ಕರ್ನಾಟಕದಲ್ಲಿ ದಲಿತರು

Authors

  • ಎಸ್. ಎಸ್. ಹಿರೇಮಠ
  • ಎಂ. ಭೈರಪ್ಪ ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಮಾಜ ವಿಜ್ಞಾನ ಮತ್ತು ಭಾಷೆಗಳ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ), ಕೆ.ನಾರಾಯಣಪುರ, ಕೊತ್ತನೂರು ಅಂಚೆ, ಬೆಂಗಳೂರು.

Keywords:

ಮಾದಿಗ, ಹೊಲೆಯ, ಕಪ್ಪೆ ಹೊಲೆಯ, ಕರ್ನಾಟಕ, ಕುರುಬ, ಚಲವಾದಿ, ದಲಿತರು

Abstract

ನೆಲಮೂಲ ಸಂಸ್ಕೃತಿಯ ಮಹಾಶೋಧಕರಾಗಿ ಪ್ರೊ.ಎಸ್.ಎಸ್.ಹಿರೇಮಠರ ಕಾಯಕ

ನೆಲಮೂಲ ಸಂಸ್ಕೃತಿಯ ಜಾಡಿನಲ್ಲಿ ಸಂಶೋಧನೆಯನ್ನು ಕೈಗೊಂಡು ಬಹುತ್ವ ಭಾರತ ಹಾಗೂ ದಲಿತ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮಹಾಶೋಧಕರಲ್ಲಿ ಪ್ರೊ.ಎಸ್.ಎಸ್.ಹಿರೇಮಠ ಅವರು ಪ್ರಾತಃಸ್ಮರಣೀಯರಾಗಿದ್ದಾರೆ. ತಮ್ಮ ಅಧ್ಯಾಪನ ಮತ್ತು ಸಂಘಟನಾ ಕಾಯಕದ ಮೂಲಕ ಜನಪರ ಮನಸುಗಳನ್ನು ರೂಪಿಸಿದ ಕ್ರಾಂತಿಕಾರಿಯೂ ಆಗಿದ್ದ ಹಿರೇಮಠ ಮೇಷ್ಟ್ರು ಸಂಶೋಧನಾ ಕಾಯಕದ ಮೂಲಕ ಸೀಮಿತ ಬೌದ್ಧಿಕ ಹಾಗೂ ಸಾಂಸ್ಕೃತಿಕ ಸೀಮೆಗಳನ್ನು ಬಹುವಾಗಿ ವಿಸ್ತರಿಸಿಕೊಟ್ಟಿದ್ದಾರೆ. ಆದಿಮ ನೆಲೆಯಿಂದ ಹಿಡಿದು ಆಧುನಿಕ ನೆಲೆಯ ಸಾಂಸ್ಕೃತಿಕ ಸಂಗತಿಗಳ ವರೆಗೂ ಆಳವಾದ ಸಂಶೋಧನೆಯನ್ನು ಕೈಗೊಂಡ ಹಿರೇಮಠರು ಲೋಕಮುಖೀ ಒಳಹರವಿನ ಅನೇಕ ಸೂಕ್ಷ್ಮಗಳನ್ನು ನಿಕಷಕ್ಕೆ ಒಡ್ಡಿದ್ದಾರೆ; ನೆಲದರಿವಿನ ಸೀಮೆಗಳನ್ನು ವಿಶಾಲಗೊಳಿಸಿದ್ದಾರೆ. ಸಬಾಲ್ಟ್ರನ್ ಸಂಶೋಧನೆಗೆ ಮಹತ್ತರ ನುಡಿಫಸಲನ್ನು ನಾಡಿಗೆ ಸಮರ್ಪಿಸುವ ಮೂಲಕ ಮಾದರಿ ಮಾರ್ಗದರ್ಶಿಯಾಗಿದ್ದಾರೆ.

ವಿದ್ಯಾರ್ಥಿ ಹಾಗೂ ವಿದ್ವಾಂಸ ವಲಯಲ್ಲಿ ಪ್ರಗತಿಪರ ಪ್ರೀತಿಯ ಮೇಷ್ಟ್ರು ಎನಿಸಿದ್ದ ಪ್ರೊ.ಎಸ್.ಎಸ್.ಹಿರೇಮಠ (ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠ) ಅವರು ಜನಿಸಿದ್ದು 1950ರ ಜೂನ್ 1ರಂದು ಬೆಳಗಾವಿ ಜಿಲ್ಲೆಯ ಸಾಣಿಕೊಪ್ಪದದಲ್ಲಿ. ಬೆಳಗಾವಿಯಲ್ಲಿ ಬಿ.ಎ. ಮತ್ತು ಧಾರವಾಡದಲ್ಲಿ ಎಂ.ಎ. ಪದವಿ ಪಡೆದ ನಂತರ ಹಿರೇಮಠರು ಹೊಸಪೇಟೆ, ಹಡಗಲಿ, ಹರಪನಹಳ್ಳಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಜಾತಿಮೂಲದ ಶ್ರೇಷ್ಠ-ಕನಿಷ್ಠತೆಯ ವ್ಯಸನಕ್ಕೆ ಎಂದೂ ಸಿಕ್ಕಿಕೊಳ್ಳದೆ, ಅಬಲ ಸಮುದಾಯಗಳ ಸಬಲೀಕರಣಕ್ಕಾಗಿ ತಮ್ಮ ಬದುಕನ್ನೇ ಮುಡಿಪಿಟ್ಟು, ಪ್ರಗತಿಪರ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನಪರವಾದ ದುಡಿಮೆಯನ್ನೂ ಮಾಡಿದ್ದು ಅವಿಸ್ಮರಣೀಯ. ಅನೇಕ ಬಡವಿದ್ಯಾರ್ಥಿಗಳಿಗೆ ಬದುಕಿನ ಜೀವಸೆಲೆ ತುಂಬಿದ ಹಿರೇಮಠರು ಮಾನವತೆಯ ಮೇಷ್ಟ್ರು ಸಹ. ಸಾವಿರಾರು ವಿದ್ಯಾರ್ಥಿಗಳ ಲೋಕದೃಷ್ಟಿಯನ್ನು ಬದಲಿಸಿದ ಕೀರ್ತಿ ಮೇಷ್ಟ್ರಿಗೆ ಸಲ್ಲುತ್ತದೆ.

ಹಿರೇಮಠ ಮಾಸ್ತರರ ಅನೇಕ ವಿದ್ಯಾರ್ಥಿಗಳು ಹೇಳುವಂತೆ, “ಹಿರೇಮಠ ಮೇಷ್ಟ್ರು ತಮ್ಮ ಜೀವಮಾನವಿಡಿ ಮಿಡಿದದ್ದು ಬಡವರಿಗಾಗಿ, ದಲಿತರಿಗಾಗಿ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ. ಅವರ ಸಂಸ್ಕೃತಿ, ಪರಂಪರೆ ಹಬ್ಬಗಳು ಮತ್ತು ಜಾತ್ರೆಗಳ ಬಗೆಗೆ ಅವರ ವಿಭಿನ್ನ ಚಿಂತನೆಗಳು ಹಾಗೂ ಹೋರಾಟದ ಮಜಲುಗಳನ್ನು ನಾಡಿಗೆ ಪರಿಚಯಿಸಿ ಅಧ್ಯಯನ ಹಾಗೂ ಅಧ್ಯಾಪನದ ಜೊತೆಗೆ ಸಂಘಟನೆ, ವೈಚಾರಿಕ ಜ್ಞಾನ, ಸಂಸ್ಕೃತಿ ಪರಂಪರೆಯ ಚರ್ಚೆ, ಅಭಿವ್ಯಕ್ತಿ ಹಾಗು ಹೋರಾಟಕ್ಕೆ ಅನೇಕ ವೇದಿಕೆ ಒದಗಿಸಲು ಚರಿತ್ರಾರ್ಹವಾದ ಕಾಯಕವನ್ನು ಮಾಡಿದ್ದಾರೆ”. ಇಂತಹ ಬಹುಮುಖಿ ವ್ಯಕ್ತಿತ್ವದ ಹಿರೇಮಠ ಮೇಷ್ಟ್ರು ಅನೇಕ ಹೋರಾಟಗಾರರನ್ನು ಹಾಗೂ ಚಿಂತಕರನ್ನು ತಮ್ಮ ಜ್ಞಾನಗರಡಿಯಲ್ಲಿ ಪಳಗಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ವಾಂಸರು ಗುರ್ತಿಸುವಂತೆ, ಚಾರಿತ್ರಿಕ ಭೌತವಾದವನ್ನು ಅತ್ಯಂತ ವೈಜ್ಞಾನಿಕವಾಗಿ ಈ ದೇಶಕ್ಕೆ ಪರಿಚಯ ಮಾಡಿಕೊಟ್ಟಂತ ದೇವಿಪ್ರಸಾದ್ ಚಟ್ಟೋಪಾಧ್ಯಾಯ, ಲೇಖಕರಾದ ಡಿ.ಡಿ.ಕೋಸಾಂಬಿ, ಎಸ್.ಜಿ.ಸರ್ದೇಸಾಯಿ ಅವರ ಪ್ರವಾಹಕ್ಕೆ ಒಳಗಾಗಿದ್ದ ಹಿರೇಮಠ ಮೇಷ್ಟ್ರು ತಮ್ಮ ಶಿಷ್ಯರಿಗೆ ಭಾರತದಲ್ಲಿ ದ್ವಂದ್ವಮಾನ ಮತ್ತು ಚಾರಿತ್ರಿಕ ಭೂತವಾದವನ್ನು E=mc2 ಒಂದೇ ಸೂತ್ರದ ಮೂಲಕ ಅತ್ಯಂತ ಸರಳವಾಗಿ ಮನದಟ್ಟು ಮಾಡಿದ ರೀತಿ ಅತ್ಯಂತ ಮನೋಜ್ಞವಾದದ್ದು.

ಭಾರತೀಯ ಸಾಂಸ್ಕೃತಿಕ ಸಂದರ್ಭದಲ್ಲಿ ಜಾತಿವ್ಯವಸ್ಥೆಯ ಬೇರುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಹೊಸ ಹೋರಾಟಗಳನ್ನು ರೂಪಿಸಬೇಕು ಎನ್ನುವ ಚಿಂತನೆಯಿದ್ದ ಎಸ್.ಎಸ್.ಹಿರೇಮಠ ಮೇಷ್ಟ್ರು, ವೈಜ್ಞಾನಿಕ ಸೈದ್ಧಾಂತಿಕ ಸ್ಪಷ್ಟತೆಯಲ್ಲಿ ಮುನ್ನಡೆದಿದ್ದರು. ರಾಜ್ಯಾದ್ಯಂತ ಅನೇಕ ಜಾಥಾಗಳನ್ನು ಸಂಘಟಿಸಿ ಅಸ್ಪೃಶ್ಯತೆಯ ವಿರುದ್ಧ ಹಾಡು ಹಾಗೂ ಬೀದಿ ನಾಟಕಗಳನ್ನು ಆಯೋಜಿಸಿ, ಪಟ್ಟಭದ್ರ ಹಿತಾಸಕ್ತಿಗಳ ವಿರೋಧ ಕಟ್ಟಿಕೊಂಡು ವಯಕ್ತಿಕ ತೊಂದರೆ ಅನುಭವಿಸಿದ್ದರೂ ಕೂಡ ದೃತಿಗೆಡದೆ ಜೀವಮಾನವಿಡಿ ನೊಂದಜನರ ದಿಟ್ಟಧ್ವನಿಯಾಗಿದ್ದರು. ರಂಗನಾಟಕ ಮತ್ತು ಬೀದಿನಾಟಕಗಳನ್ನು ಬರೆದು, ಸಂಭಾಷಣಾ ಪ್ರಸ್ತುತಿಯ ಚಾತರ‍್ಯ, ಕಾಲ-ದೇಶ-ಕ್ರಿಯಾನುಗುಣವಾಗಿ ಬರೆಯುತ್ತಿದ್ದ ಅತ್ಯಂತ ಶಕ್ತ ಸಂಭಾಷಣೆಗಳ ರೀತಿಯಿಂದಾಗಿ ಹಿರೇಮಠರ ಅಸಂಖ್ಯ ಅಭಿಮಾನಿಗಳು ಸೃಷ್ಟಿಯಾಗಿದ್ದು ಮನನೀಯ.

ಭಾರತೀಯ ನೆಲದ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಕ್ರಿಯಾಶೀಲತೆಗೆ ದ್ಯೋತಕವಾದ ಶೋಧನ ಹಾಗೂ ಬೋಧನ ಕಾಯಕವನ್ನು ಏಕವಾಗಿ ಕೈಗೊಂಡ ಹಿರೇಮಠರ ಕೃತಿಗಳು ಅತ್ಯಮೂಲ್ಯವಾಗಿದೆ. ಬಯಕೆ ಬಯಲು, ಕೆಂಪು ಕವನಗಳು, ಹಸಿರಿನುಸಿರು, ಚಂದ್ರನ ದಾರಿಗಳು, ಮನುಷ್ಯನೆಲ್ಲಿ?(ಕಾವ್ಯ), ಕ್ಯಾದಗಿಹಳ್ಳಿ ಅಂಬವ್ವನ ಪದಗಳು, ಮೈಲಾರನ ಜಾತ್ರೆ, ಮಾನವಪದ ಶಾಸ್ತ್ರ, ಕೊಪ್ಪಳ ಜಿಲ್ಲೆಯ ಜಾತ್ರೆಗಳು, ಜನಪದ ಸಮಾಜ ಸಂಸ್ಕೃತಿ (ಜಾನಪದ), ಮನುಸ್ಮೃತಿಯಲ್ಲಿ ಜಾತಿ ಮತ್ತು ವರ್ಗ, ಬಳ್ಳಾರಿ ಜಿಲ್ಲೆಯ ಆಧುನಿಕ ಸಾಹಿತ್ಯ, ಬಂಡಾಯ ಸಾಹಿತ್ಯ, ಪಂಚಗಣಾಧೀಶ್ವರ, ಸಮಾಜ ಸಂಸ್ಕೃತಿ ಸಂಘರ್ಷ(ವಿಮರ್ಶೆ), ರಾಘವಾಂಕನ ವೀರೇಶ ಚರಿತೆ, ವಿಚಾರ ಸಾಹಿತ್ಯ-1995, ಹರಿಹರನ ಮೂರು ರಗಳೆಗಳು(ಸಂಪಾದನೆ), ಬಂಡಾಯ ಮತ್ತು ಲೈಂಗಿಕ ಪ್ರಶ್ನೆ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಉಪ ಸಂಸ್ಕೃತಿಗಳು, (ವೈಚಾರಿಕ), ಹಶ್ಮಿ ಅಮರ ಮತ್ತು ಜೋಗತಿ ಕಲ್ಲು(ನಾಟಕಗಳು), ‘ಟಿ.ವಿ.ಶಿವಾನಂದನ್: ಬದ್ಧತೆಗೊಂದು ಮಾದರಿ’(ಪತ್ರಕರ್ತ ಟಿ.ವಿ. ಶಿವಾನಂದನ್ ಅವರಿಗೆ ಸಲ್ಲಿಸಿದ ಅಭಿನಂದನ ಗ್ರಂಥ), ಕರ್ನಾಟಕ ಸಂಸ್ಕೃತಿ ಪರಂಪರೆ: ಭಾಗ-1 ಹಬ್ಬಗಳು, ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ: ಭಾಗ-2 ಜಾತ್ರೆಗಳು, ಮಾದಾರ ಚೆನ್ನಯ್ಯನ ನಾಡಿನಲ್ಲಿ, ಉಪ್ಪಾರರು, ಹರಿಹರ ಚಿತ್ರಿಸಿದ ದಲಿತ ಶರಣರು, ಕನ್ನಡ ಜನಪದ ಗುರುಪರಂಪರೆ, ದಲಿತ ಸಂಸ್ಕೃತಿ, ಸಾಂಖ್ಯ ದರ್ಶನ, ಪಾಶುಪತ ದರ್ಶನ, ಕಾಳಾಮುಖ ದರ್ಶನ, ಲಾಕುಳ ದರ್ಶನ, ಲೋಕಾಯತ ದರ್ಶನ, ಯೋಗ ದರ್ಶನ(ಸಂಶೋಧನೆ) – ಇವು ಹಿರೇಮಠರ ಸಾಹಿತ್ಯಕೃಷಿಯಲ್ಲಿ ಮೂಡಿಬಂದಿರುವ ಮಹತ್ವದ ಕೃತಿಫಸಲುಗಳಾಗಿವೆ. ಹಿರೇಮಠರ ಶೋಧನ ಹಾಗೂ ಬೋಧನ ಕೃಷಿಗಾಗಿ ಶ್ರೀ ಮೃತ್ಯುಂಜಯ ಸಾರಂಗಮಠ ಸ್ಮಾರಕ ಪ್ರಶಸ್ತಿ, ಶ್ರೀ ರುದ್ರೇಶ್ವರ ಸಾಹಿತ್ಯ ಪ್ರಶಸ್ತಿ, ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗುಲ್ಬರ್ಗಾ ವಿವಿಯ ಗೌರವ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳು ಮೊದಲಾಗಿ ಹಲವಾರು ಗೌರವ ಪುರಸ್ಕಾರಗಳು ದೊರೆತಿವೆ.

ಹಿರೇಮಠರು ನಾಟಕಕಾರರಾಗಿ ಬೆಟಗೇರಿ ಕೃಷ್ಣಶರ್ಮರ “ಜೋಗತಿಕಲ್ಲು” ಕಥೆಯನ್ನು ನಾಟಕಕ್ಕೆ ಇಳಿಸಿದ ರೀತಿ ಕೂಡ ಅನನ್ಯ. ಈ ಕಥೆಯಲ್ಲಿ ತ್ಯಾಗದ ಪ್ರತೀಕವಾಗಿ, ಆರಾಧ್ಯ ದೈವವಾಗಿ ಸಾರ್ಥಕತೆ ಪಡೆವ ದೇವದಾಸಿ ಚಂದಕ್ಕ-ಹಿರೇಮಠರ ಕಣ್ಣೋಟದಲ್ಲಿ ಸಾಮಾಜಿಕ ಸಮಸ್ಯೆಯೊಂದರ ಕಣ್ಮರೆಯಂತೆ ಕಾಡುತ್ತದೆ. ಪರಂಪರೆಯನ್ನು ನೋಡುವ, ಅರ್ಥೈಸುವ ಪಾಠಗಳನ್ನು ಸಾಮಾನ್ಯರಿಗೆ ಮುಟ್ಟಿಸುವ ರೀತಿಯಿಂದಾಗಿ ಹಿರೇಮಠರ ಪ್ರಯತ್ನ ಬಹುಮುಖ್ಯವಾದದ್ದು. 1986ರಲ್ಲಿ ಪ್ರದರ್ಶನಗೊಂಡ ಈ ನಾಟಕ, ಪ್ರದರ್ಶನವಾದ ಕಡೆಯಲ್ಲೆಲ್ಲಾ ನಾಟಕದ ಪರಿಣಾಮ ಹೃದಯಕ್ಕೆ ತಟ್ಟುವಂತೆ ಮತ್ತು ವ್ಯವಸ್ಥೆ ಕಲಿಸಿರುವ ಕೀಳು ಅಭಿರುಚಿಯ ವಿರುದ್ಧ ಬಂಡಾಯವೇಳುವ ಅಗತ್ಯವನ್ನು ನಾಟಕ ಹೇಳುತ್ತಾ ಹೋಯಿತು. ಇಡೀ ರಾಜ್ಯಾದ್ಯಂತ ಪ್ರಚಾರ ಪಡೆದ ಈ ನಾಟಕದ ಕುರಿತು ಅಂದಿನ ದಿ.5-1-1986ರ ಟೈಮ್ಸ್ ಆಫ್ ಇಂಡಿಯಾದಲ್ಲಿ, “Jogathikallu made a scathing attack on the evils of Devadasi system which is still prevailing in North Karnataka. The play was so rich in songs that it engulfed the action of the play itself” ಚರಿತ್ರೆಯನ್ನು ಮುರಿದು ಕಟ್ಟುವ ಇಂತಹ ಪ್ರಯತ್ನಗಳಿಗೆ ಪ್ರೇಕ್ಷಕರ ಸ್ಪಂದನೆ ಮಾತ್ರ ಅದ್ಭುತವಾಗಿತ್ತು ಎಂದು ಈಗಲೂ ರಂಗನಿರ್ದೇಶಕ ಸಿ.ಬಸವಲಿಂಗಯ್ಯ ಅವರು ನೆನಪಿಸಿಕೊಳ್ಳುತ್ತಾರೆ.

ಚಿಂತಕರಾದ ಡಾ.ಮೊಗಳ್ಳಿ ಗಣೇಶ್ ಅವರು ಹೇಳುವಂತೆ, ದಲಿತ ಸಮುದಾಯಗಳ ಸಾಂಸ್ಕೃತಿಕ ಅಂತಃಸತ್ವವನ್ನೂ ಸಮಕಾಲೀನತೆಯಲ್ಲಿ ಅವು ಪ್ರಧಾನ ಧಾರೆಯಲ್ಲಿ ಎಲ್ಲ ರೀತಿಯಲ್ಲೂ ಸಂಯೋಗ ಸಂವೇದನೆಯ ವಿಕಾಸತ್ವಕ್ಕೆ ಒಳಗಾಗುವುದನ್ನು ಸೂಕ್ಷ್ಮವಾಗಿ ಆಳವಾಗಿ ವಿಭಿನ್ನವಾಗಿ ಸಮಷ್ಟಿ ಧ್ಯಾನಚಿತ್ತದಿಂದ ವಿಶ್ಲೇಷಿಸಿ ಸಾಂಸ್ಕೃತಿಕ ಚರ್ಚೆಗಳಿಗೆ ಹಾಗೂ ಅವುಗಳ ವಿಕಾಸಗಳಿಗೆ ಪೂರಕವಾದ ಶೋಧನೆಗಳನ್ನು ರೂಪಿಸಬೇಕಾದ ಅಗತ್ಯವಿದೆ. ಆಧುನಿಕ ಯುಗದ ಈ ಹೊತ್ತಿಲಲ್ಲಿ ಕೆಳಜಾತಿ ಎಂಬ ಶಾಪಕ್ಕೆ ಒಳಗಾದ ಅನೇಕ ಸಮುದಾಯಗಳು ಜಗತ್ತಿನ ವೇಗದ ರೂಪ ಮತ್ತು ವಿರೂಪಗಳೆರಡರ ತಕ್ಕಡಿಯಲ್ಲಿ ಅದಲು ಬದಲಾಗುತ್ತಾ ಸಂವೇದನೆಯ ರೂಪಾಂತರಗಳಾಗುತ್ತಾ ಎಲ್ಲೆಲ್ಲಿಯೊ ತಮ್ಮ ಅನನ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಿವೆ. ಪ್ರಭುತ್ವದ ಜೊತೆ ಹೋರಾಡುತ್ತಲೇ ರಾಜಿ ಒಪ್ಪಂದ ಮಾಡಿಕೊಂಡಂತೆಯೂ ಸಾಂಸ್ಕೃತಿ ಅಂತಃಸತ್ವಗಳನ್ನು ರಾಜಕೀಯದ ವರಸೆಗಳಲ್ಲಿ ಈ ಸಮುದಾಯಗಳು ಬೆಸುಗೆ ಮಾಡಿಕೊಳ್ಳುತ್ತ ಎಚ್ಚರದ ಸ್ಥಿತಿಯಲ್ಲಿ ಎಡವಿ ಬೀಳುತ್ತ ಮೇಲೇಳುತ್ತ ತಮ್ಮ ತಮ್ಮ ಅಸ್ತಿತ್ವಗಳಿಗಾಗಿ ಎಲ್ಲ ಬಗೆಯ ಬಾಗಿಲುಗಳನ್ನು ಬಡಿಯುತ್ತಿವೆ. ಇವತ್ತು ನಮ್ಮ ರಾಜಕಾರಣ ಅದರ ಪ್ರಭುತ್ವ ಮತ್ತು ಸಮಕಾಲೀನ ಸಾಮಾಜಿಕ ಪ್ರಕ್ರಿಯೆಗಳೆಲ್ಲ ಒಂದಾಗಿಯೇ ಸಮಸ್ಯೆಗಳನ್ನು ಬಿಡಿಸಿಕೊಳ್ಳುತ್ತಲೇ ಸಂಕೀರ್ಣ ಸವಾಲುಗಳು ಎದುರಾಗುತ್ತಿವೆ. ಇಂತಲ್ಲಿ ಸಮುದಾಯದ ಒಳಗೇ ತಣ್ಣಗೆ ಮೌನವಾಗಿ ಪ್ರವಹಿಸುವ ಮಾನವೀಯ ಜೀವಧಾತುವಿನಂತಹ ಹುಡುಕಾಟಗಳಿಗೆ ಹೊಸ ಪೀಳಿಗೆಯ ಮನಸ್ಸು ತೆರೆದುಕೊಳ್ಳಬೇಕಾಗಿದೆ ಎಂಬ ಆಶಯಕ್ಕೆ ಪೂರಕವಾಗಿ ಮೂಡಿಬಂದಿರುವ ಸಂಶೋಧನ ಗ್ರಂಥಗಳಲ್ಲಿ ಹಿರೇಮಠರ ದಲಿತ ಸಂಸ್ಕೃತಿ ಕೇಂದ್ರಿತ ಶೋಧನ ಕೃತಿಗಳು ಬಹುಮೌಲ್ಯಯುಳ್ಳವಾಗಿವೆ.

‘ಕರ್ನಾಟಕ ಸಂಸ್ಕೃತಿ ಪರಂಪರೆ ಭಾಗ-1 ಮತ್ತು ಭಾಗ-2’ ಕೃತಿಗಳಲ್ಲಿ ಹಬ್ಬಗಳು ಮತ್ತು ಜಾತ್ರೆಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ ಹಿರೇಮಠರು ನೆಲಮೂಲದ ದಲಿತ ಸಂಸ್ಕೃತಿ, ವಲಸೆಗಾರ ಪಶುಪಾಲಕ ಸಂಸ್ಕೃತಿ ಹಾಗೂ ವೈದಿಕ ಸಂಸೃತಿಗಳನ್ನು ಕುರಿತು ಗಂಭೀರವಾದ ಸಂಶೋಧನೆ ಮಾಡಿದ್ದಾರೆ. ಆವರೆಗೆ ಅಸ್ಪಷ್ಟವಾಗಿದ್ದ ವಿಚಾರಗಳನ್ನು ಹೊಸ ಮಾಹಿತಿಗಳ ಮೂಲಕ ಇಲ್ಲಿ ಇನ್ನಷ್ಟು ಸ್ಪಷ್ಟಪಡಿಸಿದ್ದಾರೆ. ಇಲ್ಲಿ, ಹಿರೇಮಠರು ಮೂರು ಅಂಶಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ ಮತ್ತು ಅದನ್ನು ಒಂದು ಪ್ರಮೇಯವಾಗಿ ಅಂಗೀಕರಿಸಿ, ವಿಷಯ ಮಂಡನೆ ಮಾಡಿದ್ದಾರೆ, ಅವುಗಳೆಂದರೆ- 1) ಹೊಲೆ ಮಾದಿಗರೇ ಈ ನೆಲದ ಮೊದಲ ಕೃಷಿಕರು. ಕೃಷಿಕರಾಗುವ ಮುನ್ನ ಅವರು ಬೇಟೆಗಾರರಾಗಿದ್ದರು. ಕೃಷಿಕರಾಗಿರುವುದರಿಂದಲೇ ಅವರು ತಂತ್ರದ ಕಡೆ ವಾಲಿದರು. ಮೂಲತಃ ಶಾಕ್ತರಾಗಿರುವ ಅವರು ಯೋನಿ ಪೂಜಕರಾಗಿದ್ದರು. ಇವರಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಇತ್ತು. 2)ಎರಡನೇ ಹಂತದಲ್ಲಿ ಪಶುಪಾಲಕರಾಗಿದ್ದ ದ್ರಾವಿಡರು ದಕ್ಷಿಣಕ್ಕೆ ವಲಸೆ ಬಂದರು. ಹಾಗೆ ವಲಸೆ ಬಂದ ಅನಂತರ ಅವರು ಕೃಷಿಕರಾಗಿ ಮಾರ್ಪಟ್ಟರು ಇಲ್ಲವೇ ಹೊಲೆ ಮಾದಿಗರೊಂದಿಗೆ ಒಂದು ಬಗೆಯ ಸಮನ್ವಯವನ್ನು ಏರ್ಪಡಿಸಿಕೊಂಡರು, ಇವರು ಶಿಶ್ನಾರಾಧಕರು, ಸಿದ್ಧ ಪರಂಪರೆಯವರು. 3)ಮೂರನೆಯ ಹಂತದಲ್ಲಿ ವೈದಿಕರ ಪ್ರವೇಶ ಆಗಿದೆ. ಪುರುಷ ಪ್ರಧಾನ ಚಿಂತಕರಾದ ಇವರ ಪ್ರವೇಶದಿಂದ ಜಾತಿ-ವರ್ಗಗಳು ಕಾಣಿಸಿಕೊಂಡವು. ಈ ಮೂರು ಅಂಶಗಳನ್ನು ಹಿರೇಮಠರು ಸುಮಾರು 51 ಜನಪದ ದೈವಗಳ ಆಚರಣಾ ವಿಧಿ-ವಿಧಾನಗಳ ಸಹಾಯದಿಂದ ಚರ್ಚಿಸಿ, ಸಮರ್ಥಿಸುತ್ತಾರೆ. ಊರು, ಹಳ್ಳಿ, ಲಿಂಗ, ಹಬ್ಬ, ತೇರು, ಜಾತ್ರೆ ಹೀಗೆ ಬಹು ಅಂಶಗಳನ್ನು ಎತ್ತಿಕೊಂಡು ತನ್ನ ವಾದವನ್ನು ಗಟ್ಟಿಗೊಳಿಸಿದ್ದಾರೆ. ಲಭ್ಯವಿರುವ ಮಾಹಿತಿಗಳೆಲ್ಲವನ್ನು ಸಂಗ್ರಹಿಸಿ, ಅವನ್ನು ತನ್ನ ಕೇಂದ್ರ ಉದ್ದೇಶಕ್ಕೆ ಜೋಡಿಸಿ, ವಿಷಯ ಮಂಡನೆ ಮಾಡಿದ್ದಾರೆ; ದಲಿತ ಸಂಸ್ಕೃತಿಯ ವಿರಾಟ್ ಸ್ವರೂಪದ ದರ್ಶನ ಮಾಡಿಸಿದ್ದಾರೆ. ಇದರ ಜೊತೆಗೆ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಎಲ್ಲ ಹಬ್ಬಗಳ ಆಶಯ ಒಂದಿಲ್ಲೊಂದು ರೀತಿಯಿಂದ ಕೃಷಿಗೆ ಸಂಬಂಧಿಸಿರುವುದು. ಮಾನವ ಜೀವನ ಮತ್ತು ಕೃಷಿಗೆ ಅಗತ್ಯವಾದ ಪ್ರಾಣಿ ಜೀವನಗಳೂ ರಂಗಕ್ಕೆ ಪ್ರವೇಶಿಸುತ್ತವೆ. ಆದ್ದರಿಂದ ಹಬ್ಬಗಳ ವೈಜ್ಞಾನಿಕ ಶೋಧನೆಯ ಸಾಧ್ಯತೆಯನ್ನು ಹಿರೇಮಠರು ಕೈಗೊಂಡಿರುವುದು ಮಹತ್ವದ್ದಾಗಿದೆ. ಈ ಕೆಲಸದ ಹಿಂದೆ ಇರುವ ಅಪಾರವಾದ ಶ್ರಮ, ತಾಳ್ಮೆ ಮತ್ತು ಆಳವಾದ ವಿದ್ವತ್ತು ವಿಶೇಷವಾದುದು. ಮೇಲಾಗಿ ತನ್ನ ಇಡೀ ವಾದವನ್ನು ಒಂದು ಜನಪರವಾದ ನಿಲುವಿಗೆ ಸೇರಿಸುವಲ್ಲಿ ಹಿರೇಮಠರು ತೋರುವ ಬದ್ಧತೆಯು ಇಲ್ಲಿ ಗಮನಾರ್ಹ.

ಕರ್ನಾಟಕದಲ್ಲಿ ಎಪ್ಪತ್ತು ಎಂಬತ್ತರ ದಶಕ ಹಲವು ಚಳುವಳಿಗಳ ಮೂಲಕ ಸಂಚಲನವನ್ನು ಉಂಟುಮಾಡಿತ್ತು. ಸಂಸ್ಕೃತಿಯ ಅರ್ಥ ವ್ಯಾಖ್ಯಾನಗಳು ಪಲ್ಲಟಗೊಂಡು ಹೊಸ ಅರ್ಥ ವ್ಯಾಖ್ಯಾನಗಳನ್ನು ಹುಟ್ಟುಹಾಕಿತು. ಅದರ ಬೆಳಸಿನ ಕೊಯ್ಲಿಗೆ ಎಸ್.ಎಸ್.ಹಿರೇಮಠರ 'ದಲಿತ ಸಂಸ್ಕೃತಿ' ಹಾಗೂ ‘ಮಾದಾರ ಚೆನ್ನಯ್ಯನ ನಾಡಿನಲ್ಲಿ’ ಕೃತಿಗಳೂ ಸಾಕ್ಷಿಯಾಗಿವೆ. ಅಧ್ಯಯನ ಕ್ಷೇತ್ರಗಳು ಶ್ರೇಣೀಕರಣದ ಕಾರಣದಿಂದ ಅವಜ್ಞತೆಗೆ ಮತ್ತು ಶ್ರೇಷ್ಠ ಕನಿಷ್ಠತೆಗೆ ಒಳಗಾಗಿದ್ದವು. ಆದರೆ ದಲಿತ ಬಂಡಾಯ ಚಳುವಳಿಯಿಂದ ಈ ಅವಜ್ಞತೆಯನ್ನು ಪ್ರಶ್ನಿಸುವ ಪ್ರತಿಭಟಿಸುವ ಕ್ರಿಯೆಗಳೆಲ್ಲ ನಡೆದವು. ಹೀಗಾಗಿ ಮುಟ್ಟಬಾರದ ಲೋಕಗಳನ್ನು ಮುಟ್ಟಿ ಅದರೊಳಗಿನ ಚಾರಿತ್ರಿಕ ಸಂಗತಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ದಲಿತ ಸಂಸ್ಕೃತಿಯೆಂಬುದನ್ನು ಕಟ್ಟಿಕೊಳ್ಳುವ ಹೊತ್ತಿನಲ್ಲಿ ಚರಿತ್ರೆಯಲ್ಲಿ ಕಾಣೆಯಾಗಿದ್ದವುಗಳನ್ನು ಹುಡುಕಿಕೊಳ್ಳುವುದು ಬಹು ಕಷ್ಟದ ಕೆಲಸ. ಭಾರತದಂತಹ ದೇಶದಲ್ಲಿ ಎಲ್ಲವುಗಳನ್ನು ಸಾಕ್ಷ್ಯಾಧಾರಗಳ ಮೂಲಕ, ಪ್ರಮಾಣಗಳ ಮೂಲಕವೇ ಹೇಳಬೇಕಾಗುತ್ತದೆ, ಬರೆಯಬೇಕಾಗುತ್ತದೆ. ಹೀಗಾಗಿಯೇ ಹಿರೇಮಠರು ಶಾಸನ, ಕಾವ್ಯ, ಪುರಾಣಗಳನ್ನೆಲ್ಲ ಜಾಲಾಡಿರುವರು. ದಲಿತ ಸಂಸ್ಕೃತಿ ಮತ್ತು ಅಧ್ಯಯನ ಸಂಬಂಧವಾಗಿ ಚರಿತ್ರೆಯಲ್ಲಿ ನಡೆದಿರುವ ಮೋಸ, ಶಾಸನಗಳಲ್ಲಿ ನಿರ್ದೇಶಿಸಿರುವ ದಲಿತ ಸಂಸ್ಕೃತಿ, ಕರ್ನಾಟಕ ರಾಜವಂಶಗಳು ಮತ್ತು ದಲಿತರು, ಎಲ್ಲಮ್ಮಪಂಥ, ತಾಯಿಪಂಥ, ತಾಂತ್ರಿಕ ಪಂಥ, ದಲಿತ ಸಂಸ್ಕೃತಿ ಮತ್ತು ವೈಜ್ಞಾನಿಕತೆ, ದಲಿತ ತತ್ವಜ್ಞಾನ ಮೊದಲಾದ ಸಂಗತಿಗಳನ್ನು ಚರ್ಚಿಸಿರುವರು. ಈ ಮೂಲಕ ಏಕಸಂಸ್ಕೃತಿಯ ಕಲ್ಪನೆಯನ್ನು ಒಡೆದು ಬಹುಸಂಸ್ಕೃತಿಗಳನ್ನು ಶೋಧಿಸಿ ಚರಿತ್ರೆಯನ್ನು ಪುನರ್ ನಿರ್ಮಿಸುವ ಬದ್ಧತೆಯ ಕಾಯಕ ಪೂರೈಸಿದ್ದಾರೆ. ಈ ಬದ್ಧತೆಯನ್ನು ಶೋಧನೆ ಹಾಗೂ ಬೋಧನೆಯಲ್ಲಿ ಮಾತ್ರವಲ್ಲದೆ ತಮ್ಮ ಬದುಕಿನುದ್ದಕ್ಕೂ ಜೀವಂತವಾಗಿಟ್ಟುಕೊಂಡು ಬರೆದವರು ಎಸ್.ಎಸ್.ಹಿರೇಮಠರು ಎಂಬುದು ಹೆಮ್ಮೆಯ ಸಂಗತಿ.

‘ಮಾದಾರ ಚೆನ್ನಯ್ಯನ ನಾಡಿನಲ್ಲಿ’ ಎಂಬ ಕೃತಿಯಲ್ಲಿ ಹಿರೇಮಠರು ತಾವು ಈಗಾಗಲೇ ಕೈಗೊಂಡಿದ್ದ ದಲಿತತ್ವ ಶೋಧನೆಯ ಹೊಸಸಾಧ್ಯತೆ ಹಾಗೂ ಹೊಸಸೇರ್ಪಡೆಯನ್ನು ಮಾಡಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ನೆಲಮೂಲದ ದಲಿತ ಸಂಸ್ಕೃತಿಯ ಆಧುನಿಕ ರೂಪರೇಖೆಗಳನ್ನು ಆದಿಮತೆಯ ಅನುಸಂಧಾನದಲ್ಲಿ ಮುಖಾಮುಖಿಯಾಗಿಸುತ್ತಾ ಈ ಹೊತ್ತಿಗೂ ವಾಸ್ತವವೆನಿಸುವ ದಲಿತತ್ವದ ಬಹುಮುಖಗಳನ್ನು ದರ್ಶಿಸಿದ್ದಾರೆ. ಕರ್ನಾಟಕದಲ್ಲಿ ವರ್ಣ-ಜಾತಿ ಸಮಸ್ಯೆ, ವರ್ಗ; ವರ್ಣ-ಜಾತಿ ಸಮಸ್ಯೆಗಳ ಅಂತರ್‌ಸಂಬಂಧ, ದಲಿತ-ಮುಸ್ಲಿಂರ ಐಕ್ಯತೆಯ ಸಾಧ್ಯಾಸಾಧ್ಯತೆ, ನಾಶವಾಗಬೇಕಾದದ್ದು ಜಾತಿಯೇ ಧರ್ಮವೇ? ಬ್ರಾಹ್ಮಣ ಸಮಾಜ ದ್ರಾವಿಡ ಮೂಲದ್ದೇ? ದ್ರಾವಿಡವಾದ ಎಷ್ಟು ಸರಿ? ಆಂತರಿಕ ಬಿಕ್ಕಟ್ಟಿನಲ್ಲಿ ಕ್ರಾಂತಿಕಾರಿಗಳು, ದಲಿತರ ನೇತೃತ್ವವೇ ಯಾಕೇ?, ಮಾದಾರ ಚೆನ್ನಯ್ಯನ ಮತ ಮತ್ತು ಮತಾಂತರ, ಸಾಮಾಜಿಕ ಸಮಾನತೆಯ ಸತ್ವ, ದಲಿತವಾದಿ ಬದ್ಧತೆ ಮೊದಲಾದ ಸಂಗತಿಗಳನ್ನು ಲೋಹಿಯಾ-ಅಂಬೇಡ್ಕರ್-ಗಾಂಧಿ ಮೊದಲಾದ ಚಿಂತಕರ ಕಣ್ಣೋಟದಲ್ಲಿ ಮೌಲ್ಯೀಕರಿಸಿದ್ದಾರೆ. ಇಲ್ಲಿ ಕಾಣುವ ದಲಿತತ್ವ ಪರವಾದ ಹಿರೇಮಠರ ವಸ್ತುನಿಷ್ಠ ದೃಷ್ಟಿಕೋನ, ಆಳವಾದ ಶೋಧನಪ್ರಜ್ಞೆ, ಪರಂಪರೆಯೊಂದಿಗಿನ ಆಧುನಿಕ ಅನುಸಂಧಾನ ಚಿಂತನೆ, ಸಮಕಾಲೀನ ಪ್ರಜ್ಞೆ ಹಾಗೂ ಪ್ರಖರ ವೈಚಾರಿಕತೆಗಳು ಅನುಕರಣೀಯವಾದುವು.

ಭಾರತೀಯ ಪ್ರಾಚೀನ ದರ್ಶನಗಳ ಸರಣಿಯಲ್ಲಿ ಪಾಶುಪತ ದರ್ಶನ, ಕಾಳಾಮುಖ ದರ್ಶನ, ಲಾಕುಳ ದರ್ಶನ, ಯೋಗದರ್ಶನ, ಲೋಕಾಯತ ದರ್ಶನ ಕೃತಿಗಳನ್ನು ಹಿರೇಮಠರು ರಚಿಸಿದ್ದಾರೆ. ಭಾರತದ ಅವಿಭಾಜ್ಯ ಭಾಗವಾದ ಕನ್ನಡ ನಾಡಿನ ಸಂಸ್ಕೃತಿಯ ಬೆಳವಣಿಗೆಯಲ್ಲಿ ದರ್ಶನಗಳ ಪಾತ್ರವೇನಿರಬಲ್ಲುದು ಎಂಬ ಪ್ರಶ್ನೆ ತುಂಬ ಮಹತ್ವದ್ದು. ಭಾರತದಲ್ಲಿ ತುಂಬ ಪ್ರಾಚೀನ ಕಾಲದಿಂದಲೂ ಹಲವಾರು ದರ್ಶನಗಳು ಪ್ರಚಲಿತವಿದ್ದವು. ಆಸ್ತಿಕ-ನಾಸ್ತಿಕ ಎಂಬ ಪ್ರಧಾನ ಪ್ರಭೇದಗಳ ಮೂಲಕ ನಮ್ಮ ದೇಶದ ‘ದರ್ಶನ' ಪರಂಪರೆ ತುಂಬ ಪ್ರಾಚೀನ ಕಾಲದಿಂದ ಬೆಳೆದು ಬಂದಿದೆ. ಅದು ನಾಡಿನ ಪ್ರಗತಿಗಾಗಿ ನಡೆದ ಹೋರಾಟಗಳಿಗೆ ನಿರ್ದಿಷ್ಟ ದೃಷ್ಟಿಕೋನವನ್ನು ಮತ್ತು ತಾತ್ವಿಕ ನೆಲೆಗಳನ್ನು ಒದಗಿಸುತ್ತ ಬಂದಿದೆ. ಜಾತಿ, ಧರ್ಮ, ಮತ, ಪಂಥ, ಕೋಮುಗಳ ಪ್ರಭಾವ ದಟ್ಟವಾಗಿರುವ ಹಿನ್ನೆಲೆಯಲ್ಲಿ ಮತ್ತು ಅವುಗಳಿಂದ ಉಂಟಾಗುತ್ತಿರುವ ನಾನಾ ಬಗೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆಯಿರುವಲ್ಲಿ ದರ್ಶನಗಳ ಪಾತ್ರವೇನೆಂಬ ಪ್ರಶ್ನೆ ಪ್ರಸ್ತುತವೆನಿಸುತ್ತದೆ. ಆಧುನಿಕ ಪೂರ್ವ ಕಾಲಘಟ್ಟದಲ್ಲಿ ಜಾತಿ, ಧರ್ಮಾದಿಗಳು ಹುಟ್ಟು ಹಾಕಿದ್ದ ಸವಾಲುಗಳನ್ನು ನಮ್ಮ ಸಂಸ್ಕೃತಿ ಪರಂಪರೆಗಳು ಸ್ವೀಕರಿಸಿದ ಮತ್ತು ಎದುರಿಸಿದ ಸಂದರ್ಭ ಹೇಗಿತ್ತು ಮತ್ತು ಪರಿಹಾರಗಳೇನಿದ್ದವು? ಈ ಹಿನ್ನೆಲೆಯಲ್ಲಿ ‘ದರ್ಶನ'ಗಳ ಪಾತ್ರದ ಪ್ರಾಮುಖ್ಯತೆ ಗೊತ್ತಾಗುತ್ತದೆ ಎಂದು ದರ್ಶನಗಳ ಶೋಧನೆಗೆ ಇಳಿದ ಹಿರೇಮಠರು ರಚಿಸಿದ ದರ್ಶನ ಕೃತಿಗಳು ದಾರ್ಶನಿಕತೆಯ ತೋರುದಾರಿಗಳಾಗಿವೆ.

ಒಂದು ನಾಡಿನ ಅಥವಾ ಸಮುದಾಯದ ಸಂಸ್ಕೃತಿಯಲ್ಲಿ ‘ದರ್ಶನ'ಗಳ ಪಾತ್ರ ಪ್ರಧಾನ. ಜಾಗತಿಕ ದೃಷ್ಟಿಕೋನ, ಅಥವಾ ಲೋಕದೃಷ್ಟಿಗಳನ್ನು ರೂಪಿಸುವ ದರ್ಶನಗಳು ಸಂಸ್ಕೃತಿಯನ್ನು ಪ್ರಭಾವಿಸುತ್ತವೆ. ಕರ್ನಾಟಕದ ಇದ್ದುಳ್ಳವರ ಮತ್ತು ಇಲ್ಲದವರ ಸಂಸ್ಕೃತಿಗಳಲ್ಲಿ ಯಾವ ಯಾವ ದರ್ಶನಗಳು ದುಡಿದಿವೆ ಎಂಬುದನ್ನು ಶೋಧಿಸುವ ಆಶಯದಲ್ಲಿ ಎಸ್.ಎಸ್.ಹಿರೇಮಠರ ‘ಸಾಂಖ್ಯ', ‘ಪಾಶುಪತ', ‘ಕಾಳಾಮುಖ', ‘ಲಾಕುಳ', ಯೋಗ’ ಹಾಗೂ ‘ಲೋಕಾಯತ' ದರ್ಶನಗಳನ್ನು ಕುರಿತು ಮಹತ್ತರವಾದ ಸಂಶೋಧನ ಗ್ರಂಥಗಳು ಮೂಡಿಬಂದಿವೆ; ದರ್ಶನ ಶೋಧನೆಯಲ್ಲಿ ಮೌಲ್ಯಯುತ ಸ್ಥಾನಮಾನಕ್ಕೆ ಪಾತ್ರವಾಗಿವೆ. ವೈದಿಕೇತರ ಸಾಂಸ್ಕೃತಿಕ ಜ್ಞಾನಪರಂಪರೆ, ತಾತ್ವಿಕ ಒಳನೋಟಗಳು ಮತ್ತು ಜೀವನ ದರ್ಶನಗಳು ಅನಾತ್ಮವಾದಿಯಾದ ಶುದ್ಧ ಭೌತವಾದವಾಗಿ ಮತ್ತೆ ಪಾರಂಪರಿಕ ಪ್ರಮುಖ ಪ್ರವಾಹಸ್ಥಾನ ಪಡೆಯಬೇಕಾದ ಸಾಂಸ್ಕೃತಿಕ ತುರ್ತಿನ ಈ ದಿನಮಾನಗಳಲ್ಲಿ ಅವೈದಿಕ ದರ್ಶನ ಪರಂಪರೆಗಳೆಡೆಗೆ ಪ್ರೊ. ಹಿರೇಮಠರು ಸಾಂಖ್ಯ ದರ್ಶನದ ಮೂಲಕ ಕೈಮರ ತೋರಿಸಿದ್ದಾರೆ. ಅವರ ‘ಸಾಂಖ್ಯದರ್ಶನ’ವು ದರ್ಶನ ಪರಂಪರೆಗಳ ಪ್ರಸ್ತಾಪ ಮತ್ತು ವೈದಿಕ ಸಾಂಸ್ಕೃತಿಕ ಆಧಿಪತ್ಯದಿಂದ ಆದ ಪ್ರತಿಕೂಲತೆಯ ಬಗ್ಗೆ ಒಂದು ಪ್ರವೇಶಿಕೆಯನ್ನು ತೆರೆದಿರಿಸಿದೆ ಎನ್ನಬಹುದು. ಶಾಸ್ತ್ರೀಯ ಹಾಗೂ ಜಾನಪದೀಯ ನೆಲೆಗಳಲ್ಲಿ ಒಡಮೂಡಿ ಬಂದಿರುವ ‘ಕಾಳಾಮುಖ ದರ್ಶನ’ವನ್ನು ಕುರಿತಾದ ಹಿರೇಮಠರ ಶೋಧನೆಯನ್ನು ಪರಿಶೀಲಿಸುತ್ತಾ ಮೇರುವಿದ್ವಾಂಸರಾದ ಎಂ.ಎಂ.ಕಲ್ಬುರ್ಗಿ ಅವರು, “ದೊಡ್ಡ ಅಭ್ಯಾಸ, ದೊಡ್ಡ ಶ್ರಮಗಳನ್ನು ಪ್ರತಿನಿಧಿಸುವ ಈ ಕೃತಿಗಾಗಿ ನಿಮ್ಮನ್ನು ಪ್ರೀತಿಯಿಂದ ಅಭಿನಂದಿಸುತ್ತೇನೆ. ಇಲ್ಲಿಯ ಕೆಲವು ಅಭಿಪ್ರಾಯಗಳನ್ನು ಒಪ್ಪದಿದ್ದರೂ. ಈ ಬರವಣಿಗೆ ನನಗೆ ಕೆಲವು ಹೊಸ ಹಾದಿಗಳನ್ನು ತೋರಿಸಿದೆ. ನಿಮ್ಮಿಂದ ಪರಾಜಿತನಾಗುವುದು ನನಗೆ ಸಂತೋಷದ ವಿಷಯವೆಂದು ಬೇರೆ ಹೇಳಬೇಕಿಲ್ಲ” ಎಂದಿರುವುದು ಕನ್ನಡ ಸಂಶೋಧನ ಜಗತ್ತಿನ ‘ಹಳೆಬೇರು ಹೊಸಚಿಗುರು’ತನಕ್ಕೆ ಹಿಡಿದ ಕನ್ನಡಿಯಂತಿದೆ.

ಭಾರತೀಯ ಶೈವ ಪ್ರಪಂಚದ ಕೆಲ ಗ್ರಹಿತ ನಂಬಿಕೆಗಳನ್ನು ಸಾಧಾರವಾಗಿ ನಿರಾಕರಿಸುತ್ತಾ ಮಹತ್ವಪೂರ್ಣ ದರ್ಶನವಾದ ‘ಪಾಶುಪತ ದರ್ಶನ'ವನ್ನು ಕುರಿತು ಹಿರೇಮಠರು ಕೈಗೊಂಡ ಶೋಧನೆಯು ಕಡಲನ್ನು ಹಿಡಿಯೊಳಡಗಿಸಿದಂತಿದೆ. ಕೇವಲ ನೂರೆಂಟು ಪುಟಗಳಲ್ಲಿ ಅವರು ಒದಗಿಸುವ ಶಾಸ್ತ್ರ, ಶಾಸನ ಮತ್ತು ಇನ್ನಿತರ ಆಕರಗಳ ಮಾಹಿತಿ ದಿಗ್ಧಮೆಗೊಳಿಸುವಂಥದ್ದು. ಇಲ್ಲಿ ವಿಸ್ತರಿತವಾದ 'ಪಾಶುಪತ ದರ್ಶನ'ವು ಪ್ರಾಚೀನದಿಂದ ಆಧುನಿಕ ಕಾಲದ ವರೆಗಿನ ಚರ್ಚಾ-ಹರವನ್ನು ಪಡೆದುಕೊಂಡಿದೆ. ಪ್ರಕೃತಿ ಪ್ರಧಾನ ಸಾಂಖ್ಯತತ್ವ ಹಾಗೂ ಪುರುಷ ಪ್ರಧಾನ ಪಾಶುಪತ ತತ್ವಗಳೆರಡೂ ಅವೈದಿಕ ಎಂದರೆ ದ್ರಾವಿಡ ದರ್ಶನಗಳೆಂಬುದರತ್ತ ನಮ್ಮ ಗಮನ ಸೆಳೆಯುತ್ತಾರೆ. ರುದ್ರನನ್ನು ಪಾಶುಪತದ ಹೊರಗಿಟ್ಟು ನೋಡುವ ಪ್ರಯತ್ನ ಕುತೂಹಲಕಾರಿಯಾಗಿದೆ. ಪಾಶುಪತ ದರ್ಶನದ ಪ್ರಾಚೀನತೆಯನ್ನು ಸಿಂಧು ನಾಗರೀಕತೆಯ ಉಪಲಬ್ಧ ಕುರುಹುಗಳಿಂದ, ಪ್ರಾಚೀನ ತಮಿಳು ಹಾಗೂ ಸಂಸ್ಕೃತ ಕೃತಿಗಳ ಆಧಾರದಿಂದ ಗುರುತಿಸಿದ್ದಾರೆ. ಭೌತ ನಿರೀಶ್ವರ ತಳಹದಿಯಲ್ಲಿ ರೂಪುಗೊಂಡು ವೈದಿಕರ, ಭಾವನಾವಾದಿಗಳ ಸೊತ್ತಾಗಿ ಮಾರ್ಪಾಟುಗೊಂಡ ದರ್ಶನಗಳನ್ನು ಬಣವೆಯಲ್ಲಿನ ಸೂಜಿಯನ್ನು ಹುಡುಕುವಷ್ಟು ತಾಳ್ಮೆಯಿಂದ ಮುಖ್ಯವಾಗಿ ಎಡಪಂಥೀಯ ವಿಚಾರವಾದದ ಮೂಲಕ ಲೇಖಕರು ವಿಶ್ಲೇಷಿಸಿರುವ ಬಗೆಯು ಅಪೂರ್ವವಾದುದು.

ಭಾರತದೇಶವ್ಯಾಪಿಯಾಗಿ ಹರಡಿದ್ದ ಪ್ರಾಚೀನತಮ ಸಿದ್ಧಾಂತವಾಗಿದ್ದ 'ಲೋಕಾಯತ ದರ್ಶನ'ವು ಕರ್ನಾಟಕದಲ್ಲಿ ಹೇಗೆ ಬಾಳಿ ಬದುಕಿತ್ತೆಂಬ ನೆಲೆಯಲ್ಲಿ ಚರ್ಚೆ ಮಾಡುವಾಗ ಹಿರೇಮಠರು ಬೌದ್ಧ, ಜೈನ, ವೈದಿಕ ಆಕರಗಳನ್ನು ಬಳಸಿಕೊಂಡಿದ್ದಾರೆ. ದೇವಿಪ್ರಸಾದ ಚಟೋಪಾಧ್ಯಾಯರಂಥ ಪ್ರಕಾಂಡ ವಿದ್ವಾಂಸರು ತೋರಿರುವ ಮಾರ್ಗದಲ್ಲಿ ಪರಿಶ್ರಮ ಪಟ್ಟು ನಿರಂತರವಾಗಿ ಪ್ರಯಾಣಿಸುತ್ತಲೆ (ಲೋಕಾಯತ) ಅದರ ಆಚೆ ಇನ್ನೂ ಬಗಿಯುವುದಿದೆ ಎಂಬ ಪ್ರಯತ್ನ ಇಲ್ಲಿಯದು. ಈ ಸಂದರ್ಭದಲ್ಲಿ ದೇವಿಪ್ರಸಾದರ ಗಮನಕ್ಕೆ ಬರದೇ ಇದ್ದಿರಬಹುದಾದ ಸಂಗತಿಗಳತ್ತಲೂ ಕಣ್ಣಿಡಬೇಕಾಗುತ್ತದೆ ಎಂದು ಕನ್ನಡದ ದೇಶಿ ನೆಲೆಯಲ್ಲಿ ಲೋಕಾಯತ ಮಾಡಿರಬಹುದಾದ ಪ್ರಭಾವಗಳನ್ನು ಗುರುತಿಸಿದ್ದಾರೆ. ಅವರೇ ಹೇಳಿದಂತೆ, ಇಂಥ ಯಾವ ಪ್ರಯತ್ನವೂ ಪೂರ್ಣವಲ್ಲವಾದರೂ ಅಧ್ಯಯನ, ಸಂಶೋಧನೆ, ನಿರಂತರ ಪ್ರಕ್ರಿಯೆ ನಡೆಯಬೇಕಾಗಿರುವ ದಾರಿಯು ದೀರ್ಘವಾದುದು. ಈ ದಾರಿಯಲ್ಲಿ ಹೋಗುತ್ತ, ಹೋಗುತ್ತ ಬೇರೆ, ಬೇರೆ ದಿಕ್ಕುಗಳ ಕವಲುಗೊಳ್ಳುವ ದಾರಿಗಳು, ಕಾಣುವ ಬೇರೆ, ಬೇರೆ ಲೋಕಗಳು ನಮ್ಮನ್ನು ಚಕಿತಗೊಳಿಸುತ್ತವೆ, ಸಂತುಷ್ಟರನ್ನಾಗಿ ಮಾಡುತ್ತವೆ ಎಂದಿರುವುದು ಗಮನಾರ್ಹ. ವಸ್ತುನಿಷ್ಠ ದೃಷ್ಟಿಯಿಂದ ದರ್ಶನಗಳನ್ನು ವಿಮರ್ಶಿಸಿ, ಸತ್ಯವನ್ನು ಸಾರುವ ಹಿರೇಮಠರ ನಿರ್ಭೀತ ನಿಲುವು ಮೆಚ್ಚುವಂಥದ್ದಾಗಿದೆ. ಹೀಗೆ, ಕರ್ನಾಟಕದ ಚರಿತ್ರೆ ಮತ್ತು ಸಂಸ್ಕೃತಿ ಪರಂಪೆಯ ಸಮಗ್ರ ತಿಳುವಳಿಕೆಗೆ ಅಗತ್ಯವಿದ್ದ ದರ್ಶನಗಳ ಅಧ್ಯಯನದ ಗಂಭೀರ ಕೊರತೆಯನ್ನು ಈ ದರ್ಶನ ಮಾಲಿಕೆ ತುಂಬಿಕೊಟ್ಟಿದೆ ಎಂಬುದನ್ನು ಮರೆಯಲಾಗದು.

ಭಾರತೀಯ ಬಹುಸಂಸ್ಕೃತಿಯ ವಿರಾಟ್ ದರ್ಶನ ಮಾಡಿಸುವ ಸಂಶೋಧಕರೂ ಪ್ರಗತಿಪರ ಚಿಂತಕರೂ ಆಗಬಲ್ಲ ವಿದ್ವಾಂಸರ ಸಂಖ್ಯೆ ಬೆರಳೆಣಿಕೆಯಷ್ಟು. ಅಲ್ಲಿಯೂ ಹೊಸ ವಾದಗಳನ್ನು ಮಂಡಿಸುವವರು ಇನ್ನೂ ವಿರಳ. ಇಂಥ ವಿರಳ ಸಂಖ್ಯೆಯ ವಿದ್ವಾಂಸರಲ್ಲಿ ಪ್ರೊ.ಎಸ್.ಎಸ್.ಹಿರೇಮಠರು ಪ್ರಮುಖರಾಗಿದ್ದಾರೆ. ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಅವರ ಅಭಿಮತದಂತೆ, ಇಂದಿನ ಅತ್ಯುತ್ತಮ ಸಂಶೋಧಕನೊಬ್ಬ ಎಲ್ಲರನ್ನು ತೃಪ್ತಿಗೊಳಿಸಬಲ್ಲ ಹಾದಿಗಳಿಗಾಗಿ ಹುಡುಕಾಟ ನಡೆಸಲಾರ. ಬದಲು ಎಲ್ಲರನ್ನೂ ಚಿಂತನೆಗೆ ಹಚ್ಚುವ ಪ್ರಶ್ನೆಗಳನ್ನು ಎತ್ತುತ್ತಾನೆ. ಹಿರೇಮಠರು ಅಂಥ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂಬ ಕಾರಣಕ್ಕೆ ಮುಖ್ಯರಾಗುತ್ತಾರೆ. ಕರ್ನಾಟಕ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಯಾರೂ ಎಸ್.ಎಸ್.ಹಿರೇಮಠರ ಸಂಶೋಧನ ಕೃತಿಗಳನ್ನು ಗಮನಿಸದೆ ಮುಂದೆ ಹೋಗುವಂತಿಲ್ಲ ಎಂಬುದು ಅವರ ಶೋಧನೆಯ ಹೆಗ್ಗಳಿಕೆಯಾಗಿದೆ. ಹೀಗೆ, ಎಸ್.ಎಸ್.ಹಿರೇಮಠರ ಸಂಶೋಧನ ಕೃತಿಗಳು ಚಿಂತಕರಿಗೆ, ಸಂಶೋಧಕರಿಗೆ ಹಾಗೂ ಹೋರಾಟಗಾರರಿಗೆ ಅಮೂಲ್ಯವಾದ ಆಕರ ಗ್ರಂಥಗಳಾಗಿವೆ.

ಪ್ರಸ್ತುತ ಆಯ್ದುಕೊಳ್ಳಲಾಗಿರುವ ಸಂಶೋಧನ ಲೇಖನವು ಪ್ರೊ.ಎಸ್.ಎಸ್.ಹಿರೇಮಠ ಅವರ ‘ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ: ಭಾಗ-2 ಜಾತ್ರೆಗಳು’ ಕೃತಿಯೊಳಗಿನ (ಪುಟ 253ರಿಂದ 295) ಒಂದು ಭಾಗವಾಗಿದೆ. ಕರ್ನಾಟಕದ ಜಾತ್ರೆಗಳನ್ನು ಆಧರಿಸಿ ನಡೆಸಲಾಗಿರುವ ಸಂಶೋಧನೆಯಲ್ಲಿ ದಲಿತ ಸಾಂಸ್ಕೃತಿಕ ಪರಂಪರೆಯ ಅನನ್ಯ ಸಂಗತಿಗಳನ್ನು ಹಿರೇಮಠರು ದಾಖಲಿಸಿದ್ದಾರೆ. ನೆಲಮೂಲ ದಲಿತ ಸಂಸ್ಕೃತಿಯ ವೈಶಾಲ್ಯತೆ, ಮಾತೃಸಂಸ್ಕೃತಿ ಮತ್ತು ದಲಿತತ್ವದ ಅಂತರ್ಯ, ಕೃಷಿ ಸಂಸ್ಕೃತಿ ಮತ್ತು ಜಾತ್ರೆಗಳ ವೈವಿಧ್ಯತೆ, ಕರ್ನಾಟಕದ ದಲಿತರಾಗಿ ಹೊಲೆಯರು ಮತ್ತು ಮಾದಿಗರು, ಹೊಲೆಮಾದಿಗರಲ್ಲಿ ಮೂಡಿಬಂದ ಎಡಗೈ-ಬಲಗೈ ಭೇದದ ಪೂರ್ವೋತ್ತರಗಳ ವಿವೇಚನೆ, ದಲಿತತ್ವದ ಆದಿಮತೆ ಮತ್ತು ಆಧುನಿಕತೆಗಳನ್ನು ಸಮೃದ್ಧವಾದ ಆಕರ-ಆಧಾರಗಳಿಂದ ವಿಶ್ಲೇಷಣೆ ಮಾಡಲಾಗಿದೆ. ದಲಿತ ಸಂಸ್ಕೃತಿಯ ಇತಿಹಾಸ ಮತ್ತು ವರ್ತಮಾನ ಕುರಿತಾದ ಗುರುತರವೂ ಮಾರ್ಗದರ್ಶಿಯೂ ಆದ ಸಂಶೋಧನೆಗೆ ಸಾಕ್ಷಿಯಾಗಿ ‘ಕರ್ನಾಟಕದಲ್ಲಿ ದಲಿತರು’ ಲೇಖನವು ಅಧ್ಯಯನಯೋಗ್ಯವಾಗಿದೆ.

References

ಹಿರೇಮಠ ಎಸ್.ಎಸ್. (1991). ಹಶ್ಮಿ ಅಮರ ಮತ್ತು ಜೋಗತಿ ಕಲ್ಲು (ನಾಟಕಗಳು). ಸಮತಾ ಪ್ರಕಾಶನ. ಹೊಸಪೇಟೆ.

ಹಿರೇಮಠ ಎಸ್.ಎಸ್. (1992). ಕರ್ನಾಟಕ ಸಂಸ್ಕೃತಿ ಪರಂಪರೆ: ಭಾಗ-1 ಜಾತ್ರೆಗಳು. ಸಮತಾ ಪ್ರಕಾಶನ. ಹೊಸಪೇಟೆ.

ಹಿರೇಮಠ ಎಸ್.ಎಸ್. (1993). ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ: ಭಾಗ-2 ಜಾತ್ರೆಗಳು. ಸಮತಾ ಪ್ರಕಾಶನ. ಹೊಸಪೇಟೆ.

ಹಿರೇಮಠ ಎಸ್.ಎಸ್. (1997). ಮಾದಾರ ಚೆನ್ನಯ್ಯನ ನಾಡಿನಲ್ಲಿ. ಸಮತಾ ಪ್ರಕಾಶನ. ಹೊಸಪೇಟೆ.

ಹಿರೇಮಠ ಎಸ್.ಎಸ್. (2001). ದಲಿತ ಸಂಸ್ಕೃತಿ. ಕನ್ನಡ ವಿವಿ. ಹಂಪಿ.

ಹಿರೇಮಠ ಎಸ್.ಎಸ್. (2003). ಸಾಂಖ್ಯ ದರ್ಶನ. ಸಮತಾ ಪ್ರಕಾಶನ. ಹೊಸಪೇಟೆ.

ಹಿರೇಮಠ ಎಸ್.ಎಸ್. (2003). ಪಾಶುಪತ ದರ್ಶನ. ಸಮತಾ ಪ್ರಕಾಶನ. ಹೊಸಪೇಟೆ.

ಹಿರೇಮಠ ಎಸ್.ಎಸ್. (2004). ಕಾಳಾಮುಖ ದರ್ಶನ. ಸಮತಾ ಪ್ರಕಾಶನ. ಹೊಸಪೇಟೆ.

ಹಿರೇಮಠ ಎಸ್.ಎಸ್. (2006). ಲಾಕುಳ ದರ್ಶನ. ಸಮತಾ ಪ್ರಕಾಶನ. ಹೊಸಪೇಟೆ.

ಹಿರೇಮಠ ಎಸ್.ಎಸ್. (2006). ಲೋಕಾಯತ ದರ್ಶನ. ಸಮತಾ ಪ್ರಕಾಶನ. ಹೊಸಪೇಟೆ.

ಹಿರೇಮಠ ಎಸ್.ಎಸ್. (2010). ಯೋಗ ದರ್ಶನ. ಸಮತಾ ಪ್ರಕಾಶನ. ಹೊಸಪೇಟೆ.

Downloads

Published

11.08.2024

How to Cite

ಎಸ್. ಎಸ್. ಹಿರೇಮಠ, & ಎಂ. ಭೈರಪ್ಪ. (2024). ಕರ್ನಾಟಕದಲ್ಲಿ ದಲಿತರು. AKSHARASURYA, 4(04), 01 to 44. Retrieved from http://aksharasurya.com/index.php/latest/article/view/453

Issue

Section

ಹಿಂದಣ ಹೆಜ್ಜೆ. | TRODDEN PATH