ಅತ್ತಿಮಬ್ಬೆಯ ಲಕ್ಕುಂಡಿ ಶಾಸನದ ವೈಶಿಷ್ಟ್ಯತೆ
Keywords:
ಶಾಸನದ ಮಹತ್ವ, ಅತಿಮಬ್ಬೆಯ ವಂಶಾವಳಿ, ಪವಾಡಗಳು, ಅವಳ ದಾನಧರ್ಮಗಳು, ಬಿರುದುಗಳುAbstract
ಈ ಶಾಸನ ಮುಖ್ಯವಾಗಿ ಅತ್ತಿಮಬ್ಬೆ ಕಟ್ಟಿಸಿದ ಒಂದು ಬಸದಿಯ ವಿವರವನ್ನು ಮತ್ತು ಅದಕ್ಕೆ ದತ್ತಿ ಬಿಟ್ಟ ವಿವರವನ್ನು ತಿಳಿಸುತ್ತದೆ. ಇವುಗಳ ಜೊತೆಗೆ ಅವಳ ಮನೆತನದ ವೀರ ಪರಂಪರೆಯ ವಿವರ ತಿಳಿದುಬರುತ್ತದೆ. ಶಾಸನವು ಒಟ್ಟು ಎಂಬತ್ತೆಂಟು ಸಾಲುಗಳನ್ನು ಹೊಂದಿದೆ. ಸಂಸ್ಕೃತದ ಪ್ರಭಾವ ಶಾಸನದ ಮೇಲೆ ದಟ್ಟವಾಗಿದೆ. ಹಲವು ವೃತ್ತಗಳಲ್ಲಿ ರಚಿತವಾಗಿರುವ ಈ ಶಾಸನ ಸುಂದರ ಶೈಲಿಯಲ್ಲಿದ್ದು, ಇದರಲ್ಲಿ ಬಳಕೆಯಾಗಿರುವ ಹಲವಾರು ಬಿರುದು, ಉಪಮೆಗಳು, ರನ್ನನ ಕಾವ್ಯದಲ್ಲಿ ಇರುವುದರಿಂದ ತೀ.ನಂ.ಶ್ರೀಯವರು ರನ್ನನೇ ಈ ಶಾಸನವನ್ನು ಬರೆದಿರಬಹುದೆಂದು ಊಹಿಸುತ್ತಾರೆ. ಒಬ್ಬ ಮಹಿಳೆಯನ್ನು ಇಷ್ಟೊಂದು ಹೊಗಳುವ ಶಾಸನ ಕರ್ನಾಟಕದಲ್ಲಿ ಮತ್ತೊಂದಿಲ್ಲ. ಬೇರೆ ಪ್ರಕಾರಗಳಲ್ಲಿ ಇಷ್ಟೊಂದು ಹೊಗಳಿಸಿಕೊಂಡ ಮಹಿಳೆ ಮತ್ತೊಬ್ಬಳಿಲ್ಲ.
ಗದಗ ಬಳಿಯ ಲಕ್ಕುಂಡಿ ಗ್ರಾಮದಲ್ಲಿ ದೊರೆಯುವ ಈ ಶಾಸನ ಕ್ರಿ.ಶ. 1007ನೇ ಇಸವಿಗೆ ಸೇರಿದೆ. ಇದು ಇರಿವಬೆಡಂಗ ಸತ್ಯಾಶ್ರಯನ ಕಾಲದ ರಚನೆಯಾಗಿದೆ. ಜೈನ ಬಸದಿಯ ಪಕ್ಕದಲ್ಲಿ ನಿಲ್ಲಿಸಿರುವ ಈ ಶಾಸನ ತನ್ನ ದಾನದ ಕಾರ್ಯಗಳಿಂದ ಹೆಸರನ್ನು ಪಡೆದ ಅತ್ತಿಮಬ್ಬೆ ಎಂಬ ಜೈನ ಮಹಿಳೆಯ ವಿಷಯಗಳನ್ನು ಒಳಗೊಂಡಿದೆ. ಅತ್ತಿಮಬ್ಬೆ ಎಂಬ ಹೆಸರು ಜೈನ ಮಹಿಳೆಯ ಹೆಸರಾದರೂ, ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಅತ್ಯಂತ ಮುಖ್ಯವಾದ ಹೆಸರಾಗುತ್ತದೆ. ‘ಅತ್ತಿಮಬ್ಬೆ ರನ್ನನ ಆಶ್ರಯದಾತೆ ಕೂಡ; ಅಷ್ಟೇ ಅಲ್ಲ ಪರಮಪೂಜ್ಯೆ ಸಹ. ಸತ್ಯಾಶ್ರಯ ಇರಿವಬೆಡಂಗನನ್ನು ‘ಗದಾಯುದ್ಧ’ದಲ್ಲಿ ನಿಲ್ಲಿಸಿದ್ದಂತೆ’ ‘ಅತ್ತಿಮಬ್ಬೆ’ಯನ್ನು ‘ಅಜಿತನಾಥ ಪುರಾಣ’ದಲ್ಲಿ ಸ್ಮಾರಕಗೊಳಿಸಲು ರನ್ನ ಯತ್ನಿಸಿದ್ದಾನೆ. ಈ ಬಗೆಯ ಚಿತ್ರಣ ತೀ.ನಂ.ಶ್ರೀಯವರು ಹೇಳುವ ಹಾಗೆ ‘ಕೇವಲ ವೇತನಕ್ಕಾಗಿ ರನ್ನನ್ನು ಸಲ್ಲಿಸಿದ ಪ್ರತಿಫಲವಲ್ಲ’. ಆಕೆಯಲ್ಲಿ ಮಹಾಮಹಿಳೆಯನ್ನೆ ಕವಿ ಕಂಡಿದ್ದಾನೆ. ಅವಳು ತನ್ನ ಕಾಲದಲ್ಲಿ ‘ದಾನ ಚಿಂತಾಮಣಿ’ ಎಂದೇ ಹೇಸರಾಗಿದ್ದವಳು. ‘ಸಕಲ ಗುಣಸಂಪನ್ನಳೂ ವಿನಯ ಚೂಡಾಮಣಿಯೂ ಆದ ಆಕೆಯ ವ್ಯಕ್ತಿತ್ವ ಸಹಜವಾಗಿಯೆ’ ಎಂದು ಅತ್ತಿಮಬ್ಬೆಯನ್ನು ರನ್ನ ಹೊಗಳಿದ್ದಾನೆ. ಈ ಶಾಸನವನ್ನು ಬರೆದ ಕಾಲಕ್ಕೆ ಅತ್ತಿಮಬ್ಬೆ ಬಹಳ ಪ್ರಸಿದ್ಧಳಾಗಿ, ಪವಾಡ ಸದೃಶ ಮಹಿಳೆಯಾಗಿದ್ದಳು. ಈ ಪವಾಡಗಳಿಂದ ಅತ್ತಿಮಬ್ಬೆ ಆ ಕಾಲಕ್ಕೆ ಅತಿಮಾನವಳಾಗಿದ್ದಳು. ಜನರ ನಂಬಿಕೆಯಲ್ಲಿ ದಂತಕಥೆಯಾಗಿದ್ದಾಳೆಂಬುದು ಗೊತ್ತಾಗುತ್ತದೆ. ಇಲ್ಲಿನ ಎಲ್ಲ ಪವಾಡಗಳು ಜೈನ ಧರ್ಮಕ್ಕೆ ಸಂಬಂಧಿಸಿದವುಗಳಾಗಿವೆ.
References
ಪಂಡಿತ ಪ. ನಾಗರಾಜಯ್ಯ (ಸಂ). (2019). ಅಜಿತನಾಥ ಪುರಾಣ ತಿಲಕ ದೀಪಿಕೆ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು. ಪು.ಸಂ. 01
ಯೋಗೀಶ್ ಚುಂಚನಹಳ್ಳಿ. (2016). ಕನ್ನಡ ಲಿಪಿ ಹಾಗೂ ಶಾಸನಗಳು. ತನುಮನ ಪ್ರಕಾಶನ. ಮೈಸೂರು. ಪು.ಸಂ. 02
ಮುಗಳಿ ರಂ. ಶ್ರೀ. (2005). ಕನ್ನಡ ಸಾಹಿತ್ಯ ಚರಿತ್ರೆ. ಗೀತಾ ಬುಕ್ ಹೌಸ್. ಮೈಸೂರು. ಪು.ಸಂ. 03