ಕಂಪ್ಲಿಯ ‘ಕುಮಾರ ರಾಮ’: ಒಂದು ಚಾರಿತ್ರಿಕ ನೋಟ
Keywords:
ಮಧ್ಯಕಾಲೀನ ಕರ್ನಾಟಕ, ಕಂಪಿಲಿರಾಯ, ರತ್ನಾಜಿ, ಕುಮಾರರಾಮ, ವಿಜಯನಗರ ಪೂರ್ವದ ಇತಿಹಾಸ, ಸಾಹಿತ್ಯ, ನಂಜುಂಡ ಕವಿAbstract
ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ಕುಮಾರ ರಾಮನ ಇತಿಹಾಸ ಭವ್ಯವಾದುದು ಮತ್ತು ಅಮೋಘವಾದುದು. ತಾನು ಬದುಕಿ ಬಾಳಿದ ಕಡಿಮೆ ಅವಧಿಯಲ್ಲಿ ಚರಿತ್ರೆಯನ್ನು ಸೃಷ್ಟಿಸಿದ ತಳಸಮುದಾಯದ ವ್ಯಕ್ತಿ ಎಂದರೆ ಕುಮಾರರಾಮ. ಇವರ ಕುಮ್ಮಟದುರ್ಗದ ಮನೆತನದ ಇತಿಹಾಸ ಕೇವಲ ಐವತ್ತು ವರ್ಷ. ಆ ಸಂದರ್ಭದಲ್ಲಿ ಉತ್ತರ ಭಾರತದ ಬಲಾಢ್ಯ ಮುಸ್ಲಿಂ ಸೈನ್ಯವನ್ನು ದಕ್ಷಿಣದ ಕಡೆಗೆ ಬಾರದಂತೆ ತಡೆದಿದ್ದ ವ್ಯಕ್ತಿ ಕುಮಾರರಾಮ. ಅಂತಹ ವ್ಯಕ್ತಿಯ ಐತಿಹಾಸಿಕ ನೋಟವನ್ನು ಈ ಲೇಖನದ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ.
ವಿಜಯನಗರ ಪೂರ್ವದ ಇತಿಹಾಸದಲ್ಲಿ ಕುಮ್ಮಟದ ನಾಯಕರ ಮನೆತನದಲ್ಲಿ ಮೂರನೇಯ ಹಾಗೂ ಕೊನೆಯ ಅರಸನಾಗಿ ಕುಮಾರ ರಾಮ ಉಲ್ಲೇಖಿತನಾಗಿದ್ದ. ಐತಿಹಾಸಿಕ ಆಕರಗಳಲ್ಲಿ ಈತನ ಬಗೆಗೆ ಹೆಚ್ಚಿನ ವಿವರಗಳು ಲಭಿಸದೆ ಹೋದರೂ ಮೌಖಿಕ ಸಾಹಿತ್ಯ ಪರಂಪರೆಯಲ್ಲಿ, ಆಧುನಿಕ ಪೂರ್ವ ಸಾಹಿತ್ಯ ಕೃತಿಗಳಲ್ಲೂ ಈತನ ಬಗೆಗೆ ಸಾಕಷ್ಟು ವಿವರಗಳು ಲಭ್ಯವಾಗುತ್ತವೆ. ಪರನಾರಿ ಸಹೋದರನಾಗಿ, ಶತ್ರು ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದ ಪರಾಕ್ರಮಿ ಎಲ್ಲಕ್ಕೂ ಮುಖ್ಯವಾಗಿ ಜನಪದರ ಆರಾಧ್ಯ ದೈವವಾಗಿ, ಸ್ಥಳೀಯ ಜನಮಾಸದಲ್ಲಿ ನೆಲೆ ನಿಂತಿರುವ ಕುಮಾರ ರಾಮ ಕನ್ನಡ ನಾಡಿನ ಓರ್ವ ಸಾಂಸ್ಕೃತಿಕ ನಾಯಕನನ್ನಾಗಿ ಕಾವ್ಯಗಳು ರಚನೆಗೊಂಡಿವೆ. ಅವುಗಳಲ್ಲಿ ಹದಿನಾರನೇ ಶತಮಾನದ ನಂಜುಂಡ ಕವಿಯ ‘ರಾಮನಾಥ ಚರಿತೆ’ಯು ಕುಮಾರ ರಾಮನ ಸಾಂಗತ್ಯ ಎಂದೇ ಪ್ರಸಿದ್ಧವಾಗಿದೆ. ಐತಿಹಾಸಿಕ ಆಕರಗಳೊಂದಿಗೆ ಸಾಂಗತ್ಯ ಕೃತಿಯನ್ನು ಪ್ರಮುಖ ಆಧಾರವಾಗಿಸಿಕೊಂಡು ಹೊಸಗನ್ನಡ ಸಂದರ್ಭದಲ್ಲೂ ಕುಮಾರ ರಾಮನಿಗೆ ಸಂಬಂಧಿಸಿದ ವಿವಿಧ ಪ್ರಕಾರಗಳು ಹಲವಾರು ಕೃತಿಗಳು ರಚನೆಗೊಂಡಿವೆ.
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಐತಿಹಾಸಿಕ ವ್ಯಕ್ತಿ ಮತ್ತು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಸ್ಫೂರ್ತಿ ಎಂದು ಪೂಜಿಸಲ್ಪಟ್ಟಿದ್ದಾನೆ. ಕುಮಾರ ರಾಮ ಕಂಪ್ಲಿ ಕೋಟೆಯ, ಕಂಪಿಲಿ ರಾಯನ ಮಗ. ಕಂಪ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ ಮತ್ತು ಇದು ಕಂಪ್ಲಿ ತಾಲೂಕಿನ ಕೇಂದ್ರಸ್ಥಾನವಾಗಿದೆ.
ಕುಮಾರ ರಾಮನು ವಾರಂಗಲ್ ನ ಕಾಕತೀಯರು, ಹಳೇಬೀಡಿನ ಹೊಯ್ಸಳರು ಮತ್ತು ಉತ್ತರ ಭಾರತದ ಮುಸ್ಲಿಂ ಅರಸರ ನಡುವೆ ನಿರಂತರ ಯುದ್ಧಗಳನ್ನು ಮಾಡಿ ಜಯಶೀಲನಾಗಿದ್ದನು. ಉತ್ತಮ ಸದ್ಗುಣಗಳನ್ನು ಹೊಂದಿದ್ದ ಕುಮಾರ ರಾಮನು, ತನ್ನ ಚಿಕ್ಕ ವಯಸ್ಸಿನಲ್ಲಿಯೇ ಮುಸ್ಲಿಂ ಸೇನೆಯೊಂದಿಗೆ ಹೋರಾಡಿ ಮರಣಹೊಂದಿದನು.