ಜನಪದ ಕಥೆಗಳಲ್ಲಿ ಮಹಿಳಾಲೋಕ
Keywords:
ಕನ್ನಡ ಜನಪದ ಕಥೆಗಳು, ಸ್ತ್ರೀ ಪಾತ್ರಗಳು, ಸಮಾಜಮುಖಿ ಚಿಂತನೆ, ಅತಿಮಾನುಷ ಪತ್ನಿಯರು, ಗಂಡು-ಹೆಣ್ಣುಗಳ ಸಾಂಸಾರಿಕ ಬದುಕುAbstract
ಜನಪದ ಕಥೆಗಳಲ್ಲಿ ಮಹಿಳಾ ಲೋಕ ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದಿರುವ ಕಥೆಯನ್ನು ನಮ್ಮಲ್ಲಿ ‘ಅಜ್ಜಿಯ ಕಥೆ’, ‘ಅಡುಗೋಲಜ್ಜಿಯ’ ಕಥೆಯಂತಲೂ ಕರೆಯುವುದುಂಟು. ಕಥೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಪ್ರಧಾನ ಪಾತ್ರ ಅಜ್ಜಿಯರದೇ ಆಗಿರುತ್ತದೆ. ವಾಚಕ ಪರಂಪರೆಯ ಈ ಕಥೆಗಳು ಹರಿದು ಬರುವಾಗ ಸಾಹಿತ್ಯ ಪರಂಪರೆಗೆ ಹೋಗಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಕಥೆಗಳು ತಮ್ಮ ವಸ್ತುವಿನಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳಬಹುದು. ಆದರೆ ಒಂದೇ ಬಗೆಯ ಸಾಮಾಜಿಕ ಮತ್ತು ವೈಯಕ್ತಿಕ ಅಗತ್ಯಗಳು ಎಲ್ಲಾ ಕಡೆ ಇದ್ದೇ ಇರುತ್ತವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿಯೂ ಹೆಣ್ಣು ಕೀಳು, ಅವಲಂಬಿತಳು, ಪುರುಷನಿಲ್ಲದೆ ಅವಳ ಜೀವನ ನಿರರ್ಥಕ ಎಂದೆಲ್ಲಾ ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಜನಪದ ಕಥೆಗಳಲ್ಲಿ ಸ್ತ್ರೀಯರ ಬದುಕು ಬವಣೆಗಳು ಹೇಗಿದ್ದಿರಬಹುದೆಂಬ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಒಂದು ಪ್ರಯತ್ನವೇ ಈ ಲೇಖನದ ಉದ್ದೇಶವಾಗಿದೆ. ಕಥೆಗಳನ್ನು ಎಲ್ಲಾ ತಲೆಮಾರುಗಳಲ್ಲಿಯೂ ಹೇಳುತ್ತಿದ್ದರು. ಚಳಿಗಾಲ ಹಾಗೂ ಬೇಸಿಗೆ ಕಾಲಗಳಲ್ಲಿ ಶ್ರಮವನ್ನು ಮರೆಯಲು, ಮಕ್ಕಳನ್ನು ಮಲಗಿಸುವ ವೇಳೆಯಲ್ಲಿ ಕಥೆಗಳನ್ನು ಹೇಳುತ್ತಿದ್ದರು. ಜನಪದ ಕಥೆಗಳಲ್ಲಿ ಅತಿಮಾನುಷ ಪತ್ನಿಯರಾಗಿ ಬರುವ ಸ್ತ್ರೀಯರು, ದೇವತ ಸ್ತ್ರೀಯರು ನಮ್ಮ ಸಾಮಾನ್ಯ ಮಹಿಳೆಯರಿಗಿಂತ ಸಬಲರಾಗಿ, ಸ್ವತಂತ್ರರೂ ಆಗಿ ಕಾಣಿಸುತ್ತಾರೆ. ಹಣೆಬರಹ ಬರೆಯುವ ವಿಧಿಯಮ್ಮ ಅತ್ಯಂತ ಶಕ್ತಿ ದೇವತೆಯಾದರೆ, ಕಥೆಗಳಲ್ಲಿ ಬರುವ ದೇವಕನ್ನಿಕೆಯರು ಭೂಲೋಕದ ಪುರುಷರ ಮೇಲೆ ನಿಯಂತ್ರಣ ವಿರುವವರು. ಇವರಿಗೆ ಮೆಚ್ಚುಗೆಯಾದ ಗಂಡು ಸಿಕ್ಕಿದರೆ ಭೂಮಿಯ ಮೇಲೆ ಬಂದು ಸಂಸಾರ ಮಾಡವಷ್ಟು ಸ್ವತಂತ್ರರು. ಇದಕ್ಕೆ ಉದಾಹರಣೆಯಾಗಿ ಕೆಲವು ಕನ್ನಡದ ಜನಪದ ಕಥಾಸಂಕಲನಗಳಲ್ಲಿ ಗಮನಿಸಬಹುದಾಗಿದೆ. ಜನಪದರು ಅಕ್ಷರಸ್ಥರಲ್ಲದಿದ್ದರೂ, ನೀತಿವಂತರು, ಯಾರಿಗೂ ತೊಂದರೆ ಕೊಡಬಾರದು, ಅದು ನಮಗೆ ತಿರುಗು ಬಾಣವಾಗುವುದೆಂಬ ತತ್ವವನ್ನು ಕತೆಗಳ ಮೂಲಕ ಅನಾವರಣ ಮಾಡಿದ್ದಾರೆ. ಎಲ್ಲಾ ಕಥೆಗಳಲ್ಲಿ ಕಂಡು ಬರುವ ಮಹತ್ವದ ಆಶಯಗಳೆಂದರೆ ನೀತಿ ಮತ್ತು ಸಮಾಜಮುಖಿ ಚಿಂತನೆ. ಈ ಕಥೆಗಳನ್ನು ಕೇಳಿದವರು ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ನೀತಿ ಒಂದು ತತ್ವವಾಗಿಯೇ ಬರುತ್ತದೆ.
References
ಪರಮಶಿವಯ್ಯ ಜಿ. ಶಂ. (1970). ಕನ್ನಡ ಜನಪದ ಕಥೆಗಳು. ಸಾಗರ ಪ್ರಕಾಶನ. ಬೆಂಗಳೂರು.
ರಮೇಶ್ ಸ. ಚಿ. (2011) ದಕ್ಷಿಣ ಭಾರತೀಯ ಜನಪದ ಕೋಶ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ರಾಮಕೃಷ್ಣಯ್ಯ ಎಂ. (2021). ಪಡವಣಗೆರೆ ಗ್ರಾಮದ ಜನಪದ ಕಥೆಗಳು. ಎಸ್. ಎಲ್. ಎನ್. ಪ್ರಕಾಶನ. ಬೆಂಗಳೂರು.