ಆಲಿಸುವ ಕೌಶಲವರ್ಧನೆಯಲ್ಲಿ ನಾಟಕಕಲೆ
Keywords:
ವಾಚ್ಯಾರ್ಥ, ಲಕ್ಷ್ಯಾರ್ಥ, ವ್ಯಂಗ್ಯಾರ್ಥ, ಭಾಷಾ ಕೌಶಲAbstract
ರಂಗಭೂಮಿಯ ಪ್ರಮುಖ ಕಲೆಯಾದ ನಾಟಕ ಕಲೆಯು ಮಕ್ಕಳಾದಿಯಾಗಿ ದೊಡ್ಡವರಿಗೂ ಕೂಡ ಶಿಕ್ಷಣ, ಮಾಹಿತಿ, ಮನರಂಜನೆಯನ್ನು ನೀಡುತ್ತದೆ. ಈ ನಾಟಕ ಕಲೆಯಲ್ಲಿ ಪಾಲ್ಗೊಂಡ ವ್ಯಕ್ತಿಯ ಮಾತೃ ಭಾಷೆಯ ಪ್ರಯೋಗವು ಸೂಕ್ತವಾಗಿರುತ್ತದೆ. ಇದಕ್ಕೆ ಕಾರಣ ಅವರಲ್ಲಿ ಆಗಿರುವ ಭಾಷೆಯ ವಿಕಾಸ ಮತ್ತು ಬೆಳವಣಿಗೆ ಹಾಗೂ ಭಾಷೆಯ ಕೌಶಲಗಳು. ಈ ಕೌಶಲಗಳನ್ನು ನಾಟಕ ಕಲೆ ಹೇಗೆ ಕಲಿಸುತ್ತದೆ? ಎಂಬ ಪ್ರಶ್ನೆ ಮುಖೇನ ಉತ್ತರ ಹುಡುಕಲು ಈ ಲೇಖನ ಪ್ರಯತ್ನಿಸುತ್ತದೆ. ಕನ್ನಡ ಭಾಷಾ ಕೌಶಲಗಳ ಕಲಿಕೆಯಲ್ಲಿ ನಾಟಕ ಕಲೆ. ಭಾಷೆ ಕಲಿಕೆಯೆಂಬುದು ಮೂಲತಃ ಭಾಷಾ ಕೌಶಲಗಳ ಕಲಿಕೆಯೇ ಆಗಿದೆ. ಭಾಷೆಯ ಪ್ರಬುದ್ಧತೆ ಸಿದ್ದಿಸುವುದು ಹಾಗೂ ಭಾಷಾ ಕೌಶಲಗಳು ಲಭಿಸುವುದು ಭಾಷಾಂಶಗಳ ಪರಿಣಿತಿಯಿಂದ ಮಾತ್ರ. ಭಾಷಾಕಲಿಕೆಯ ಪ್ರಕ್ರಿಯೆಯಲ್ಲಿ ಆಲಿಸುವುದು, ನೋಡುವುದು, ಮಾತನಾಡುವುದು, ಓದುವುದು, ಬರೆಯುವುದು ಮತ್ತು ಆಲೋಚಿಸುವುದು. ಈ ಕೌಶಲಗಳಿಗೆ ಸಂಬಂಧಿಸಿದಂತೆ ಅವಶ್ಯಕವಾದ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳಲ್ಲಿ ಪ್ರಜ್ಞಾ ಪೂರ್ವಕವಾಗಿ ಬೆಳಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕೌಶಲಗಳನ್ನು ನಾಟಕ ಕಲೆಯಿಂದ ಪರಿಣಾಮಕಾರಿಯಾಗಿ ಕಲಿಯಲು ಸಾಧ್ಯವಿದೆ. ನಾಟಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ನಾಟಕವನ್ನು ಅಭ್ಯಾಸ ಮಾಡಿದರೆ ತಿಳಿಯುತ್ತದೆ. ಆಲಿಸುವಿಕೆ: ನಾಟಕಗಳನ್ನು ಧ್ವನಿಮುದ್ರಿಸಿ ಮಕ್ಕಳಾದಿಯಾಗಿ ದೊಡ್ಡವರ ವರೆಗೆ ಕೇಳಿಸಿದರೆ ಅವರುಗಳು ಅದರಲ್ಲಿರುವ ಅಕ್ಷರಗಳು, ಪದಗಳು, ಉಚ್ಚಾರ ಮತ್ತು ವಾಕ್ಯಗಳಿಂದ ಹೊರಹೊಮ್ಮುವ ವಾಚ್ಯಾರ್ಥ, ಲಕ್ಷ್ಯಾರ್ಥ, ವ್ಯಂಗ್ಯಾರ್ಥಗಳನ್ನು ಗ್ರಹಿಸಿ, ಆಲಿಸಿದ ನಾಟಕದಲ್ಲಿ ಕಂಡು ಬರುವ ಧ್ವನಿಯ ಏರಿಳಿತ, ವಿವಿಧ ಭಾವಗಳ ಅಭಿವ್ಯಕ್ತಿ, ನಟರ ಇಂಗಿತವನ್ನು ಗುರುತಿಸುತ್ತಾರೆ. ಇದರಿಂದ ಸಹನೆ, ಏಕಾಗ್ರತೆ, ವಿಷಯ ಜೋಡಣೆ, ಮಾತಿನ ಚಮತ್ಕಾರಗಳು, ಪ್ರಶಂಸಾ ಶ್ರವಣ ಜಾಗೃತವಾಗಿ ರಸಗ್ರಹಣವು ತೀಕ್ಷ್ಣಗೊಳ್ಳುತ್ತದೆ. ಏಕೆ ಆಲಿಸಬೇಕು? ಏನನ್ನು ಆಲಿಸಬೇಕು? ಹೇಗೆ ಆಲಿಸಬೇಕು? ಎಂಬ ಔಚಿತ್ಯದಿಂದ ಪ್ರಜ್ಞಾಪೂರ್ವಕವಾಗಿ ಉದ್ದೇಶ ಬದ್ಧವಾಗಿ, ಮಾನಸಿಕ ಸಿದ್ಧತೆ, ಶಿಸ್ತು, ಏಕಾಗ್ರತೆ, ಆಸಕ್ತಿಯಿಂದ ಪ್ರಚೋದಿತರಾಗಿ ಆಲಿಸುವುದಕ್ಕೆ ಒತ್ತು ನೀಡುವುದು ನಾಟಕ ಕಲೆಯಿಂದ ಸಾಧ್ಯವಿದೆ. ಮಾತುಗಾರಿಕೆ: ರಮ್ಯವಾದ ನಾಟಕ ಭಾಗಗಳು ಸ್ಪಷ್ಟವಾದ ಉಚ್ಚಾರದೊಂದಿಗೆ ಭಾವಪೂರ್ಣವಾಗಿ ಓದುವ ಹಾಗೂ ಮಾತನಾಡುವ ಕೌಶಲವನ್ನು ಬೆಳಸುತ್ತದೆ. ವಿವಿಧ ಉಪಭಾಷೆಗಳ ಅಥವಾ ಆಡುನುಡಿಗಳ ಕಿರುನಾಟಕಗಳನ್ನು ಆಡಿಸುವುದರಿಂದ ಆಯಾ ಪ್ರಾಂತ್ಯದ ಬೇರೆ ಬೇರೆ ಭಾಗಗಳ ಭಾಷೆಗಳ ಪರಿಚಯವಾಗುವುದು. ಇದರಿಂದ ಮನರಂಜನೆಯ ಜೊತೆ ನೈತಿಕ ಮೌಲ್ಯ, ಚಿಂತನೆ, ಮಾತುಗಾರಿಕೆ, ವಾಚನ ಕೌಶಲದ ಉದ್ದೀಪನ, ಪ್ರಚೋದನ ಬದಲಾವಣೆಯ ಕೌಶಲದ ಸಂವರ್ಧನೆಗೂ ವ್ಯಾಪಕವಾದ ಅವಕಾಶ ದೊರೆತು, ಮಕ್ಕಳಲ್ಲಿ ಮಾತುಗಾರಿಕೆಯ ಸಾಮರ್ಥ್ಯವನ್ನು ವ್ಯವಸ್ಥಿತವಾಗಿ ಬೆಳಸಬಹುದು. ಓದುಗಾರಿಕೆ: ನಾಟಕದಲ್ಲಿ ಪ್ರಮುಖವಾಗಿ ಸಂಭಾಷಣೆ ಮುಖ್ಯ. ಈ ಸಂಭಾಷಣೆಗೆ ಒಂದು ಭಾಷೆ ಬೇಕು. ಮತ್ತು ವ್ಯಕ್ತಿ ಬೇಕು. ಇವೆರಡು ಸಂಧಿಸುವುದು ನಾಟಕದ ಕ್ರಿಯೆಯಲ್ಲಿ. ಸ್ಪಷ್ಟ ಉಚ್ಚಾರ, ಸೂಕ್ತ ಸ್ವರಭಾರ, ಧ್ವನಿ ನಿಯಂತ್ರಣ, ಸೂಕ್ತವೇಗ, ನಿಲುಗಡೆ, ಸಾಂದರ್ಭಿಕ ಧ್ವನಿ ಏರಿಳಿತ, ಲೇಖನ ಚಿಹ್ನೆಗಳ ಔಚಿತ್ಯ ಅರಿತು ಓದುವ ಕೌಶಲ ನಾಟಕ ಕಲೆಯ ಕಲಿಕೆಯಿಂದ ಸಾಧ್ಯವಾಗಬಹುದು. ನಾಟಕ ಕಲೆ ಪ್ರಾರಂಭದ ಹಂತದಿಂದ ಪ್ರದರ್ಶನದ ವರೆಗೂ ವಿವಿಧ ರೀತಿಯ ಓದಿನ ಕ್ರಿಯೆ ನಡೆಯುತ್ತಿರುತ್ತದೆ. ಬರವಣಿಗೆ: ನಾಟಕದಲ್ಲಿ ನಡೆಯುವ ಕ್ರಿಯೆಗಳನ್ನು ಬರೆಯಲು ತಿಳಿಸಿ, ಅವರ ವಿವರಣೆಯ ಕೌಶಲವನ್ನು ಎತ್ತರಿಸಬಹುದು. ನಾಟಕಕಾರರು ಬರೆದ ಕೃತಿಗಳಲ್ಲಿ ಸೌಂದರ್ಯ ಪ್ರಜ್ಞೆ, ಕಲಾತ್ಮಕತೆಯನ್ನು ಗುರುತಿಸಲು ತಿಳಿಸಿ, ಅದನ್ನು ಅರ್ಥಮಾಡಿಕೊಂಡು, ಬೇರೊಂದರ ಸನ್ನಿವೇಶದಲ್ಲಿ, ಪ್ರಸಂಗಗಳಲ್ಲಿ ಹೋಲಿಸಿ ಬರೆಸಬಹುದು. ಹಾಗೂ ನಾಟಕ ಕ್ರಿಯೆಯ ಹಂತಗಳಲ್ಲಿ ದೃಶ್ಯ ಮತ್ತು ಚಿತ್ರತ್ವದಲ್ಲಿ ಅವರು ಎಂದರೆ ನಟರು ನಟಿಸುತ್ತಿರುವ ವರ್ಣಿಸುತ್ತಿರುವ, ಸಂಭಾಷಣೆಗಳನ್ನು ಗುರುತಿಸಿ ಬರೆಯಲು ತಿಳಿಸಬಹುದು. ಪಾತ್ರಗಳ ಅನುಕರಣೆಯಿಂದ ಸಂಭಾಷಣೆಯ ರಚನೆ, ವರ್ಣನೆ, ವಿಶ್ಲೇಷಣೆ, ವಿಮರ್ಶೆ, ಭಾವಾರ್ಥ ನಿರೂಪಣೆ, ಸಾರ ವಿಸ್ತರಣೆ, ದಿನಚರಿ, ಟಿಪ್ಪಣಿ, ವರದಿ ತಯಾರಿ, ಇನ್ನಿತರ ಬರವಣಿಗೆಯ ಮಾದರಿಗಳನ್ನು ನಾಟಕ ಕಲಿಕೆಯ ಮೂಲಕ ರೂಢಿಸಬಹುದು. ಉಪಸಂಹಾರ: ನಾಟಕ ಕಲೆಯು ನಮ್ಮಲ್ಲಿ ಸೃಜನಶೀಲವಾದ ಆಲೋಚನೆ ಮತ್ತು ಒಳನೋಟಗಳಿಗೆ ರಹದಾರಿಯನ್ನು ತೋರಿಸುತ್ತದೆ. ಇದು ನಮ್ಮಲ್ಲಿ ಕ್ರಿಯಾತ್ಮಕವಾದ ವಿಶೇಷ ಕೌಶಲಗಳನ್ನು ಬೆಳೆಸುತ್ತದೆ. ಹಾಗಾಗಿ ಕನ್ನಡ ಭಾಷಾ ಕೌಶಲಗಳ ಕಲಿಕೆಯಲ್ಲಿ ನಾಟಕ ಕಲೆ ಅವಶ್ಯಕವಾಗಿದೆ.
References
ಗಣೇಶ ಆರ್. (೧೯೯೮). ಕನ್ನಡದಲ್ಲಿ ಅವಧಾನ ಕಲೆ. ಕರ್ನಾಟಕ ಸಂಘ. ಪುತ್ತೂರು.
ನಾರಾಯಣ ಕೆ. ವಿ. (ಸಂ). (೨೦೧೯). ಭಾಷೆ. ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಕೀರ್ತಿನಾಥ ಕುರ್ತಕೋಟಿ. (೧೯೮೫). ವಿಮರ್ಶೆಯ ವಿನಯ. ಮನೋಹರ ಗ್ರಂಥಮಾಲಾ. ಧಾರವಾಡ.
ಪ್ರಸನ್ನ. (೧೯೮೫). ನಾಟಕ ರಂಗಕೃತಿ. ಅಕ್ಷರ ಪ್ರಕಾಶನ. ಹೆಗ್ಗೋಡು.
ಅಕ್ಷರ ಕೆ. ವಿ. (೨೦೧೨). ರಂಗ ಪ್ರಯೋಗ. ಅಕ್ಷರ ಪ್ರಕಾಶನ. ಹೆಗ್ಗೋಡು.
ರಾಮನಾಥ ರಂಗಾಯಣ ಎಸ್. (೨೦೧೭). ಡ್ರಾಮಾ ಕ್ಲಬ್. ಯಶೋಮಾಧ್ಯಮ. ಮೈಸೂರು.
ಆದ್ಯರಂಗಾಚಾರ್ಯ (ಅನು). (೨೦೦೩). ನಾಟ್ಯಶಾಸ್ತ್ರ. ಅಕ್ಷರ ಪ್ರಕಾಶನ. ಹೆಗ್ಗೋಡು.