ಆಧುನಿಕ ರಂಗಭೂಮಿಯಲ್ಲಿ ನಿರ್ದೇಶಕರ ಪಾತ್ರ
Keywords:
ಕಾಕ್ತೊ, ಸೃಷ್ಟಿಕರ್ತ, ಮೈನಿಂಜೆನ್, ಆಧುನಿಕ ರಂಗಭೂಮಿ, ನಿರ್ದೇಶಕ, ಕನ್ನಡ ರಂಗಭೂಮಿAbstract
‘ನಿರ್ದೇಶನ’ ಎಂಬ ಕಲ್ಪನೆಯು ಖಚಿತವಾಗಿ ರೂಪಗೊಂಡಿದ್ದು ೧೯ನೇ ಶತಮಾನದ ದ್ವಿತೀಯಾರ್ಧದಲ್ಲಿ ಯುರೋಪಿನಲ್ಲಿ. ಆಕಾಲದ ಯೂರೋಪಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜರಗುತ್ತಿದ್ದ ವೈಜ್ಞಾನಿಕ ಸಂಘಟನೆಗಳಿಗೆ ಸಮಾನಾಂತರವಾಗಿ ಜರ್ಮನಿಯ ಎರಡನೇ ಜಾರ್ಜ್(೧೮೨೯ -೧೯೧೪) ಎಂಬಾತ ರಂಗ ನಿರ್ಮಿತಿಯ ಕೆಲಸವನ್ನು ಒಂದು ಶಾಸ್ತ್ರವಾಗಿ ರೂಪಿಸಿದ. ಅದಕ್ಕಾಗಿಯೇ ಆತನಿಗೆ ಪಶ್ಚಿಮದ ರಂಗ ಇತಿಹಾಸದಲ್ಲಿ ಮೊದಲ ನಿರ್ದೇಶಕ ಎಂಬ ಬಿರುದು ಲಭಿಸಿದೆ. ನಟನಿಗಿಂತ ನಾಟಕ ಕೃತಿಯೇ ಮುಖ್ಯವೆಂಬ ಕಲ್ಪನೆ ಮೂಡಿ ಬಂದ ಮೇಲೆ, ನಾಟಕಕ್ಕೆ ಯಾವ ರೀತಿ ರಂಗವನ್ನು ಸಜ್ಜುಗೊಳಿಸಬೇಕು, ನಾಟಕದ ಪಾತ್ರಗಳಿಗೆ ನಟರನ್ನು ಆಯ್ಕೆ ಮಾಡಿ ಅವರಿಗೆ ಯಾವ ರೀತಿ ಸೂಚನೆಗಳನ್ನು ಕೊಡಬೇಕು ಎಂಬ ಸಮಸ್ಯೆಗಳು ಕರ್ನಾಟಕದ ಕಲಾಪೋಷಕ ವಿಳಾಸಗಳಲ್ಲಿ ಉದ್ಭವಿಸಿದವು. ರಂಗಭೂಮಿಯ ಚಟುವಟಿಕೆಗಳಲ್ಲಿ ಸಂಘದ ವ್ಯವಸ್ಥಾಪಕ ಹಾಗೂ ನಟರು ಮಾತ್ರವಲ್ಲದೆ ನಾಟಕಗಳನ್ನು ನಿರ್ದೇಶಿಸಿ ರಂಗದ ಮೇಲೆ ಪ್ರಯೋಗಿಸಲು ನಿರ್ದೇಶಕನ ಪಾತ್ರವು ಮುಖ್ಯವಾಯಿತು. ೨೦ನೇಯ ಶತಮಾನದ ಅಸಂಖ್ಯಾ ನಿರ್ದೇಶಕರು ರಂಗಭೂಮಿಯನ್ನು ಬೇರೆ ಬೇರೆ ದಿಕ್ಕಿಗೆ ಬೆಳೆಸಿದ್ದಾರೆ, ಪರಿಷ್ಕರಿಸಿ ಉತ್ತಮಪಡಿಸಿದ್ದಾರೆ. ರಷಿಯಾದ ಮೇಯರ್ಹೋಲ್ಡ್. ಜರ್ಮನಿಯ ಎರ್ವಿನ್ಪಿಸ್ಕೇಟರ್ ಮತ್ತು ಬರ್ಟೋಲ್ ಬ್ರೇಕ್ಟ್, ಫ್ರಾನ್ಸಿನ ಕಾಕ್ತೊ ಮತ್ತು ಅಂತೋನಿ ಆರ್ಥೋ, ಪೋಲೆಂಡಿನ ಜೆರ್ರಿಗ್ರೊಟೋವಸ್ಕಿ, ಇಂಗ್ಲೆಂಡಿನ ಪೀಟರ್ಬ್ರೂಕ್ ಇತ್ಯಾದಿ ಇತ್ಯಾದಿ ಹಲವು ಖ್ಯಾತನಾಮರು ಈ ಪಟ್ಟಿ ಒಳಗೆ ಬರುತ್ತಾರೆ. ಇವರೆಲ್ಲರ ಪ್ರಯೋಗಗಳು ಜೊತೆ ಜೊತೆಗೆ ಯುರೋಪಿನಲ್ಲಿ ‘ನಿರ್ದೇಶಕ’ನ ಪ್ರತಿಷ್ಠೆ ಏರುತ್ತಾ ಹೋಯಿತು. ನಿರ್ದೇಶಕನೆಂಬಾತ ನಾಟಕವನ್ನು ಬರೀ ದೃಶ್ಯೀಕರಣಗೊಳಿಸುವ ತಂತ್ರಜ್ಞನಲ್ಲ. ಆತನೇ ರಂಗ ಕೃತಿಯ ಸೃಷ್ಟಿಕರ್ತ. ಆದ್ದರಿಂದ ಅವನೇ ರಂಗ ಮಾಧ್ಯಮದ ಸಾರ್ವಭೌಮ ಕಲಾಕಾರ ಎಂಬ ಇತ್ಯಾದಿವಾದಗಳು ಹುಟ್ಟಿಕೊಂಡವು. ಈ ವಾದದ ಬಗ್ಗೆ ಹಲವು ನೆಲೆಗಳಿಂದ ವಿರೋಧ ವ್ಯಕ್ತವಾಗಿದೆಯಾದರು ಇವತ್ತಿನವರೆಗೂ ಪಶ್ಚಿಮದ ರಂಗಭೂಮಿಯಲ್ಲಿ ನಿರ್ದೇಶಕನ ಪ್ರತಿಷ್ಠೆಯೇನೂ ಕಡಿಮೆಯಾಗಿಲ್ಲ. ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಹವ್ಯಾಸಿ ರಂಗ ಭೂಮಿಯ ಅಬ್ಬರದೊಂದಿಗೆ, ಈ ಹೊಸ ಮಾದರಿಯ ನಿರ್ದೇಶನದ ಕಲ್ಪನೆಯು ಚಾಲ್ತಿಗೆ ಬಂದ ಹಾಗೆ ಕಾಣುತ್ತದೆ. ಕನ್ನಡದ ರಂಗಭೂಮಿಗೆ ಬಂದರೆ ೨೦ ರಿಂದ ೩೦ ದಶಕಗಳಲ್ಲಿ ಶಿವರಾಂಕಾರಂತರು, ಟಿ. ಪಿ. ಕೈಲಾಸಂ ಮತ್ತು ಆದ್ಯರಂಗಚಾರ್ಯರಂತಹ ರಂಗಕರ್ಮಿಗಳು ನಿರ್ದೇಶನದ ಕಸುಬಿನಿಂದ ಸಾಂಸ್ಕೃತಿಕ ಕಸುಬುಗಾರಿಕೆಗಳನ್ನು ಆಗಲೇ ಪ್ರಾರಂಭಿಸಿದ್ದು ಗೋಚರವಾಗುತ್ತದೆ. ಆದರೆ ಭಾರತದಾದ್ಯಂತ ನಿರ್ದೇಶನದ ಕಸುಬಿನ ಸಾಂಸ್ಕೃತಿಕ ಪ್ರತಿಷ್ಠೆಯು ಒಮ್ಮೆಗೆ ಏರಿಕೊಂಡಿದ್ದು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪ್ರಭಾವದಿಂದ. ೬೦ರ ದಶಕದಿಂದ ಮುಂದೆ ಈ ಶಾಲೆಯ ವಿದ್ಯಾರ್ಥಿಗಳು ಹೊರಬರತೊಡಗಿದರು. ಅವರೆಲ್ಲ ಇಬ್ರಾಹಿಂ ಅಲ್ಕಾಜಿಯವರ ಮಾದರಿಯ ‘ಸಾರ್ವಭೌಮ’ ನಿರ್ದೇಶಕತ್ವದ ಕಲ್ಪನೆಯನ್ನು ಪ್ರಚಲಿತಗೊಳಿಸಲಿಕ್ಕೆ ಆರಂಭಿಸಿದರು.
References
ಆದ್ಯರಂಗಾಚಾರ್ಯ. (೧೯೭೧). ರಂಗನಾಟಕ ಶಾಸ್ತ್ರ. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ಅಕ್ಷರ ಕೆ. ವಿ. (೨೦೧೦). ರಂಗ ಪ್ರಪಂಚ. ಅಕ್ಷರ ಪ್ರಕಾಶನ. ಹೆಗ್ಗೋಡು.
ಮರುಳು ಸಿದ್ದಪ್ಪ ಕೆ. (೨೦೧೫). ಆಧುನಿಕ ಕನ್ನಡ ರಂಗಭೂಮಿ. ಅಕಿಂತ ಪ್ರಕಾಶನ. ಬೆಂಗಳೂರು.
ರಂಗನಾಥ ಎಚ್. ಕೆ. (೧೯೭೮). ಕರ್ನಾಟಕ ರಂಗಭೂಮಿ. ಹೇಮಂತ ಸಾಹಿತ್ಯ ಪ್ರಕಾಶನ. ಬೆಂಗಳೂರು.
ರಾಮನಾಥ. (೨೦೧೧). ಡ್ರಾಮಾ ಕ್ಲಬ್. ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು.
ಅಕ್ಷರ ಕೆ. ವಿ. (೧೯೯೯). ರಂಗ ಪ್ರಯೋಗ. ಅಕ್ಷರ ಪ್ರಕಾಶನ. ಹೆಗ್ಗೋಡು.