ನವೋದಯ ಕಾವ್ಯ ಮತ್ತು ಮಾನವತಾವಾದ.
Abstract
ಸಾವಿರ ವರ್ಷಕ್ಕೂ ಮಿಗಿಲಾದ ಲಿಖಿತ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾಲಕ್ಕನುಗುಣವಾಗಿ ವಿಭಿನ್ನ ವಸ್ತು, ರೂಪ, ಭಾಷೆ, ಆಶಯ, ಆಕೃತಿ, ಸತ್ವ, ಸಂವೇದನೆ, ದೃಷ್ಟಿ, ಧೋರಣೆಗಳನ್ನೊಳಗೊಂಡ ಸಾಹಿತ್ಯ ಸಂಪ್ರದಾಯಗಳು ತಲೆದೋರುತ್ತ ಬಂದಿವೆ. 18ನೆಯ ಶತಮಾನದ ಅಂತ್ಯ ಮತ್ತು 19ನೆಯ ಶತಮಾನದ ಪ್ರಾರಂಭದಲ್ಲಿ ಆಂಗ್ಲ ಶಿಕ್ಷಣದ ಪರಿಣಾಮವಾಗಿ ಭಾರತೀಯ ಅನೇಕ ಜನರು ಆಂಗ್ಲ ಸಾಹಿತ್ಯವನ್ನು ಅಭ್ಯಸಿಸುವುದರ ಮೂಲಕ ಸಾಹಿತ್ಯ ರಚನೆಯಲ್ಲಿ ತೊಡಗಿದರು. ಹೀಗಾಗಿ 19ನೆಯ ಶತಮಾನವನ್ನು ಆಧುನಿಕ ಕನ್ನಡ ಸಾಹಿತ್ಯದ ಉದಯಕಾಲ ಎಂದು ಹೇಳಲಾಗುತ್ತದೆ. ಇಲ್ಲಿ ಆಂಗ್ಲ ಶಿಕ್ಷಣದ ಪ್ರಭಾವ ಇದ್ದರೂ ಕೂಡ ಕನ್ನಡ ಸಾಹಿತ್ಯ ಪ್ರಾಚೀನ ಭಾರತದ ಸಾಹಿತ್ಯ ಪರಿಕಲ್ಪನೆಗಳನ್ನು ಬಿಟ್ಟುಕೊಡಲಿಲ್ಲ. ಪ್ರಾಚೀನ ಭಾರತದ ಕಾವ್ಯ, ಕಥನಗಳಿಗೆ ರಮ್ಯವಾದದ ನೆಲೆಯಲ್ಲಿ ಹೊಸ ಆವಿಷ್ಕಾರ ನೀಡಲಾಯಿತು. ಕಾವ್ಯ, ನಾಟಕ, ಕಾದಂಬರಿ ಮೊದಲಾದವುಗಳು ಈ ಹಿನ್ನೆಲೆಯಲ್ಲಿ ರಚನೆಯಾದವು.