿಸಿಕೊಂಡವರು ರಾಗೌ, ತಮ್ಮ ಅವಲೋಕನದಲ್ಲೂ ಕ್ರಿಯಾಶೀಲತೆಯಲ್ಲೂ ಇಂತಹುದೊಂದು ದೂರವನ್ನು, ನಿರ್ಲಿಪ್ತತೆಯನ್ನು ಅಂತರ್ಗತಗೊಳಿಸಿಕೊಂಡು ಬರೆಯುತ್ತಾ ಬಂದುದರಿಂದ ಅವರು ಒಂದು ವಿಶಿಷ್ಟ ಶಕ್ತಿಯಾಗಿ, ಧ್ವನಿಯಾಗಿ ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ನಿಲ್ಲುತ್ತಾರೆ; ಪಂಥಾತೀತ ನೆಲೆಗಟ್ಟಿನ ಅಧಿಕೃತ ವಕ್ತಾರರಾಗಿ ಕಾಣಿಸಿಕೊಳ್ಳುತ್ತಾರೆ.


ಡಾ.ರಾಗೌ ಅವರು ಮಂಡ್ಯ ಜಿಲ್ಲೆಯ ತಾಲ್ಲೂಕಿನ ಈರೇಗೌಡನದೊಡ್ಡಿಯಲ್ಲಿ ೧೯೪೨ರ ಏಪ್ರಿಲ್ ೩ರಂದು ಜನಿಸಿದವರು. ತಂದೆ ಮಾಸ್ತಿಗೌಡ, ತಾಯಿ ನಿಂಗಮ್ಮ. ೧೯೫೯ರಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಪ್ರಥಮದರ್ಜೆಯಲ್ಲಿ ಪಾಸುಮಾಡಿದ್ದಾರೆ. ಈ ಸಂದರ್ಭದಲ್ಲಿಯೇ ಗೌತಮಬುದ್ದರ ಬಗೆಗೆ ಓದಿ ಅವರ ವ್ಯಕ್ತಿತ್ವದಿಂದ, ತತ್ತ್ವಗಳಿಂದ ಪ್ರಭಾವಿತರಾಗುತ್ತಾರೆ. ಪ್ರೌಢಶಾಲಾ ಹಂತದ ಓದನ್ನು ಮುಗಿಸುವ ಹೊತ್ತಿಗೆ ರಾಗೌ ಕನ್ನಡ ಪ್ರೀತಿ, ಸಾಹಿತ್ಯಾಸಕ್ತಿ, ಭಾವತಲ್ಲೀನತೆ, ಅಧ್ಯಯನದ ಶಿಸ್ತನ್ನು ಆವಾಹನೆ ಮಾಡಿಕೊಂಡು ಆಗಿತ್ತು. ಅದಕ್ಕನುಗುಣವಾಗಿ ಅವರ ಮುಂದಿನ ಓದಿನ ಅಪೇಕ್ಷೆ ಮಾನವಿಕಗಳತ್ತಲೇ ಇದ್ದರೂ ಪಾಲಕರ ಅಪೇಕ್ಷೆ ಬೇರೆಯಾಗಿದ್ದುದರಿಂದ ಪಿಯುಸಿಯಲ್ಲಿ ವಿಜ್ಞಾನದ ವಿದ್ಯಾರ್ಥಿಯಾದರು. ಈ ಓದು ಒಂದು ರೀತಿಯಲ್ಲಿ ಅವರ ಮುಂದಿನ ತಾರ್ಕಿಕಶಕ್ತಿ ಮತ್ತು ವಿಚಾರಶೀಲತೆಗೆ ನೆರವಾಗಿದೆ. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪಿಯುಸಿಯನ್ನು ಯಶಸ್ವಿಯಾಗಿ ಮುಗಿಸಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ಗೆ ಸೀಟನ್ನೂ ಪಡೆದರು. ಆದರೆ ಈ ಹಂತದಲ್ಲಿ ತಮ್ಮ ಅಂತರಂಗದ ಒಲವಿನತ್ತಲೇ ವಾಲಿದ ರಾಗೌ ಅವರು ಪಾಲಕರ ವಿರೋಧದ ನಡುವೆಯೂ ಬೆಂಗಳೂರಿನತ್ತ ಹೋಗುವುದನ್ನು ಬಿಟ್ಟು ಮಹಾರಾಜಾ ಕಾಲೇಜು ಸೇರಿ ಬಿ.ಎ. ವ್ಯಾಸಂಗವನ್ನು ಮುಂದುವರಿಸಿದರು. ಕನ್ನಡ ಸಾಹಿತ್ಯ ಮತ್ತು ಭಾಷಾಶಾಸ್ತ್ರ ಅವರ ಅಧ್ಯಯನದ ವಿಷಯಗಳಾದುವು. ಡಿ.ಎಲ್‌.ನರಸಿಂಹಾಚಾರ್, ಜಿ.ವರದರಾಜರಾವ್, ಹಾ.ಮಾ.ನಾಯಕ, ಉ.ಕಾ.ಸುಬ್ಬರಾಯಾಚಾರ್, ಸುಜನಾ, ಯು.ಆರ್.ಅನಂತಮೂರ್ತಿ ಮೊದಲಾದವರಿಂದ ಕೂಡಿದ ಗುರುವೃಂದ ಅವರಿಗೆ ಲಭಿಸಿತು; ಸಾಹಿತ್ಯ ಸಾಧನೆಯ ಮಾರ್ಗ ದೃಢವಾಯಿತು.


ಕಾಲೇಜು ದಿವಸಗಳಲ್ಲಿ ಅಭ್ಯಾಸದ ಜೊತೆಗೆ ಕವಿತೆಗಳ ರಚನೆ ಮುಖ್ಯ ಹವ್ಯಾಸವಾಯಿತು. ಸಂದರ್ಭ ಒದಗಿದಾಗ ವಿಮರ್ಶೆಯ ಲೇಖನಗಳನ್ನೂ ಬರೆದರು. ಟ್ಯಾಗೂರರ ‘ಗೀತಾಂಜಲಿ’, ಅಶ್ವಘೋಷನ ‘ಬುದ್ಧಚರಿತೆ’, ಕುವೆಂಪು ಕಾದಂಬರಿಗಳು ಮಹಾಕಾವ್ಯ ಭಾವಗೀತೆಗಳು ವೈಚಾರಿಕ ಬರೆಹಗಳು, ಕಾರಂತರ ಸಾಹಿತ್ಯ ಮೊದಲಾದುವನ್ನು ರಾಗೌ ಈ ಹಂತದಲ್ಲಿ ಬಹುಶ್ರದ್ಧೆಯಿಂದ ಅಭ್ಯಾಸ ಮಾಡಿದರು. ಅವುಗಳಿಂದ ಪ್ರೇರಿತರಾಗಿ ತಮ್ಮ ಬರೆವಣಿಗೆಯನ್ನು ಬಲಪಡಿಸಿಕೊಂಡರು. ೧೯೬೩ರಲ್ಲಿ ಮಹಾರಾಜಾ ಕಾಲೇಜಿನ ವ್ಯಾಸಂಗ ಮುಗಿಸಿ ಬಿ.ಎ. ಪದವಿ ಪಡೆದರು. “ನನ್ನ ಸಾಹಿತ್ಯಾಸಕ್ತಿಗೆ ಮತ್ತು ಬರೆವಣಿಗೆಗೆ ಮಹಾರಾಜಾ ಕಾಲೇಜು ಒಂದು ತಳಹದಿಯನ್ನು ಹಾಕಿಕೊಟ್ಟಿತು” ಎಂಬುದು ಅವರ ಅಭಿಪ್ರಾಯ. ಮುಂದಿನ ಓದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದಲ್ಲಿ; ಕನ್ನಡ ಎಂ.ಎ ಪದವಿ. ಊಟ, ಬಟ್ಟೆಗೆ ಕಾಸಿಲ್ಲದೆ ಕಡುಕಷ್ಟದಲ್ಲಿ ಎಂ.ಎ ಓದುತ್ತಿದ್ದ ರಾಗೌ ಅವರು ಆ ವರೆಗೂ ಚಪ್ಪಲಿಯನ್ನೂ ಸಹ ತೊಟ್ಟಿರಲಿಲ್ಲ. ಕನ್ನಡದಲ್ಲಿ ಫೇಲಾದ ಹುಡುಗನೊಬ್ಬನಿಗೆ ಪಾಠ ಮಾಡುತ್ತಾ ಬಂದ ಹಣದಿಂದ ಊಟ, ಬಟ್ಟೆ, ಪುಸ್ತಕ ಮತ್ತು ಚಪ್ಪಲಿಗಳನ್ನು ಏರ್ಪಾಡು ಮಾಡಿಕೊಳ್ಳುತ್ತಾರೆ. ಅಪಾರವಾದ ಶ್ರಮ, ಶ್ರದ್ಧೆ, ಪ್ರಯತ್ನಶೀಲ ಅಧ್ಯಯನದಿಂದ ಪ್ರಥಮಶ್ರೇಣಿಯಲ್ಲಿ ಚಿನ್ನದ ಪದಕಗಳು ಹಾಗೂ ಇತರ ಬಹುಮಾನಗಳೊಡನೆ ೧೯೬೫ರಲ್ಲಿ ಕನ್ನಡ ಎಂ.ಎ. ಪದವಿಯನ್ನು ಪಡೆಯುತ್ತಾರೆ. ತರಗತಿಯ ವಿಚಾರಸಂಕಿರಣಗಳಿಗೆ ಬರೆದ ವಿಮರ್ಶೆ ಮತ್ತು ಸಂಶೋಧನಾ ಪ್ರಬಂಧಗಳು ಪ್ರಾಧ್ಯಾಪಕರ ಮೆಚ್ಚುಗೆ ಪಡೆದಿದ್ದಲ್ಲದೆ ‘ಪ್ರಬುದ್ಧ ಕರ್ಣಾಟಕ’ದಲ್ಲಿ ಪ್ರಕಟವಾಗಿದ್ದವು. ಈ ವೇಳೆಗೆ ಒಬ್ಬ ಲೇಖಕರಾಗಿಯೂ ರೂಪುಗೊಂಡಿದ್ದ ರಾಗೌ ಅವರ ಮುಂದಿನ ಸಾಹಿತ್ಯ ಸಾಧನೆಗೆ ನಾಂದಿಯಾಯಿತು. “ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಬಲವತ್ತರವಾದಾಗ, ಛಲಗೊಂಡು ಅಂತಹ ಬೆಳಕನ್ನು ಬೆನ್ನುಹತ್ತಿದೆ. ಅರಿವು ಪ್ರಯತ್ನ ಮತ್ತು ಇಚ್ಛಾಶಕ್ತಿಗಳೇ ನನ್ನನ್ನು ಮುನ್ನಡೆಸಿದವು; ರೂಪಿಸಿದವು. ಸಾಹಿತ್ಯ ನನ್ನ ಗುರಿ ಎಂದು ಗೊತ್ತಾದಾಗ, ಅದರ ದಾರಿಯಲ್ಲಿ ನಾನು ನಿರಂತರ ಚಲಿಸದೆ, ಬೆಳವಣಿಗೆಗೊಂಡೆ” ಎನ್ನುತ್ತಾರೆ ರಾಗೌ ಅವರು. ವಿದ್ಯಾರ್ಥಿ ಜೀವನವನ್ನು ಸಾರ್ಥಕವಾಗಿ ಮುಗಿಸುತ್ತಿದ್ದಂತೆಯೇ ಮೈಸೂರು ವಿಶ್ವವಿದ್ಯಾನಿಲಯ ೧೯೬೫ರಲ್ಲಿ ಮಹರಾಜಾ ಕಾಲೇಜಿಗೆ ಕನ್ನಡ ಅಧ್ಯಾಪಕರನ್ನಾಗಿ ಅವರನ್ನು ನೇಮಕ ಮಾಡಿತು. ಬರೆಹದ ಬದುಕಿನೊಡನೆ ಉತ್ತಮ ಅಧ್ಯಾಪಕರಾಗಿ ರೂಪುಗೊಂಡು ತಮ್ಮ ಸೇವಾ ಅವಧಿಯನ್ನು ಸಾರ್ಥಕಪಡಿಸಿಕೊಳ್ಳುವತ್ತ ರಾಗೌ ಹೆಜ್ಜೆ ಹಾಕಿದರು. ನಾಲ್ಕು ವರ್ಷಗಳ ಕಾಲ ಸ್ನಾತಕಪೂರ್ವ ಹಂತದಲ್ಲೂ ಮೂವತ್ತಮೂರು ವರ್ಷಗಳ ಕಾಲ ಸ್ನಾತಕೋತ್ತರ ಹಂತದಲ್ಲೂ ಕನ್ನಡ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೂವತ್ತೇಳು ವರ್ಷಗಳ ಸುದೀರ್ಘ ಸೇವೆಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿಯೇ ಸಲ್ಲಿಸಿ ೨೦೦೨ರಲ್ಲಿ ನಿವೃತ್ತರಾಗಿದ್ದಾರೆ. ಇಂದು ಅವರಿಗೆ ಕುವೆಂಪು ಅವರ ಜೀವನ ಮತ್ತು ಸಾಹಿತ್ಯ ಶಕ್ತಿ; ಏಸು, ಗಾಂಧಿ ಅವರ ಕರುಣೆ, ಅಹಿಂಸೆ; ಬುದ್ಧನ ಜೀವನಪ್ರೀತಿ; ಬಸವಣ್ಣ, ಕಮ್ಯುನಿಷ್ಟರ ಸಮತಾ ತತ್ವಗಳು ಅತ್ಯಂತ ಪ್ರಿಯವಾದ ವಿಚಾರಗಳಾಗಿವೆ. ಅವರ ಬದುಕಿನಲ್ಲೂ ಬರೆಹದಲ್ಲೂ ನಾವಿದನ್ನು ಕಾಣಬಹುದಾಗಿದೆ. ರಾಗೌ ಅವರ ಕವಿತೆಗಳಲ್ಲಿ ಅವರ ವ್ಯಕ್ತಿತ್ವ ವಿಕಾಸದ ಸ್ಪಷ್ಟ ಹೆಜ್ಜೆಗುರುತುಗಳಿರುವುದನ್ನು ಕಾಣಬಹುದಾಗಿದೆ.


ಎಲ್ಲಕ್ಕಿಂತ ಮಿಗಿಲಾಗಿ ಡಾ.ರಾಗೌ ಮತ್ತು ಅವರ ಕುಟುಂಬದವರು ಸ್ವತಃ ‘ಶ್ರೀಮತಿ ಯಶೋದಾ ರಾಗೌ ಟ್ರಸ್ಟ’ನ್ನು ೧೯೯೯ರಲ್ಲಿ ಸ್ಥಾಪಿಸಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅದನ್ನು ಜೀವಂತವಾಗಿಟ್ಟು ಮುನ್ನಡೆಸುತ್ತಾ ಸಮಾಜದೊಟ್ಟಿಗೆ ತಮ್ಮದೇ ಆದ ಇನ್ನೊಂದು ನೆಲೆಯಲ್ಲಿ ಸಂವಹನಿಸುತ್ತಿದ್ದಾರೆ. ತಮ್ಮ ಮುದ್ದಿನ ಒಬ್ಬಳೇ ಮಗಳು, ಶ್ರೀಮತಿ ಕವಿತಾ ೧೯೯೮ರಲ್ಲಿ ಅಕಾಲಿಕ ದುರ್ಮರಣಕ್ಕೆ ಈಡಾದರು. ಈ ಅನಿರೀಕ್ಷಿತ ಆಘಾತದಿಂದ ಅಪಾರವಾದ ದುಃಖವನ್ನು ಅನುಭವಿಸಿದ ರಾಗೌ ಅವರ ಕುಟುಂಬವು ನಿಧಾನವಾಗಿ ಚೇತರಿಸಿಕೊಂಡು ನಮ್ಮ ಸಮಾಜದ ಅಸಂಖ್ಯಾತ ಹೆಣ್ಣುಮಕ್ಕಳ ಮತ್ತು ಅವರ ಪೋಷಕರ ನೆರವಿಗಾಗಿ ಈ ಟ್ರಸ್ಟನ್ನು ಸ್ಥಾಪಿಸಿದೆ. ಮಹಿಳೆಯರ ಕ್ಷೇಮಚಿಂತನೆ ನಡೆಸಿ, ಅವರ ಅಭಿವೃದ್ಧಿಗಾಗಿ ದುಡಿಯುತ್ತಿರುವ ನಿಷ್ಠಾವಂತ ಮಹಿಳೆಯರನ್ನು ಹಾಗೂ ಸಂಸ್ಥೆಗಳನ್ನು ಗುರುತಿಸಿ ಹತ್ತು ಸಾವಿರ ರೂಪಾಯಿಗಳ ನಗದನ್ನು ಒಳಗೊಂಡ ‘ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ’ಯನ್ನು ಟ್ರಸ್ಟಿನ ಮೂಲಕ ಕೊಡಲಾಗುತ್ತಿದೆ. ಪ್ರತಿವರ್ಷ ಶ್ರೀಮತಿ ಕವಿತಾ ಅವರ ಜನ್ಮದಿನದಂದು ನಡೆಯುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳೆಯರ ಸಮಸ್ಯೆಗಳನ್ನು ಕುರಿತಂತೆ ‘ಶ್ರೀಮತಿ ಕವಿತಾ ಸ್ಮಾರಕ ಉಪನ್ಯಾಸ’ವನ್ನು ಸಹ ಏರ್ಪಡಿಸಲಾಗುತ್ತದೆ. ತಜ್ಞರು ನೀಡುವ ಈ ಉಪನ್ಯಾಸವನ್ನು ಪುಸ್ತಕವಾಗಿ ಮುದ್ರಿಸಿ ಅದೇ ವೇದಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಈ ಮಾಲಿಕೆಯಲ್ಲಿ ಇದುವರೆಗೆ ಪ್ರಕಟವಾದ ಪುಸ್ತಕಗಳನ್ನು ಒಟ್ಟುಗೂಡಿಸಿ ‘ಮಹಿಳಾ ಅಧ್ಯಯನದ ಆಯಾಮಗಳು’ ಎಂಬ ಮಾಲಿಕೆಯ ಗ್ರಂಥಗಳನ್ನೂ ಹೊರತರಲಾಗಿದೆ.


ಕನ್ನಡ ಸಾರಸ್ವತ ಲೋಕಕ್ಕೆ ರಾಗೌ ಅವರು ನೀಡಿರುವ ಕೊಡುಗೆ ಮಹತ್ತರವಾದುದು. ಅವರು ಪ್ರಕಟಿಸಿರುವ ಪ್ರಕಾರವಹಿ ಕೃತಿಗಳ ಸಂಖ್ಯೆ ಹೀಗಿದೆ: ಕಾವ್ಯ-ಹತ್ತು, ನಾಟಕ-ಒಂದು, ವಿಮರ್ಶೆ-ಹತ್ತು, ಸಂಶೋಧನ ಮಹಾಪ್ರಬಂಧ-ಒಂದು, ಗ್ರಂಥಸಂಪಾದನೆ-ನಾಲ್ಕು, ಜಾನಪದ-ಹದಿಮೂರು, ಸಂಕೀರ್ಣ-ಒಂದು (ಷಷ್ಟಿಸಂಪದ), ಮಕ್ಕಳ ಸಾಹಿತ್ಯ-ಮೂರು, ಸಂಪಾದನೆ-ಒಂಭತ್ತು. ಕಾವ್ಯವು ರಾಗೌ ಅವರಿಗೆ ಒಲಿದ ಪ್ರಥಮ ಆದ್ಯತೆಯ ಕ್ಷೇತ್ರ. ಅವರ ಮೊದಲ ಕೃತಿಯೇ ಕವಿತೆಗಳ ಸಂಕಲನ, ವಿದ್ಯಾರ್ಥಿಯಾಗಿದ್ದಾಗ ಬರೆದ ಕವಿತಾ ಸಂಕಲನ ‘ಯಾತ್ರೆ’ ಎಂಬುದು ೧೯೬೬ರಲ್ಲಿ ಪ್ರಕಟಿಸಿದ್ದಾರೆ. ಅವರ ಬರೆಹದ ಬದುಕು ಅಧಿಕೃತವಾಗಿ ಇಲ್ಲಿಂದ ಆರಂಭವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಪ್ರಚಾರೋಪನ್ಯಾಸ ಮಾಲೆಗೆ ಕವಿ ರಾಘವಾಂಕನನ್ನು ಕುರಿತು ಸಂಶೋಧನೆ ಮತ್ತು ವಿಮರ್ಶೆಯ ಶಿಸ್ತಿಗೆ ಒಳಪಡುವ ಕಿರುಹೊತ್ತಗೆ ‘ರಾಘವಾಂಕ’ ಎಂಬ ಹೆಸರಿನಲ್ಲಿ ಅದು ೧೯೬೭ರಲ್ಲಿ ಪ್ರಕಟವಾಗಿದೆ. ಬೇರೆ ಬೇರೆ ಸಂಕಲನಗಳಿಗೂ ಸಂದರ್ಭಗಳಿಗೂ ಸಿದ್ಧಪಡಿಸಿಕೊಟ್ಟ ಇದೇ ಶಿಸ್ತಿನ ಲೇಖನಗಳು ಒಟ್ಟುಗೂಡಿ ‘ಕಾವ್ಯಾನುಶೀಲನ(೧೯೬೮) ಪ್ರಕಟವಾಯಿತು. ಅವಗಾಹನ(೧೯೭೫), ಕುವೆಂಪು ಸಾಹಿತ್ಯ ವಿಮರ್ಶನ(೧೯೭೮), ದುರ್ಗಸಿಂಹ(೧೯೮೩), ಪ್ರಾಸ್ತಾವಿಕ(೧೯೮೪), ಸಮಾಕೀರ್ಣ(೧೯೯೧), ಕೆ.ಎಸ್‌.ನರಸಿಂಹಸ್ವಾಮಿ(೨೦೦೨), ಬಿ.ಎಂ.ಶ್ರೀಕಂಠಯ್ಯ(೨೦೦೩), ಪ್ರಾಚೀನ ಕಾವ್ಯ ಚಿಂತನ(೨೦೦೩)-ಇವು ರಾಗೌ ಅವರ ಪ್ರಮುಖ ವಿಮರ್ಶಾ ಕೃತಿಗಳು. ‘ಕೆ.ಎಸ್.ನರಸಿಂಹಸ್ವಾಮಿ’ ಕೃತಿಯು ನವಕರ್ನಾಟಕ ಪ್ರಕಾಶನದ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರು’ ಮಾಲಿಕೆಗೆ ರಚಿಸಿಕೊಟ್ಟ ಕೃತಿ. ಒಬ್ಬ ಕವಿಯನ್ನು ಸಮಗ್ರವಾಗಿ ತಮ್ಮ ವಿವೇಚನೆಗೆ ಒಳಪಡಿಸಿದ ಕೃತಿ ಇದು. ರಾಗೌ ಅವರ ವಿಮರ್ಶಾ ಕೃತಿಗಳಲ್ಲಿಯೇ ಉತ್ಕೃಷ್ಟವಾದುದು ಎನ್ನುತ್ತಾರೆ ವಿಮರ್ಶಕರು. ‘ಪ್ರಾಚೀನ ಕಾವ್ಯ ಚಿಂತನ’ ಎಂಬುದು ಐನೂರು ಪುಟಗಳ ಗ್ರಂಥ. ಪ್ರಾಚೀನ ಕನ್ನಡ ಸಾಹಿತ್ಯವನ್ನು ಕುರಿತು ರಾಗೌ ಬರೆದ ಎಲ್ಲ ಲೇಖನಗಳನ್ನು ಇಲ್ಲಿ ಸಂಗ್ರಹಿಸಿಕೊಡಲಾಗಿದೆ. ಪಂಪನಿಂದ ಹಿಡಿದು ಅಳಿಯ ಲಿಂಗರಾಜನವರೆಗಿನ ವಿಷಯ ವ್ಯಾಪ್ತಿ ಇಲ್ಲಿದ್ದು ಇಪ್ಪತ್ತೈದು ಲೇಖನಗಳಿವೆ. ಮುಖ್ಯವಾಗಿ ರಾಗೌ ವಿಮರ್ಶೆ ಸಂಯಮಪೂರ್ಣವಾದ ನಿರ್ದುಷ್ಟವಾದ ಬರೆವಣಿಗೆಯಿಂದ ಕೂಡಿದೆ; ಅಭಿಪ್ರಾಯ ಸ್ಥಿಮಿತತೆ ಇದೆ. ಪ್ರಾಮಾಣಿಕತೆ, ಪಕ್ಷಪಾತರಾಹಿತ್ಯ, ಸಮತೂಕದ ವಿವೇಚನೆ ರಾಗೌ ವಿಮರ್ಶೆಯ ಗುಣಗಳಾಗಿವೆ. ವಿದ್ವಾಂಸರಾದ .ಎಚ್.ಕೃಷ್ಣಯ್ಯ ಅವರು ಹೇಳುವಂತೆ, “ರಾಗೌ ಅವರ ಮನೋಧರ್ಮದ ಸ್ಥಾಯಿ ಯಾವುದು ಅಂದರೆ, ಅದು ಅಭಿಜಾತ. ಅವರ ವಿಮರ್ಶಾಲೇಖನಗಳನ್ನೆಲ್ಲಾ ಒಮ್ಮೆ ಓದಿದಾಗ ಬಹಳ ಸೊಗಸಾಗಿ ಅವರು ವಿಷಯಗಳನ್ನು ವಿವರಿಸಿಕೊಂಡು ಬರುತ್ತಾರೆ ಅನ್ನಿಸಿತು. ಸ್ವಾರಸ್ಯಕರವಾದ ವಿಷಯವೇನೆಂದರೆ ಅವರಿಗೆ ಅತ್ಯಂತ ಪ್ರಿಯವಾದ ವಿಮರ್ಶೆಯ ವಿಧಾನ ವೈಚಾರಿಕ ವಿಮರ್ಶೆಯ ವಿಧಾನ”ವಾಗಿದೆ. ವಿಮರ್ಶೆಯ ನಡುವೆ ಅಲ್ಲಲ್ಲಿ ಸಂಶೋಧನ ದೃಷ್ಟಿ ಇಣುಕುವುದು, ಅವಶ್ಯವಿದ್ದೆಡೆ ಜಾನಪದ ಅಧ್ಯಯನದ ಬೆಳಕಿನಲ್ಲಿ ಅಭಿಜಾತ ಸಾಹಿತ್ಯವನ್ನು ಸಮೀಕ್ಷಿಸುವುದು ರಾಗೌ ಅವರ ವಿಮರ್ಶೆಯ ವೈಶಿಷ್ಟ್ಯ.


ರಾಗೌ ಅವರು ಸಂಪಾದಿಸಿದ ಪ್ರಾಚೀನ ಕಾವ್ಯಗಳು ನಾಲ್ಕು: ರನ್ನ ವಿರಚಿತ ಸಾಹಸಭೀಮ ವಿಜಯಂ(೧೯೮೫), ರನ್ನ ವಿರಚಿತ ಅಜಿತ ತೀರ್ಥಕರ ಪುರಾಣಂ(೧೯೮೮), ಲಕ್ಷ್ಮೀಶನ ಜೈಮಿನಿ ಭಾರತ(೧೯೯೩), ಸರ್ವಜ್ಞನ ವಚನಗಳು(೨೦೦೩). ಇವುಗಳಲ್ಲಿ ಮೊದಲ ಮೂರು ಕನ್ನಡದ ಮತ್ತೊಬ್ಬ ಪ್ರಮುಖ ಗ್ರಂಥಸಂಪಾದನಾ ತಜ್ಞ ಬಿ.ಎಸ್.ಸಣ್ಣಯ್ಯ ಅವರೊಡಗೂಡಿ ಸಿದ್ಧಪಡಿಸಿದಂತಹವು. ಈ ಇಬ್ಬರು ವಿದ್ವಾಂಸರ ಗ್ರಂಥಸಂಪಾದನಾ ಕಾರ್ಯ ಅಭಿಜಾತ ಪರಂಪರೆಯದು. ಮೇರು ವಿದ್ವಾಂಸರಾದ ಡಿ.ಎಲ್.ನರಸಿಂಹಾಚಾರ್, ತೀ.ನಂ.ಶ್ರೀಕಂಠಯ್ಯ ಮೊದಲಾದವರು ಅನುಸರಿಸಿದ ಶಾಸ್ತ್ರೀಯ ವಿಧಾನದ ಮುಂದುವರಿಕೆಯನ್ನು ಇವರಲ್ಲಿ ಕಾಣಬಹುದು. ಕನ್ನಡ ಗ್ರಂಥಸಂಪಾದನೆಯ ಇತಿಹಾಸದಲ್ಲಿ ಇಬ್ಬರು ವಿದ್ವಾಂಸರು ಕೂಡಿ ಗ್ರಂಥಪರಿಷ್ಕರಣೆ ಮಾಡಿರುವ ಒಂದು ಪರಂಪರೆಯೇ ಇದೆ. ಡಾ.ಬಿ.ಎಸ್.ಸಣ್ಣಯ್ಯ ಹಾಗೂ ಡಾ.ರಾಗೌ ಅವರು ಈ ಪರಂಪರೆಯನ್ನು ಮುಂದುವರಿಸಿದ್ದಾರೆ. ರಾಗೌ ಒಬ್ಬರೆ ಎರಡು ವರ್ಷಗಳ ಕಾಲ ಶ್ರಮಪಟ್ಟು ಸಂಪಾದಿಸಿದ ಕೃತಿ ‘ಸರ್ವಜ್ಞನ ವಚನಗಳು’, ಮೂರು ಓಲೆಪ್ರತಿಗಳು, ಎರಡು ಕಾಗದದ ಪ್ರತಿಗಳು ಹಾಗೂ ಒಂದು ಅಚ್ಚಾದ ಗ್ರಂಥವನ್ನು ಬಳಸಿಕೊಂಡು ಸಿದ್ಧಪಡಿಸಿದ ಪರಿಷ್ಕರಣ ಇದು. ಅತ್ಯಂತ ಜನಪ್ರಿಯ ಕವಿಯಾದ ಸರ್ವಜ್ಞನ ತ್ರಿಪದಿಗಳ ಪಾಠಾಂತರ ಸಮಸ್ಯೆ ಹಾಗೂ ಪಕ್ಷಿಪ್ತ ವಚನಗಳ ನಡುವೆ ಸಿಲುಕಿಕೊಂಡು ಸೂಕ್ತ ಪಾಠನಿರ್ಣಯ ಮಾಡುವುದು ಹಾಗೂ ಸರ್ವಜ್ಞನವಲ್ಲದ ವಚನಗಳನ್ನು ಪ್ರತ್ಯೇಕಿಸುವುದು ತುಂಬಾ ದುಸ್ತರವಾದ ಹಾಗೂ ಸೂಕ್ಷ್ಮವಾದ ಕಾರ್ಯ. ರಾಗೌ ಈ ಸಮಸ್ಯೆಗಳನ್ನೆಲ್ಲಾ ಸಮರ್ಥವಾಗಿ ನಿರ್ವಹಿಸಿ ಅಧಿಕೃತತೆಗೆ ಹೆಚ್ಚು ಹತ್ತಿರವಾದ ಪರಿಷ್ಕರಣವೊಂದನ್ನು ತಯಾರಿಸಿದ್ದಾರೆ. ಈ ಗ್ರಂಥದಲ್ಲಿ ರಾಗೌ ಅವರು ನಿರ್ವಹಿಸಿರುವ ಗ್ರಂಥಸಂಪಾದನಾ ಶಿಸ್ತು ಕೃತಿಯ ಉಪಯುಕ್ತತೆಯನ್ನು ಹೆಚ್ಚಿಸಿದೆ.


೨೦೦೫ರಲ್ಲಿ ಪ್ರಕಟವಾದ ‘ಷಷ್ಟಿಸಂಪದ’ ರಾಗೌ ಅವರ ಇನ್ನೊಂದು ವಿಶಿಷ್ಟ ಗ್ರಂಥ. ೨೦೦೨ರ ಏಪ್ರಿಲ್‌ಗೆ ರಾಗೌ ಅವರಿಗೆ ಅರುವತ್ತು ವರ್ಷಗಳು ಪೂರೈಸಿದ ನೆನಪಿಗಾಗಿ ಸಂವಹನ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ೬೦ ಲೇಖನಗಳಿರುವ ೬೦೦ ಪುಟಗಳ ಗ್ರಂಥ ಇದು. ಸಾಹಿತ್ಯ ವಿಮರ್ಶೆಯ ಭಾಗದಲ್ಲಿ ೨೫, ಸಂಶೋಧನೆಯ ಭಾಗದಲ್ಲಿ ೧೩, ಜಾನಪದ ಭಾಗದಲ್ಲಿ ೧೪, ಭಾಷೆ ಮತ್ತು ಸಂಸ್ಕೃತಿ ಭಾಗದಲ್ಲಿ ೮ ಲೇಖನಗಳು ಸೇರಿವೆ. ಎಂದಿನಂತೆ ಈ ಗ್ರಂಥದಲ್ಲಿಯೂ ಮನಸೆಳೆಯುವುದು ವಿಷಯ ವೈವಿಧ್ಯ, ಅರಿವಿನ ಹರವು ಹಾಗೂ ಸೂಕ್ಷ್ಮ ವಿವೇಚನೆ. ಕೃತಿಯ ಕೊನೆಯಲ್ಲಿ ಲೇಖನಗಳ ಸಂದರ್ಭಸೂಚಿಯೊಂದಿದೆ. ಇಲ್ಲಿನ ಬಹುತೇಕ ಲೇಖನಗಳು ೧೯೯೦ರ ನಂತರದಲ್ಲಿಯೇ ಬೇರೆ ಬೇರೆ ಕಾರಣಕ್ಕಾಗಿ ಸಿದ್ಧಪಡಿಸಿದವಾಗಿವೆ. ವಿದ್ವಾಂಸರ ಅಭಿಮತದಂತೆ, ಡಿ.ಎಲ್.ನರಸಿಂಹಾಚಾರ್ ಅವರ ‘ಪೀಠಿಕೆಗಳು ಲೇಖನಗಳು’ ಗ್ರಂಥದ ಸಾಲಿಗೆ ಸೇರುವ ಮಾದರಿ ಕೃತಿ ಇದು. ವಿಮರ್ಶೆ, ಕಾವ್ಯಮೀಮಾಂಸೆ, ಸಂಶೋಧನೆ, ಜಾನಪದ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಭಾಷಾವಿಜ್ಞಾನ, ವಿಜ್ಞಾನ, ಇತಿಹಾಸ, ಅಧ್ಯಾತ್ಮಶಾಸ್ತ್ರ, ಧರ್ಮ ಇತ್ಯಾದಿ ಪ್ರತ್ಯೇಕ ಶಿಸ್ತುಗಳ ಅರಿವಿನ ಬುನಾದಿ ಈ ಬರೆಹಗಳಲ್ಲಿ ಗೋಚರಿಸುತ್ತದೆ.


ಯಾವುದೇ ವಿಷಯವನ್ನು ನಾನಾ ಮುಖಗಳಿಂದ ಪರಿಶೀಲಿಸಿ ಅದರ ಸತ್ಯಾಸತ್ಯತೆಗಳನ್ನು ವಿಮರ್ಶಿಸಿ ಯಾವುದು ಸರಿ ಅಥವಾ ಸರಿಯಲ್ಲದ್ದು ಎಂಬುದನ್ನು ನಿರ್ಧರಿಸುವ ಸಂಶೋಧನಾಯಾನದಲ್ಲಿ ರಾಗೌ ಅವರ ಸಂಶೋಧನಾಮಾರ್ಗವು ಅನುಕರಣೀಯವಾದದ್ದು. ಅವರ ಪಿಎಚ್.ಡಿ. ಪ್ರಬಂಧ ಈ ದಿಸೆಯಲ್ಲಿ ಒಂದು ಅತ್ಯುತ್ತಮ ಕೃತಿ ಎಂದು ಹೇಳಬಹುದು. “ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು” ಎಂಬುದು ಅವರು ಪಿಎಚ್.ಡಿ. ಪದವಿಗಾಗಿ ನಡೆಸಿದ ಸಂಶೋಧನೆಯ ವಿಷಯ. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ರಾಜ ಮಹಾರಾಜರುಗಳ ಬಗ್ಗೆ ಇರುವ ಚಾರಿತ್ರಿಕ ಅಂಶಗಳನ್ನು ಅವರು ಅತ್ಯಂತ ಸೂಕ್ಷ್ಮವಾಗಿ ಶೋಧಿಸಿಕೊಟ್ಟಿದ್ದಾರೆ. ಭಾರತೀಯ ಹಾಗೂ ಪಾಶ್ಚಾತ್ಯ ಸಾಹಿತ್ಯ, ಮೀಮಾಂಸೆ, ವಿಮರ್ಶೆಯನ್ನೂ, ಜಾನಪದದ ಅಧ್ಯಯನವನ್ನೂ, ಭಾಷಾವಿಜ್ಞಾನದ ಅಧ್ಯಯನವನ್ನೂ, ಅವುಗಳಿಗೆ ಪೂರಕವಾಗಿ ಮಾನವಶಾಸ್ತ್ರ, ತತ್ತ್ವಶಾಸ್ತ್ರ, ಮನೋವಿಜ್ಞಾನವನ್ನೂ ತಲಸ್ಪರ್ಶಿಯಾಗಿ ಅಭ್ಯಾಸ ಮಾಡಿರುವ ರಾಗೌ ಅವರು, ಇತಿಹಾಸದ ಪ್ರಾಧ್ಯಾಪಕರಿಗೆ ಸರಿಮಿಗಿಲಾಗಿ ಕರ್ನಾಟಕದ ಇತಿಹಾಸ ವನ್ನು ಭಾರತೀಯ ಇತಿಹಾಸವನ್ನು ಅಧ್ಯಯನ ಮಾಡಿದ್ದಾರೆ. ರಾಗೌ ಅವರದು ಬಹುಶಿಸ್ತೀಯ ಅಧ್ಯಯನ, ವಿದ್ವತ್ತು. ವಿಶ್ವವಿದ್ಯಾನಿಲಯಗಳು ಅಂತರ್‌ಶಿಸ್ತೀಯ ಹಾಗೂ ಅಂತರಶಿಸ್ತೀಯ ಅಧ್ಯಯನದ ಬಗೆಗೆ ಮಾತನಾಡುವುದಕ್ಕೆ ಎಷ್ಟೋ ವರ್ಷಗಳ ಮೊದಲೇ ಅವರು ಅದನ್ನು ಸಾಧಿಸಿದ್ದಾರೆ. ಹದಿನೈದು ವರ್ಷಗಳ ದೀರ್ಘಕಾಲ ಸಂಶೋಧನೆ ನಡೆಸಿ ಶ್ರಮದಿಂದ ರಚಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ೧೯೯೦ರಲ್ಲಿ ಪಿಎಚ್.ಡಿ. ಪದವಿ ನೀಡಿದೆ. ಮಹಾಪ್ರಬಂಧ ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು, ಕನ್ನಡದಲ್ಲಿ ಪ್ರಕಟವಾದ ಹತ್ತು ಶ್ರೇಷ್ಠ ಮಹಾಪ್ರಬಂಧಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗೆ, ರಾಗೌ ಅವರು ಕನ್ನಡದ ಸಮಚಿತ್ತದ, ಶ್ರೇಷ್ಠ ಬರಹಗಾರರಾಗಿದ್ದಾರೆ. ಅತ್ಯುತ್ತಮ ಅಧ್ಯಾಪಕರಾಗಿ, ಕವಿಯಾಗಿ, ವಿಮರ್ಶಕರಾಗಿ, ಸಂಶೋಧಕರರಾಗಿ, ಸಂಪಾದಕರಾಗಿ ಮಹತ್ವಪೂರ್ಣವಾದುದನ್ನು ಸಾಧಿಸಿತೋರಿದ್ದಾರೆ.


ರಾಗೌ ಅವರ ಕೃತಿಗಳಿಗೆ ಐದು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಗಳು ಲಭಿಸಿವೆ: ನಮ್ಮ ಒಗಟುಗಳು-೧೯೭೦, ಜಾನಪದ ಸಂಕೀರ್ಣ೧೯೭೪, ರನ್ನ ವಿರಚಿತ ಸಾಹಸಭೀಮ ವಿಜಯಂ-೧೯೮೫, ರನ್ನ ವಿರಚಿತ ಅಜಿತತೀರ್ಥಂಕರ ಪುರಾಣಂ-೧೯೮೮, ಲಕ್ಷ್ಮೀಶನ ಜೈಮಿನಿ ಭಾರತ-೧೯೯೩. ‘ಕುವೆಂಪು ಸಾಹಿತ್ಯ ವಿಮರ್ಶನ’ ಕೃತಿಗೆ ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಬಹುಮಾನ ಬಂದಿದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ೧೯೯೫ರಲ್ಲಿ ‘ಜಾನಪದ ತಜ್ಞ ಪ್ರಶಸ್ತಿ’ಪ್ರಾಪ್ತವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೦೦ದಲ್ಲಿ ‘ಗೌರವ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ಪ್ರಜಾಮತ’ ಪತ್ರಿಕೆ ೨೦೦೨ರಲ್ಲಿ ‘ಪ್ರಜಾರತ್ನ ಪ್ರಶಸ್ತಿ’ಯನ್ನು ನೀಡಿದೆ. ಅವರ ತವರು ಜಿಲ್ಲೆ ಮಂಡ್ಯದ ಜನ-ದನಿ ಸಾಂಸ್ಕೃತಿಕ ಸಂಸ್ಥೆ ೨೦೦೫ರಲ್ಲಿ ‘ಡಾ. ಜೀಶಂಪ ಜಾನಪದ ತಜ್ಞ ಪ್ರಶಸ್ತಿ’ಯನ್ನೂ, ಎಚ್.ಡಿ. ಚೌಡಯ್ಯ ಪ್ರತಿಷ್ಠಾನ ೨೦೦೮ರಲ್ಲಿ ‘ಅನಾಗತ ಕೃತಿಗೆ “ಎಚ್.ಡಿ. ಚೌಡಯ್ಯ ಕಾವ್ಯ ಪ್ರಶಸ್ತಿ’ಯನ್ನೂ ನೀಡಿ ಗೌರವಾದರವನ್ನು ತೋರಿವೆ. ಹುಟ್ಟಿದೂರು ಇರುವ ತಾಲ್ಲೂಕು ಕೇಂದ್ರ ಮದ್ದೂರಿನಲ್ಲಿ ೧೯೯೫ರ ಜನವರಿ ೨೮ ಮತ್ತು ೨೯ರಂದು ನಡೆದ ನಾಲ್ಕನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದಾರೆ. ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ(೨೦೦೧) ದೊರೆತ ಸಂದರ್ಭದಲ್ಲಿ ಅವರ ಅಭಿಮಾನಿಗಳೆಲ್ಲರೂ ಸೇರಿ ಮೈಸೂರಿನಲ್ಲಿ ಸಮಾರಂಭವನ್ನು ಏರ್ಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ ಡಾ.ರಾಗೌ ಅರುವತ್ತು ವರ್ಷಗಳನ್ನು ಪೂರೈಸಿದ ಸಂದರ್ಭವನ್ನು ನೆಪವಾಗಿಟ್ಟುಕೊಂಡು ಅವರ ವ್ಯಕ್ತಿತ್ವ, ವಿದ್ವತ್ತು, ಬರೆಹದ ಸಾಧನೆಯನ್ನು ಮನಗಂಡು ಅಭಿಮಾನಿಗಳೂ ಮಿತ್ರರೂ ಸೇರಿ ೨೦೦೫ರಲ್ಲಿ ಹಾರ್ದಿಕ ಸಮಾರಂಭವನ್ನು ನಡೆಸಿ ‘ಅಭಿಜಾತ’ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯ ೨೦೦೬ರ ಫೆಬ್ರವರಿ ೪ ಮತ್ತು ೫ರಂದು ಕಾರವಾರದಲ್ಲಿ ನಡೆಸಿದ ೩೫ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ರಾಗೌ ಅವರನ್ನು ಗೌರವಿಸಿದೆ.


ವಿದ್ವಾಂಸರಾದ ಪ್ರೊ.ಎಂ.ಎಚ್.ಕೃಷ್ಣಯ್ಯನವರು ರಾಗೌ ಅವರನ್ನು ‘ಮೌನ ಸಾಧಕ’ ಎಂದು ಅತ್ಯಂತ ಅರ್ಥಪೂರ್ಣವಾಗಿ ಗುರುತಿಸಿದ್ದಾರೆ. ಕಳೆದ ನಾಲ್ಕೂವರೆ ದಶಕಗಳಿಂದ ಸದ್ದಿಲ್ಲದೆ ಮೌನವಾಗಿ ಕಾವ್ಯ, ಸಂಶೋಧನೆ, ವಿಮರ್ಶೆ, ಜಾನಪದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರದೊಂದು ಬಗೆಯ ನಿಷ್ಕಾಮ ಪ್ರೀತಿಯ ಕಾಯಕ, ಜಗದ ಮೆಚ್ಚುಗೆಗಿಂತ ಮುಖ್ಯವಾಗಿ ಕರ್ತವ್ಯನಿಷ್ಠ ಮತ್ತು ಆತ್ಮನಿಷ್ಠಮುಖೀ ನೆಲೆಯ ತೃಪ್ತಿಯನ್ನು ಬಗೆಯುವಂಥದ್ದು, ಈ ನಿಷ್ಕಾಮ ಕಾಯಕದಲ್ಲಿ ತೊಡಗಿಸಿಕೊಂಡ ಅವರ ಬರೆಹಗಳಲ್ಲಿ ಪಾಂಡಿತ್ಯದ ಜೊತೆಗೆ ಸೃಜನಾತ್ಮಕ-ಸೋಪಜ್ಞ ಮುಖಗಳು ಎದ್ದು ಕಾಣುವುದರಿಂದ ವಿಶಿಷ್ಟತೆಯ ಆಯಾಮ ದೊರಕಿದೆ. ಅವರ ಹಳಗನ್ನಡ ಸಾಹಿತ್ಯ ಕುರಿತಾದ ‘ಕಾವ್ಯಾನುಶೀಲನ’ ಮೊದಲಾದ ಕೃತಿಗಳು ಕೇವಲ ಶೋಧಗಳಾಗದೆ-ಅವುಗಳಿಗೆ ವರ್ತಮಾನದ ಹಿನ್ನಲೆಯಲ್ಲಿ ಕಂಡುಕೊಂಡ ಅನೇಕ ಒಳನೋಟಗಳನ್ನು ನೀಡುತ್ತವೆ ಮತ್ತು ಮುಂದೆ ಅವು ಗುರುತಿಸಿಕೊಳ್ಳಬಹುದಾದ ಮುನ್ನೋಟಗಳನ್ನು ಸೂಚಿಸುತ್ತವೆ. ಹೀಗೆ, ರಾಗೌ ಅವರ ಅಧ್ಯಯನದ ವ್ಯಾಪ್ತಿ ಬಹು ವಿಸ್ತಾರವಾದುದು. ಅದು ಅಂತರಶಿಸ್ತೀಯ ನೆಲೆಯದು. ಅವರು ತಮ್ಮ ಶೋಧಕ್ಕೆ ಮಾನವಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ತತ್ತ್ವಶಾಸ್ತ್ರ, ಭಾಷಾಶಾಸ್ತ್ರ, ಮನಶ್ಯಾಸ್ತ್ರ ಮತ್ತು ಇಂಗ್ಲಿಷ್ ಭಾಷೆಗಳ ಬಹುಮುಖೀನೆಲೆಗಳಿಂದ ಬೇರೆ ಬೇರೆ ಆಯಾಮಗಳನ್ನು ನೀಡುತ್ತಾರೆ; ಹೊಸ ಹೊಸ ನೋಟಗಳನ್ನು ಹೊರ ಹೊಮ್ಮಿಸುತ್ತಾರೆ. ಇದರಿಂದಾಗಿ ಇವು ಕೇವಲ ಪಾಂಡಿತ್ಯದ ಮಂಡನೆಯಾಗದೆ ಬದುಕಿನ ನಾನಾ ಮುಖಗಳ ದರ್ಶನವನ್ನು ಮಾಡ ಹೊರಡುವ ಪ್ರಯತ್ನಗಳಾಗುತ್ತವೆ. ಇದರಿಂದಾಗಿ ಇವರ ಬರೆಹಗಳಿಗೆ ಒಂದು ಸಮಗ್ರನೋಟ ಪ್ರಾಪ್ತವಾಗಿದೆ. ಈ ಸಮಗ್ರ ನೋಟವನ್ನು ಕಂಡರಿಸುವಲ್ಲಿನ ವಸ್ತುನಿಷ್ಠತೆ ಮತ್ತು ಸಂಯಮದಿಂದಾಗಿ ಸಮಚಿತ್ತದ ನೋಟವೂ ಉಂಟಾಗಿದೆ.


ಪ್ರೊ. ರಾಗೌ ಅವರು ಕನ್ನಡ ಮತ್ತು ಜಾನಪದ ಕ್ಷೇತ್ರಗಳೆರಡರಲ್ಲಿಯೂ ದುಡಿದವರು. ಕವಿಯಾಗಿ, ವಿಮರ್ಶಕರಾಗಿ, ಸಾಹಿತ್ಯ ಸಂಪಾದಕರಾಗಿ ಅಷ್ಟೇ ಅಲ್ಲದೆ, ಜಾನಪದ ಕ್ಷೇತ್ರದಲ್ಲಿ ವ್ಯಾಪಕ ಅಧ್ಯಯನ ನಡೆಸುವುದರ ಮೂಲಕ ಅದರ ಆಳ-ಅಗಲಗಳನ್ನು ಪರಿಚಯಿಸಿಕೊಟ್ಟವರು. ಅವರ ಸಂಶೋಧನ ಬರಹಗಳು ವಿದ್ವತ್ ಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸಲು ಕಾರಣವಾಗಿವೆ. ಜಾನಪದದ ಅಧ್ಯಯನ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾದಾಗ ಅದಕ್ಕೊಂದು ಶಾಸ್ತ್ರೀಯ ಚೌಕಟ್ಟನ್ನು ನಿರ್ಮಿಸಿಕೊಡಬೇಕಾಗಿತ್ತು. ಆ ಚೌಕಟ್ಟನ್ನು ನಿರ್ಮಿಸಿಕೊಟ್ಟ ಕೆಲವೇ ಮಂದಿಗಳಲ್ಲಿ ಡಾ.ರಾಗೌ ಅವರು ಒಬ್ಬರೆಂಬುದನ್ನು ನಾವು ಮರೆಯಬಾರದು. ಜನಪದ ಗೀತೆಗಳೇ ಜಾನಪದವೆಂದು ತಿಳಿದಿದ್ದ ಸಂದರ್ಭದಲ್ಲಿ ಜಾನಪದವನ್ನು ಹಲವು ಹತ್ತು ಮುಖಗಳಲ್ಲಿ ನಿರ್ದೆಶಿಸಿ ಪಾಶ್ಚಿಮಾತ್ಯ ಜಾನಪದ ಲಕ್ಷಣಗಳೊಡನೆ ಸಮೀಕರಿಸಿ ಈ ನಾಡಿನಲ್ಲಿ ಜಾನಪದ ಅಧ್ಯಯನಕ್ಕೆ ತಳಹದಿಯನ್ನು ನಿರ್ಮಿಸಿದ ಕೀರ್ತಿ ಡಾ.ಹಾಮಾನಾ, ಡಾ.ದೇಜಗೌ, ಡಾ.ಜೀಶಂಪ, ಡಾ.ಸಿ.ಪಿ.ಕೆ ಜೊತೆಜೊತೆಗೆ ಡಾ.ರಾಗೌ ಅವರಿಗೆ ಸಲ್ಲುತ್ತದೆ.ಜಾನಪದವನ್ನು ಕುರಿತಂತೆ ರಾಗೌ ರಚಿಸಿದ ಕೃತಿಗಳೆಂದರೆ, ನಮ್ಮಗಾದೆಗಳು(೧೯೬೮), ಕಿಟ್ಟೆಲ್ ಕೋಶದ ಗಾದೆಗಳು(೧೯೬೯), ಕರ್ಣಾಟಕ ಜನಪದ ಕಥೆಗಳು(೧೯೬೯), ನಮ್ಮ ಒಗಟುಗಳು(೧೯೭೦), ಜನಪದ ನಂಬಿಕೆಗಳು(೧೯೭೨), ಕನ್ನಡ ಶಿಶುಪ್ರಾಸಗಳು(೧೯೭೨), ಜನಪದ ರಾಮಾಯಣ(೧೯೭೩), ಚಾಮಾಯಿ(೧೯೮೧), ಜಾನಪದ ಸಂಕೀರ್ಣ(೧೯೭೪), ಜನಪದ ಸಾಹಿತ್ಯ ರೂಪಗಳು(೧೯೭೪), ಜಾನಪದ ಸಂಶೋಧನ(೧೯೮೧), ಜನಪದ ಆಟಗಳು(೨೦೦೧), ಜನಪದ ಮಹಾಭಾರತ ಸಮಾಲೋಚನೆ(೨೦೦೫) ಮೊದಲಾದವು. ಇವುಗಳಲ್ಲಿ ಎಂಟು ಸಂಗ್ರಹಗಳು ಮತ್ತು ಉಳಿದವು ಜಾನಪದ ಅಧ್ಯಯನ, ವಿಶ್ಲೇಷಣೆ ಮತ್ತು ಸಂಶೋಧನೆ ಸಂಬಂಧಪಟ್ಟವಾಗಿವೆ. ಹೀಗೆ, ರಾಮೇಗೌಡರು ಸಂಗ್ರಹ, ಸಂಪಾದನೆಯ ಜೊತೆಗೆ ಅದರ ವಿಶ್ಲೇಷಣೆಯನ್ನೂ ಮಾಡುತ್ತಾ ಹೋದರು.


ಆರಂಭದಲ್ಲಿ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ಬಹಳಷ್ಟು ಜನ ಸಂಗ್ರಾಹಕರಾಗಿ ಹೆಸರು ಮಾಡಿದರು. ಆರಂಭದಲ್ಲಿ ಬರಿಯ ಗೀತೆಗಳ ಸಂಗ್ರಹಕ್ಕೆ ಮೀಸಲಾಗಿದ್ದ ಜಾನಪದ ಕ್ಷೇತ್ರ ಒಗಟು, ಒಡಪು, ಗಾದೆ ಇತ್ಯಾದಿ ಬೇರೆ ಬೇರೆ ಮುಖಗಳಲ್ಲಿ ಬೆಳಯಲಾರಂಭಿಸಿತು. ರಾಮೇಗೌಡ ಅವರು ಈ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿ ಮತ್ತು ದೃಷ್ಟಿಯಿಂದ ಕೆಲಸಮಾಡಿದ್ದಾರೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮತ್ತು ಲೇಖಕರಿಗೆ ಕಿಟೆಲ್ ಪದಕೋಶ ಒಂದು ರೀತಿಯ ಬೈಬಲ್ ಇದ್ದ ಹಾಗೆ. ಅಂದಿನಿಂದ ಇಂದಿನವರೆಗೆ ಅನೇಕಾನೇಕ ಸಾಹಿತಿಗಳು ಇದನ್ನು ಬೆಳೆಸಿದ್ದಾರೆ. ರಾಮೇಗೌಡರು ಇದನ್ನು ಒಂದು ವಿಶಿಷ್ಟ ರೀತಿಯಲ್ಲಿ ಬೆಳೆಸಿದ್ದಾರೆ. ಇದಕ್ಕೆ ಅವರ ‘ಕಿಟ್ಟೆಲ್ ಕೋಶದ ಗಾದೆಗಳು’ ಮತ್ತು ಅದರ ಪೀಠಿಕೆಯೇ ನಿದರ್ಶನ. ಅಷ್ಟು ಸಂಖ್ಯೆಯಲ್ಲಿ ಆ ಕೋಶದಲ್ಲಿ ಗಾದೆಗಳಿವೆ ಎಂದು ಬೇರೆ ಯಾವ ವಿದ್ವಾಂಸರೂ ಗುರುತಿಸಿರಲಿಲ್ಲ. ಇದು ತಾವು ಪ್ರವೇಶಿಸಿದ ಪ್ರತಿಯೊಂದು ಕ್ಷೇತ್ರವನ್ನೂ ತಲಸ್ಪರ್ಶಿಯಾಗಿ ಹುಡುಕುವ ರಾಮೇಗೌಡರ ರೀತಿಯನ್ನು ಸೂಚಿಸುತ್ತದೆ. ಹೀಗಾಗಿಯೇ ವಿದ್ವದ್ವಲಯ ಕಂಡುಕೊಂಡಂತೆ, ರಾಗೌ ಅವರು ನಮ್ಮ ಕಾಲದ ಅತ್ಯಂತ ದೊಡ್ಡ ಜಾನಪದ ವಿದ್ವಾಂಸರಾಗಿದ್ದಾರೆ.


ಜಾನಪದ ಅಧ್ಯಯನ ತನ್ನ ಎಲ್ಲೆಯನ್ನು ಬಹುವಾಗಿ ವಿಸ್ತರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಜಾನಪದ ಕುರಿತಾದ ತಾತ್ವಿಕ ಚರ್ಚೆಗಳು ಹೆಚ್ಚು ಹೆಚ್ಚು ನಡೆಯುವುದು ಆವಶ್ಯಕ. ಜಾನಪದ ಅಧ್ಯಯನದ ಶಾಸ್ತ್ರೀಯ ನಿಲುವುಗಳನ್ನು ಜೀವಂತವಾಗಿಡುವುದಲ್ಲದೆ, ಜಾನಪದ ಆಸಕ್ತರ ಮತ್ತು ಈ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವವರ ಜಾನಪದದ ಪರಿಕಲ್ಪನಾತ್ಮಕ ದೃಷ್ಟಿಯನ್ನು ಬೆಳೆಸುವಲ್ಲಿ ಪಾತ್ರ ವಹಿಸುತ್ತವೆಯೆಂದು ಭಾವಿಸಿದ ರಾಗೌ ಅವರು ಜಾನಪದವನ್ನು ಕುರಿತಾಗಿ ಹಲವಾರು ಗ್ರಂಥಗಳನ್ನು ಹೊರತಂದಿದ್ದಾರೆ. ಕನ್ನಡದಲ್ಲಿ ಜಾನಪದ ಅಧ್ಯಯನ ವೈಜ್ಞಾನಿಕ ಆಯಾಮವನ್ನು ಪಡೆದುಕೊಳ್ಳುತ್ತಿದ್ದ ಹೊಸ್ತಿಲಲ್ಲಿ ಜಾನಪದ ಕ್ಷೇತ್ರವನ್ನು ಪ್ರವೇಶಿಸಿದವರು ರಾಗೌ. ಜಾನಪದ ಕ್ಷೇತ್ರಕಾರ ಮತ್ತು ವಿಶ್ಲೇಷಣೆಗಳನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ನಡೆಸುತ್ತಾ ಬಂದವರು. ಆದಕಾರಣ ಜಾನಪದವನ್ನು ವೈಜ್ಞಾನಿಕ ವಿಧಾನದಲ್ಲಿ ವಿಶ್ಲೇಷಿಸಿದ ಸಾಕ್ಷಿಯಾಗಿ ಅವರ ಗ್ರಂಥಗಳಿವೆ. ಕನ್ನಡದಲ್ಲಿ ಜಾನಪದವನ್ನು ತಾತ್ವಿಕವಾಗಿ ನೆಲೆಗೊಳಿಸಿದ ಪ್ರಯತ್ನವು ಅವರ ‘ಜನಪದ ಸಾಹಿತ್ಯ ರೂಪಗಳು’,‘ಜಾನಪದ ಸಂಶೋಧನೆ’, ‘ಜಾನಪದ ಸಂಕೀರ್ಣ’ ಮೊದಲಾದ ಕೃತಿಗಳಲ್ಲಿ ಕಂಡುಬರುತ್ತದೆ.


ರಾಗೌ ಅವರು ಗಾದೆ, ಒಗಟು, ಕಥೆ, ಕಥನಕವನ, ಶಿಶುಪ್ರಾಸ-ಮುಂತಾದ ಸಂಗ್ರಹಗಳನ್ನು ಪ್ರಕಟಿಸಿದ್ದಲ್ಲದೆ, ಅದಕ್ಕಿಂತಲೂ ಮುಖ್ಯವಾಗಿ ಜಾನಪದದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅವರು ಮಂಡಿಸಿರುವ ತಾತ್ವಿಕ ಚಿಂತನಾರೂಪದ ಬರೆಹಗಳು ಕನ್ನಡ ಜಾನಪದ ಲೋಕಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಗಳಾಗಿವೆ. ಜಾನಪದವನ್ನು ಇನ್ನಿತರ ಶಿಸ್ತಿನ ಮುಖಗಳಲ್ಲಿ ಮತ್ತು ಸಮುದಾಯ ಚೌಕಟ್ಟಿನಲ್ಲಿಟ್ಟು ಅವರು ಮಾಡಿರುವ ವಿಶ್ಲೇಷಣೆಯಿಂದಾಗಿ ವಿಭಿನ್ನತೆಯನ್ನು ಪಡೆದುಕೊಂಡಿದೆ. ಜಾನಪದಕ್ಕೆ ಸಂಬಂಧಿಸಿದ ಇವರ ಬರೆಹಗಳು ಮುಖ್ಯವಾಗಿ ಪರಿಚಯಾತ್ಮಕವಲ್ಲ ಮತ್ತು ವರ್ಣನಾತ್ಮಕವಲ್ಲ. ಆ ಕಾಲಘಟ್ಟದ ನೆಲೆಯನ್ನು ಮೀರಿ ಅಧ್ಯಯನ ಸ್ವರೂಪದ ಎತ್ತರಕ್ಕೆ ಬೆಳೆಯುತ್ತವೆ; ಜಾನಪದದ ವಿವಿಧ ಪ್ರಕಾರಗಳ ಮೂಲನೆಲೆಗೆ ಹೋಗಿ ಆಳವಾಗಿ ಅವುಗಳ ತಾತ್ವಿಕತೆಯನ್ನು ಚರ್ಚಿಸುತ್ತವೆ. ಅವರು ವಿದ್ವಾಂಸರಾದ ಡಾ.ಪಿ.ಕೆ.ರಾಜಶೇಖರ್ ಅವರ ‘ಜನಪದ ಮಹಾಭಾರತ’ವನ್ನು ಕುರಿತು ನಡೆಸಿರುವ ಅಧ್ಯಯನಶೀಲ ಬರೆವಣಿಗೆಯು ಅವರ ಸೂಕ್ಷ್ಮಪ್ರಜ್ಞೆ ಮತ್ತು ಒಳನೋಟಗಳಿಗೆ ಹಿಡಿದ ಕನ್ನಡಿಯಾಗಿದೆ. ಬಹುಶಃ ಜಾನಪದ ಕೃತಿಯೊಂದನ್ನು ಅಧ್ಯಯನ ಮಾಡುವವರಿಗೆ ಅತ್ಯಂತ ಉತ್ತಮ ಮಾದರಿಯಾಗಿ ಅದು ನಿಲ್ಲುತ್ತದೆಯೆಂದು ನಾನು ಭಾವಿಸುತ್ತೇನೆ. ಎಲ್ಲ ಶಾಸ್ತ್ರೀಯ ನೆಲೆಗಳಿಂದ ಜನಪದ ಬದುಕನ್ನು ಹೇಗೆ ನೋಡಬೇಕು, ವಿಶ್ಲೇಷಿಸಬೇಕು ಮತ್ತು `ಕಾಣ’ಬೇಕು ಎಂಬುದಕ್ಕೆ ಈ ಬರೆಹ ದರ್ಶನ ನೀಡುತ್ತದೆ. ಆದುದರಿಂದ ರಾಗೌ ಅವರ ಬರೆಹಜೀವನದಲ್ಲಿ ಇದೊಂದು ವಿಶಿಷ್ಟ ಅನನ್ಯ ಬರೆಹವೆಂದು ಗುರುತಿಸಲು ಸಂತೋಷವಾಗುತ್ತದೆ.ರಾಗೌ ಅವರು ಸಂಪಾದಿಸಿರುವ ‘ಜನಪದ ರಾಮಾಯಣ’ವು ಜಾನಪದ ಕ್ಷೇತ್ರದಲ್ಲಿ ಒಂದು ಗಮನಾರ್ಹವಾದ ಕೃತಿ. ಜನಪದ ರಾಮಾಯಣದ ಆಧಾರದಿಂದಲೇ ವಾಲ್ಮೀಕಿ ರಾಮಾಯಣ ಬರೆದ ಎಂಬ ಅಭಿಪ್ರಾಯವೂ ಇದೆ. ಜಾನಪದದ ಬಗೆಗಿನ ಅವರ ಚಿಂತನ-ಮಂಥನವೂ ಈ ಕ್ಷೇತ್ರಕ್ಕೆ ಮಾರ್ಗದರ್ಶಕ ಕೃತಿಗಳಾಗಿವೆ ಎಂದು ಹೇಳಬಹುದು.


ಜನಪದ ಸಾಹಿತ್ಯ ‘ಜಾನಪದ’ದಲ್ಲಿ ಒಂದು ಭಾಗವಾಗಿರುವಂತೆ, ಗಾದೆ ಜನಪದ ಸಾಹಿತ್ಯದಲ್ಲಿ ಒಂದು ಶಾಖೆಯಾಗಿದೆ. ಗಾದೆಯನ್ನು ಕುರಿತು ಕನ್ನಡದಲ್ಲಿ ಈಗಾಗಲೇ ತಕ್ಕಮಟ್ಟಿಗೆ ಕೆಲಸ ನಡೆದಿದೆ. ಎರಡು-ಮೂರು ಸಂಗ್ರಹಗಳೂ ಹೊರಬಂದಿವೆ. ಆದರೂ ಆಗಬೇಕಾಗಿರುವ ಕೆಲಸ ಬಹಳವಿದೆ ಎಂದು ಕಾರ್ಯಶೀಲರಾದ ರಾಗೌ ಅವರು “ಗಾದೆಗಳು ಜನ ಸಾಮಾನ್ಯರ ನುಡಿಪುಷ್ಪಗಳು. ಅವುಗಳನ್ನು ಒಂದು ಕಡೆ ಕಲೆಹಾಕುವ, ಮಾಲೆ ಮಾಡುವ ಮಾಲೆಗಾರನ ಕೆಲಸ ಅಷ್ಟೇ ನನ್ನದು” ಎಂಬ ವಿನಮ್ರತೆಯಲ್ಲಿ ವಿದ್ವತ್ಪೂರ್ಣವಾದ “ನಮ್ಮ ಗಾದೆಗಳು” ಗ್ರಂಥವನ್ನು ಹೊರತಂದಿದ್ದಾರೆ. ಗಾದೆಗಳ ಸಂಗ್ರಹ ಇನ್ನೂ ಸಂಪೂರ್ಣವಾಗಿ ಆಗಿಲ್ಲ ಮತ್ತು ನಮ್ಮಲ್ಲಿ ಇನ್ನೂ ಅಸಂಖ್ಯಾತ ಗಾದೆಗಳು ಇವೆ ಎನ್ನುವುದನ್ನು ಇದು ಸಾಕಷ್ಟು ತೋರಿಸಿಕೊಟ್ಟಿದೆ. ಜೊತೆಗೆ ಜಾನಪದದ ಮುಖ್ಯ ಮೂಲವಸ್ತುಗಳಾದ ಸಂಗ್ರಹ, ವರ್ಗಿಕರಣ ಹಾಗೂ ವಿಶ್ಲೇಷಣೆ ಈ ಮೂರು ವಿಷಯಗಳಲ್ಲಿಯೂ ರಾಗೌ ನಿಷ್ಣಾತರು. ವರ್ಗಿಕರಣ ಮತ್ತು ವಿಶ್ಲೇಷಣೆಯ ಗಾಢ ಜ್ಞಾನ ಮತ್ತು ಸೂಕ್ಷ್ಮ ಪರಿಶೀಲನಾ ಮನೋಭಾವವುಳ್ಳವರೆಂಬುದು ಅರಿವಾಗುತ್ತದೆ. ಇದರಿಂದ ರಾಗೌ ಅವರು ಜಾನಪದ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ, ಶಾಸ್ತ್ರೀಯವಾಗಿ ಕೆಲಸ ಮಾಡಿರುವ ಕೆಲವೇ ಕೆಲವರಲ್ಲಿ ಪ್ರಮುಖರೆಂದು ಸಾಬೀತಾಗುತ್ತದೆ.


ಕನ್ನಡದಲ್ಲಿ ಮೊದಲಿಗೆ ಗಾದೆಗಳನ್ನು ಸಂಗ್ರಹಿಸಿದವರು ಪಾಶ್ಚಾತ್ಯ ವಿದ್ವಾಂಸರಾದ ಕಿಟ್ಟೆಲ್. ಚಾರಿತ್ರಿಕವಾಗಿ ನೋಡಿದರೆ, ಫ್ಲೀಟ್ ಸಂಗ್ರಹಿಸಿದ ಐತಿಹಾಸಿಕ ಲಾವಣಿಗಳು ಮತ್ತು ಕಿಟೆಲ್ ಸಂಗ್ರಹಿಸಿದ ಗಾದೆಗಳು ಕನ್ನಡ ಜಾನಪದಕ್ಕೆ ನಾಂದಿ ಹಾಡಿದವು. ಫ್ಲೀಟ್ ತನ್ನ ಲಾವಣಿಗಳನ್ನು ‘ಇಂಡಿಯನ್ ಆಂಟಿಕ್ವರಿ’ ಪತ್ರಿಕೆಯಲ್ಲಿ ಪ್ರಕಟಿಸಿದರೆ, ಕಿಟೆಲ್ ತನ್ನ ಗಾದೆಗಳನ್ನು ತಾನೇ ಸಿದ್ಧಪಡಿಸಿದ ‘ಕನ್ನಡ-ಇಂಗ್ಲಿಷ್ ಡಿಕ್ಷನರಿ’ಯಲ್ಲಿ ಪ್ರಯೋಗಿಸಿದನು. ಒಂದು ರೀತಿಯಲ್ಲಿ ಇವರಿಬ್ಬರೂ ನಮ್ಮ ಜಾನಪದ ಅಧ್ಯಯನದ ಪ್ರವರ್ತಕರೆಂದೇ ಖ್ಯಾತರಾಗಿದ್ದಾರೆ. ಪ್ರಾಸಂಗಿಕವಾಗಿ ಈ ಕ್ಷೇತ್ರಕ್ಕೆ ಇವರು ಪ್ರವೇಶಿಸಿದವರಾದರೂ ನೀಡಿದ ಕೊಡುಗೆಗಳು ಮಹತ್ವದ್ದಾಗಿವೆ. ಮುಂದೆ ಗಾದೆಗಳ ಸಂಗ್ರಹದಲ್ಲಿ ಮಹತ್ವದ ಕಾಣ್ಕೆ ನೀಡಿರುವವರಲ್ಲಿ ರಾಗೌ ಅವರು ಪ್ರಮುಖರಾಗಿದ್ದಾರೆ. ರಾಗೌ ಅವರ ‘ನಮ್ಮ ಗಾದೆಗಳು’ ಕೃತಿಯನ್ನು ಕುರಿತು ಹಾ.ಮಾ.ನಾಯಕರು ಹೇಳಿರುವಂತೆ, “ಇದರಲ್ಲಿ ಎರಡು ಸಾವಿರ ಇನ್ನೂರು ಗಾದೆಗಳಿದ್ದು, ಅವು ಸಂಗ್ರಹದ ಸ್ವರೂಪದಲ್ಲಿ ಪ್ರಾದೇಶಿಕವಾಗಿವೆ. ಗಾದೆಗಳನ್ನು ಕುರಿತ ಅತ್ಯಂತ ಉಪಯುಕ್ತವಾದ ಸುದೀರ್ಘ ಪ್ರಸ್ತಾವನೆ ಹಾಗೂ ಅರ್ಥಕೋಶಗಳು ಈ ಸಂಗ್ರಹದ ಬೆಲೆಯನ್ನು ಹೆಚ್ಚಿಸಿವೆ. ಇಲ್ಲಿನ ಬಹುಪಾಲು ಗಾದೆಗಳು ಮೊದಲ ಬಾರಿಗೆ ಪ್ರಕಟವಾಗುತ್ತಿವೆ. ‘ನಮ್ಮ ಗಾದೆಗಳು’ ತುಂಬ ಸಮರ್ಪಕವಾದ ಹಾಗೂ ಸಮರ್ಥವಾದ ಸಂಗ್ರಹವಾಗಿದೆ.” ‘ಕಿಟ್ಟೆಲ್ ಕೋಶದ ಗಾದೆಗಳು ಕೃತಿಗೆ ಮುನ್ನುಡಿ ಬರೆಯುತ್ತಾ ಎಂ. ಮರಿಯಪ್ಪ ಭಟ್ಟ ಅವರು ಗಾದೆಗಳನ್ನು ಕುರಿತು ರಾಗೌ ಅವರು ಮಾಡಿರುವ ಮಹತ್ವದ ಕಾರ್ಯವನ್ನು ಕುರಿತು ಹೀಗೆ ದಾಖಲಿಸಿದ್ದಾರೆ:ಕನ್ನಡ ಗಾದೆಗಳ ಕ್ಷೇತ್ರದಲ್ಲಿ ಅತ್ಯಂತ ಪರಿಶ್ರಮ ವಹಿಸಿ ‘ರಾಗೌ’ (ಶ್ರೀ ರಾಮೇಗೌಡರು) ಆಗಲೇ ಹೆಸರುವಾಸಿಯಾಗಿರುತ್ತಾರೆ.‘ನಮ್ಮ ಗಾದೆಗಳು’ ಎಂಬ ಸಂಕಲನ ಒಂದು ಸಾಹಸದ ಕೃತಿ. ಇದರಲ್ಲಿ ಹಿಂದೆ ಪ್ರಕಟವಾಗದೆ ಉಳಿದುಕೊಂಡ ಸುಮಾರು ಎರಡು ಸಾವಿರಕ್ಕೂ ಮಿಕ್ಕ ಹೊಸ ಗಾದೆಗಳು ಅಡಕವಾಗಿವೆ. ಅವರು ಈ ಸಂದರ್ಭದಲ್ಲಿ ಬರೆದಿರುವ ಸುದೀರ್ಘವಾದ ಪ್ರಸ್ತಾವನೆ ಗಾದೆಯನ್ನು ಕುರಿತು ಕನ್ನಡಕ್ಕಿರುವ ಏಕಮಾತ್ರ ವಿಮರ್ಶಾತ್ಮಕ ಪ್ರಬಂಧವೆನ್ನಬಹುದು. ಬಹಳ ಅಮೂಲ್ಯವಾದ ಬರಹವದು’. ಗಾದೆಗಳನ್ನು ಕುರಿತಾಗಿ ಸಂಗ್ರಹಣ, ವರ್ಗಿಕರಣ ಹಾಗೂ ವಿಶ್ಲೇಷಣ-ಈ ಮೂರು ವಿಷಯಗಳಲ್ಲಿ ಗಾಢ ತಜ್ಞತೆಯಿಂದೊಡಗೂಡಿದ ಮಹತ್ವದ ಮಾಸ್ಟರ್ ಪೀಸ್ ಎಂಬಂತಿರುವ ರಾಗೌ ಅವರ ಈ ಸಂಶೋಧನಾ ಕಾರ್ಯವು ಹೊಸತಲೆಮಾರಿಗೆ ಮಾರ್ಗದರ್ಶಕ ಮಾದರಿ.

References

ಇದು ಅಭಿವ್ಯಕ್ತಿಯನ್ನು ಗಮನಿಸಿ ಹೇಳಿದುದೇ ಹೊರತು, ಅನುಭವವನ್ನಲ್ಲ.

ಈ ರೀತಿಯ ಬದಲಾವಣೆಗಳು ಸರ್ವೆಸಾಮಾನ್ಯವಾಗಿ ನಡೆಯುತ್ತಿದ್ದರಿಂದ ಆಶ್ಚರ್ಯ ಪಡಬೇಕಾದುದಿಲ್ಲ. ಕನ್ನಡಕ್ಕೆ ಸಂಸ್ಕೃತ ಸಂಪರ್ಕವಾದ ಮೇಲೆ ಹಲವಾರು ಪದಗಳು ಸಂಸ್ಕೃತದಿಂದಲೇ ತದ್ಭವವಾಗಿ ಬದಲಾಗುತ್ತಿದ್ದುವು; ಇನ್ನು ಕೆಲವು ಪ್ರಾಕೃತದ ಮೂಲಕವಾಗಿ ರೂಪಾಂತರವಾಗುತ್ತಿದ್ದುವು. ಇದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ಇದು ಕನ್ನಡ ಭಾಷಾಚರಿತ್ರೆಯಲ್ಲಿ ಗಮನಿಸಬೇಕಾದ ಅಂಶ.

ಗಾಥಾಸಪ್ತಶತಿ ಗ್ರಂಥವನ್ನೇ ಈ ಸಮಯದಲ್ಲಿ ನೆನೆಸಿಕೊಳ್ಳಬಹುದು.

ಸಂಸ್ಕೃತದಿಂದ ಕನ್ನಡಕ್ಕೆ ಪದಗಳು ಬರುವಾಗ ಮೂಲಾರ್ಥದಲ್ಲಿಯೇ ಪ್ರಯೋಗವಾಗಬಹುದು. ಅರ್ಥ ಬದಲಾವಣೆಯನ್ನು ಹೊಂದಿಯೂ ಪ್ರಯೋಗವಾಗಬಹುದು. ಈ ಎರಡು ಸಾಧ್ಯತೆಯೂ ಉಂಟು. ಉದಾ: ಅವಸರ. ಇನ್ನೊಂದು ಮಾತು. ಭಾಷಾ ವ್ಯತ್ಯಾಸ ಯಾವುದೇ ರೀತಿಯಲ್ಲಾಗಲಿ ಅಕ್ರಮವಾಗಿ ಸಾಗುವುದಿಲ್ಲ ಎಂಬುದನ್ನು ಮರೆಯಬಾರದು.

Encyclopedia of Religion and Ethics, Vol. X. Ed. James Hastings, pp. 412-415

ಅದೇ

ಅದೇ

ಅದೇ

ಅದೇ

Selwyn Gurney Champion, Racial Proverbs, Intro, P. XV

ಅದೇ, ಪುಟ XVI

ಅದೇ, ಪುಟ VI

ಟಿ.ವಿ. ವೆಂಕಟರಮಣಯ್ಯ, ಕನ್ನಡ ಗಾದೆಗಳ ಕೋಶ, ಮುನ್ನುಡಿ (ಬೇಂದ್ರೆ)

ಅದೇ

William Geddie (Ed), Chamber’s Twentieth Century Dictionary.

ಅದೇ

ವಚನಗಳ ರಚನೆಯನ್ನು ಗಮನಿಸಿದರೆ, ಗಾದೆಗಳು ವಚನಗಳ ಮೇಲೆ ಸಾಕಷ್ಟು ಪ್ರಭಾವ ಬೀರಿರುವಂತೆ ಕಾಣುತ್ತದೆ. ಮಾತ್ರವಲ್ಲದೆ ವಚನಗಳ ತಾಯಿಬೇರು ಗಾದೆಗಳಲ್ಲಿ ಇರುವಂತೆ ಭಾಸವಾಗುತ್ತದೆ. ಅಲ್ಲದೆ ಗಾದೆಗಳು ವಚನದಂತೆ ಸಾಹಿತ್ಯವೂ ಹೌದು, ಶಾಸ್ತ್ರವೂ ಹೌದು. ಇದೊಂದು ಊಹೆ ಅಷ್ಟೆ.

ಉದ್ಧೃತ, ಎ.ಕೆ. ರಾಮಾನುಜನ್, ಗಾದೆಗಳು, ಪು. ೮೧

James A Kelso, Encyclopedia of Religion and Ethics, ed. James hastings.

Racial Proverbs, p. LXXXI

Ibid, p. XIII

* ಇದನ್ನು ಹಿಂದೆ ಕೊಟ್ಟಿರುವ ವಿವಿಧ ಲೇಖಕರ ಆಯ್ದ ಲಕ್ಷಣಗಳ ಪಟ್ಟಿಯಲ್ಲಿ ನೋಡಿಕೊಳ್ಳಬಹುದು.

ಟಿ.ವಿ. ವೆಂಕಟರಮಣಯ್ಯ, ಕನ್ನಡ ಗಾದೆಗಳ ಕೋಶ, ಮುನ್ನುಡಿ.

Encyclopedia of Religion and Ethics, Vol. x, ed. James hastings, p. 412

“There is often more true spiritual force in a proverb than in a philisiohical system” – Thomas Carlyle

Encyclopedia of Religion and Ethics, Vol. x, ed. James hastings, p. 412

ವಿವರಕ್ಕೆ ನೋಡಿ: The Oxford Dictionary of English Proverbs: Compiled by William George Smith, Introduction.

ನೋಡಿ: Racial Proverbs, Ed. Champion

Ibid, p. XXIV, Intro

Quated, Ibid, p. XXV

Encyclopedia of Religion and Ethics, ed. James hastings, Vol. x, p. 414

* ಈ ಮುಂದೆ ಉದಾಹರಿಸಿರುವ ಗಾದೆಗಳು ಇದೇ ಲೇಖಕನ ‘ನಮ್ಮ ಗಾದೆಗಳು’ ಪುಸ್ತಕದಿಂದ ಆಯ್ದವುಗಳು.

Downloads

Published

07.09.2024

How to Cite

ರಾಗೌ (ರಾಮೇಗೌಡ), & ಎಂ. ಭೈರಪ್ಪ. (2024). ಗಾದೆ. AKSHARASURYA, 4(06), 01 to 34. Retrieved from http://aksharasurya.com/index.php/latest/article/view/494

Issue

Section

ಹಿಂದಣ ಹೆಜ್ಜೆ. | TRODDEN PATH